ಶನಿವಾರ, ಫೆಬ್ರವರಿ 27, 2021
31 °C

‘ಹುತ್ತರಿ ಹಬ್ಬ’ಕ್ಕೆ ಕೊಡಗು ಸಜ್ಜು

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

‘ಹುತ್ತರಿ ಹಬ್ಬ’ಕ್ಕೆ ಕೊಡಗು ಸಜ್ಜು

ಮಡಿಕೇರಿ: ಜಿಲ್ಲೆಯ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ‘ಹುತ್ತರಿ’ಗೆ (ಪುತ್ತರಿ) ನಾಡು ಸಜ್ಜಾಗುತ್ತಿದೆ. ಮನೆಗಳಿಗೆ ಸುಣ್ಣಬಣ್ಣ ಬಳಿಯುವ ಕಾರ್ಯ ಎಲ್ಲೆಡೆ ಕಾಣಿಸುತ್ತಿದೆ. ಭತ್ತದ ಗದ್ದೆಗಳಿಂದ ಕದಿರು ತರಲು ಅನ್ನದಾತರು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಡಿ. 3 ಹಾಗೂ 4ರಂದು ಜಿಲ್ಲೆಯಾದ್ಯಂತ ಹುತ್ತರಿ ಸಂಭ್ರಮ ಮನೆ ಮಾಡಲಿದೆ. ಕೊಡವ ಸಮಾಜದ ಬಳಿಯ ಮಂದ್‌ನಲ್ಲಿ ಹಬ್ಬಕ್ಕೆ ಬುಧವಾರ ರಾತ್ರಿ ಚಾಲನೆ ದೊರಕಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ.

ಕಳೆದ ವರ್ಷ ಕಾವೇರಿ ಕಣಿವೆಯಲ್ಲಿ ಮಳೆ ಕೊರತೆಯಿಂದ ಹಬ್ಬದ ಸಂಭ್ರಮ ಮಾಯವಾಗಿತ್ತು. ಗದ್ದೆಗಳಲ್ಲಿ ನೀರಿನ ಕೊರತೆಯಿಂದ ಕದಿರೇ ಇರಲಿಲ್ಲ! ಆದರೆ, ಈ ವರ್ಷ ನಿರೀಕ್ಷೆಗೂ ಮೀರಿ ಮಳೆ ಸುರಿದ ಪರಿಣಾಮ ಗದ್ದೆಗಳು ಹಸಿರು ಹಾಗೂ ಹಳದಿಯ ಉಡುಗೆ ತೊಟ್ಟಂತೆ ನಳನಳಿಸುತ್ತಿವೆ; ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಭತ್ತದ ಪೈರಿನಲ್ಲಿ ಕದಿರು ಚಾಚಿಕೊಂಡಿದ್ದು ಗದ್ದೆಗಳನ್ನು ಕಣ್ತುಂಬಿಕೊಳ್ಳುವುದೇ ಆನಂದಮಯ.

ನಾಪೋಕ್ಲು ಸಮೀಪದ ಪಾಡಿ ಇಗ್ಗುತಪ್ಪನ ಸನ್ನಿಧಿಯಲ್ಲಿ 3ರಂದು (ಭಾನುವಾರ) ಮೊದಲಿಗೆ ಕದಿರು ತೆಗೆಯುವ ಮೂಲಕ ಹಬ್ಬದ ಸಂಭ್ರಮಕ್ಕೆ ಚಾಲನೆ ದೊರೆಯಲಿದೆ. ದೇವಾಲಯದ ಜ್ಯೋತಿಷಿ ಅಮ್ಮಂಗೇರಿ ಕಣಿಯರ ಶಶಿಕುಮಾರ್ ಹಬ್ಬದ ಸಮಯ ನಿಗದಿಪಡಿಸಿದ್ದಾರೆ.

2ರಂದು ದೇವಾಲಯದಲ್ಲಿ ಹುತ್ತರಿ ಕಲಾಡ್ಚ ಹಬ್ಬ ನಡೆಯಲಿದೆ. 3ರಂದು ರಾತ್ರಿ 7ಕ್ಕೆ ನೆರೆ ಕಟ್ಟುವುದು, ರಾತ್ರಿ 8ಕ್ಕೆ ಕದಿರು ತೆಗೆಯುವುದು, ರಾತ್ರಿ 9ಕ್ಕೆ ಪ್ರಸಾದ ವಿತರಣೆಗೆ ಸಮಯ ನಿಗದಿಗೊಳಿಸಲಾಗಿದೆ. ಅದೇ ದಿವಸ ಸಾರ್ವಜನಿಕರು ರಾತ್ರಿ 7.30ಕ್ಕೆ ನೆರೆ ಕಟ್ಟುವುದು, 8.30ಕ್ಕೆ ಕದಿರು ತೆಗೆಯುವ ಹಾಗೂ 9.30ಕ್ಕೆ ಸಹ ಭೋಜನಕ್ಕೆ ಸಮಯ ನಿಗದಿಯಾಗಿದೆ. ಅದೇ ಸಂಪ್ರದಾಯದಂತೆ ಹಬ್ಬ ನಡೆಯುವುದು ವಿಶೇಷ.

ಹಬ್ಬದ ವೇಳೆ ಗದ್ದೆಗಳಲ್ಲಿ ಬೆಳೆದ ಧಾನ್ಯವನ್ನು ಮನೆಗೆ ತುಂಬಿಸಿಕೊಳ್ಳುವುದು ಸಂಪ್ರದಾಯ. ಭತ್ತದ ಕೃಷಿ ಅವಲಂಬಿಸಿರುವ ರೈತರು, ಹೆಚ್ಚಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಇನ್ನು ‘ಐನ್‌ಮನೆ’ಗಳಲ್ಲೂ ಸಾಮೂಹಿಕವಾಗಿ ಹಬ್ಬದ ಆಚರಣೆ ನಡೆಯಲಿದೆ. ಒಂದು ವಾರ ಹಬ್ಬದ ಸಂಭ್ರಮವಿರಲಿದೆ. ಜತೆಗೆ, ರಾತ್ರಿವೇಳೆ ಬಾಣ, ಬಿರುಸುಗಳು ಸದ್ದು ಮಾಡಲಿವೆ. ಈಗಾಗಲೇ ಪಟಾಕಿ ವ್ಯಾಪಾರ ಜೋರಾಗಿದೆ. ಕೆಲವರು ಹುತ್ತರಿ ಬುಟ್ಟಿ ಖರೀದಿಗೆ ಮುಂದಾಗಿದ್ದರೆ ಮತ್ತೆ ಕೆಲವರು ಮನೆಯ ಅಟ್ಟ ಸೇರಿದ್ದ ಬುಟ್ಟಿ ಹಾಗೂ ಕುಕ್ಕೆ ತೆಗೆದು ಸಜ್ಜುಗೊಳಿಸಿಕೊಂಡಿದ್ದಾರೆ.

ಗದ್ದೆಗಳಲ್ಲೂ ಪೂಜೆ: ದೇವಸ್ಥಾನದಲ್ಲಿ ಕದಿರು ತೆಗೆದ ಬಳಿಕ ರಾತ್ರಿಯೇ ಕೃಷಿಕರು ತಮ್ಮ ಜಮೀನಿನತ್ತ ಹೆಜ್ಜೆ ಹಾಕಲು ಆರಂಭಿಸುತ್ತಾರೆ. ಹಾಲು ಮರದ ಜಾತಿಯ ಎಲೆಗಳಿಂದ ನೆರೆ ಕಟ್ಟುತ್ತಾರೆ. ಪೂಜೆ ಸಲ್ಲಿಸಿ ಗಾಳಿಯಲ್ಲಿ ಗುಂಡು ಹೊಡೆಯುವುದು ಸಂಪ್ರದಾಯ.

ಕದಿರು ತೆಗೆದು ‘ಪೊಲಿ ಪೊಲಿ ದೇವಾ ಪೊಲಿಯೇ ಬಾ...’ ಎಂದು ಹಾಡುತ್ತಾ ಮನೆಗೆ ಬರುತ್ತಾರೆ. ಭತ್ತದ ಕಣಜವನ್ನು ಪೂಜಿಸಿ ಅಂದು ಸಾಮೂಹಿಕ ಭೋಜನ ಸವಿಯಲಿದ್ದಾರೆ ಎನ್ನುತ್ತಾರೆ ಹಿರಿಯರು.

ಹಬ್ಬದ ಬಳಿಕ ಗ್ರಾಮಗಳಲ್ಲಿ ಹುತ್ತರಿ ಕೋಲಾಟ ನಡೆಯುತ್ತದೆ. ಮಂದ್‌ಗಳಲ್ಲಿ ನಡೆಯುವ ಕೋಲಾಟಕ್ಕೆ ಪ್ರಾಮುಖ್ಯತೆಯಿದೆ. ಇನ್ನು ಮಡಿಕೇರಿಯ ಹಳೆ ಕೋಟೆ ಆವರಣದಲ್ಲಿ ಕೊಡವ ಹಾಗೂ ಗೌಡ ಸಮಾಜದಿಂದ ಕೋಲಾಟ, ಕತ್ತಿಯಾಟ್‌, ಉಮ್ಮತ್ತಾಟ್‌, ದುಡಿಕೊಟ್‌ಪಾಟ್‌ ನಡೆಯುತ್ತದೆ. ಎಲ್ಲರೂ ಒಟ್ಟಾಗಿ ಸಂಭ್ರಮಿಸುತ್ತಾರೆ. ಜಿಲ್ಲೆಯ ಜನಪ್ರತಿನಿಧಿಗಳೂ ಅಲ್ಲಿಗೆ ಬಂದು ಕೊಡವ ವಾಲಗಕ್ಕೆ ಹೆಜ್ಜೆ ಹಾಕಲಿದ್ದಾರೆ.

ಈ ವರ್ಷ ಭತ್ತದ ಪೈರು ಉತ್ತಮವಾಗಿ ಬೆಳೆದಿದೆ. ಆದರೆ, ಕೊಯ್ಲಿಗೂ ಮೊದಲೇ ಭತ್ತಕ್ಕೆ ಸೈನಿಕ ಹುಳುಬಾಧೆ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಹುತ್ತರಿ ಬಳಿಕ ಭತ್ತದ ಸುಗ್ಗಿ (ಕೊಯ್ಲು) ಆರಂಭವಾಗಲಿದೆ. ಆದಷ್ಟು ಬೇಗ ಕೊಯ್ಲು ಮುಗಿಸಿ ಭತ್ತವನ್ನು ಕಣಜಕ್ಕೆ ಕೊಂಡೊಯ್ಯುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳುತ್ತಾರೆ ತಾಲ್ಲೂಕಿನ ಯರವನಾಡಿನ ಭಾಸ್ಕರ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.