ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಲ್ಲಿ ಅನುರಣಿಸದ ಹಕ್ಕಿಗಳ ಝೇಂಕಾರ!

Last Updated 1 ಡಿಸೆಂಬರ್ 2017, 5:44 IST
ಅಕ್ಷರ ಗಾತ್ರ

ಯಾದಗಿರಿ: ‘ಹಕ್ಕಿಗಳ ಸಂಗದಲಿ ರೆಕ್ಕೆ ಮೂಡುವುದೆನಗೆ! ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ..’ ಹಕ್ಕಿಗಳ ಜಗತ್ತಿನ ಬಗ್ಗೆ ರಾಷ್ಟ್ರಕವಿ ಕುವೆಂಪು ತಮ್ಮ ಕಾವ್ಯವೊಂದರಲ್ಲಿ ಹೀಗೆ ಬಣ್ಣಿಸಿದ್ದಾರೆ. ಜಿಲ್ಲೆಯಲ್ಲಿ ಹಕ್ಕಿಗಳಿಗೆ ಆಶ್ರಯ ತಾಣವಾಗಿರುವ ಪ್ರಮುಖ ಕೆರೆಗಳಲ್ಲಿ ನಗರದ ಲುಂಬಿನಿ ಕೆರೆಯೂ ಒಂದು. ಪ್ರತಿವರ್ಷ 32 ಪ್ರಭೇದದ ಹಕ್ಕಿಗಳು ವಲಸೆ ಬಂದು ಲುಂಬಿನಿ ಕೆರೆಯ ಸೌಂದರ್ಯ ಇಮ್ಮಡಿಸಿ ಸಂತಾನೋತ್ಪತ್ತಿ ನಡೆಸುತ್ತವೆ. ಆದರೆ, ಲುಂಬಿನಿ ಕೆರೆ ಈ ಸಲ ಸಂಪೂರ್ಣ ತ್ಯಾಜ್ಯ ಹೊದ್ದುಕೊಂಡಿದ್ದು, ವಲಸೆ ಹಕ್ಕಿಗಳ ಸಂತಾನಾಭಿವೃದ್ಧಿಗೆ ಅಡ್ಡಿಯಾಗಿದೆ.

ಲುಂಬಿನಿ ವನಕ್ಕೆ ಕೆರೆ ಸೌಂದರ್ಯ ದ್ಯೋತಕವಾಗಿದೆ. 52 ಎಕರೆಯಲ್ಲಿ ಹರಡಿಕೊಂಡಿರುವ ಕೆರೆಯಲ್ಲಿ ನೀರಲೆಗಳು ನೋಡುಗರನ್ನು ಆಕರ್ಷಿಸುತ್ತವೆ. ಕೆರೆಯ ನೀರಲ್ಲಿ ಚಾಲುಕ್ಯರ ಗಿರಿಬೆಟ್ಟದ ಪ್ರತಿಬಿಂಬ ನೋಡುಗರನ್ನು ಆಕರ್ಷಿಸುತ್ತದೆ. ಅವುಗಳ ಜತೆಗೆ ಹಕ್ಕಿಗಳ ನಿನಾದ, ಚಿಲಿಪಿಲಿ ಕಲರವ ಮನಸ್ಸು ಪ್ರಫುಲ್ಲಗೊಳಿಸುತ್ತದೆ. ಆದರೆ, ಈ ಭಾರಿ ಕೆರೆಯಲ್ಲಿ ಒಂದೂ ಹಕ್ಕಿಗಳು ಕಾಣದಿರುವುದು ವಾಯುವಿಹಾರಿಗಳ ಬೇಸರಕ್ಕೆ ಕಾರಣವಾಗಿದೆ.

‘ಹೋದ ನವೆಂಬರ್‌ನಲ್ಲಿ ಕೆರೆಯಲ್ಲಿ ನೀರು ಕಡಿಮೆ ಇದ್ದಾಗಲೂ ಹಕ್ಕಿಗಳ ಇನಿದನಿ ಝೇಂಕರಿಸಿತ್ತು. ದಾಸ ಕೊಕ್ಕರೆ (ಪೇಯಿಂಟೆಡ್‌ ಸ್ಟೋರ್ಕ್‌), ಕೆಬ್ಬೆ ಕೊಕ್ಕರೆ (ರೋಸ್ ಪ್ಲೆಮಿಂಗೋ), ಹೆಜ್ಜಾರ್ಲೆ (ಪೆಲಿಕನ್), ಬಿಳಿ ಕುತ್ತಿಗೆ ನೀರುಕಾಗೆ (ಗ್ರೇಟ್ ಇಂಡಿಯನ್ ಕಾರ್ಮಾರಾಂಟ್), ಚಮಚದ ಕೊಕ್ಕು (ಸ್ಪೂನ್ ಬಿಲ್) ನಂತಹ ಪ್ರಾದೇಶಿಕ ಹಕ್ಕಿಗಳ ಜತೆಗೆ ವಿದೇಶಿ ಹಕ್ಕಿಗಳಾದ ಕಾಮಳ್ಳಿ (ಹಿಲ್ ಮೈನಾ) ಬೂದಿ ಮಂಡೆ (ಗ್ರೇ ಹೆಡೆ ಮೈನಾ) ಕರಿ ಹೂಗುಬ್ಬಿ (ಪರ್ಪಲ್ ಸನ್ಬರ್ಡ್‌) ಹಳದಿ ಹೂ ಕುಟುಕ (ಫೈರ್ ಬ್ರೆಸ್ಟೆಡ್ ಫ್ಲವರ್ ಪೆಕ್ಕರ್) ಇತ್ಯಾದಿ ಹಕ್ಕಿಗಳು ಸಂತಾನೋತ್ಪತ್ತಿಗೆ ವಲಸೆ ಬರುತ್ತವೆ. ಇಡೀ ಚಳಿಗಾಲ ಮುಗಿಯುವವರೆಗೂ ಅವುಗಳ ಸಂಗದಲ್ಲಿ ನಗರದ ಪಕ್ಷಿಪ್ರಿಯರು ಮೈಮರೆಯುತ್ತಿದ್ದರು. ನಸುಕಿನಲ್ಲಿ ಕೆರೆಯಲ್ಲಿ ಖಗ ಸಂಕುಲದ ವಿಹಾರ ಕೂಡ ವಾಯುವಿಹಾರಿಗಳ ಸಂಭ್ರಮಕ್ಕೆ ಕಾರಣವಾಗುತ್ತಿತ್ತು. ಆದರೆ, ನವೆಂಬರ್ ಕಳೆಯುತ್ತಾ ಬಂದರೂ ಲುಂಬಿನಿ ಕೆರೆಯಲ್ಲಿ ಹಕ್ಕಿಗಳ ಕಲರವ ಮಾತ್ರ ಕೇಳಿ ಬರುತ್ತಿಲ್ಲ’ ಎಂಬುದಾಗಿ ಪಕ್ಷಿ ಪ್ರಿಯರಾದ ಡಾ.ಭೀಮರಾಯ ಲಿಂಗೇರಿ, ಎಸ್.ಎಸ್.ನಾಯಕ, ಅಯ್ಯಣ್ಣ ಹುಂಡೇಕರ್ ಹೇಳುತ್ತಾರೆ.

ಅರ್ಥಪೂರ್ಣವಾಗದ ‘ವನೋತ್ಸವ’ ಆಚರಣೆ: 2.16 ಎಕರೆ ವಿಸ್ತೀರ್ಣ ಹೊಂದಿರುವ ಐಲ್ಯಾಂಡ್ ಜನರ ಬಳಕೆಗೆ ಇಲ್ಲದಂತಾಗಿದೆ. ಪಾಥ್ ವೇ, ವಾಕಿಂಗ್‌ ವೇ ಗಳಲ್ಲಿ ಜಾಲಿಗಿಡಗಳು ದಟ್ಟವಾಗಿ ಬೆಳೆದು ವಾಯು ವಿಹಾರಕ್ಕೂ ಅವಕಾಶ ಇಲ್ಲದಂತಾಗಿದೆ. ಪ್ರವೇಶ ದ್ವಾರದ ಪಾಥ್ ವೇ ಒಂದನ್ನೇ ನೂರಾರು ವಾಯು ವಿಹಾರಿಗಳು ಅವಲಂಬಿಸುವಂತಾಗಿದೆ. ಇಡೀ ನಗರದ ಜನರು ವಾಯುವಿಹಾರಿಗಳಿಗೆ ಅನುಕೂಲಕರವಾಗಿದ್ದ ಲುಂಬಿನಿ ವರ ನಿರ್ವಹಣೆ ಕೊರತೆಯಿಂದ ಸೊರಗಿದೆ. ಸೊರಗಿದ ವನದಲ್ಲೇ ಈಚೆಗೆ ಜಿಲ್ಲಾಡಳಿತ ‘ವನೋತ್ಸವ’ ಆಚರಿಸಿರುವುದು ವಿಪರ್ಯಾಸ.

ನಿರ್ವಹಣೆಗೆ ಪ್ರತ್ಯೇಕ ಅನುದಾನ ಇಲ್ಲ
ಲುಂಬಿನಿ ವನ ನಿರ್ವಹಣೆಗೆ ಅಂತ ಪ್ರತ್ಯೇಕ ಅನುದಾನ ಇಲ್ಲ. ತಿಂಗಳಿಗೆ ಪ್ರವೇಶ ದರ ₹60 ಸಾವಿರದಷ್ಟು ಸಂಗ್ರಹ ಆಗುತ್ತದೆ. ವಿದ್ಯುತ್‌ ಶುಲ್ಕ, ವನಮಾಲಿಗಳಿಗೆ, ಕಾವಲುಗಾರರಿಗೆ ಗೌರವಧನ ಕೂಲಿ ಕೊಡಲೂ ಈ ಸಂಗ್ರಹ ಹಣ ಕೂಡ ಸಾಲುವುದಿಲ್ಲ ಎಂದು ಲುಂಬಿನಿ ವನ ಮೇಲ್ವಿಚಾರಕ ಮೇಘನಾಥ ಬೆಳ್ಳಿ ತಿಳಿಸಿದರು.

* * 

ಕೆರೆ ಹೂಳಿನಿಂದ ತುಂಬಿದೆ. ಹೂಳು ತೆಗೆಯಲು ಮುಂದಾಗಿದ್ದ ಜಿಲ್ಲಾಡಳಿತ ನಂತರ ಕೈಚೆಲ್ಲಿದ್ದು ಏಕೆ ಎಂಬುದು ಗೊತ್ತಿಲ್ಲ. ಕೆರೆ ಬಗ್ಗೆ ಕಾಳಜಿ ವಹಿಸುವವರು ಯಾರು? ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಸಿದ್ದಪ್ಪ ಎಸ್.ಹೊಟ್ಟಿ
ಅಧ್ಯಕ್ಷ, ಕಸಾಪ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT