ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಕಾಳಜಿ ಸಾರಿದ ಚಿಣ್ಣರು

Last Updated 1 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮಳೆಯ ಕಾರ್ಮೋಡದ ನಡುವೆಯೂ ಚಿಣ್ಣರ ಕಲರವದಿಂದ ಕಳೆಗಟ್ಟಿದ್ದ ರಂಗೋಲಿ ಮೆಟ್ರೋ ಕಲಾಕೇಂದ್ರ ಪರಿಸರ ರಕ್ಷಣೆಯ ಮಹತ್ವ ಸಾರುತ್ತಿತ್ತು. ‘ನೀನೊಬ್ಬ ಬದಲಾದರೆ, ಜಗತ್ತಿನ ಒಬ್ಬ ಮೂರ್ಖ ಕಡಿಮೆಯಾಗುತ್ತಾನೆ’ ಎನ್ನುವುದನ್ನು ಮಕ್ಕಳು ಅಭಿನಯದ ಮೂಲಕ ಸಾದರ ಪಡಿಸುತ್ತಿದ್ದರೆ, ಮೂಕವಿಸ್ಮಿತರಾದ ವೀಕ್ಷಕರು ಮಕ್ಕಳ ಅಭಿನಯಕ್ಕೆ ತಲೆದೂಗಿದರು.

‘ಝೀ ಕನ್ನಡ’ ವಾಹಿನಿ ಶುಕ್ರವಾರ ಇಲ್ಲಿ ಆಯೋಜಿಸಿದ್ದ ‘ಹಲೋ ಬೆಂಗಳೂರು’ ಬೀದಿ ನಾಟಕ ಪ್ರದರ್ಶನದಲ್ಲಿ ಕಂಡುಬಂದ ದೃಶ್ಯವಿದು. ‘ಡ್ರಾಮಾ ಜೂನಿಯರ್‌ ಸೀಸನ್‌–2’ನ 12 ಪುಟ್ಟ ಕಲಾವಿದರು ಅಭಿನಯಿಸಿದ ಈ ನಾಟಕ ಅಭಿವೃದ್ಧಿಯ ತಪ್ಪು ಮಾದರಿಯನ್ನು ಅಣಕಿಸುತ್ತಿತ್ತು. ಸುಸ್ಥಿರ ಅಭಿವೃದ್ಧಿಯ ಅಗತ್ಯವನ್ನು ಸಾರುತ್ತಿತ್ತು.

ಬೆಂಗಳೂರನ್ನು ತೆಗಳುತ್ತಲೇ ಅಪ್ಪಿಕೊಳ್ಳುವ ಲಕ್ಷಾಂತರ ಜನರ ಮನಸ್ಥಿತಿಯನ್ನು ಚಿಣ್ಣರು ಬಿಂಬಿಸಿದರು. ದೊಡ್ಡ ಕಟ್ಟಡಗಳನ್ನು ನಿರ್ಮಿಸಿ ಅಭಿವೃದ್ಧಿ ಸಾಧಿಸಿದ್ದೇವೆ ಎಂದು ಬೀಗುವ ಆಡಳಿತವರ್ಗವನ್ನು ವಿಡಂಬನೆ ಮಾಡಿ, ಮಾನವ ಸಂಬಂಧಗಳನ್ನು ಬೆಸೆಯುವುದೇ ನಿಜವಾದ ಪ್ರಗತಿ ಎಂಬುದನ್ನು ಚಿಣ್ಣರು ಸಾರಿಹೇಳಿದರು.

ಪ್ರಕೃತಿಯು ಒಂದು ಹಂತದವರೆಗೆ ನಮ್ಮ ದೌರ್ಜನ್ಯವನ್ನು ಸಹಿಸಿಕೊಳ್ಳುತ್ತದೆ. ಪ್ರಕೃತಿ ಮುನಿಸಿಕೊಂಡರೆ, ಜೀವರಾಶಿಯ ಸರ್ವನಾಶಕ್ಕೆ ಕಾರಣವಾಗುತ್ತದೆ. ಅದಕ್ಕೂ ಮುನ್ನವೇ ಎಚ್ಚೆತ್ತು ನೆಲ ಹಾಗೂ ಜಲಮೂಲಗಳನ್ನು ರಕ್ಷಿಸುವಲ್ಲಿ ಪ್ರತಿ ನಾಗರಿಕರು ಬದ್ಧರಾಗಬೇಕು ಎಂಬುದು ನಾಟಕದ ಆಶಯವಾಗಿತ್ತು.

‘ಪರಿಸರ ಜಾಗೃತಿಯನ್ನು ಬೀದಿ ನಾಟಕದ ಮುಖೇನ ಹೇಳಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಪರಿಸರ ರಕ್ಷಣೆಯ ಇಂದಿನ ತುರ್ತು ಅಗತ್ಯ’ ಎನ್ನುವುದು ನಿರ್ದೇಶಕ ಶರಣಯ್ಯ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT