ಶುಕ್ರವಾರ, ಫೆಬ್ರವರಿ 26, 2021
18 °C

ಮಾಲಿನ್ಯ ನಿಯಂತ್ರಿಸಿದರೆ ರೋಗಗಳಿಗೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲಿನ್ಯ ನಿಯಂತ್ರಿಸಿದರೆ ರೋಗಗಳಿಗೆ ಕಡಿವಾಣ

ದೇವನಹಳ್ಳಿ: ವಾತಾವರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ನಿಯಂತ್ರಣ ಮಾಡಿದರೆ ಮಾರಕ ರೋಗಗಳಿಗೆ ಕಡಿವಾಣ ಹಾಕಲು ಸಾಧ್ಯವೆಂದು ಎಸ್.ಎಲ್.ಎಸ್.ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಧನಂಜಯ ತಿಳಿಸಿದರು.

ಶಾಲಾ ಆವರಣದಲ್ಲಿ ಗುರುವಾರ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ನಡೆದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೈನಂದಿನ ಕಾರ್ಯಚಟುವಟಿಕೆಯಲ್ಲಿ ಹೆಚ್ಚುತ್ತಿರುವ ತೀವ್ರವಾದ ವಾಹನ ಬಳಕೆಯಿಂದ ಹೊರಬರುವ ವಿಷಯುಕ್ತ ಹೊಗೆ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ರಸ್ತೆ ಸುರಕ್ಷತಾ ನಿಯಮದ ಜತೆಗೆ ಮಾಲಿನ್ಯದಿಂದಾಗುತ್ತಿರುವ ಕೆಟ್ಟ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.

ನಿವೃತ್ತ ಉಪನ್ಯಾಸಕ ಮಹಾಲಿಂಗಯ್ಯ ಮಾತನಾಡಿ, ಪರಿಸರ ಕಲುಷಿತ ಮಾಲಿನ್ಯದಿಂದ ಅಂಗವೈಕಲ್ಯ, ಬುದ್ಧಿ ಮಾಂದ್ಯ ಅನೇಕ ರೋಗಗಳು ನಿಧಾನವಾಗಿ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಂಚಾರಕ್ಕೆ ಬಳಸುವ ವಾಹನಗಳು ಅತಿಯಾದ ಹೊಗೆ ಹೊರ ಬರದಂತೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಬೇಕು, ಮಾಲಿನ್ಯ ಕಡಿಮೆ ಮಾಡಲು ಮನೆಯ ಅಕ್ಕ ಪಕ್ಕದ ಪ್ರತಿಯೊಬ್ಬರು ಸಸಿ ಬೆಳೆಸಬೇಕು, ಇತರರಿಗೂ ಬೆಳೆಸುವಂತೆ ಪ್ರೇರೆಪಿಸಬೇಕು ಎಂದರು.

ಪರಿಸರವಾದಿ ಗುರುದೇವ್ ಮಾತನಾಡಿ, ಮಾಲಿನ್ಯ ಹೆಚ್ಚಲು ವಾಹನಗಳ ಅತಿಯಾದ ಸಂಚಾರ ಪ್ರಮುಖ ಕಾರಣ. ಅನಿವಾರ್ಯ ಸಂದರ್ಭದಲ್ಲಿ ವಾಹನ ಬಳಸಬೇಕೆ ಹೊರತು ಮೋಜು ಮಸ್ತಿಗಾಗಿ ಒಂದೊಂದು ಮನೆಗೆ ಐದಾರು ವಾಹನಗಳನ್ನು ಬಳಸುವುದು ಅವಶ್ಯಕವಲ್ಲ. ಮಾಲಿನ್ಯಕ್ಕೆ ಕಡಿವಾಣ ಹಾಕಿ ಪರಿಸರ ಸಂರಕ್ಷಿಸುವುದು ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದರು. ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಟಿ.ತಿಮ್ಮರಾಯಪ್ಪ, ಮುಖಂಡ ಹರೀಶ್ ಇದ್ದರು.

ಮಾಲಿನ್ಯದಿಂದ ದೆಹಲಿ ನಲುಗಿಹೋಗಿದೆ

ಪರಿಸರವಾದಿ ಗುರುದೇವ್ ಮಾತನಾಡಿ, ಭಾರಿ ವಾಹನ ಸಂಚಾರದಿಂದ ಹೆಚ್ಚುತ್ತಿರುವ ಮಾಲಿನ್ಯದಿಂದ ಈಗಾಗಲೇ ದೆಹಲಿ ನಲುಗಿಹೋಗಿದೆ. ಮಾಲಿನ್ಯ ಇದೇ ರೀತಿ ಮುಂದುವರೆದರೆ ಬೆಂಗಳೂರು ನಗರ ಮತ್ತು ನಗರದ ಸುತ್ತಲಿನಲ್ಲಿ ಅದೇ ಪರಿಸ್ಥಿತಿ ಬರಲಿದೆ ಎಂದರು.

ವಾಯು, ಶಬ್ದ, ಜಲ ಮಾಲಿನ್ಯಗಳು ಅಪಾಯಕಾರಿಗಳಾಗಿವೆ. ಪ್ರತಿಷ್ಟೆಗಾಗಿ ವಾಹನ ಖರೀದಿಸದೆ ಪೀಳಿಗೆಯ ಭವಿಷ್ಯದ ದೃಷ್ಟಿಯನ್ನು ನೋಡಬೇಕಾಗಿದೆ. ಎಲ್ಲೆಂದರಲ್ಲಿ ಕಸದ ಘನ ಮತ್ತು ದ್ರವ ತ್ಯಾಜ್ಯ, ಕಾರ್ಖಾನೆಗಳ ವಿಷ ಅನಿಲದ ಹೊಗೆ, ತ್ಯಾಜ್ಯ, ಹುಟ್ಟುವ ಮಕ್ಕಳ ವಂಶವಾಹಿನಿಯನ್ನು ವ್ಯತಿರಿಕ್ತಗೊಳಿಸುವ ಅಪಾಯಕಾರಿಗಳಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.