ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲವಿಕಾಸ ಸಮಿತಿ ಜಂಟಿ ಖಾತೆಗೆ ವಿರೋಧ

Last Updated 1 ಡಿಸೆಂಬರ್ 2017, 8:28 IST
ಅಕ್ಷರ ಗಾತ್ರ

ಚಾಮರಾಜನಗರ: ಬಾಲವಿಕಾಸ ಸಮಿತಿ ಜಂಟಿ ಖಾತೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಗುರುವಾರ ರಾಜ್ಯ ಅಂಗನವಾಡಿ ನೌಕರರ ಜಿಲ್ಲಾ ಸಂಘದಿಂದ ಪ್ರತಿಭಟನೆ ನಡೆಯಿತು.

ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತೆಯರು ಭುವನೇಶ್ವರಿ ವೃತ್ತ, ಬಿ. ರಾಚಯ್ಯ ಜೋಡಿ ರಸ್ತೆಯ ಮೂಲಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ತೆರಳಿ ಘೋಷಣೆ ಕೂಗಿದರು.

ಅಂಗನವಾಡಿ ಕೇಂದ್ರಗಳ ಆರ್ಥಿಕ ವೆಚ್ಚಗಳಿಗೆ ಬಾಲವಿಕಾಸ ಸಮಿತಿ ಅಧ್ಯಕ್ಷರೊಂದಿಗೆ ಜಂಟಿ ಖಾತೆ ತೆರೆಯಲು ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸೂಚಿಸಲಾಗುತ್ತಿದೆ. ಇದರಿಂದ ಕಾರ್ಯಕರ್ತೆಯರಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಹಾಗಾಗಿ, ಪ್ರಸ್ತುತ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಮಾತೃಪೂರ್ಣ ಯೋಜನೆ ಜಾರಿಗೊಂಡ ಬಳಿಕ ಹಲವು ಸಮಸ್ಯೆ ಎದುರಾಗಿದೆ. ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿ ತರಕಾರಿ, ಮೊಟ್ಟೆ, ಗ್ಯಾಸ್‌ ಖರೀದಿಸಲು ಮುಂಚಿತವಾಗಿಯೇ ಕಾರ್ಯಕರ್ತೆಯರ ಖಾತೆಗೆ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.

ಅಡುಗೆ ಮಾಡಲು ಅಗತ್ಯವಾದ ಪಾತ್ರೆಗಳು, ಕುಕ್ಕರ್‌, ಜೋಡಿ ಸಿಲಿಂಡರ್‌, ಜೋಡಿ ಒಲೆ ಮತ್ತು ಕೇಂದ್ರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ದಾಖಲಾತಿ ನಿರ್ವಹಣೆಯ ಹೊಣೆಯನ್ನು ಕಡಿಮೆಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಗೌರವಧನ ಬಿಡುಗಡೆಯಾಗಬೇಕು. ನಿವೃತ್ತರಿಗೆ ಹಣ ತಕ್ಷಣ ನೀಡಬೇಕು. ಮರಣ ಹೊಂದಿರುವ ಕಾರ್ಯಕರ್ತೆಯರಿಗೆ ಪರಿಹಾರ ಧನ ನೀಡಬೇಕು. ಕೇಂದ್ರಗಳಿಗೆ ಗುಣಮಟ್ಟದ ಆಹಾರ ಪದಾರ್ಥ ಸರಬರಾಜಾಗಬೇಕು. 2015ರ ಫೆಬ್ರುವರಿಯಲ್ಲಿ ತಡೆ ಹಿಡಿದ 15 ದಿನಗಳ ಗೌರವಧನವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ ನಿಗದಿತ ಸಮಯದಲ್ಲಿ ನೀಡಬೇಕು. ಖಾಲಿ ಇರುವ ಕೇಂದ್ರಗಳಿಗೆ ಎಸ್ಎಸ್‌ಎಲ್‌ಸಿ ಉತ್ತೀರ್ಣರಾಗಿರುವ ಹಾಗೂ 3 ವರ್ಷ ಸೇವೆ ಸಲ್ಲಿಸಿರುವ ಸಹಾಯಕಿಯರಿಗೆ ಮುಂಬಡ್ತಿ ನೀಡಬೇಕು. ಬೇರೆ ಇಲಾಖೆ ಕೆಲಸವನ್ನು ನೀಡಬಾರದು. ಅಮಾನತುಗೊಳಿಸಿದ ಕಾರ್ಯಕರ್ತೆಯರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷೆ ಕೆ. ಸುಜಾತಾ, ಉಪಾಧ್ಯಕ್ಷರಾದ ಷಹಿದಾಬಾನು, ಗುರುಲಿಂಗಮ್ಮ, ಮಂಜುಳಾ, ಕಾರ್ಯಕರ್ತೆಯರಾದ ಚಿಕ್ಕನಾಗಮ್ಮ, ಪುಷ್ಪಲತಾ, ಎಂ.ಆರ್. ಶಾಂತಮ್ಮ, ಶಾರದಾ, ನಂಜಮಣಿ, ಸಾಕಮ್ಮ, ಗಂಗಾಂಬಿಕೆ, ನಾಗರಾಜಮ್ಮ ಪಾಲ್ಗೊಂಡಿದ್ದರು.

ಸಂತೇಮರಹಳ್ಳಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಯಿತು. ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಇಲ್ಲಿನ ಸರ್ಕಲ್‌ನಲ್ಲಿ ಕೆಲಕಾಲ ರಸ್ತೆ ತಡೆದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅಂಗನವಾಡಿ ಕೇಂದ್ರಗಳ ಆರ್ಥಿಕ ವೆಚ್ಚಗಳಿಗೆ ಬಾಲವಿಕಾಸ ಸಮಿತಿ ಅಧ್ಯಕ್ಷರೊಂದಿಗೆ ಜಂಟಿ ಖಾತೆ ತೆರೆಯಬೇಕು ಎಂಬ ಒತ್ತಾಯವನ್ನು ಸರ್ಕಾರದಿಂದ ಹೇರಲಾಗುತ್ತಿದೆ. ಈ ಹಿಂದೆ ಖಾತೆ ತೆಗೆಸಿ ಸಮಸ್ಯೆಗಳು ಉಂಟಾಗಿವೆ. ಯಾವುದೇ ಕಾರಣಕ್ಕೂ ಬಾಲವಿಕಾಸ ಸಮಿತಿ ಜೊತೆ ಜಂಟಿ ಖಾತೆ ತೆರೆಯುವುದಿಲ್ಲ. ಮಾತೃಪೂರ್ಣ ಯೋಜನೆಯಿಂದ ಸಮಸ್ಯೆಗಳು ಹೆಚ್ಚಾಗಿವೆ. ಈ ಯೋಜನೆಗೆ ಬಳಕೆಯಾಗುವ ಹಣವನ್ನು ಮುಂಚಿತವಾಗಿ ಕಾರ್ಯಕರ್ತೆಯರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಬೇರೆ ಇಲಾಖೆಗಳ ಕೆಲಸಗಳನ್ನು ಕಾರ್ಯಕರ್ತೆಯರಿಗೆ ವಹಿಸಬಾರದು. ಅಪೂರ್ಣಗೊಂಡಿರುವ ಅಂಗನವಾಡಿ ಕಟ್ಟಡಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದರು.

ತಾಲ್ಲೂಕು ಅಧ್ಯಕ್ಷೆ ಪಾರ್ವತಮ್ಮ, ಕಾರ್ಯದರ್ಶಿ ಪಿ. ಭಾಗ್ಯ, ಎಲ್. ಕಾಂಚನ, ಜಯಮಾಲ, ತಾಜೂನ್, ಪಿ. ಮಮತಾ, ಜಯಲಲಿತಾ, ಸರಸ್ವತಿ, ಜಯಮ್ಮ, ಸಾವಿತ್ರಮ್ಮ, ಭಾರತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT