ಸೋಮವಾರ, ಮಾರ್ಚ್ 8, 2021
29 °C

ಜಿಲ್ಲೆಯಲ್ಲಿ 90 ಎಚ್‌ಐವಿ ಸೋಂಕಿತರು ಪತ್ತೆ

ಪಿ.ಕೆ.ರವಿಕುಮಾರ್‌ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ 90 ಎಚ್‌ಐವಿ ಸೋಂಕಿತರು ಪತ್ತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಏಳು ತಿಂಗಳ ಅವಧಿಯಲ್ಲಿ ಒಟ್ಟು 25,192 ಮಂದಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 90 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ. ಪರೀಕ್ಷೆಗೆ ಒಳಪಡಿಸಿದ 18,747 ಗರ್ಭಿಣಿಯರ ಪೈಕಿ ನಾಲ್ವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಏಡ್ಸ್‌ ಕುರಿತ ಜಾಗೃತಿ ಕಾರ್ಯಕ್ರಮಗಳ ಪರಿಣಾಮ ಎಚ್‌ಐವಿ ಸೋಂಕು ಇಳಿಮುಖವಾಗಿದೆ. ಆದರೆ ಅದನ್ನು ಸಂಪೂರ್ಣವಾಗಿ ತಡೆಗಟ್ಟಲು ಇನ್ನೂ ಸಾಧ್ಯವಾಗಿಲ್ಲ. 2016–17ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 20,858 ಹೊಸ ಎಚ್ಐವಿ ಸೋಂಕಿತರನ್ನು ಪತ್ತೆ ಹಚ್ಚಲಾಗಿದ್ದು, ಜಿಲ್ಲೆಯಲ್ಲಿ168 ಸೋಂಕಿತರು ಕಂಡುಬಂದಿದ್ದಾರೆ. ಇವರಲ್ಲಿ 82 ಪುರುಷರು 86 ಸ್ತ್ರೀಯರು ಇದ್ದಾರೆ. ಜತೆಗೆ 10 ಗರ್ಭಿಣಿಯರಲ್ಲೂ ಸೋಂಕು ಇರುವುದು ದೃಢವಾಗಿದೆ.

ಎರಡು ಕಡೆ ಎಆರ್‌ಟಿ ಕೇಂದ್ರ: ‘ಕಾರವಾರದ ಜಿಲ್ಲಾಸ್ಪತ್ರೆ ಹಾಗೂ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರಗಳಿದ್ದು, ಸರ್ಕಾರದದ ಹೊಸ ಮಾರ್ಗಸೂಚಿಯಂತೆ ಎಲ್ಲ ಸೋಂಕಿತರಿಗೆ ಚಿಕಿತ್ಸೆ ಪ್ರಾರಂಭಿಸಲಾಗುತ್ತಿದೆ. ಜಿಲ್ಲೆಯ ಎಆರ್‌ಟಿ ಕೇಂದ್ರಗಳಲ್ಲಿ 2,820 ಸೋಂಕಿತರು ನೋಂದಾಯಿತರಾಗಿದ್ದು, ಈ ಪೈಕಿ 153 ಮಕ್ಕಳು ಹಾಗೂ 1 ಲೈಂಗಿಕ ಅಲ್ಪಸಂಖ್ಯಾತರು ಸೇರಿದ್ದಾರೆ. ನೋಂದಾಯಿತರ ಪೈಕಿ 1,590 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶೋಕಕುಮಾರ್‌ ತಿಳಿಸಿದರು.

‘ಜಿಲ್ಲೆಯಲ್ಲಿ ಒಟ್ಟು 13 ಸಮಗ್ರ ಆಪ್ತ ಸಮಾಲೋಚನೆ ಮತ್ತು ರಕ್ತ ಪರೀಕ್ಷಾ ಕೇಂದ್ರಗಳಿದ್ದು, ಇವುಗಳು ಉಚಿತವಾಗಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ 29 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ 2 ಖಾಸಗಿ ಆಸ್ಪತ್ರೆಗಳಲ್ಲಿ ತರಬೇತಿ ಪಡೆದ ಸ್ಟಾಫ್‌ ನರ್ಸ್‌ ಹಾಗೂ ಪ್ರಯೋಗಶಾಲಾ ತಂತ್ರಜ್ಞರ ಮುಖಾಂತರ ಎಚ್.ಐ.ವಿ ರಕ್ತ ಪರೀಕ್ಷೆ ನಡೆಸಲಾಗುತ್ತಿದೆ.

‘ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಯಲ್ಲಾಪುರ, ಮುಂಡಗೋಡ, ಸಿದ್ದಾಪುರ, ಹಳಿಯಾಳ, ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆ ಹಾಗೂ ಕಾರವಾರ ಸಿ.ಎಸ್.ಸಿ ಸಂರಕ್ಷಾ ಸಂಸ್ಥೆಯಲ್ಲಿ ಎಆರ್‌ಟಿ ಉಪಕೇಂದ್ರಗಳಿದ್ದು, ಇಲ್ಲಿಯೂ ಅನುಸರಣಾ ಚಿಕಿತ್ಸೆ ಕೊಡಲಾಗುತ್ತದೆ. ಅಲ್ಲದೇ ಜಿಲ್ಲೆಯಲ್ಲಿ ಕೂರ್‌, ಮಹಿಳಾ ಕ್ರಾಂತಿ ಹಾಗೂ ಸಮೂಹ ಸಂರಕ್ಷಾ ಎಂಬ ಸ್ವಯಂ ಸೇವಾ ಸಂಸ್ಥೆಗಳು ಎಚ್‌ಐವಿ ಸೋಂಕು ತಡೆಗಟ್ಟುವಲ್ಲಿ ಶ್ರಮಿಸುತ್ತಿವೆ’ ಎಂದು ವಿವರಿಸಿದರು.

ಅರಿವು ಕಾರ್ಯಕ್ರಮ: ‘ಜಿಲ್ಲೆಯ 50 ಪದವಿ ಕಾಲೇಜುಗಳಲ್ಲಿ ರೆಡ್‌ ರಿಬ್ಬನ್‌ ಕ್ಲಬ್‌ಗಳನ್ನು ರಚಿಸಿ, ಇವುಗಳ ಮುಖಾಂತರ ಯುವಪೀಳಿಗೆಗೆ ಎಚ್‍ಐವಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಜಿಲ್ಲೆಯ 50 ಕಾಲೇಜುಗಳ ಎನ್‌ಎಸ್‌ಎಸ್‌ ಅಧಿಕಾರಿಗಳಿಗೆ ಕ್ಲಬ್‌ನ ಉದ್ದೇಶಗಳ ಬಗ್ಗೆ ತರಬೇತಿ ನೀಡಲಾಗುವುದು. ಜೋಗಿ ಪದ ಕಲಾ ತಂಡಗಳ ತಂಡದ ಮೂಲಕ ಡಿಸೆಂಬರ್‌ನಲ್ಲಿ 20 ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ತಾಲ್ಲೂಕುಗಳಲ್ಲಿ ಆಯ್ದ ಸ್ಥಳಗಳಲ್ಲಿ ಗೋಡೆ ಬರಹಗಳ ಮೂಲಕ ಎಚ್.ಐ.ವಿ/ಏಡ್ಸ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

ಸೋಂಕಿತರಿಗೆ ಇರುವ ಸೌಲಭ್ಯಗಳೇನು?

‘ರಾಜ್ಯ ಸರ್ಕಾರದ ವಿಶೇಷ ಪಾಲನಾ ಯೋಜನೆಯಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ರಕ್ಷಣಾ ಘಟಕದ ಮೂಲಕ 285 ಸೋಂಕಿತ/ಬಾಧಿತ ಮಕ್ಕಳಿಗೆ ಅನುದಾನ ನೀಡಲಾಗುತ್ತಿದೆ.

ಧನಶ್ರೀ ಯೋಜನೆಯಡಿ 27 ಎಚ್.ಐ.ವಿ ಸೋಂಕಿತ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ತಲಾ ₹ 50 ಸಾವಿರ ಅನುದಾನ ನೀಡಲಾಗಿದೆ. ಚೇತನ ಯೋಜನೆಯಡಿ 6 ಜನ ಲೈಂಗಿಕ ಕಾರ್ಯಕರ್ತೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ತಲಾ ₹ 50 ಸಾವಿರ ಅನುದಾನ ಒದಗಿಸಲಾಗಿದೆ.

ಈ ಎರಡೂ ಯೋಜನೆಯಲ್ಲಿ ಫಲಾನುಭವಿಗಳಿಗೆ ತಲಾ ₹ 25 ಸಾವಿರ ಸಬ್ಸಿಡಿ ಒಳಗೊಂಡಿದೆ. ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಕಳೆದ ವರ್ಷ 4 ಸೋಂಕಿತರಿಗೆ ವಸತಿ ಸೌಲಭ್ಯ ಒದಗಿಸಲಾಗಿದೆ. ಈ ವರ್ಷದಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಡಾ.ಅಶೋಕಕುಮಾರ್‌ ಹೇಳಿದರು.

ಜಿಲ್ಲೆಯಲ್ಲಿ ಎಆರ್‌ಟಿ ಮಾತ್ರೆ ತೆಗೆದುಕೊಳ್ಳುವ ಎಚ್‌ಐವಿ ಸೋಂಕಿತರ ವಿವರ. (2017ರ ಅಕ್ಟೋಬರ್ ಅಂತ್ಯಕ್ಕೆ)

ತಾಲ್ಲೂಕು ಎಆರ್‌ಟಿ ಮಾತ್ರೆ ತೆಗೆದುಕೊಳ್ಳುವವರು

ಕಾರವಾರ 202

ಅಂಕೋಲಾ 192

ಕುಮಟಾ 163

ಹೊನ್ನಾವರ 143

ಯಲ್ಲಾಪುರ 103

ಹಳಿಯಾಳ 85

ಜೊಯಿಡಾ 48

ಶಿರಸಿ 258

ಸಿದ್ದಾಪುರ 94

ಭಟ್ಕಳ 112

ಮುಂಡಗೋಡ 86

ಇತರೇ ಜಿಲ್ಲೆ 104

****************

ಒಟ್ಟು 1590

***************

* * 

ಎಚ್‌ಐವಿ ಸೋಂಕಿತರ ಅಂಕಿ ಸಂಖ್ಯೆ ವಿವರ ಪರೀಶೀಲಿಸಿದಾಗ ನಮ್ಮ ಜಿಲ್ಲೆಯು ಸೋಂಕಿತರ ಪ್ರಮಾಣದಲ್ಲಿ 28ನೇ ಸ್ಥಾನದಲ್ಲಿದೆ. ಅತಿ ಕಡಿಮೆ ಸೋಂಕು ಹರಡುವ ಜಿಲ್ಲೆಗಳಲ್ಲಿ ಉತ್ತರ ಕನ್ನಡವೂ ಒಂದಾಗಿದೆ.

ಡಾ.ಅಶೋಕಕುಮಾರ್‌

ಡಿಎಚ್‌ಒ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.