ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಸೇತುವೆಗಳ ಕಾಮಗಾರಿಗೆ ₹48 ಕೋಟಿ ಬಿಡುಗಡೆ

Last Updated 1 ಡಿಸೆಂಬರ್ 2017, 8:47 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕಿನ ಹಂದೂರು ಮತ್ತು ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ₹48 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಚಾರ ಎಂದು ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದ ಸಮೀಪ ಗುರುವಾರ ಏರ್ಪಡಿಸಿದ್ದ ನರಸಿಂಹರಾಜಪುರ ಮತ್ತು ಕೊಪ್ಪ ತಾಲ್ಲೂಕು ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ, ಸೌಲಭ್ಯ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕು ಕೇಂದ್ರದಿಂದ ಹಂದೂರು ಗ್ರಾಮಕ್ಕೆ ಸೇತುವೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸುವಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಹೆಚ್ಚು ಶ್ರಮಹಾಕಿದ್ದಾರೆ ಎಂದರು.

ಕೊಪ್ಪದಲ್ಲಿ 2008ರಲ್ಲಿ ಮಂಜೂರಾಗಿದ್ದ ಐಟಿಐ ಕಾಲೇಜಿಗೆ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಅಡ್ಡಿ ಮಾಡುವುದು ಸರಿಯಿಲ್ಲ. ಎನ್.ಆರ್.ಪುರ ಮತ್ತು ಕೊಪ್ಪ ಮಿನಿ ವಿಧಾನಸೌಧದ ಮೇಲ್ಭಾಗದ ಕಟ್ಟಡ ಕಾಮಗಾರಿಗೆ ಅನುದಾನ ಬಿಡುಗಡೆಮಾಡಬೇಕು. ಕೊಪ್ಪದ 100 ಹಾಸಿಗೆಗಳ ಆಸ್ಪತ್ರೆಯನ್ನು ಉದ್ಘಾಟಿಸಲಾಗಿದ್ದು ಇದಕ್ಕೆ ಕೌನ್ಸಿಲಿಂಗ್‌ನಲ್ಲಿ ವೈದ್ಯರು ನೇಮಕವಾಗುವಂತೆ ಕ್ರಮಕೈಗೊಳ್ಳಬೇಕು, ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಯ ಸುತ್ತಾ ತಡೆಗೋಡೆ ನಿರ್ಮಿಸಲು ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಹೊನ್ನೆಕೂಡಿಗೆ ಏತನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಬೇಕು. ಶಂಗೇರಿ– ಮಂಗಳೂರು ರಸ್ತೆ ಅಭಿವೃದ್ಧಿ ₹28 ಕೋಟಿ ಮಂಜೂರಾಗಿದ್ದು, ರಾಷ್ಟ್ರೀಯ ಉದ್ಯಾನ ಎಂಬ ಕಾರಣಕ್ಕೆ ಕಾಮಗಾರಿಗೆ ಇಲಾಖೆಯವರು ಅಡ್ಡಿ ಉಂಟು ಮಾಡಿದ್ದಾರೆ. ಅಲ್ಲದೆ, ಸಂಜೆ 6 ರಿಂದ ಬೆಳಿಗ್ಗೆ 6ಗಂಟೆವರೆಗೆ ವಾಹನ ಸಂಚಾರ ನಿಷೇಧವು ಸಾಕಷ್ಟು ತೊಂದರೆಯಾಗಿದೆ. ಹಿಂದೆ ಕ್ಷೇತ್ರಕ್ಕೆ ಮಂಜೂರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ಪುನಃ ಮಂಜೂರು ಮಾಡಿಸಿಕೊಡಬೇಕು ಎಂದು ಮುಖ್ಯಮಂತ್ರಿ ಬಳಿ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ ಪ್ರಾಸ್ತಾವಿಕವಾಗಿ ಮಾತನಾಡಿ, ‘ತಾಲ್ಲೂಕು ಕೇಂದ್ರದಿಂದ ಹೊನ್ನೆಕೂಡಿಗೆ ಗ್ರಾಮಕ್ಕೆ 20 ಕಿ.ಮೀ ಸುತ್ತಿಬಳಸಿ ಹೋಗಬೇಗಿತ್ತು. ಕಳೆದ ಬಾರಿ ಮುಖ್ಯಮಂತ್ರಿ ಭೇಟಿ ನೀಡಿದಾಗ ಈ ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ₹20 ಕೋಟಿ ಮಂಜೂರು ಮಾಡಿ ಅದರ ಶಂಕುಸ್ಥಾಪನೆಯನ್ನು ಮಾಡಿದ್ದಾರೆ’ ಎಂದರು.

ಲೋಕೋಪಯೋಗಿ ಸಚಿವರು ಸಹ ಪಟ್ಟಣದ ರಸ್ತೆಯ ಅಭಿವೃದ್ಧಿ ಹೆಚ್ಚಿನ ಅನುದಾನ ನೀಡಿದ್ದು ಮುಂದಿನ ದಿನಗಳಲ್ಲಿ ಪಟ್ಟಣದ ರಸ್ತೆ ವಿಸ್ತರಣೆಗೆ ₹15 ಕೋಟಿ ಬಿಡುಗಡೆ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ರೋಷನ್ ಬೇಗ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ತರೀಕೆರೆ ಶಾಸಕ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ಮಾಜಿ ಸಚಿವ ಬೇಗಾನೆ ರಾಮಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ, ಉಪಾಧ್ಯಕ್ಷ ಎಸ್.ಎನ್.ರಾಮಸ್ವಾಮಿ, ಅರಣ್ಯ ವಸತಿ ಮತ್ತಯ ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇ.ಸಿ.ಜಯಶ್ರೀ ಮೋಹನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್.ರಾಜಶೇಖರ್, ಮೆಣಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೆ.ಪ್ರಮೀಳ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ.ಸತ್ಯಭಾಮ ಇದ್ದರು. ವಿವಿಧ ಫಲಾನುಭವಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಲತ್ತುಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT