ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಯದ್ ಖುಸ್ರೊಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಗಲಿ: ಖರ್ಗೆ ಆಶಯ

Last Updated 1 ಡಿಸೆಂಬರ್ 2017, 5:49 IST
ಅಕ್ಷರ ಗಾತ್ರ

ಕಲಬುರ್ಗಿ: ‘ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗೆ ಶ್ರಮಿಸಿರುವ ಇಲ್ಲಿನ ಖಾಜಾ ಬಂದಾ ನವಾಜ್‌(ಕೆಬಿಎನ್‌) ಸಂಸ್ಥೆಯ ಅಧ್ಯಕ್ಷ ಸೈಯದ್ ಶಹಾ ಖುಸ್ರೊ ಹುಸೇನಿ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆಯುವ ಅರ್ಹತೆ ಇದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

ಕೆಬಿಎನ್‌ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸೈಯದ್‌ ಶಹಾ ಖುಸ್ರೊ ಹುಸೇನಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಸೈಯದ್ ಶಹಾ ಖುಸ್ರೊ ಹುಸೇನಿ ಅವರನ್ನು ಕರ್ನಾಟಕ ಸರ್ಕಾರ ಗೌರವಿಸಿದೆ. ಆದರೆ, ಅವರ ಶೈಕ್ಷಣಿಕ ಸಾಧನೆಗಳು ದೊಡ್ಡದಾಗಿವೆ. ಅದಕ್ಕೆ ತಕ್ಕ ಗೌರವ ಸಲ್ಲಬೇಕಾಗಿದೆ’ ಎಂದರು.

‘ಪ್ರಶಸ್ತಿಗಳಿಗೆ ಆಯ್ಕೆ ಮಾಡುವಾಗ ಜಾತಿ, ಭಾಷೆ ಹಾಗೂ ನಮ್ಮವರು ಎಂಬ ಅಂಶಗಳನ್ನು ಪರಿಗಣಿಸಲಾಗುತ್ತಿದೆ. ಪ್ರಾಮಾಣಿಕರು ಹಾಗೂ ನೈಜ ಅರ್ಹತೆ ಹೊಂದಿದವರಿಗೆ ಅವು ಸಿಗುವುದೇ ಇಲ್ಲ. ಅರ್ಹರಿಗೆ ಪ್ರಶಸ್ತಿಗಳು ಸಿಗಬೇಕು. ನಿಜವಾದ ಸಾಧಕರನ್ನು ಗುರುತಿಸುವ ಕೆಲಸವನ್ನು ಪ್ರಶಸ್ತಿಗೆ ಆಯ್ಕೆ ಮಾಡುವವರು ಮಾಡಬೇಕು’ ಎಂದರು.

‘ಸೈಯದ್‌ ಖುಸ್ರೊ ಶಿಕ್ಷಣ ಪ್ರೇಮಿ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್‌, ಬಿ.ಇಡಿ ಕಾಲೇಜುಗಳನ್ನು ಪ್ರಾರಂಭಿಸಿದ್ದಾರೆ. ಮಹಿಳೆಯರಿಗಾಗಿ ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಅರೇಬಿಕ್‌ ಭಾಷೆಯ ಕಾಲೇಜುಗಳನ್ನು ತೆರೆದಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಕೆಬಿಎನ್‌ ಸಂಸ್ಥೆಯು ಶ್ರಮಿಸುತ್ತಿದೆ’ ಎಂದು ಬಣ್ಣಿಸಿದರು.

‘ಕೆಬಿಎನ್‌ ಶಿಕ್ಷಣ ಸಂಸ್ಥೆಯೊಂದಿಗೆ ನಾನು 1972ರಿಂದಲೇ ನಂಟು ಹೊಂದಿದ್ದೇನೆ. ಅದರ ಬೆಳವಣಿಗೆಯನ್ನು ಗಮನಿಸಿದ್ದೇನೆ. ಸಂಸ್ಥೆಯು ಈ ಭಾಗದಲ್ಲಿ ಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿದೆ. ಎಲ್ಲ ಮಕ್ಕಳಿಗೂ ದಾನದ ರೂಪದಲ್ಲಿ ಶಿಕ್ಷಣ ನೀಡುತ್ತಿದೆ’ ಎಂದು ಹೇಳಿದರು.

ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಮಾತನಾಡಿ, ‘ದೇಶದಾದ್ಯಂತ ಹರಡಿಕೊಂಡಿರುವ ದರ್ಗಾಗಳು ಆಯಾ ಭಾಗದಲ್ಲಿ ಶಿಕ್ಷಣ, ಜ್ಞಾನ ಪ್ರಸಾರದಲ್ಲಿ ತೊಡಗಿವೆ. ಕೆಬಿಎನ್‌ ದರ್ಗಾವೂ ಧಾರ್ಮಿಕ ಸ್ಥಳವಾಗಿ ಮಾತ್ರ ಗುರುತಿಸಿಕೊಂಡಿಲ್ಲ, ಮುಸ್ಲಿಮರ ಶೈಕ್ಷಣಿಕ ಏಳಿಗೆಗೂ ಶ್ರಮಿಸುತ್ತಿದೆ’ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ, ಅಮರನಾಥ ಪಾಟೀಲ, ಇಕ್ಬಾಲ್‌ ಅಹ್ಮದ್‌ ಸರಡಗಿ, ಮೇಯರ್‌ ಶರಣಕುಮಾರ್ ಮೋದಿ, ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಇಲಿಯಾಸ್‌ ಬಾಗವಾನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಸಗರ ಅಲಿ ಚುಲ್‌ಬುಲ್, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಆರ್‌.ನಿರಂಜನ್, ಮಹಾರಾಷ್ಟ್ರದ ನಿಲಂಗಾ ಶರೀಫ್ ದರ್ಗಾದ ಸಜ್ಜಾದಾ ನಶೀನ್ ಸೈಯದ ಹೈದರ್ ವಾಲಿ ಖಾದ್ರಿ, ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಭೀಮಳ್ಳಿ ಇದ್ದರು.

‘ವಿಧಾನಸೌಧ ಸುತ್ತುವವರಿಗೆ ಪ್ರಶಸ್ತಿ’

‘ಸರ್ಕಾರಗಳು ನೀಡುವ ಪ್ರಶಸ್ತಿಗಳು ವಿಧಾನಸೌಧ ಸುತ್ತುವವರಿಗೆ ಮಾತ್ರ ಸಿಗುತ್ತಿವೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು. ‘ಪ್ರಶಸ್ತಿಗೆ ಲಾಬಿ ನಡೆಸುವವರು ಸಾಕಷ್ಟು ಮಂದಿ ಇದ್ದಾರೆ. ಇದು ವಾಸ್ತವ ಸಂಗತಿ. ಜನರ ಸೇವೆಯಲ್ಲಿ ತೊಡಗಿರುವವರು ಎಲ್ಲಿಯೂ ತಮ್ಮ ಸಾಧನೆಗಳನ್ನು ಹೇಳಿಕೊಳ್ಳುವುದಿಲ್ಲ.

ಪ್ರಶಸ್ತಿಗಳಿಗಾಗಿ ಅರ್ಜಿಯನ್ನೂ ಹಾಕುವುದಿಲ್ಲ. ರಾಜ್ಯೋತ್ಸವ ಪ್ರಶಸ್ತಿಗೆ ಸೈಯದ್‌ ಖುಸ್ರೊ ಅವರನ್ನು ಆಯ್ಕೆ ಮಾಡುವಾಗ ಅವರ ಬಳಿ ಬಯೊಡಾಟಾ ಸಹ ಇರಲಿಲ್ಲ. ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದ ಅವರನ್ನು ಹುಡುಕಿಕೊಂಡೇ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ’ ಎಂದು ಅವರು ಹೇಳಿದರು.

* * 

ಹಿಂದುಳಿದ ಭಾಗದ ಶೈಕ್ಷಣಿಕ ಕ್ಷೇತ್ರಕ್ಕೆ ಸೈಯದ್‌ ಶಾಹ ಖುಸ್ರೊ ಹುಸೇನಿ ಅವರು ಅಮೋಘ ಕೊಡುಗೆ ನೀಡಿದ್ದಾರೆ. ಅವರು ಪ್ರಚಾರಪ್ರಿಯರಲ್ಲ 
ಮಲ್ಲಿಕಾರ್ಜುನ ಖರ್ಗೆ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT