3

ಹಲಕೋಡಾ: ಗಡಿ ದಾಟಲು ಜೀವಭಯವಿಲ್ಲ!

Published:
Updated:
ಹಲಕೋಡಾ: ಗಡಿ ದಾಟಲು ಜೀವಭಯವಿಲ್ಲ!

ಚಿಂಚೋಳಿ: ದೈನಂದಿನ ಅಗತ್ಯವಸ್ತುಗಳ ಖರೀದಿಗೆ ನೆರೆಯ ತೆಲಂಗಾಣ ರಾಜ್ಯವನ್ನೇ ಅವಲಂಭಿಸಿದ ಕರ್ನಾಟಕದ ಗಡಿನಾಡಿನ ಜನರು, ನೆರೆಯ ರಾಜ್ಯದವರೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿದ್ದಾರೆ. ಆದರೆ, ಇವರಿಗೆ ರಾಜ್ಯದ ಗಡಿ ದಾಟಿ ನೆರೆರಾಜ್ಯಕ್ಕೆ ತೆರಳುವುದು, ನೆರೆರಾಜ್ಯದವರು ತಮ್ಮ ಗಡಿ ದಾಟಿ ಕರ್ನಾಟಕಕ್ಕೆ ಬರಬೇಕಾದರೆ ಜೀವ ಭಯದಿಂದಲೇ ಹೆಜ್ಜೆ ಹಾಕುತ್ತಿದ್ದರು.

ಕಾರಣ ಉಭಯ ರಾಜ್ಯಗಳ ಜನರು ಪರಸ್ಪರ ಗಡಿ ದಾಟಿ ಹೋಗಿ ಬರಲು ಮಧ್ಯದಲ್ಲಿ ಹರಿಯುವ ಕಾಗಿಣಾ ನದಿಗೆ ಸೇತುವೆ ಇರಲಿಲ್ಲ. ಇದರಿಂದ ಜನರು ಟ್ಯೂಬ್‌ ಕಟ್ಟಿಕೊಂಡು, ಇಲ್ಲವೇ ಬೇರೆಯವರ ಹೆಗಲ ಮೇಲೆ ಕುಳಿತು ಜೀವ ಭಯದಿಂದಲೇ ನದಿಯಲ್ಲಿ ಗಡಿಯನ್ನು ದಾಟುತ್ತಿದ್ದರು. ಹೀಗೆ ನದಿ ದಾಟುವಾಗ 6ಕ್ಕೂ ಹೆಚ್ಚು ಜನರು ಬಲಿಯಾಗಿದ್ದು ದುರಂತ ಕತೆ.

ಲಾವಡಾ ಬ್ಯಾರೇಜಿನಲ್ಲಿ ಗರಿಷ್ಠ ಪ್ರಮಾಣದ ನೀರು ಸಂಗ್ರಹಿಸಿದರೆ ಹಿನ್ನೀರು ಹಲಕೋಡಾ ಬಳಿ ನದಿಯಲ್ಲಿ ಎದೆಮಟ್ಟ ಸಂಗ್ರಹವಾಗುತ್ತಿತ್ತು. ಇದರಲ್ಲಿಯೇ ಜನರು ನಡೆದುಕೊಂಡು ಹೋಗುವುದು ಅನಿವಾರ್ಯವಾಗಿತ್ತು.

ತೆಲಂಗಾಣದ ಬಶೀರಾಬಾದನಲ್ಲಿ ಮಂಗಳವಾರ ನಡೆಯುವ ವಾರದ ಸಂತೆಗೆ ಕರ್ನಾಟಕದ ಗಡಿನಾಡಿನ ಹಳ್ಳಿಗಳ ಜನರು ನದಿ ದಾಟಿ ಹೋಗುವುದು ಕಾಣಸಿಗುತ್ತದೆ. ಜತೆಗೆ, ಬಂಧು ಬಾಂಧವರ ಮನೆಗೂ ಹೋಗಲೂ ನದಿ ದಾಟುವುದು ಅನಿವಾರ್ಯವಾಗಿತ್ತು.

ಈಗ ಕಾಲ ಬದಲಾಗಿದೆ. ಅಭಿವೃದ್ಧಿಯ ಬಾಗಿಲು ತೆರೆದಿದ್ದರಿಂದ ಗಡಿನಾಡಿನ ಜನರು ಜೀವ ಭಯವಿಲ್ಲದೇ ನೆಮ್ಮದಿ ಹಾಗೂ ನಿರಾಳಭಾವದಿಂದ ಉಭಯ ರಾಜ್ಯಗಳ ಗಡಿ ದಾಟಿ ಬಂದು ಹೋಗುವಂತಾಗಿದೆ. ಇದಕ್ಕೆ ಕಾರಣವಾಗಿದ್ದು ಲೋಕೋಪಯೋಗಿ ಇಲಾಖೆ ನಿರ್ಮಿಸಿದ ಹಲಕೋಡಾ ಸೇತುವೆ. ಕಾಗಿಣಾ ನದಿಗೆ ಅಡ್ಡಲಾಗಿ ಹಲಕೋಡಾ ಬಳಿ ಸುಮಾರು 172 ಮೀಟರ್‌ ಉದ್ದದ ಸುಸಜ್ಜಿತ ಸೇತುವೆ ಮತ್ತು ಕೂಡು ರಸ್ತೆಯನ್ನು ಸುಮಾರು ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದರಿಂದ ಗಡಿನಾಡಿನಲ್ಲಿ ಸಂತಸದ ಹೊನಲು ಹರಿದಿದೆ.

ಇದು ಹಲಕೋಡಾ ಬಳಿ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ನೂತನ ಸೇತುವೆಯ ಫಲ. ಕರ್ನಾಟಕದ ನಿಡಗುಂದಾ, ಜಟ್ಟೂರು, ಪೊತಂಗಲ್‌, ವೆಂಕಟಾಪುರ, ಹಲಕೋಡಾ, ಶಿರೋಳ್ಳಿ, ಕರ್ಚಖೇಡ್‌ ಹಾಗೂ ನೆರೆಯ ತೆಲಂಗಾಣದ ಬಶೀರಾಬಾದ, ನಾವದಗಿ, ಮೈಲ್ವಾರ್‌, ಇಂದ್ರಛೇಡ್‌, ಮಾದನಪಲ್ಲಿ, ಬುಡಗಾ, ತಾಂಡೂರು ಜನಗಳಿಗೂ ಈ ಸೇತುವೆ ವರವಾಗಿದೆ.

‘ಉಭಯ ರಾಜ್ಯಗಳ ಮಧ್ಯೆ ಬಾಂಧವ್ಯ ಹೊಂದಿದ ಗ್ರಾಮಗಳು ಕಾಲ್ನಡಿಗೆಯಲ್ಲಿ ಬಂದರೆ 5/6 ಕಿ.ಮೀ ಅಂತರದಲ್ಲಿದ್ದರೂ ಸೇತುವೆ ಇಲ್ಲದ ಕಾರಣ ವಾಹನಗಳಲ್ಲಿ ಬರುವ 20ರಿಂದ 30 ಕಿ.ಮೀ ದೂರ ಕ್ರಮಿಸಿ ಹಳ್ಳಿಗಳನ್ನು ತಲುಪಬೇಕಿತ್ತು. ಆದರೆ, ಈಗ ಸೇತುವೆ ನಿರ್ಮಾಣವಾಗಿದ್ದರಿಂದ ಉಭಯ ರಾಜ್ಯಗಳ ಜನರ ದೂರದ ಪ್ರಯಾಣಕ್ಕೆ ಮತ್ತು ಸಾವಿನ ಭಯಕ್ಕೆ ಮುಕ್ತಿ ಸಿಕ್ಕಂತಾಗಿದೆ’ ಎಂದು ಹಲಕೋಡಾದ ಹಿರಿಯ ಮುಖಂಡ ಮಾಣಿಕರೆಡ್ಡಿ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

172 ಮೀಟರ್‌ ಉದ್ದದ ಸೇತುವೆ 15 ಪಿಲ್ಲರ್‌ಗಳು, 2 ಅಬಾಟ್‌ಮೆಂಟ್‌, 16 ಸ್ಲಾಬ್‌ ಜತೆಗೆ ಕೂಡು ರಸ್ತೆ ತಲೆ ಎತ್ತಿದೆ. ಈ ಕಾಮಗಾರಿಗೆ 2014ರ ಡಿಸೆಂಬರ್‌ 2ರಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಶಿಲಾನ್ಯಾಸ ನೆರವೇರಿಸಿದ್ದರು.

‘ಗಡಿನಾಡಿನ ಜನರ ಸಮಸ್ಯೆ ಮನಗಂಡು ರಾಜ್ಯ ಸರ್ಕಾರದಿಂದ ₹4.5 ಕೋಟಿ ಮಂಜೂರು ಮಾಡಿಸಿದ್ದರಿಂದ ಈಗ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಕೂಡು ರಸ್ತೆಗೂ ಅಗತ್ಯವಾದ ಅನುದಾನ ಮಂಜೂರು ಮಾಡಿಸಲಾಗಿದೆ. ಹೀಗಾಗಿ, ಎರಡು ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಕಾಗಿಣಾ ನದಿಗೆ ಜಟ್ಟೂರು ಬಳಿ ಬ್ರಿಜ್‌ ಕಂ ಬ್ಯಾರೇಜು ನಿರ್ಮಾಣಕ್ಕೆ ₹30 ಕೋಟಿ ಮಂಜೂರು ಮಾಡಿಸಲಾಗಿದೆ. ಹಲಕೋಡಾ ಸೇತುವೆ ಉದ್ಘಾಟನೆ ಮತ್ತು ಜಟ್ಟೂರು ಬ್ಯಾರೇಜು ನಿರ್ಮಾಣಕ್ಕೆ ಶಿಲಾನ್ಯಾಸ ತಿಂಗಳೊಳಗಾಗಿ ನಡೆಸುವುದಾಗಿ ಅವರು ತಿಳಿಸಿದರು.ಹಲಕೋಡಾ ಸೇತುವೆ ಈ ಭಾಗದ ಜನರ ಬಹುದಿನಗಳ ಕನಸಾಗಿತ್ತು. ಇದನ್ನು ಸಾಕಾರಗೊಳಿಸಿದ ತೃಪ್ತಿಯನ್ನು ಅವರು ವ್ಯಕ್ತಪಡಿಸಿದರು.

* * 

ಹಲಕೋಡಾ ಬಳಿ ಕಾಗಿಣಾ ನದಿಗೆ ನಿರ್ಮಿಸಿದ ನೂತನ ಸೇತುವೆಯ ಉದ್ಘಾಟನೆ ಹಾಗೂ ಜಟ್ಟೂರು ಬಳಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣಕ್ಕೆ ಶೀಘ್ರವೇ ಶಿಲಾನ್ಯಾಸ ನೆರವೇರಿಸಲಾಗುವುದು.

ಡಾ.ಶರಣಪ್ರಕಾಶ ಪಾಟೀಲ,

ಜಿಲ್ಲಾ ಉಸ್ತುವಾರಿ ಸಚಿವ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry