ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದಿಂದ ಜರುಗಿದ ಲಿಂಗಪ್ಪ ತಾತಾನವರ ಜಾತ್ರಾ ಮಹೋತ್ಸವ

Last Updated 1 ಡಿಸೆಂಬರ್ 2017, 5:51 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನ ಹಂದರಕಿ ಗ್ರಾಮದ ಧಾರ್ಮಿಕ ಕ್ಷೇತ್ರ ಲಿಂಗಪ್ಪ ತಾತಾನವರ ಜಾತ್ರಾ ಮಹೋತ್ಸವ ಗುರುವಾರ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಜರುಗಿತು. ಬೆಳಿಗ್ಗೆ 8ಕ್ಕೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕಾರ್ಯಕ್ರಮಗಳೊಂದಿಗೆ ಆರಂಭಗೊಂಡ ಪಲ್ಲಕ್ಕಿ ಉತ್ಸವದ ಮೆರವಣಿಗೆ ಮಧ್ಯಾಹ್ನ 2.30 ಗಂಟೆಯವರೆಗೂ ನಡೆಯಿತು. ಲಿಂಗಪ್ಪ ತಾತಾನವರ ಹಳೆ ಮನೆಯಿಂದ ಪುರವಂತರ ಸಾಹಸ ಪ್ರದರ್ಶನ ಹಾಗೂ ಪೂಜೆ ಮಾಡಿ ಬೆಳಿಗ್ಗೆ 11ಕ್ಕೆ ಪಲ್ಲಕ್ಕಿ ಉತ್ಸವ ಆರಂಭಗೊಂಡಿತು.

ಗ್ರಾಮದ ವಿವಿಧ ಬಡಾವಣೆಗಳಲ್ಲಿ ಪಲ್ಲಕ್ಕಿ ಉತ್ಸವ ಸಂಚರಿಸಿತು. ಪುರವಂತರ ಸಾಹಸ ಪ್ರದರ್ಶನ, ಕೋಲಾಟ, ಡೊಳ್ಳು ಕುಣಿತ, ಹಲಗೆ ಭಾರಿಸುವಿಕೆ ಸೇರಿದಂತೆ ಭಜನೆ ಪದಗಳು ಪಲ್ಲಕ್ಕಿ ಉತ್ಸವದಲ್ಲಿ ಗಮನ ಸೆಳೆದವು. ಗ್ರಾಮದ ಪ್ರಮುಖ ಬೀದಿಯ ಮೂಲಕವಾಗಿ ಲೋಕೇಶ್ವರ ದೇವಸ್ಥಾನಕ್ಕೆ ತೆರಳಿದ ಪಲ್ಲಕ್ಕಿ ಉತ್ಸವ, ಪೂಜೆ ಸಲ್ಲಿಸಿ ಮರಳಿ ದೇವಸ್ಥಾನದ ಗರ್ಭಗುಡಿಯವರೆಗೆ ನಡೆಯಿತು. ತಾಲ್ಲೂಕು ಸೇರಿದಂತೆ ಅನ್ಯರಾಜ್ಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕಂಡುಬಂತು.

ಉತ್ಸವ ನೋಡಲು ಮುಗಿಬಿದ್ದ ಜನತೆ: ಪಲ್ಲಕ್ಕಿ ಉತ್ಸವದಲ್ಲಿ ಇಡಲಾದ ಲಿಂಗಪ್ಪ ತಾತನ ಮೂರ್ತಿ ಹಾಗೂ ಭೀಮಣ್ಣ ತಾತನ ಮೂರ್ತಿ ನೋಡಿ ದರ್ಶನ ಪಡೆಯಲು ಭಕ್ತರು ಮುಗಿಬಿದ್ದರು. ಗ್ರಾಮದಲ್ಲಿ ಪಲ್ಲಕ್ಕಿ ಸಂಚರಿಸುತ್ತಿದ್ದರೇ, ಮನೆಯ ಜನರು ಪಲ್ಲಕ್ಕಿ ಉತ್ಸವಕ್ಕೆ ನಮಸ್ಕರಿಸಿ ಧನ್ಯರಾದರು. ಅನ್ಯರಾಜ್ಯದಿಂದ ಆಗಮಿಸಿದ ಭಕ್ತರು ಮನೆ ಮಾಳಿಗೆ, ಗಿಡದ ಮೇಲೆ ಕುಳಿತಿರುವುದು ಕಂಡುಬಂತು. ಪಲ್ಲಕ್ಕಿ ಉತ್ಸವದ ಹಿಂದೆ ಮಹಿಳೆಯರ ಭಕ್ತಿಯ ಪದಗಳು ಮನರಂಜನೆ ನೀಡಿದವು.

ಪ್ರಸಾದದ ವ್ಯವಸ್ಥೆ: ಲಿಂಗಪ್ಪ ತಾತನವರ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಗರ್ಭಗುಡಿಯ ನಮಸ್ಕಾರ ಪಡೆದ ನಂತರ ಆಗಮಿಸಿದ ಭಕ್ತರು ಪ್ರಸಾದ ಸೇವಿಸಿ ಧನ್ಯರಾದರು. ಗ್ರಾಮದ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿ, ಸಿಂಗರಿಸಲಾಗಿತ್ತು.

ಗಮನ ಸೆಳೆದ ಸರಪಳಿ ಕಡಿಯುವಿಕೆ: ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಮುಗಿದ ನಂತರ ಗರ್ಭಗುಡಿಯ ಎದುರುಗಡೆ ಇರುವ ಕಟ್ಟಿಯ ಮೇಲೆ ಹಾಕಿರುವ ಸರಪಳಿ ಕಡಿಯುವಿಕೆ ಅತ್ಯಂತ ಗಮನ ಸೆಳೆಯಿತು. ಸುತ್ತಮುತ್ತಲೂ 5 ಸುತ್ತು ಹಾಕಿದ ನಂತರ ಸರಪಳಿಯನ್ನು ಕಡಿಯಲಾಯಿತು. ಸರಪಳಿ ಕಡಿಯುವುದನ್ನು ನೋಡಲು ಜನರು ಮುಗಿಬಿದ್ದರು. ದೇವಸ್ಥಾನದಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸಿದಂತೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಗ್ರಾಮದ ಮುಖಂಡರಾದ ಉಮಾರೆಡ್ಡಿ ಹಂದರಕಿ, ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥರೆಡ್ಡಿ, ನಾಗಪ್ಪ ಸಾತಪೂರ, ಸೋಮಶೇಖರ, ಭೀಮಣ್ಣಾ, ಸಾಬಯ್ಯ ತಮ್ಮಾಪೂರ, ಶರಣಪ್ಪ ರಾವೂರ, ನಾರಾಯಣ ಕೊಂಕಲ್, ಅನಂತರೆಡ್ಡಿ, ಮಲ್ಲಯ್ಯ ಬಂಡ್ಲಿ, ಬಸ್ಸಣ್ಣ ಇದ್ದರು.

* * 

ಗ್ರಾಮದ ಆರಾಧ್ಯ ದೈವ ಸದ್ಗುರು ಲಿಂಗಪ್ಪ ತಾತಾನವರ ಜಾತ್ರಾ ಮಹೋತ್ಸವ ಅತ್ಯಂತ ಸಂಭ್ರಮದಿಂದ ನಡೆದಿರುವುದು ಸಂತಸ. ಸೇಡಂ ತಾಲ್ಲೂಕಿನವರಿಗಿಂತ ಅನ್ಯರಾಜ್ಯದ ಭಕ್ತರೇ ಪಾಲ್ಗೊಂಡಿರುವುದು ವಿಶೇಷ.
ಉಮಾರೆಡ್ಡಿ ಹಂದರಕಿ,
ಗ್ರಾಮ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT