ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವೈಕಲ್ಯ ಮೆಟ್ಟಿ, ‘ವಿಶ್ವ’ದ ಕದ ತಟ್ಟಿ

Last Updated 1 ಡಿಸೆಂಬರ್ 2017, 8:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಹೊಲದ ದಾರಿಯ ಗುಂಡಿಗಳನ್ನು ನೆಗೆ, ನೆಗೆದು ಬರುತ್ತಿದ್ದ ಆ ಬಂಡಿಯೊಳಗಿದ್ದ ಪುಟ್ಟ ಬಾಲಕನೊಳಗೆ ತೂಗಾಡುವ ತೊಟ್ಟಿಲದೊಳಗಿನ ‘ಪುಳಕ’ ಮನೆ ಮಾಡಿತ್ತು. ಜಗದ ಪರಿವೇ ಮರೆತು ಕೇಕೆ ಹಾಕಿ ನೆಗೆಯುತ್ತಿದ್ದ ಆ ಪೋರನಿಗೆ ಒಂದು ಕ್ಷಣ ಆಯ ತಪ್ಪಿ ಬಿದ್ದದ್ದಷ್ಟೇ ಗೊತ್ತು. ‘ಎಚ್ಚರ’ ಬಂದಾಗ ಕಣ್ತೇರೆದವನಿಗೆ ‘ಪಾದ’ವೇ ಇಲ್ಲದ ಬಲಗಾಲು ಕಂಡು ಎದೆ ಝಲ್ಲೆಂದಿತ್ತು.

‘ಒಂಟಿ’ ಕಾಲಿನಿಂದಾಗಿ ಬಾಲ್ಯದ ಸ್ನೇಹಿತರೊಂದಿಗೆ ಆಡುವ ‘ಸೌಭಾಗ್ಯ’ವನ್ನೇ ಕಳೆದುಕೊಂಡ ಆ ಹುಡುಗ ಸೋದರ ಮಾವನ (ತಾಯಿಯ ಸಹೋದರ) ಪ್ರೋತ್ಸಾಹ ಮತ್ತು ಕೃತಕ ಕಾಲಿನೊಂದಿಗೆ ವಿದ್ಯಾರ್ಥಿ ಜೀವನದ ಪಯಣ ಮುಂದುವರಿಸಿದ್ದ. ಅನಿರೀಕ್ಷಿತವಾಗಿ ಪದವಿ ಹಂತದಲ್ಲಿ ಮೂಡಿದ ‘ಅಪರೂಪ’ದ ಕ್ರೀಡೆಯೊಂದರ ಒಲುವು ಇವತ್ತು ಆತನನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದೆ.

ಇಂದು ಅಂತರರಾಷ್ಟ್ರೀಯ ಮಟ್ಟದ ವ್ಹೀಲ್‌ಚೇರ್ ಫೆನ್ಸಿಂಗ್ (ಕತ್ತಿವರಸೆ) ಪಟುವಾಗಿ ಬೆಳೆದ ಗೌರಿಬಿದನೂರು ತಾಲ್ಲೂಕಿನ ಎಚ್‌. ನಾಗಸಂದ್ರದ ಎನ್‌. ವೆಂಕಟೇಶ್ ಬಾಬು ಅವರೇ ಅಂಗವೈಕಲ್ಯ ಮೆಟ್ಟಿ ನಿಂತು, ‘ವಿಶ್ವ’ದ ಕದ ತಟ್ಟಿದ ಉತ್ಸಾಹಿ ಯುವಕ.

ಕೃಷಿಕರಾದ ನಾರಾಯಣ ರೆಡ್ಡಿ ಮತ್ತು ಲಕ್ಷ್ಮೀದೇವಿ ದಂಪತಿಯ ಇಬ್ಬರು ಮಕ್ಕಳ ಪೈಕಿ ವೆಂಕಟೇಶ್‌ ಬಾಬು ಮನೆಗೆ ಹಿರಿಮಗ. ಕಾಲು ಕಳೆದುಕೊಂಡ ನೋವಿನಷ್ಟೇ ಬಡತನದ ಬೇಗೆ ಅನುಭವಿಸಿದವರು. ಹಾಗೆಂದು ಭರವಸೆ ಕಳೆದುಕೊಂಡವರಲ್ಲ. ‘ಏನೇ ಬರಲಿ ಆತ್ಮಸ್ಥೈರ್ಯದಿಂದ ಅವುಗಳನ್ನು ಮೆಟ್ಟಿ ಗುರಿ ಮುಟ್ಟುವೆ’ ಎಂಬ ಸಕಾರಾತ್ಮಕ ಚಿಂತನೆಗಳನ್ನು ಎದೆಗೂಡಿನಲ್ಲಿ ಕಾಪಿಟ್ಟುಕೊಂಡು, ಕತ್ತಿವರಸೆಯಲ್ಲಿ ಭರವಸೆ ‘ಪ್ರತಿಭೆ’ಯಾಗಿ ಹೊರಹೊಮ್ಮಿ ಜಿಲ್ಲೆಗೆ ಕೀರ್ತಿ ತರುತ್ತಿದ್ದಾರೆ.

ಹಳ್ಳಿಯಲ್ಲೇ ಒಂದರಿಂದ ಎಸ್ಸೆಸ್ಸೆಲ್ಸಿ ವರೆಗೆ ಶಿಕ್ಷಣ ಪೂರೈಸಿದ ವೆಂಕಟೇಶ್‌ ಬಾಬು, ಗೌರಿಬಿದನೂರಿನ ಆಚಾರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮುಗಿಸಿದವರು. ಬಳಿಕ ಬೆಂಗಳೂರು ಸೇರಿ ಸಿದ್ಧ ಉಡುಪು ಕಾರ್ಖಾನೆಯೊಂದರಲ್ಲಿ ಒಂದು ವರ್ಷ ದುಡಿದು, ನಂತರ ಕೆ.ಆರ್.ವೃತ್ತದಲ್ಲಿರುವ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾದಲ್ಲಿ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಪದವಿ ಪೂರೈಸಿದರು.

2012ರಲ್ಲಿ ಡಿಪ್ಲೋಮಾ ಓದುವ ವೇಳೆ ಅಂಗವಿಕಲರು ಸಹ ಕ್ರೀಡೆಯಲ್ಲಿ ‘ಸಾಧನೆ’ ಮಾಡಲು ಸಾಧ್ಯವಿದೆ ಎಂದು ಅರಿವಿಗೆ ಬರುತ್ತಲೇ ‘ದಿಢೀರ್‌’ ನಿರ್ಧಾರದಲ್ಲಿ ವ್ಹೀಲ್‌ಚೇರ್ ಫೆನ್ಸಿಂಗ್ ಕಲಿಯಲು ನಿರ್ಧರಿಸಿದ ವೆಂಕಟೇಶ್‌ ಬಾಬು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿರುವ ಫೆನ್ಸಿಂಗ್ ತರಬೇತುದಾರ ದಬಾಂಗ್ ಸಿಂಗ್ ಅವರನ್ನು ಹುಡುಕಿಕೊಂಡು ಹೋಗಿ ‘ಗುರು’ವಾಗುವಂತೆ ಕೋರಿಕೊಂಡರು. ಆ ಗಳಿಗೆ ಅವರ ಬದುಕಿನ ದಿಕ್ಕನ್ನೇ ಬದಲಿಸಿತ್ತು.

ಕತ್ತಿವರಸೆ ಕಲಿಕೆಗೆ ವರ್ಷ ತುಂಬುವುದರೊಳಗೆ 2013ರಲ್ಲಿ ಬೆಂಗಳೂರಿನಲ್ಲಿ ನಡೆದ 6ನೇ ರಾಷ್ಟ್ರೀಯ ವ್ಹೀಲ್‌ಚೇರ್‌ ಫೇನ್ಸಿಂಗ್ ಚಾಂಪಿಯನ್‌ಶಿಫ್‌ನಲ್ಲಿ ಸ್ಪರ್ಧಿಸುವ ಅವಕಾಶ ಒದಗಿ ಬಂತು. ಮೊದಲ ಪ್ರಯತ್ನದಲ್ಲೇ ತೋರಿದ ಉತ್ತಮ ‘ವರಸೆ’ಗೆ ಕಂಚಿನ ಪದಕ ಕೊರಳೇರಿದಾಗ ತುಳಿದ ಹಾದಿಯ ‘ಭವಿಷ್ಯ’ ಭರವಸೆಯಾಗಿ ಹರಳುಗಟ್ಟಿತ್ತು.

ಕಳೆದ ಐದು ವರ್ಷಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ವಿಶ್ವಮಟ್ಟದ ಅನೇಕ ವ್ಹೀಲ್‌ಚೇರ್‌ ಫೆನ್ಸಿಂಗ್‌ ಸ್ಪರ್ಧೆಗಳಲ್ಲಿ ಸ್ಪರ್ಧಿಸಿರುವ ವೆಂಕಟೇಶ್‌ ಬಾಬು ಅವರ ಸಾಧನೆ ದಿನೇ ದಿನೇ ಆರೋಹಣದ ಹಾದಿಯಲ್ಲಿದೆ. ಇತ್ತೀಚೆಗೆ ಇಟಲಿಯ ರೋಮ್‌ನಲ್ಲಿ ನಡೆದ ಅಂಗವಿಕಲರ ವ್ಹೀಲ್‌ಚೇರ್‌ ಫೆನ್ಸಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಇವರದು. ಈ ಸಾಧನೆಯಿಂದಾಗಿ ಅವರು ವಿಶ್ವ ರ್‌್ಯಾಕಿಂಗ್‌ನಲ್ಲಿ 31ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಅಂಗವೈಕಲ್ಯ ಎನ್ನುವುದು ಒಂದು ಶಾಪ ಎಂದು ಕೀಳರಿಮೆ ಬೆಳೆಸಿಕೊಂಡು ಬದುಕಿನುದ್ದಕ್ಕೂ ನೋವಿನಲ್ಲೇ ಕೈತೊಳೆಯುವವರಿಗೆ ವೆಂಕಟೇಶ್‌ ಬಾಬು ಅವರ ಈ ಸಾಧನೆ ಅನುಕರಣೀಯ. ಅವರ ಅನುಭವ ಹಂಚಿಕೊಳ್ಳಲು ಅಥವಾ ನೆರವು ನೀಡಲು ಬಯಸುವವರು 98449 03300 ಈ ಸಂಖ್ಯೆಗೆ ಸಂಪರ್ಕಿಸಬಹುದು.

ಕತ್ತಿವರಸೆಯಲ್ಲಿ ವೆಂಕಟೇಶ್ ಬಾಬು ಸಾಧನೆ
ರಾಷ್ಟ್ರೀಯ
* 2013ರಲ್ಲಿ ಬೆಂಗಳೂರಿನಲ್ಲಿ ನಡೆದ 6ನೇ ರಾಷ್ಟ್ರೀಯ ವ್ಹೀಲ್‌ಚೇರ್‌ ಫೇನ್ಸಿಂಗ್ ಚಾಂಪಿಯನ್‌ಶಿಫ್‌ನಲ್ಲಿ ಕಂಚಿನ ಪದಕ
* 2014ರಲ್ಲಿ ಛತ್ತೀಸ್‌ಗಡದ ಬಿಲ್ಲಾಸ್‌ಪುರದಲ್ಲಿ ನಡೆದ 6ನೇ ರಾಷ್ಟ್ರೀಯ ವ್ಹೀಲ್‌ಚೇರ್‌ ಫೇನ್ಸಿಂಗ್ ಚಾಂಪಿಯನ್‌ಶಿಫ್‌ನಲ್ಲಿ ಒಂದು ಬೆಳ್ಳಿ, ಎರಡು ಕಂಚಿನ ಪದಕ.
* 2016ರಲ್ಲಿ ಛತ್ತೀಸ್‌ಗಡದ ಬಿಲ್ಲಾಸ್‌ಪುರದಲ್ಲಿ ನಡೆದ 9ನೇ ಚಾಂಪಿಯನ್‌ಶಿಫ್‌ನಲ್ಲಿ ಒಂದು ಬಂಗಾರ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ
* 2016ರಲ್ಲಿ ಹರಿಯಾಣದ ಕರ್ನಲ್‌ನಲ್ಲಿ ನಡೆದ 9ನೇ ರಾಷ್ಟ್ರೀಯ ವ್ಹೀಲ್‌ಚೇರ್‌ ಫೇನ್ಸಿಂಗ್ ಚಾಂಪಿಯನ್‌ಶಿಫ್‌ನಲ್ಲಿ ಒಂದು ಬೆಳ್ಳಿ, ಎರಡು ಕಂಚಿನ ಪದಕ
* 2017ರಲ್ಲಿ ಹರಿಯಾಣದ ಕರ್ನಲ್‌ನಲ್ಲಿ ನಡೆದ ಇದೇ ಸ್ಪರ್ಧೆಯ 10ನೇ ಚಾಂಪಿಯನ್‌ಶಿಫ್‌ನಲ್ಲಿ ಎರಡು ಬೆಳ್ಳಿ ಪದಕ

ಅಂತರರಾಷ್ಟ್ರೀಯ
* 2015ರಲ್ಲಿ ಕೆನಡಾದ ಮಾಂಟ್ರಿಯಲ್‌ನಲ್ಲಿ ನಡೆದ ವ್ಹೀಲ್‌ಚೇರ್‌ ಫೆನ್ಸಿಂಗ್‌ ಚಾಂಪಿಯನ್‌ಶಿಫ್‌ನಲ್ಲಿ ಭಾಗಿ.
* 2015ರಲ್ಲಿ ಸಂಯುಕ್ತ ಅರಬ್‌ ಸಂಸ್ಥಾನದ (ಯುಎಇ) ಶಾರ್ಜಾದಲ್ಲಿ ನಡೆದ ವ್ಹೀಲ್‌್‌ಚೇರ್‌ ಫೆನ್ಸಿಂಗ್‌ ವಿಶ್ವ ಕಫ್‌ನಲ್ಲಿ ಭಾಗಿ.
* 2016ರಲ್ಲಿ ಹಾಂಗ್‌ಕಾಂಗ್‌ನಲ್ಲಿ ನಡೆದ ವ್ಹೀಲ್‌ಚೇರ್‌ ಫೆನ್ಸಿಂಗ್‌ ಚಾಂಪಿಯನ್‌ಶಿಫ್‌ನಲ್ಲಿ ಭಾಗಿ.
* 2017ರಲ್ಲಿ ಪೋಲೆಂಡ್‌ನ ವಾರ್ಸಾದಲ್ಲಿ ನಡೆದ ವ್ಹೀಲ್‌ಚೇರ್‌ ಫೆನ್ಸಿಂಗ್‌ ವಿಶ್ವ ಕಫ್‌ ಭಾಗಿ.
* 2017ರಲ್ಲಿ ಹಂಗೇರಿಯ ಎಗರ್‌ನಲ್ಲಿ ನಡೆದ ವ್ಹೀಲ್‌ಚೇರ್‌ ಫೆನ್ಸಿಂಗ್‌ ವಿಶ್ವ ಕಫ್‌ನಲ್ಲಿ ಭಾಗಿ.
* 2017ರಲ್ಲಿ ಇಟಲಿಯ ರೋಮ್‌ನಲ್ಲಿ ನಡೆದ ವ್ಹೀಲ್‌ಚೇರ್‌ ಫೆನ್ಸಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶ

ನೆರವಿನ ನಿರೀಕ್ಷೆಯಲ್ಲಿ..

ಕಳೆದ ಎರಡು ವರ್ಷಗಳಿಂದ ಸಂಪೂರ್ಣ ಪ್ರಮಾಣದಲ್ಲಿ ತಮ್ಮನ್ನು ಕ್ರೀಡಾಕ್ಷೇತ್ರಕ್ಕೆ ಸಮರ್ಪಿಸಿಕೊಂಡಿರುವ ವೆಂಕಟೇಶ್‌ ಬಾಬು ಅವರು ತೀವ್ರ ಆರ್ಥಿಕ ಸಮಸ್ಯೆಯ ನಡುವೆಯೂ ದಾನಿಗಳು, ಸಂಘ ಸಂಸ್ಥೆಗಳ ನೆರವಿನಿಂದ ಸಾಧನೆಯ ಪಥದಲ್ಲಿ ಮುನ್ನಡೆಯುತ್ತಿದ್ದಾರೆ. ಅಂಗವಿಕಲರ ಕಲ್ಯಾಣ ಇಲಾಖೆ ಯಾವಾಗಲೋ ಒಮ್ಮೆ ನೀಡುವ ನೆರವು ಇವರಿಗೆ ಸಾಕಾಗುತ್ತಿಲ್ಲ.

ಇಷ್ಟೊಂದು ಸಾಧನೆ ಮಾಡಿದರೂ ಕ್ರೀಡಾ ಇಲಾಖೆ ಅದಕ್ಕೆ ತಕ್ಕ ‘ಸಹಕಾರ’ ನೀಡುತ್ತಿಲ್ಲ ಎನ್ನುವ ನೋವು ಅವರಲ್ಲಿ ಮಡುಗಟ್ಟಿದೆ. ‘ಸದ್ಯಕ್ಕೆ ಕ್ರೀಡಾ ಸಾಧನೆ ಪರಿಗಣಿಸಿ ಯಾವುದೇ ಉದ್ಯೋಗಾವಕಾಶಗಳು ಬಂದಿಲ್ಲ. ಯಾರಾದರೂ ಅಂತಹ ಅವಕಾಶ ಕೊಟ್ಟರೆ, ಕೆಲಸ ಮಾಡುತ್ತಲೇ ನನ್ನ ಈ ಪಯಣ ಮುಂದುವರಿಸುತ್ತೇನೆ’ ಎನ್ನುತ್ತಾರೆ ವೆಂಕಟೇಶ್‌ ಬಾಬು.

ಕಿಟ್‌ ಖರೀದಿಸುವ ಶಕ್ತಿ ಇಲ್ಲ

ಆರ್ಥಿಕ ಮುಗ್ಗಟ್ಟಿನಿಂದಾಗಿ ವೆಂಕಟೇಶ್‌ ಬಾಬು ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅಭ್ಯಾಸ ನಡೆಸಲು ಅಗತ್ಯವಾದ ಫೆನ್ಸಿಂಗ್‌ ಕಿಟ್‌ ಖರೀದಿಸುವ ಕನಸು ಇಂದಿಗೂ ನನಸಾಗಿಲ್ಲ. ಸುಮಾರು ₨3 ಲಕ್ಷ ಖರ್ಚು ಮಾಡಿ ಕಿಟ್‌ ಖರೀದಿಸುವ ಶಕ್ತಿ ಇಲ್ಲದ ಕಾರಣಕ್ಕೆ ತಮ್ಮ ಬಳಿ ಇರುವ ವ್ಹೀಲ್‌ಚೇರ್‌ನ್ನೇ ಅಗತ್ಯಕ್ಕೆ ತಕ್ಕಂತೆ ಪರಿವರ್ತಿಸಿಕೊಂಡು, ಇದ್ದುದ್ದರಲ್ಲಿಯೇ ಅಭ್ಯಾಸ ಮುಂದುವರಿಸಿದ್ದಾರೆ. ಯಾರಾದರೂ ದಾನಿಗಳು ಮುಂದೆ ಬಂದು ನೆರವು ನೀಡಿದರೆ ಮತ್ತಷ್ಟು ಸಾಧನೆ ಮಾಡಲು ನನಗೆ ಚೈತನ್ಯ ಬರುತ್ತದೆ ಎಂದು ತಮ್ಮ ಮನದಾಳದ ಆಶಯ ವ್ಯಕ್ತಪಡಿಸುತ್ತಾರೆ.

* * 

ಮುಂಬರುವ ಏಷ್ಯನ್‌ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿ 2020ರ ಪ್ಯಾರಾ ಒಲಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವುದು ನನ್ನ ಸದ್ಯದ ಗುರಿ.
ಎನ್‌. ವೆಂಕಟೇಶ್ ಬಾಬು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT