7

ಕನ್ನಡ ಸಿನಿಮಾಗಳಿಗೆ ಹೆಚ್ಚು ಒತ್ತು ನೀಡಿ

Published:
Updated:

ದೇವನಹಳ್ಳಿ: ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿರುವ ಇಂದಿನ ಸ್ಥಿತಿಯಲ್ಲಿ ಕನ್ನಡ ಸಿನಿಮಾಗಳನ್ನು ಕನ್ನಡಿಗರು ಹೆಚ್ಚು ಬೆಂಬಲಿಸಬೇಕು ಎಂದು ‘ರಾಜು ಕನ್ನಡ ಮಿಡಿಯಂ’ ಚಲನ ಚಿತ್ರದ ನಾಯಕಿ ನಟಿ ಚಂದನ ಸಲಹೆ ನೀಡಿದರು. ಅರದೇಶನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಸಿನಿಮಾ ರಂಗದಲ್ಲಿ ಅನೇಕ ಗುಣಮಟ್ಟದ ಚಲನ ಚಿತ್ರಗಳು ಬರುತ್ತಿವೆ. ಕೋಟ್ಯಂತರ ವೆಚ್ಚದ ಪರಭಾಷ ಚಲನ ಚಿತ್ರಗಳಿಗಿಂತ ಕನ್ನಡದಲ್ಲಿ ಉತ್ತಮ ಕಥಾವಸ್ತುವುಳ್ಳ ಮನೆ ಮಂದಿ ಕುಳಿತು ನೋಡಬಹುದಾದಂತಹ ಸಿನಿಮಾಗಳು ಬರುತ್ತಿವೆ. ಕನ್ನಡ ಸಿನಿಮಾವನ್ನು ನೋಡಬೇಕು ಜತೆಗೆ ಪ್ರೇಕ್ಷಕರು ಬೆಂಬಲಿಸಿದರೆ ಚಿತ್ರರಂಗ ಉಳಿಯಲು ಸಾಧ್ಯವಿದೆ ಎಂದರು.

ಸಿನಿಮಾ ರಂಗ ಉಳಿಯಲು ಗ್ರಾಮೀಣ ಪ್ರದೇಶದ ಕನ್ನಡ ಅಭಿಮಾನಿಗಳ ಸಹಕಾರ ನಿರಂತರವಾಗಿದೆ. ಎರಡು ದಶಕಗಳ ಹಿಂದೆ ದೂರ ಪ್ರದೇಶಗಳಿಗೆ ಎತ್ತಿನ ಗಾಡಿಯಲ್ಲಿ ಹೋಗಿ ಸಿನಿಮಾ ನೋಡುತ್ತಿದ್ದ ಸಂದರ್ಭಗಳು ಇದ್ದವು ಎಂದು ಹಿರಿಯರು ಹೇಳುತ್ತಿದ್ದರು. ಸ್ಪರ್ಧಾತ್ಮಕವಾಗಿ ಬೆಳೆಯುತ್ತಿರುವ ಸಿನಿಮಾ ಕ್ಷೇತ್ರ ಮನೆಯಲ್ಲಿ ಟಿ.ವಿ.ವಾಹಿನಿಗಳಲ್ಲಿ ಸಿನಿಮಾ ನೋಡುವ ಅವಕಾಶದಿಂದ ಸಿನಿಮಾ ಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಕನ್ನಡ ಭಾಷೆ ಉಳಿವಿಗಾಗಿ ಸಿನಿಮಾ ರಂಗದ ಕೊಡುಗೆ ಸಾಕಷ್ಟಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಯುವ ಘಟಕ ಅಧ್ಯಕ್ಷ ದೊಡ್ಡ ಚೀಮನಹಳ್ಳಿ ದೇವರಾಜ್ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ ಉಳಿವಿಗೆ ಯುವ ಸಮುದಾಯ ಸಂಕಲ್ಪಮಾಡಬೇಕು. ಕನ್ನಡ ಸಾಹಿತಿಗಳು ಕವಿಗಳು ಬರಹಗಾರರನ್ನು ನೆನಪಿಸುವ ಕೆಲಸ ಮಾಡಬೇಕು ಎಂದರು.

ಜಂತರ್ ಮಂತರ್ ಚಲನ ಚಿತ್ರದ ನಾಯಕಿ ಹಾಗೂ ಮಾಡೆಲ್ ಸಂಭ್ರಮ, ಕೆಪಿಸಿಸಿ ಸದಸ್ಯ ಚೇತನ್ ಗೌಡ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಸಿ.ಮಂಜುನಾಥ್, ಬಯಾಪ ಸದಸ್ಯ ಎನ್ ಟಿ ನಾಗೇಶ್, ಸಮಾಜ ಸೇವಕ ಅಪ್ಪಣ್ಣ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮುನಿರಾಜ್, ಮುಖಂಡ ಶಾಂತಕುಮಾರ್ ಇದ್ದರು.

ಪರಸ್ಪರ ಸಾಮರಸ್ಯ ಮೂಡಿಸುವ ಕೆಲಸ

ಹಿರಿಯ ಮುಖಂಡ ಚಂದ್ರಪ್ಪ ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಎಂಬುದು ಬರಿ ನಗರ ಪ್ರದೇಶಕ್ಕೆ ಸಿಮಿತವಾಗಿತ್ತು. ಪ್ರಸ್ತುತ ಗ್ರಾಮೀಣ ಭಾಗದಲ್ಲಿ ಹೆಚ್ಚು ಕಾರ್ಯಕ್ರಮಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಕನ್ನಡ ಭಾಷೆ ಸಾಹಿತ್ಯದ ಜಾಗೃತಿಯ ಜತೆಗೆ ಸ್ಥಳೀಯರಲ್ಲಿ ಪರಸ್ಪರ ಸಾಮರಸ್ಯ ಮೂಡಿಸುವ ಕೆಲಸ ಯುವ ಸಮುದಾಯ ಮಾಡಬೇಕು ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry