ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬ ರೋಗಿಗೆ 256 ವೈದ್ಯರ ಸಲಹೆ!

Last Updated 1 ಡಿಸೆಂಬರ್ 2017, 9:00 IST
ಅಕ್ಷರ ಗಾತ್ರ

ದಾವಣಗೆರೆ: ಒಬ್ಬ ರೋಗಿಯ ಆರೋಗ್ಯ ಸಮಸ್ಯೆ ಪರಿಹರಿಸಲು 256 ವೈದ್ಯರು. ಇಂತಹ ಎಂಟು ‘ಗ್ರೂಪ್‌’ಗಳಲ್ಲಿ ಪ್ರಪಂಚದ ಬೇರೆಬೇರೆ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು 1,800 ವೈದ್ಯರು..!

ಇದು ಚೆಸ್ಟ್ ಕೌನ್ಸಿಲ್ ಆಫ್ ಇಂಡಿಯಾದ (ಸಿಸಿಐ) ವಾಟ್ಸ್‌ಆ್ಯಪ್ ಗ್ರೂಪ್‌ನ ಕಿರುಪರಿಚಯ. ರೋಗಿಗೆ ಚಿಕಿತ್ಸೆ ನೀಡುವ ಬಗ್ಗೆ ಸದಸ್ಯ ವೈದ್ಯರಿಗೆ ಅನುಮಾನ, ಗೊಂದಲ ಬಂದರೆ ತಾವಿರುವ ಗ್ರೂಪ್‌ಗೆ ಸಂದೇಶ ಕಳುಹಿಸಿದರೆ ಸಾಕು. ಅಲ್ಲಿ ಕನಿಷ್ಠ ಎಂದರೂ 50 ವೈದ್ಯರು ‘ಆನ್‌ಲೈನ್‌’ ಇರುತ್ತಾರೆ. 10 ನಿಮಿಷಗಳ ಒಳಗೆ ಅವರು ತಮ್ಮ ಸಲಹೆ ನೀಡುವ ಕಾರಣ ಗೊಂದಲ ನಿವಾರಿಸಿಕೊಂಡು ಚಿಕಿತ್ಸೆ ಮುಂದುವರಿಸಲು ಸಹಕಾರಿಯಾಗುತ್ತದೆ. ಇಂತಹ ಗುಂಪುಗಳ ಪರಿಕಲ್ಪನೆಯನ್ನು ಸಾಕಾರ ಮಾಡಿದವರು ದಾವಣಗೆರೆಯ ಆಸ್ತಮಾ, ಅಲರ್ಜಿ, ಶ್ವಾಸಕೋಶ ಸಲಹಾ ವೈದ್ಯ ಎನ್.ಎಚ್.ಕೃಷ್ಣ.

‘2014ರ ಮಾರ್ಚ್ 31ರಂದು ಮೊದಲ ವಾಟ್ಸ್ಆ್ಯಪ್ ಗ್ರೂಪ್ ಆರಂಭಿಸಿದಾಗ ಕೇವಲ 50 ವೈದ್ಯರು ಸೇರ್ಪಡೆಯಾಗಿದ್ದರು. ಅದರ ಪ್ರಯೋಜನಗಳನ್ನು ಅರಿತು ಕ್ರಮೇಣ ಮತ್ತಷ್ಟು ವೈದ್ಯರು ಸೇರ್ಪಡೆಯಾದರು. ಮತ್ತೊಂದಿಷ್ಟು ಜನ ಆಸಕ್ತಿ ತೋರಿಸಿ ವೈಯಕ್ತಿಕವಾಗಿ ಸಂದೇಶ ಕಳುಹಿಸಿದರು. ವಾಟ್ಸ್‌ಆ್ಯಪ್‌ನ ಒಂದು ಗುಂಪಿನಲ್ಲಿ 256 ಸದಸ್ಯರನ್ನಷ್ಟೇ ಸೇರಿಸಲು ಅವಕಾಶವಿರುವ ಕಾರಣ ಒಂದೊಂದೇ ಗ್ರೂಪ್‌ಗಳನ್ನು ಹೆಚ್ಚಿಸಿದೆ’ ಎನ್ನುತ್ತಾರೆ ಅವರು.

ಈ ಗ್ರೂಪ್‌ಗಳಿಗೆ ಶ್ವಾಸಕೋಶ ತಜ್ಞರು ಮಾತ್ರ ಸದಸ್ಯರು. ಯಾವುದೇ ಕಾರಣಕ್ಕೂ ಫಾರ್ವಡೆಡ್ ಮೆಸೇಜ್‌ಗಳು, ಜೋಕ್ಸ್, ವಿಡಿಯೊ, ರಾಜಕೀಯ, ಹರಟೆಗಳಿಗೆ ಅವಕಾಶವಿಲ್ಲ. ಶ್ವಾಸಕೋಶ ಸಮಸ್ಯೆಗೆ ಸಂಬಂಧಿಸಿದ ಅನುಮಾನಗಳು, ಮಾಹಿತಿಗಳನ್ನಷ್ಟೇ ಹಂಚಿಕೊಳ್ಳಬಹುದು ಎಂಬುದು ಈ ಗ್ರೂಪ್‌ಗಳ ಶಿಷ್ಟಾಚಾರ.

ಸಂದೇಶಗಳ ನಿರ್ವಹಣೆ: ದಿನವೂ ಹರಿದುಬರುವ ಸಾವಿರಾರು ಸಂದೇಶಗಳನ್ನು ನಿರ್ವಹಿಸಲು ಅವರು ‘ಮಾಡರೇಟರ್ಸ್’ ಮತ್ತು ‘ಮೆಂಟರ್ಸ್‌’ ಎಂದು ತಮ್ಮ ಗೆಳೆಯರಿಗೆ ಜವಾಬ್ದಾರಿ ವಹಿಸಿದ್ದಾರೆ. ದಿನದ ಮುಖ್ಯವಾದ ಪ್ರಕರಣದ ಸಂದೇಶವನ್ನು ಗಮನಿಸಿ, ಅವುಗಳನ್ನು ಸಿಸಿಐನ ಬೇರೆ ಗುಂಪುಗಳಿಗೆ ಫಾರ್ವಡ್‌ ಮಾಡುವುದು ಮಾಡರೇಟರ್ಸ್ ಜವಾಬ್ದಾರಿ.

ಹೀಗೆ ಮಾಡುವುದರಿಂದ ಎಲ್ಲ ಗುಂಪುಗಳ ಸದಸ್ಯರಿಗೂ ರೋಗಿಯ ಮಾಹಿತಿ ಒಂದೇ ಸಮಯಕ್ಕೆ ಸಿಕ್ಕಂತಾಗುತ್ತದೆ. ರೋಗಿಯ ವಿವಿಧ ಹಂತಗಳ ಮಾಹಿತಿ 256 ವೈದ್ಯರಿಗೂ ತಲುಪುತ್ತದೆ. ಈ ಮೂಲಕ ಪರೋಕ್ಷವಾಗಿ ಅವರೆಲ್ಲರೂ ರೋಗಿಯ ಆರೋಗ್ಯ ಪರಿಶೀಲನೆ ಮಾಡಿದಂತಾಗುತ್ತದೆ ಎನ್ನುತ್ತಾರೆ ಅವರು.

ತಲಾ ಎರಡು ಗುಂಪುಗಳಿಗೆ ಒಬ್ಬರಂತೆ ಹಿರಿಯ ವೈದ್ಯರನ್ನು ಮೆಂಟರ್ಸ್ ಎಂದು ಗುರುತಿಸಲಾಗಿದೆ. ರೋಗಿಯ ಸಮಸ್ಯೆಯ ಬಗ್ಗೆ ಗುಂ‍ಪುಗಳಲ್ಲಿ ಚರ್ಚೆಯಾದ ಬಳಿಕವೂ ಪರಿಹಾರ ಸಿಗದಿದ್ದಾಗ ಅವರು ತಮ್ಮ ಅನುಭವದ ಆಧಾರದಲ್ಲಿ ಸಲಹೆ ನೀಡುತ್ತಾರೆ. ಸಮಸ್ಯೆ ಎದುರಾದ ವೈದ್ಯರು ಅದನ್ನು ಆಧರಿಸಿ ಚಿಕಿತ್ಸೆ ಮುಂದುವರಿಸುತ್ತಾರೆ.

ದೇಶಕ್ಕಷ್ಟೇ ಸೀಮಿತವಲ್ಲ: ‘ಈ ಗ್ರೂಪ್‌ಗಳಲ್ಲಿ ದೇಶದ ವಿವಿಧ ರಾಜ್ಯಗಳ, ಅಮೆರಿಕ, ಇಂಗ್ಲೆಂಡ್ ಹಾಗೂ ನೇಪಾಳದ ವೈದ್ಯರೂ ಸೇರಿದ್ದಾರೆ. ಸದಸ್ಯ ವೈದ್ಯರು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿರುವ ಕಾರಣ ವೃತ್ತಿ ಮಾತ್ಸರ್ಯಕ್ಕೂ ಅವಕಾಶವಿರುವುದಿಲ್ಲ’ ಎಂದು ಡಾ.ಕೃಷ್ಣ ಅಭಿಪ್ರಾಯಪಡುತ್ತಾರೆ.

ರೋಗಿಯ ಜೀವ ಉಳಿಸಿದ ಸಂದೇಶ

ಸಿಸಿಐನ ವಾಟ್ಸ್‌ಆ್ಯಪ್‌ ಗ್ರೂಪ್‌ ಒಂದರಲ್ಲಿ ಬಂದ ಸಂದೇಶದಿಂದಾಗಿ ಮುಂಬೈನ ಆಸ್ಪತ್ರೆಯೊಂದರ ತುರ್ತು ನಿಗಾ ಘಟಕದಲ್ಲಿದ್ದ ರೋಗಿಯೊಬ್ಬರ ಜೀವ ಉಳಿಸಿದ ಉದಾಹರಣೆಯೂ ಇದೆ ಎನ್ನುತ್ತಾರೆ ಡಾ.ಕೃಷ್ಣ.

35 ವರ್ಷದ ಮಹಿಳೆ, ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆರು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿನ ವೈದ್ಯರು ನೀಡಿದ ಚಿಕಿತ್ಸೆಗೆ ಸ್ಪಂದಿಸದ ಕಾರಣ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಈ ಕುರಿತು ಸಿಸಿಐ ಗುಂಪಿಗೆ ಬಂದ ಸಂದೇಶಕ್ಕೆ ಸದಸ್ಯರು ತಮ್ಮ ಅನುಭವ ಆಧಾರದಲ್ಲಿ ಪ್ರತಿಕ್ರಿಯೆ ನೀಡಿದರು. ಅದರಂತೆ ಚಿಕಿತ್ಸೆ ಆರಂಭಿಸಿದ ವೈದ್ಯರು ಮಹಿಳೆಯ ಜೀವ ಉಳಿಸಿದರು. ಇಂತಹ ನೂರಾರು ಉದಾಹರಣೆಗಳಿವೆ ಎಂದು ಅಭಿಮಾನದಿಂದ ಹೇಳುತ್ತಾರೆ.

ನೋಂದಾಯಿತ ಟ್ರಸ್ಟ್

ವಾಟ್ಸ್‌ ಆ್ಯಪ್‌ನಿಂದ ಆರಂಭವಾದ ಸಿಸಿಐ ಈಗ ನೋಂದಾಯಿತ ಟ್ರಸ್ಟ್ ಆಗಿ ಬೆಳೆದಿದೆ. ಡಾ.ಕೃಷ್ಣ ಟ್ರಸ್ಟಿ ಮತ್ತು ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಡಾ. ನಾರಾಯಣ ‍ಪ್ರದೀಪ್ (ಟ್ರಸ್ಟಿ, ಪ್ರಧಾನ ಕಾರ್ಯದರ್ಶಿ), ಡಾ.ಎಂ.ನರೇಂದರ್ (ಮುಖ್ಯ ಖಜಾಂಚಿ), ಡಾ.ಕೆ.ಎಸ್.ಸತೀಶ್, ಡಾ.ಎಸ್.ಕೆ.ಛಾಬ್ರಾ (ಪೋಷಕರು), ಡಾ.ಅನಿಲ್ ಬಾಬುರಾವ್ ಮಸ್ಕೆ, ಡಾ.ಸ್ವಪ್ನಿಲ್ ಸತೀಶ್ ಕುಲಕರ್ಣಿ (ಜಂಟಿ ಕಾರ್ಯದರ್ಶಿಗಳು), ಡಾ.ಜನ್ಸಾರಿ ಮಹೇಶ್ ರವಿಕುಮಾರ್, ಡಾ. ಕಪಿಲ್ ಅಯ್ಯರ್ (ಜಂಟಿ ಖಜಾಂಚಿಗಳು) ಪದಾಧಿಕಾರಿಗಳಾಗಿದ್ದಾರೆ.

* * 

ಯುವಕರಿಗೂ ಮಾಹಿತಿ ಸಿಗಲಿ ಎಂಬ ಕಾರಣದಿಂದ ವಿವಿಧ ಭಾಗಗಳ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನೂ ಗ್ರೂಪ್‌ಗಳಿಗೆ ಸೇರಿಸಿಕೊಳ್ಳುತ್ತಿದ್ದೇವೆ. ಇದರಿಂದ ದಾವಣಗೆರೆಯ ಹೆಸರು ಮತ್ತಷ್ಟು ಪ್ರಚಲಿತಕ್ಕೆ ಬಂದ ಹೆಮ್ಮೆಯಿದೆ.
ಡಾ.ಎನ್.ಎಚ್.ಕೃಷ್ಣ
ಆಸ್ತಮಾ, ಅಲರ್ಜಿ, ಶ್ವಾಸಕೋಶ ಸಲಹಾ ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT