ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ಯೋಧರ ಕುಟುಂಬಕ್ಕೆ ಸವಲತ್ತು

Last Updated 1 ಡಿಸೆಂಬರ್ 2017, 7:23 IST
ಅಕ್ಷರ ಗಾತ್ರ

ಹಾಸನ : ಹುತಾತ್ಮ ಯೋಧರ ಕುಟುಂಬದವರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಸಂಸದ ಎಚ್‌.ಡಿ.ದೇವೇಗೌಡ ಹೇಳಿದರು.

ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ನಗರಸಭೆ ವತಿಯಿಂದ ಏರ್ಪಡಿಸಿದ್ದ ಪೌರಕಾರ್ಮಿಕ ದಿನಾಚರಣೆ, ಉಚಿತ ನಿವೇಶನ ಹಕ್ಕುಪತ್ರ ವಿತರಣೆ ಹಾಗೂ ವಾರ್ ಮೆಮೋರಿಯಲ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಯೋಧರ ಕುಟುಂಬದವರಿಗೆ ಸವಲತ್ತು ಒದಗಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು. ನಗರಸಭೆಯ 38 ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡುವುದರ ಜತೆಗೆ ವಸತಿ ನಿರ್ಮಿಸಿಕೊಡಬೇಕು ಎಂದು ಸಲಹೆ ನೀಡಿದರು.

ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ನಗರಸಭೆಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೂ ನಿವೇಶನ ನೀಡಬೇಕು. ನಗರಸಭೆ ಆಡಳಿತ ಹೊಸ ದಿಕ್ಕಿನತ್ತ ಸಾಗುತ್ತಿದೆ. ನಗರದ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಕೋರಿ ದೇವೇಗೌಡರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಕೆಲವೇ ದಿನಗಳಲ್ಲಿ ₹ 80 ಕೋಟಿ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ದೇಶ ರಕ್ಷಣೆ ಮತ್ತು ದೇಹದ ಆರೋಗ್ಯ ರಕ್ಷಣೆಗೆ ಶ್ರಮಿಸುವ ಯೋಧರು ಹಾಗೂ ಪೌರಕಾರ್ಮಿಕರಿಗೆ ಸೌಲಭ್ಯ ನೀಡುವುದು ನಮ್ಮ ಕರ್ತವ್ಯ. ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ನಗರ ಸಮೀಪದ 6 ಕಿ.ಮೀ. ವ್ಯಾಪ್ತಿಯ ಗ್ರಾಮಗಳನ್ನು ನಗರಸಭೆಗೆ ಸೇರಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಅದು ಕೆಲವೇ ದಿನಗಳಲ್ಲಿ ಈಡೇರಲಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಎಚ್‌.ಎಸ್‌. ಅನಿಲ್‌ ಕುಮಾರ್‌ ಮಾತನಾಡಿ, ನಗರಸಭೆಯಲ್ಲಿ ಒಟ್ಟು 78 ಕಾಯಂ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದು, ಮೊದಲ ಹಂತದಲ್ಲಿ 38 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಉಳಿದ 40 ಜನರಿಗೆ ಸದ್ಯದಲೇ ಹಂಚಿಕೆ ಮಾಡಲಾಗುವುದು. ಸರ್ಕಾರ ಪ್ರತಿ ನಿವೇಶನದಲ್ಲಿ ವಸತಿ ನಿರ್ಮಾಣಕ್ಕೆ ತಲಾ ₹ 6.5 ಲಕ್ಷ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಹುತಾತ್ಮ ಯೋಧರ ಕುಟುಂಬದ ಸದಸ್ಯರಿಗೆ ಸನ್ಮಾನ ಮಾಡಲಾಯಿತು. ನಗರಸಭೆಯ 38 ಕಾಯಂ ಪೌರಕಾರ್ಮಿಕರಿಗೆ ಉಚಿತ ನಿವೇಶನದ ಹಕ್ಕುಪತ್ರ ವಿತರಿಸಲಾಯಿತು. ನಗರಸಭೆ ವತಿಯಿಂದ ದೇವೇಗೌಡರಿಗೆ ಬೆಳ್ಳಿ ಗದೆ ನೀಡಿ ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್. ಶ್ವೇತಾ ದೇವರಾಜ್, ಹುಡಾ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮೋಹನ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶಕ ಬ್ರಿಗೇಡಿಯರ್ ಎಸ್.ಬಿ. ಸಜ್ಜನ್, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪುರವಾಡ್, ನಗರಸಭೆ ಉಪಾಧ್ಯಕ್ಷೆ ಲೀಲಾವತಿ ವಾಸು, ಪೌರಾಯುಕ್ತ ಪರಮೇಶ್‌ ಇದ್ದರು.

* * 

ಹಾಸನ ನಗರಕ್ಕೆ 24 ಗಂಟೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಎಚ್.ಎಸ್‌.ಪ್ರಕಾಶ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT