4

ಬೀದಿಗೆ ಬಂದ ಬಿಜೆಪಿ ಮುಖಂಡರ ಜಗಳ

Published:
Updated:

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಕೋಗಳಿ ತಾಂಡಾದ ಬಳಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಉಪಸ್ಥಿತಿಯಲ್ಲೇ ಮಾಜಿ ಶಾಸಕ ಮತ್ತು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ನಡುವೆ ಪರಸ್ಪರ ವಾಗ್ವಾದ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಪಟ್ಟಣದಲ್ಲಿ ಮುಂಬರುವ ಜನವರಿ 4 ರಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪರಿವರ್ತನೆ ಯಾತ್ರೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಮತ್ತು ಮುಖಂಡ (ಮಾಜಿ ಶಾಸಕ) ಕೆ.ನೇಮಿರಾಜ ನಾಯ್ಕ ನಡುವೆ ತಲೆದೋರಿದ್ದ ಗೊಂದಲ ನಿವಾರಣೆಗೆ ಸಭೆ ಕರೆಯಲಾಗಿತ್ತು.

ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ್ ನೀಡಿದ ಖಡಕ್‌ ನಿರ್ದೇಶನದ ಮೇರೆಗೆ ತಾಂಡಾದ ಜಮೀನೊಂದರ ಬಳಿ ಸಭೆ ಕರೆಯಲಾಗಿತ್ತು. ಸಭೆ ಆರಂಭಕ್ಕೂ ಮುನ್ನ ನೇಮಿರಾಜನಾಯ್ಕ ಮತ್ತು ಆಕಾಂಕ್ಷಿಗಳೊಂದಿಗೆ ವೇದಿಕೆಯ ಅನತಿ ದೂರದಲ್ಲಿ ಪರಸ್ಪರ ಚರ್ಚೆಗೆ ಅವಕಾಶ ನೀಡಲಾಗಿತ್ತು.

ಆಕಾಂಕ್ಷಿಗಳು ಮುದ್ರಿಸಿದ್ದ ಕರಪತ್ರದ ವಿಚಾರವಾಗಿ ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೆಂಕಟೇಶ ನಾಯ್ಕ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನ ಬಸವನಗೌಡ ಅವರನ್ನು ಪ್ರಶ್ನಿಸಿದರು. ಆಗ ಮಧ್ಯೆ ಪ್ರವೇಶಿಸಿದ ನೇಮಿರಾಜ ನಾಯ್ಕ ಪಕ್ಷದ ತತ್ವ ಸಿದ್ಧಾಂತ ತಿಳಿಯದೇ ಮಾತನಾಡಬಾರದು ಎಂದರು.

ಇದರಿಂದ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿ ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದರು. ಆಗ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಚ್.ಮಲ್ಲಿಕಾರ್ಜುನ ನಾಯ್ಕ ಮತ್ತು ಪಕ್ಷದ ಜಿಲ್ಲಾಧ್ಯಕ್ಷ ಪರಿಸ್ಥಿತಿ ತಿಳಿಗೊಳಿಸಿದರು.

ಸಭೆ: ಗಲಾಟೆ ಬಳಿಕ ನಡೆದ ಸಭೆ ನಡೆಯಿತು. ಪಕ್ಷದ ಆಕಾಂಕ್ಷಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪಕ್ಷದ ವರಿಷ್ಠರ ಸೂಚನೆ ಎಲ್ಲರಿಗೂ ಅನ್ವಯವಾಗುತ್ತದೆ. ಪಕ್ಷದಿಂದ ಟಿಕೇಟ್ ಯಾರಿಗೆ ನೀಡಿದರೂ ಒಗ್ಗಟ್ಟಿನಿಂದ ಗೆಲುವಿಗೆ ಶ್ರಮಿಸಬೇಕು ಎಂದು ಒಕ್ಕೊರಲಿನ ಅಭಿಪ್ರಾಯಕ್ಕೆ ಬಂದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಅಧ್ಯಕ್ಷ ನರೇಗಲ್ ಕೊಟ್ರೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ಯಾನುಬೋಗರ ಗುರುಸಿದ್ದಪ್ಪ, ಆನಂದ, ತಾಲ್ಲೂಕು ಪಂಚಾಯಿತಿ ಸದಸ್ಯ ತಿಪ್ಪೇರುದ್ರಮುನಿ, ಪುರಸಭೆ ಸದಸ್ಯರಾದ ಎಚ್‌.ಎಂ.ಚೋಳರಾಜ, ಬದಾಮಿ ಮೃತ್ಯುಂಜಯ, ಹುಳ್ಳಿ ಮಂಜುನಾಥಇದ್ದರು.

ಪಕ್ಷದ ಆಕಾಂಕ್ಷಿಗಳು ಮತ್ತು ಮುಖಂಡರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗಿತ್ತು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಿಲ್ಲಎಂದು ಪಿ.ಚನ್ನಬಸವನಗೌಡ

ಪ್ರಜಾವಾಣಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry