7

ಜಾನಪದ, ಸಾಂಸ್ಕೃತಿಕ ಕಲೆ ಸಮಾಜ ರೂಪಿಸುತ್ತಿವೆ

Published:
Updated:

ವಿಜಯಪುರ: ಜಾನಪದ, ಸಾಂಸ್ಕೃತಿಕ ಕಲೆಗಳು ಇಂದು ಉತ್ತಮ ಸಮಾಜ ಹಾಗೂ ಪ್ರತಿಭೆಯನ್ನು ಪ್ರತಿಬಿಂಬಿಸುವಲ್ಲಿ ಸಹಕಾರಿಯಾಗಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರವೀಂದ್ರ.ಆರ್ ಕೊಣ್ಣೂರು ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಈಚೆಗಿನ ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ಕಡಿಮೆಯಾಗುತ್ತಿವೆ. ಶಿಕ್ಷಣದ ಜತೆಗೆ ಕ್ರೀಡೆ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಅಗತ್ಯವಿದೆ. ಭಾರತವು ಕೃಷಿ ಆಧಾರಿತ, ಕೈಗಾರಿಕೆ ಆಧಾರಿತವಾಗಿದ್ದು, ಈಗ ಮಾಹಿತಿ ತಂತ್ರಜ್ಞಾನ ಆಧಾರಿತ ಆರ್ಥಿಕತೆಯನ್ನು ಹೊಂದುತ್ತಿದೆ. ಬದುಕು ಯಾಂತ್ರಿಕೃತವಾಗುತ್ತಿದ್ದು, ಒತ್ತಡದ ಜೀವನದಲ್ಲಿ ಸಂಸ್ಕೃತಿ ಕಲೆಗಳಲ್ಲಿ ತೊಡಗಿಸಿಕೊಳ್ಳುವುದು ಕಷ್ಟಸಾಧ್ಯ. ಆದರೂ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶನಕ್ಕೆ ಜಾನಪದ ಸಾಂಸ್ಕೃತಿಕ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.

ಪುರಸಭಾ ಸದಸ್ಯ ಎಸ್.ಭಾಸ್ಕರ್ ಮಾತನಾಡಿ, ಶಿಕ್ಷಣ ಎನ್ನುವುದು ಕೇವಲ ಅಂಕಗಳಿಗೆ ಸೀಮಿತವಲ್ಲ. ಸಾಂಸ್ಕೃತಿಕ ಚಟುವಟಿಕೆ ಕೂಡಾ ಪರೀಕ್ಷೆ, ಕ್ರೀಡಾಕೂಟಗಳಿಗಿಂತ ಪ್ರಾಮುಖ್ಯತೆ ಹೊಂದಿವೆ. ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದೆ. ಆ ದಿಸೆಯಲ್ಲಿ ವಿದ್ಯಾರ್ಥಿಗಳು ಓದಿನ ಜತೆಗೆ ಸಂಗೀತ, ಕಲೆ, ಸಾಹಿತ್ಯ, ಜಾನಪದ, ಪ್ರಬಂಧ, ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಸಲಹೆ ನೀಡಿದರು.

ಇಂದಿನ ಮಕ್ಕಳು ಒತ್ತಡದಲ್ಲಿ ಬಳಲುತ್ತಿದ್ದಾರೆ. ಅವರ ಒತ್ತಡ ನಿವಾರಣೆಗಾಗಿ ಅವರು ನೃತ್ಯ, ನಾಟಕ, ಸಂಗೀತ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಮಕ್ಕಳ ನೆನಪಿನ ಶಕ್ತಿ ವೃದ್ಧಿಸುತ್ತದೆ. ಇದರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎಂದರು. ಪ್ರಾಂಶುಪಾಲ ಮಾರ್ಟಿನ್, ನಾಗರಾಜು, ಅಶ್ವಥ್ಥಪ್ಪ, ವೇಣುಗೋಪಾಲ್, ನಾರಾಯಣಸ್ವಾಮಿ, ಮಹಬೂಬ್ ಸಾಬ್, ವಿಜಯಪುರ ವೇಣು, ವೆಂಕಟೇಶ್ ಇದ್ದರು.

ಗಣ್ಯರ ಅನುಪಸ್ಥಿತಿ

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದ ಉದ್ಘಾಟನೆ ಮಾಡಬೇಕಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್, ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಪಿಳ್ಳಮುನಿಶಾಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ, ಸಂಸದ ಎಂ.ವೀರಪ್ಪ ಮೊಯಿಲಿ, ಸೇರಿದಂತೆ ವಿಧಾನಪರಿಷತ್ ಸದಸ್ಯರು, ಆಹ್ವಾನ ಪತ್ರಿಕೆಯಲ್ಲಿದ್ದ ಬಹುತೇಕ ಗಣ್ಯರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಹಾಜರಿದ್ದವರು ಕಾರ್ಯಕ್ರಮ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry