6

‘ಜೋಶಿ ವಿರುದ್ಧ ಹೋರಾಟಕ್ಕೆ ಸಜ್ಜು’

Published:
Updated:

ಧಾರವಾಡ: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟದ ಕೇಂದ್ರ ಬಿಂದುವಾಗಿರುವ ಸಚಿವ ವಿನಯ ಕುಲಕರ್ಣಿ ಅವರ ತೇಜೊವಧೆ ಪ್ರಯತ್ನಗಳ ಹಿಂದೆ ಸಂಸದ ಪ್ರಹ್ಲಾದ ಜೋಶಿ ಕೈವಾಡವಿದ್ದು, ಅವರ ವಿರುದ್ಧ ಹೋರಾಟ ನಡೆಸಲು ಗುರುವಾರ ನಡೆದ ಲಿಂಗಾಯತ ಸಮುದಾಯದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಲ್ಲಿನ ಸರ್ಕಾರಿ ನೌಕರರ ಸಭಾಭವನದಲ್ಲಿ ಗುರುವಾರ ಸಂಜೆ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಸಭೆಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ಸಂಘಟಕರು ಅವಕಾಶ ನೀಡಲಿಲ್ಲ.

‘ಲಿಂಗಾಯತ ಸಮುದಾಯ ಒಗ್ಗಟ್ಟಾಗುತ್ತಿರುವುದನ್ನು ಸಹಿಸದ ಬಿಜೆಪಿ ನಾಯಕರು, ವಿಶೇಷವಾಗಿ ಸಂಸದ ಪ್ರಹ್ಲಾದ ಜೋಶಿ ಹೋರಾಟ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ, ಸಂಸದ ಪ್ರತಾಪ ಸಿಂಹ ಲಿಂಗಾಯತರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುತ್ತಿದ್ದಾರೆ.

ಇಂಥ ಪ್ರಯತ್ನಗಳ ಕುರಿತು ಸಮುದಾಯ ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸಬೇಕಿದೆ. ಇದಕ್ಕಾಗಿಯೇ ಒಂದು ಸಮಿತಿ ರಚಿಸಿ, ಹೋರಾಟದ ರೂಪುರೇಷೆ ನಿರ್ಧರಿಸಬೇಕಿದೆ’ ಎನ್ನುವ ಆಭಿಪ್ರಾಯ ಮೂಡಿ ಬಂದಿತು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರೊಬ್ಬರು ತಿಳಿಸಿದರು.

‘ಬಿಜೆಪಿ ನಾಯಕರು ಲಿಂಗಾಯತರ ವಿರುದ್ಧ ಲಿಂಗಾಯತರನ್ನೇ ಎತ್ತಿಕಟ್ಟಿ, ಹೋರಾಟ ಹತ್ತಿಕ್ಕುವ ಪ್ರಯತ್ನಗಳು ನಡೆಸುತ್ತಿದ್ದಾರೆ. ಹೋರಾಟದ ಮುಂಚೂಣಿಯಲ್ಲಿರುವ ಸಮುದಾಯದ ನಾಯಕರ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿವೆ. ಸಮುದಾಯದ ಪ್ರಶ್ನೆ ಬಂದಾಗ ಪಕ್ಷ ರಾಜಕೀಯ ಬಿಟ್ಟು ಪ್ರತಿಯೊಬ್ಬರು ಸಮುದಾಯದ ನಾಯಕರನ್ನು ಬೆಂಬಲಿಸಬೇಕು’ ಎಂದು ಮುಖಂಡರು ಮನವಿ ಮಾಡಿದ್ದಾರೆ ಎಂದು ಹೇಳಿದರು.

ಸಮಾಜದ ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಶಿವಶಂಕರ ಹಂಪಣ್ಣವರ, ನಾಗರಾಜ ಪಟ್ಟಣಶೆಟ್ಟಿ, ಸಿದ್ದರಾಮ ನಡಕಟ್ಟಿ, ರಾಜು ಮರಳಪ್ಪನವರ, ಬಿ.ವೈ.ಪೊಲೀಸ್‌ ಪಾಟೀಲ ಮತ್ತಿತರ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry