ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಜೀವನ ಶೈಲಿ ಅಳವಡಿಕೆ ಅಗತ್ಯ

Last Updated 1 ಡಿಸೆಂಬರ್ 2017, 9:09 IST
ಅಕ್ಷರ ಗಾತ್ರ

ಧಾರವಾಡ: ‘ವಿಜ್ಞಾನ ಹಾಗೂ ತಂತ್ರಜ್ಞಾನದ ನಿರಂತರ ಪ್ರಗತಿಯೊಂದಿಗೆ ಪರಿಸರ ಸ್ನೇಹಿ ಜೀವನ ಶೈಲಿ ಅಳವಡಿಕೆ ಅಗತ್ಯ’ ಎಂದು ಮನಗುಂಡಿಯ ಬಸವಾನಂದ ಸ್ವಾಮೀಜಿ ಹೇಳಿದರು.

ಗಾಂಧಿ ಶಾಂತಿ ಪ್ರತಿಷ್ಠಾನ, ರಾಜೀವ ದೀಕ್ಷಿತ್ ವಿಚಾರ ವೇದಿಕೆ ಧಾರವಾಡ ಘಟಕದ ವತಿಯಿಂದ ಸ್ವದೇಶಿ ದಿನದ ಅಂಗವಾಗಿ ಆಯೋಜಿಸಿದ್ದ ಸ್ವದೇಶಿ ಜಾಗೃತ ಜಾಥಾಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಜಾಗತೀಕರಣ ಮತ್ತು ಸಿನಿಮಾ ಸಂಸ್ಕೃತಿಯ ಪ್ರಭಾವದಿಂದ ಭಾರತೀಯರು ತಮ್ಮ ತನವನ್ನು ಕಳೆದುಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ. ಜತೆಗೆ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗುತ್ತಿರುವುದು ಅತ್ಯಂತ ಖೇದಕರ ಸಂಗತಿ’ ಎಂದರು.

‘ಸ್ವದೇಶಿ ವಸ್ತುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದ ಸ್ವದೇಶಿ ಹರಿಕಾರ ರಾಜೀವ್ ದೀಕ್ಷಿತ್ ಅವರು ದೇಶದಲ್ಲಿ ಒಂದು ಬಗೆಯ ಸಂಚಲನ ಮೂಡಿಸಿದ್ದರು. ಅವರ ಸ್ವದೇಶಿ ವಿಚಾರಗಳನ್ನು ಜೀವನದಲ್ಲಿ ಅನುಸರಿಸಬೇಕಿದೆ. ವಿದೇಶಿ ವಸ್ತುಗಳ ಬಳಕೆಗೆ ಆದಷ್ಟು ಕಡಿವಾಣ ಹಾಕಬೇಕಿದೆ. ಯುವ ಸಮುದಾಯ ಹೆಚ್ಚು ಭಾರತೀಯ ಸಂಸ್ಕೃತಿ ಹಾಗೂ ವಸ್ತುಗಳ ಬಗ್ಗೆ ಬೇರೆಯವರಿಗೆ ಮನವರಿಕೆ ಮಾಡಿಕೊಡುವಂತ ಕಾರ್ಯಕ್ಕೆ ಮುಂದಾಗಬೇಕು’ ಎಂದರು.

ಗಾಂಧಿ ಶಾಂತಿ ಪ್ರತಿಷ್ಠಾನದ ಉಪಾಧ್ಯಕ್ಷ ಸಂಜೀವ ಕುಲಕರ್ಣಿ ಮಾತನಾಡಿ,‘ಸ್ವದೇಶಿ ಹರಿಕಾರ ರಾಜೀವ ದೀಕ್ಷಿತ ಸ್ವದೇಶಿ ವಿಚಾರವನ್ನು ಅತ್ಯಂತ ಪಾಂಡಿತ್ಯ ಪೂರ್ಣವಾಗಿ ಎಲ್ಲರೂ ತಿಳಿಸಿದರು. ಅವರ ಕನಸುಗಳನ್ನು ನನಸು ಮಾಡುವಂತ ನಿಟ್ಟಿನಲ್ಲಿ ನಾವೆಲ್ಲರೂ ಸರಳ ಜೀವನ ಹಾಗೂ ಪರಿಸರದ ಸಂರಕ್ಷಣೆ ಬಗ್ಗೆ ಹೆಚ್ಚು ನಿಗಾವಹಿಸಬೇಕು’ ಎಂದರು.

ನಂತರ ಇಲ್ಲಿನ ಕೋರ್ಟ್‌ ವೃತ್ತದ ಬಳಿಯ ಗಾಂಧಿ ಶಾಂತಿ ಪ್ರತಿಷ್ಠಾನದಿಂದ ಪ್ರಾರಂಭವಾದ ಸ್ವದೇಶಿ ಜಾಗೃತ ಜಾಥಾ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಮರಳಿ ಗಾಂಧಿ ಶಾಂತಿ ಪ್ರತಿಷ್ಠಾನ ತಲುಪಿತು. ಜಾಥಾದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ರಾಜೀವ ದೀಕ್ಷಿತ್ ವಿಚಾರ ವೇದಿಕೆ ಕಾರ್ಯಕರ್ತರು ಸ್ವದೇಶಿ ವಸ್ತುಗಳನ್ನು ಬಳಕೆ, ಪರಿಸರ ಸಂರಕ್ಷಣೆ, ಗೋ ರಕ್ಷಣೆ ಘೋಷಣೆಗಳನ್ನು ಕೂಗಿದರು.

ಡಾ. ಪರಾಗ್ ಮೆಳವಂಕಿ, ದತ್ತಾ ಡೋರ್ಲೆ, ಮುಕುಂದ ಮೈಗೂರ, ಬಸವಪ್ರಭು ಹೊಸಕೇರಿ, ಎಂ.ಡಿ. ಪಾಟೀಲ, ಶಿವಾನಂದ ಕುಂಬಾರ, ವಿನೋಧ ಅಕ್ಕಿ, ಸಚೀನ ಮೆಳವಂಕಿ, ದಿನೇಶ ನಾಗಮೋಳೆ, ವಿಶ್ವನಾಥ ಶಿರಿ, ನೀಲಪ್ಪಗೌಡ ದಾನಪ್ಪಗೌಡರ, ಎಸ್‌.ಎಚ್. ಪಾಟೀಲ, ರಮೇಶ ಸುಲಾಖೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT