ಸೈನಿಕ ಹುಳುಗಳ ವಿರುದ್ಧ ಜಿ.ಪಂ.ಯುದ್ಧ

7

ಸೈನಿಕ ಹುಳುಗಳ ವಿರುದ್ಧ ಜಿ.ಪಂ.ಯುದ್ಧ

Published:
Updated:
ಸೈನಿಕ ಹುಳುಗಳ ವಿರುದ್ಧ ಜಿ.ಪಂ.ಯುದ್ಧ

ಶಿವಮೊಗ್ಗ: ಭತ್ತದ ಬೆಳೆ ನಾಶ ಮಾಡುತ್ತಿರುವ ಸೈನಿಕ ಹುಳುಗಳ ವಿರುದ್ಧ ಯುದ್ಧ ಸಾರಲು ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿತು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸೈನಿಕ ಹುಳು ದಾಳಿಯಿಂದ ಬೆಳೆ ನಾಶವಾದ ಎಲ್ಲ ರೈತರಿಗೂ ಪರಿಹಾರ ನೀಡಬೇಕು. ಸೈನಿಕ ಹುಳು ನಾಶ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ಸದಸ್ಯರೂ ಪಕ್ಷಭೇದ ಮರೆತು ಒತ್ತಾಯಿಸಿದರು. ಸೂಕ್ತ ಪರಿಹಾರ ಬಿಡುಗಡೆಗೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಣಯ ಕೈಗೊಂಡರು.

ಸೈನಿಕ ಹುಳುವಿನ ಬಾಧೆಯಿಂದ ಹಲವು ಭಾಗಗಳಲ್ಲಿ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ವಿವಿಧ ಕಂಪೆನಿಗಳ ಕ್ರಿಮಿನಾಶಕ ಬಳಕೆಯ ನಂತರವೂ ಹುಳುಗಳು ನಾಶವಾಗುತ್ತಿಲ್ಲ. ಅಧಿಕಾರಿಗಳು ಭತ್ತದ ಗದ್ದೆಗಳಿಗೆ ಭೇಟಿ ನೀಡಿ ತುರ್ತು ಸಮೀಕ್ಷೆ ನಡೆಸಬೇಕು. ಸೂಕ್ತ ಪರಿಹಾರ ನೀಡಬೇಕು. ಭವಿಷ್ಯದಲ್ಲಿ ಮತ್ತೆ ಹುಳುಗಳ ಸಮಸ್ಯೆ ಎದುರಾಗದಂತೆ ಹುಳುಗಳ ನಾಶಕ್ಕೆ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಜಂಟಿ ಕೃಷಿ ನಿರ್ದೇಶಕ ಡಾ.ಮಧುಸೂದನ್‌ ಮಾತನಾಡಿ, ಆರಂಭದ ಹಂತದಲ್ಲಿ ಭದ್ರಾವತಿ, ಶಿಕಾರಿಪುರ ತಾಲ್ಲೂಕಿನಲ್ಲಿ ಮಾತ್ರ ಕಂಡುಬಂದಿತ್ತು. ಈಗ ಜಿಲ್ಲೆಯ ಎಲ್ಲೆಡೆ ಸೈನಿಕ ಹುಳುಗಳ ಹಾವಳಿ ವಿಸ್ತರಿಸಿದೆ. ಸುಮಾರು 10,800 ಹೆಕ್ಟೇರ್ ಭತ್ತದ ಬೆಳೆ ಹಾನಿಯಾಗಿದೆ ಎಂದು ವಿವರ ನೀಡಿದರು.

ಹುಳು ಹಾವಳಿ ಕುರಿತು ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಾಹಿತಿ ಕಾರ್ಯಾಗಾರ, ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಹಲವು ರೀತಿಯ ಔಷಧ ಸಿಂಪಡಣೆ ಮಾಡಲಾಗಿದೆ. ಆದರೂ, ನಿಯಂತ್ರಣ ಸಾಧ್ಯವಾಗಿಲ್ಲ. ಬೆಳೆ ನಷ್ಟ ಪರಿಹಾರ ನೀಡಲು ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬೆಳೆ ಹಾನಿ ಸಮೀಕ್ಷೆ ನಡೆಸುವಾಗ ಈಗಾಗಲೇ ಕಟಾವು ಆಗಿರುವ, ಕಟಾವು ಆಗದಿರುವ ಪ್ರದೇಶ ಪರಿಗಣನೆಗೆ ತೆಗೆದುಕೊಳ್ಳಬೇಕು. ಸರಿಯಾಗಿ ಸಮೀಕ್ಷೆ ನಡೆಸಿದ್ದರೆ ರೈತರಿಗೆ ನ್ಯಾಯ ಸಿಗುವುದಿಲ್ಲ ಎಂದು ಸದಸ್ಯರು ಗಮನ ಸೆಳೆದರು. ಬೆಳೆ ಹಾನಿ ಕುರಿತು ಸೂಕ್ತ ಸಮೀಕ್ಷೆ ನಡೆಸಿ, ತುರ್ತಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ. ರಾಕೇಶ್ ಕುಮಾರ್ ಸೂಚಿಸಿದರು.

ಕೊಟಗಿ ಪ್ರಕರಣ ಚರ್ಚೆಗೆ ತಾಸು ವ್ಯರ್ಥ: ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಕೊಟಗಿ ಅವರ ಜಿಲ್ಲಾ ಪಂಚಾಯ್ತಿ ಸದಸ್ಯತ್ವವನ್ನು ಕೆಳ ಹಂತದ ನ್ಯಾಯಾಲಯ ರದ್ದು ಮಾಡಿದ್ದ ಪ್ರಕರಣ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದಕ್ಕೆ ನಾಂದಿ ಹಾಡಿತು. ಇದೊಂದೇ ಪ್ರಕರಣ ಕುರಿತು ಪರಸ್ಪರ ಆರೋಪ–ಪ್ರತ್ಯಾರೋಪದಲ್ಲಿ ಮುಳುಗಿದ ಕಾರಣ ಒಂದು ಗಂಟೆಗೂ ಹೆಚ್ಚು ಸಮಯ ವ್ಯರ್ಥವಾಯಿತು.

ಸದಸ್ಯ ಕೆ.ಇ. ಕಾಂತೇಶ್, ವೀರಭದ್ರಪ್ಪ ಪೂಜಾರ್ ಮಾತನಾಡಿ, ನ್ಯಾಯಾಲಯದ ಆದೇಶದಂತೆ ವೀರೇಶ್ ಕೊಟಗಿ ಅವರ ಸದಸ್ಯತ್ವ ರದ್ದಾಗಿತ್ತು. ಮೂರು ತಿಂಗಳಾದರೂ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ. ವೀರೇಶ್ ಕೊಟಗಿ ಅವರು ಈಗಲೂ ಜಿಲ್ಲಾ ಪಂಚಾಯ್ತಿ ಸದಸ್ಯರೇ? ಆಡಳಿತ ನಡೆಸುವಷ್ಟು ಬಹುಮತ ಆಡಳಿತ ಪಕ್ಷಕ್ಕೆ ಇದೆಯೇ ಎಂದು ಮಾಹಿತಿ ನೀಡುವಂತೆ ಸಿಇಒಗೆ ಒತ್ತಾಯಿಸಿದರು.

ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಿಇಒ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಸುಪ್ರಿಂಕೋರ್ಟ್‌ ರದ್ದುಪಡಿಸಿದೆ. ವೀರೇಶ್ ಕೊಟಗಿ ಸದಸ್ಯರಾಗಿ ಮುಂದುವರಿದಿದ್ದಾರೆ ಎಂದರು. ಆದೇಶದ ಪ್ರತಿ ನೀಡಬೇಕು. ನಂತರ ಸಭೆ ಮುಂದುವರಿಸಿ ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಸದಸ್ಯ ಕಲಗೋಡು ರತ್ನಾಕರ್ ಮಧ್ಯಪ್ರವೇಶಿಸಿದಾಗ ಪರಸ್ಪರ ವಾದ, ವಾಗ್ವಾದ ನಡೆಯಿತು. ನಂತರ ಸದಸ್ಯರಿಗೆ ಆದೇಶ ಪ್ರತಿ ನೀಡಲಾಯಿತು.

ಪ್ರತಿ ಎರಡು ತಿಂಗಳಿಗೆ ಒಮ್ಮೆ ಸಾಮಾನ್ಯ ಸಭೆ ಕರೆಯಬೇಕು ಎಂಬ ನಿಯಮವಿದೆ. ಆದರೆ, ನಿಯಮ ಪಾಲನೆ ಆಗುತ್ತಿಲ್ಲ. ಮೂರು ತಿಂಗಳಾದರೂ ಸಭೆ ಕರೆದಿರಲಿಲ್ಲ. ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷೆ ಜ್ಯೋತಿ ಕುಮಾರ್, ಮುಂದಿನ ದಿನಗಳಲ್ಲಿ ನಿಯಮದಂತೆ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಬಿಡುಗಡೆ ಮಾಡಿದ ಅನುದಾನದಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗಿದೆ. ಕೆಲವು ಕ್ಷೇತ್ರಗಳಿಗೆ ಹೆಚ್ಚು, ಕೆಲವು ಕ್ಷೇತ್ರಗಳಿಗೆ ಕಡಿಮೆ ಅನುದಾನ ನೀಡಲಾಗಿದೆ. ಈ ತಾರತಮ್ಯ ಸರಿಪಡಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ಜಿಲ್ಲೆಯಲ್ಲಿ ಪಡಿತರ ಚೀಟಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವ ಬಹುತೇಕ ಕುಟುಂಬಗಳಿಗೆ ಪಡಿತರ ಚೀಟಿ ವಿತರಣೆಯಾಗಿಲ್ಲ. ಅರ್ಹರಿಗೆ ವಿತರಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸಾಗರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮನವಿ ಮಾಡಿದರು. ಅರ್ಜಿ ಸಲ್ಲಿಸಿದ ಎಲ್ಲರಿಗೂ ಡಿಸೆಂಬರ್ ಒಳಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರು.

ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್, ಎಂ.ಬಿ. ಭಾನುಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಲ್ಪನಾ ಪದ್ಮನಾಭ್, ಡಿ.ಆರ್. ರೇಖಾ ಉಮೇಶ್, ವೀರೇಶ್ ಕೊಟಗಿ ಉಪಸ್ಥಿತರಿದ್ದರು.

ಶತ್ರು ಸೈನಿಕ ಹುಳು ನಾಮಕರಣ

ಭತ್ತದ ಬೆಳೆ ನಾಶ ಮಾಡಿ ರೈತರ ಬದುಕು ಹಾಳು ಮಾಡುತ್ತಿರುವ ಹುಳುಗಳನ್ನು ದೇಶ ಕಾಯುವ ಸೈನಿಕರ ಹೆಸರಲ್ಲಿ ಕರೆಯುವುದಕ್ಕೆ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯರ ಆಕ್ರೋಶಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಸೈನಿಕ ಎನ್ನುವ ಬದಲು ಶತ್ರು ಸೈನಿಕ ಹುಳುಗಳು ಎಂದು ಕರೆಯಬಹುದು ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry