7

‘ಪದ್ಮಾವತಿ’ ಚಿತ್ರ ಪ್ರದರ್ಶನ ನಿಷೇಧಕ್ಕೆ ಆಗ್ರಹ

Published:
Updated:

ಯಾದಗಿರಿ: ರಜಪೂತ ಸಮಾಜದ ಜನರ ಮನಸ್ಸಿಗೆ ಘಾಸಿ ಉಂಟು ಮಾಡುವಂತಿರುವ ‘ಪದ್ಮಾವತಿ’ ಚಲನಚಿತ್ರವನ್ನು ಪ್ರದರ್ಶಿಸದಂತೆ ಚಿತ್ರದ ಮೇಲೆ ನಿಷೇಧ ಹೇರಿ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಇಲ್ಲಿನ ರಜಪೂತ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.

ನಗರದ ಸ್ಟೇಷನ್ ನಗರದಲ್ಲಿರುವ ದೇವಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಶಾಸ್ತ್ರಿ ವೃತ್ತ ತಲುಪಿ ಅಲ್ಲಿ ಪ್ರತಿಭಟನಾಕಾರರು ಮಾನವ ಸರಪಣಿ ನಿರ್ಮಿಸಿ ರಸ್ತೆತಡೆ ನಡೆಸಿದರು. ನಂತರ ಪದ್ಮಾವತಿ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಇತಿಹಾಸ ಪ್ರಸಿದ್ಧ ಪದ್ಮಾವತಿ ರಾಣಿಯನ್ನು ಅವಹೇಳನಕರ ರೀತಿಯಲ್ಲಿ ಚಿತ್ರಿಸಿರುವುದು ರಜಪೂತ ಸಮುದಾಯಕ್ಕೆ ನೋವಾಗಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅಭಿನಯಿಸಿರುವ ಪದ್ಮಾವತಿ ಪಾತ್ರ ಚರಿತ್ರೆಯ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಣಿ ‘ಪದ್ಮಾವತಿ’ ಸುಂದರಿ. ಆಕೆಯ ಮೋಹಕ್ಕೆ ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಚಿತ್ತೋಡಿನ ರಾಜಾ ರತನ್‌ ಸಿಂಗ್‌ (ಪದ್ಮಾವತಿಯ ಪತಿ) ಮೇಲೆ ಅಕ್ರಮಣ ಮಾಡಿದ. ಆ ಯುದ್ಧದಲ್ಲಿ ರತನ್‌ ಸಿಂಗ್ ಮೃತಪಟ್ಟ. ಈ ಸುದ್ಧಿ ಪದ್ಮಾವತಿಗೆ ತಿಳಿಯುತ್ತದೆ. ಆಗ ರಾಣಿ ಪದ್ಮಾವತಿ ಅಲ್ಲಾವುದ್ದೀನ್ ಖಿಲ್ಜಿಯ ದಾಸಿಯಾಗಲಾರೆ ಎಂದು ಬೆಂಕಿಗೆ ಹಾರಿ (ಸತಿ ಸಹಗಮನ ಪದ್ಧತಿ) ಪ್ರಾಣ ಬಿಡುತ್ತಾಳೆ. ಇಂತಹ ಮಹಾನ್ ಸತಿ ರಾಣಿ ಪದ್ಮಾವತಿಯನ್ನು ಚಲನಚಿತ್ರದಲ್ಲಿ ಕೆಟ್ಟದ್ದಾಗಿ ಚಿತ್ರಿಸಲಾಗಿದೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಕಪೋಲ ಕಲ್ಪಿತವಾಗಿ ‘ಪದ್ಮಾವತಿ’ ಚಿತವನ್ನು ನಿರ್ಮಿಸಲಾಗಿದೆ. ಇದರಿಂದ ರಜಪೂತ ಸಮಾಜಕ್ಕೆ ನೋವಾಗಿದೆ. ಕೂಡಲೇ ಚಿತ್ರಪ್ರದರ್ಶನವನ್ನು ರದ್ದುಪಡಿಸಬೇಕು. ಒಂದು ವೇಳೆ ಚಿತ್ರ ಬಿಡುಗಡೆಯಾದರೆ ಮುಂದೆ ಚಲನಚಿತ್ರ ಮಂದಿರಗಳಲ್ಲಿ ಆಗುವ ಪರಿಣಾಮ ಹಾಗೂ ಕಷ್ಪ ನಷ್ಟಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಜಪೂತ ಸಮಾಜದ ಮುಖಂಡರು ಮನವಿ ಸಲ್ಲಿಸಿದರು.

ಜಿಲ್ಲಾ ಮರಾಠ ಸಮಾಜದ ಅಧ್ಯಕ್ಷ ಗಣೇಶಕುಮಾರ ಭಾಪ್ಕರ್, ಸತ್ಯನಾರಾಯಣ ತಿವಾರಿ, ವಿಠ್ಠಲಸಿಂಗ್, ಬಸನಸಿಂಗ್, ಗೋಪಾಲಸಿಂಗ್, ಮಹಿಳಾ ಘಟಕದ ಅಧ್ಯಕ್ಷರಾದ ಪ್ರಜೇಶ ನಂದಕಿಶೋರ, ಅರ್ಚನಾ ರಾಯಚೂರಕರ, ಜಿಲ್ಲಾ ಕಾರ್ಯದರ್ಶಿ ಸೋಹನ ಪ್ರಸಾದ, ಶ್ರೀರಾಮ ಸೇನೆ ಅಧ್ಯಕ್ಷ ವಿಜಯ ಪಾಟೀಲ್, ಹಿಂದೂ ಜಾಗರಣ ವೇದಿಕೆಯ ಅಂಬಯ್ಯ ಶಾಹಾಬಾದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry