ಗುರುವಾರ , ಮಾರ್ಚ್ 4, 2021
21 °C

‘ಅಡುಗೆಯೇ ಆಸಕ್ತಿ ಅದೇ ಅನ್ನ ಕೊಟ್ಟ ತೃಪ್ತಿ’

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

‘ಅಡುಗೆಯೇ ಆಸಕ್ತಿ ಅದೇ ಅನ್ನ ಕೊಟ್ಟ ತೃಪ್ತಿ’

ನನ್ನದು ಉತ್ತರಪ್ರದೇಶದ ಲಖನೌ ಸಮೀಪದ ಸಣ್ಣಹಳ್ಳಿ. ನಾನು ಇವತ್ತು ಪ್ರಸಿದ್ಧ ಬಾಣಸಿಗ. ಆದರೆ ಮೊದಲ ಬಾರಿ ಅಡುಗೆ ಮಾಡಿದ ನನ್ನ ಅನುಭವ ಅಂಥ ಸಂಭ್ರಮದ ಘಟನೆಯಾಗಿ ಉಳಿದಿಲ್ಲ.

ಅವತ್ತು ಅಮ್ಮ ಹಾಸಿಗೆ ಹಿಡಿದಿದ್ದಳು. ಮನೆಯಲ್ಲಿ ಅಡುಗೆ ಮಾಡಲು ಬೇರೆ ಯಾರೂ ಇರಲಿಲ್ಲ. ಅನಿವಾರ್ಯವಾಗಿ ನಾನು ಒಲೆ ಹಚ್ಚಿದೆ. ಪಂಜಾಬಿನ ಪ್ರಸಿದ್ಧ ಆಹಾರ ರಾಜ್ಮಾ ಮಾಡಿದ್ದೆ. ಅದು ಚೆನ್ನಾಗಿತ್ತೋ, ಇಲ್ಲವೋ ಗೊತ್ತಿಲ್ಲ. ತಿನ್ನಲೇಬೇಗಾದ ಅನಿವಾರ್ಯತೆಯಲ್ಲಿ ಎಲ್ಲರೂ ಇದ್ದರು. ಅದರೆ ಒಂದಂತು ಸತ್ಯ, ಆ ದಿನ ತಯಾರಿಸಿದ ಅಡುಗೆಯಿಂದ ನನ್ನಲ್ಲಿ ಆತ್ಮವಿಶ್ವಾಸ ಹುಟ್ಟಿತು.

ಲಖನೌ ನಗರದ ಜನರು ಆಹಾರ ಪ್ರಿಯರು. ನನ್ನ ಸ್ವಭಾವದಲ್ಲೂ ಆಹಾರ ಪ್ರೀತಿ ಸಹಜ ಎಂಬಂತೆಯೇ ಬೆಳೆದುಬಂದಿದೆ. ಆರು ವರ್ಷ ಇರುವಾಗಲೇ ಅಡುಗೆಯ ನಂಟು ಹತ್ತಿಸಿಕೊಂಡ ನಾನು, ನಮ್ಮ ಊರಿನ ಗುರುದ್ವಾರ ಒಂದರಲ್ಲಿ ಸಹಾಯಕ ಅಡುಗೆಭಟ್ಟನಾಗಿ ಕೆಲಸ ಮಾಡುತ್ತಿದ್ದೆ. ಸ್ವಲ್ಪ ದಿನದ ನಂತರ ನಮ್ಮ ಮನೆಯ ಬಳಿಯ ಒಂದು ಕಬಾಬ್‌ ಅಂಗಡಿ ಅವನ ಕೆಲಸಕ್ಕೆ ಸೇರಿಕೊಂಡೆ. ನನ್ನ ವೃತ್ತಿ ಬದುಕಿನ ಆರಂಭದ ದಿನಗಳವು.

ಅಡುಗೆಯನ್ನೇ ವೃತ್ತಿಯಾಗಿ ಸ್ವೀಕರಿಸಬೇಕು ಎಂದು ಮನಸು ಮಾಡಿದೆ. ಅದಕ್ಕಾಗಿ ಲಖನೌದ ಇನ್‌ಸ್ಟಿಟ್ಯೂಟ್‌ ಆಫ್‌ ಹೋಟೆಲ್‌ ಮ್ಯಾನೇಜ್‌ಮೆಂಟ್‌ಗೆ ಸೇರಿಕೊಂಡೆ. ಚೆನ್ನಾಗಿ ಕಲಿತೆ. ನಮ್ಮ ಆಸಕ್ತಿ (ಪ್ಯಾಷನ್‌) ಮತ್ತು ಓದು ಒಂದೇ ಆಗಿದ್ದರೆ ನಮ್ಮ ಏಳಿಗೆಯನ್ನು ಯಾರು ತಡೆಯಲು ಸಾಧ್ಯವಿಲ್ಲ. ಇದು ನಾನು ಕಂಡುಕೊಂಡಿರುವ ಸತ್ಯ. ನಾನು ಹೆಚ್ಚೆಚ್ಚು ಪ್ರಯೋಗಗಳನ್ನು ಮಾಡತೊಡಗುದೆ. ನನ್ನ 25ನೇ ವಯಸ್ಸಿಗೆ ಫೈವ್‌ ಸ್ಟಾರ್‌ ಹೋಟೆಲ್‌ವೊಂದರ ಕಾರ್ಯನಿರ್ವಾಹಕ ಬಾಣಸಿಗನಾದ. ಇದು ನನ್ನ ಜೀವನದ ಬಹಳ ಮುಖ್ಯಘಟ್ಟ. ಜೊತೆಗೆ ಸಾಧನೆಯೂ ಹೌದು. ನನ್ನಲ್ಲಿರುವ ಕ್ರಿಯಾಶೀಲತೆಯೇ ನನ್ನ ಸಾಧನೆಗೆ ಮುಖ್ಯ ಕಾರಣ ಎಂಬುದು ನನ್ನ ಬಲವಾದ ನಂಬಿಕೆ. ‘ದೋರ ಕಬಾಬ್‌’ ನನ್ನ ಸಿಗ್ನೇಚರ್‌ ಖಾದ್ಯ.

ಇದು 1990ರ ಮಾತು. ಆಗೆಲ್ಲಾ ಗಂಡಸರು ಅಡುಗೆ ಮಾಡುವುದು ಎಂದರೆ ಮುಜುಗರದ ಮಾತಾಗಿತ್ತು. ನಮ್ಮದು ಭೂಮಾಲೀಕರ ಕುಟುಂಬ. ಇಂತಹ ಕುಟುಂಬಕ್ಕೆ ಸೇರಿದವನೊಬ್ಬ ಬಾಣಸಿಗನಾಗುವುದು ಕುಟುಂಬದ ಮರ್ಯಾದೆಗೆ ಧಕ್ಕೆ ಎನಿಸುವ ವಿಚಾರವಾಗಿತ್ತು. ‘ನಾನು ಬಾಣಸಿಗ ವೃತ್ತಿಯಲ್ಲಿಯೇ ಮುಂದುವರಿಯುವೆ’ ಎಂದಾಗ, ಕುಟುಂಬದವರು, ಊರಿನವರು ಪ್ರಬಲವಾಗಿ ವಿರೋಧಿಸಿದರು. ಆದರೆ ನನ್ನ ಗುರಿ ಸ್ವಷ್ಟವಾಗಿತ್ತು. ಈ ದಿನದವರೆಗೂ ನಾನು ಈ ವೃತ್ತಿಯಲ್ಲಿರುವ ನನ್ನವರಿಗೆ ಒಪ್ಪಿತವಿಲ್ಲ. ಆದರೆ ಈಗ ಕಾಲ ಬದಲಾಗಿದೆ, ಯಾವತ್ತಿದ್ದರೂ ಬದಲಾಗಲೇ ಬೇಕಲ್ಲವೇ?

ಅಡುಗೆಯನ್ನು ಕಲಿಯುವುದಕ್ಕೂ ಮೊದಲೂ ನನ್ನ ಆಸಕ್ತಿ ಚಿತ್ರಕಲೆಯಾಗಿತ್ತು. ಈಗಲೂ ಚಿತ್ರಗಳನ್ನು ಬರೆಯುತ್ತೇನೆ. ನನಗೆ ಶಿಲ್ಪಕಲೆಯಲ್ಲಿಯೂ ಆಸಕ್ತಿ ಇದೆ.

ಕರ್ನಾಟಕದಲ್ಲಿ ಮೈಸೂರು ನನ್ನ ಇಷ್ಟದ ಊರು. ಬಿಸಿಬೇಳೆಬಾತ್‌ ನಾನು ಇಷ್ಟ‍ಪಡುತ್ತೇನೆ. ಬೆಂಗಳೂರಿಗೂ ಆಗಾಗ್ಗೆ ಬಂದು ಹೋಗುತ್ತೇನೆ. ಇಲ್ಲಿನ ಟ್ರಾಫಿಕ್‌ ಬಹಳ ಸುಸ್ತು ಮಾಡುತ್ತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.