ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿನ ಪ್ರತಿಫಲನದಲ್ಲಿ ಮಾತಿನ ಒಡತಿ

Last Updated 31 ಜುಲೈ 2018, 10:50 IST
ಅಕ್ಷರ ಗಾತ್ರ

ವಾಲ್ಮೀಕಿಯ ಆಶ್ರಮದಲ್ಲಿ ಬ್ರಹ್ಮನು ಪ್ರಕಟವಾದುದುನ್ನು ಭೋಜರಾಜನು ಚಮತ್ಕಾರದಿಂದ ವರ್ಣಿಸಿದ್ದಾನೆ:

ವಾಣೀವಿಲಾಸಮಪರತ್ರಕೃತೋಪಲಂಭ–

ಮಂಭೋಜಭೂರಸಹಮಾನ ಇವಾವಿರಾಸೀತ್‌ |

ಆಭಾತಿ ಯತ್ಕೃತಿರನೇಕವಿಧಪ್ರಪಂಚ–

ವ್ಯಾಜೇಂದ್ರಜಾಲವಿಧಿಸಾಧಕಪಿಂಛಿಕೇವ ||

‘ಅನಂತವೈವಿಧ್ಯದ ಪ್ರಪಂಚನಿರ್ಮಿತಿಯ ನೆವದಲ್ಲಿ ಇಂದ್ರಜಾಲಪ್ರದರ್ಶನದ ನವಿಲುಗರಿಗಳ ಕುಂಚದಂತೆ ಯಾವನ ಕ್ರಿಯಾಶಕ್ತಿಯು ತೋರುವುದೋ ಅಂಥ ಬ್ರಹ್ಮನು ಬೇರೆಡೆ ಪ್ರಕಟಗೊಂಡಿರುವ ಸರಸ್ವತಿಯ ವಿಲಾಸವನ್ನು ಸಹಿಸದವನೋ ಎಂಬಂತೆ ಪ್ರತ್ಯಕ್ಷನಾದನು’.

ಸರಸ್ವತಿಯ, ಎಂದರೆ ತನ್ನ ಪತ್ನಿಯ ವಿಲಾಸ ತನ್ನ ಮುಂದಲ್ಲದೆ ಬೇರೆ ಎಲ್ಲೋ ತೋರಿಕೊಂಡಿರುವುದನ್ನು (ವಾಲ್ಮೀಕಿಯ ಮೂಲಕ ಪ್ರಕಟವಾದ ಶ್ಲೋಕ) ಸಹಿಸಲು ಬ್ರಹ್ಮನಿಗೆ ಆಗಲಿಲ್ಲವಂತೆ; ಹೀಗಾಗಿ ಆ ಕೂಡಲೇ ವಾಲ್ಮೀಕಿಯ ಮುಂದೆ ಪ್ರಕಟವಾದ ಎಂದು ಕವಿ ಇಲ್ಲಿ ಉತ್ಪ್ರೇಕ್ಷಿಸಿದ್ದಾನೆ!

ಕವಿಮನಸ್ಸು ಎಷ್ಟೆಲ್ಲ ಸ್ವಾತಂತ್ರ್ಯವನ್ನು ತೆಗೆದುಕೊಳ್ಳಬಹುದು ಎನ್ನುವುದಕ್ಕೂ ಈ ಪದ್ಯ ಉದಾಹರಣೆಯಂತಿದೆಯೆನ್ನಿ! ಬ್ರಹ್ಮ ತನ್ನ ವಿಶ್ವಸೃಷ್ಟಿಯ ಬಗ್ಗೆ ತೆಗೆದುಕೊಳ್ಳುವ ಸ್ವಾತಂತ್ರ್ಯದಂತೆಯೇ ಕವಿಬ್ರಹ್ಮ ಕೂಡ ಅವನ ಕಾವ್ಯಸೃಷ್ಟಿಯಲ್ಲಿ ತೆಗೆದುಕೊಳ್ಳಬಹುದು.

ಚತುರ್ಮುಖಮುಖಾಂಭೋಜವನಹಂಸವಧೂರ್ಮಮ |

ಮಾನಸೇ ರಮತಾಂ ನಿತ್ಯಂ ಸರ್ವಶುಕ್ಲಾ ಸರಸ್ವತೀ ||

(ಚತುರಾನನ ಮುಖಪಂಕಜ–

ತತಿಯೊಳ್‌ ವಿಹರಿಸುವ ಹಂಸಿ ಮನ್ಮಾನಸದೊಳ್‌ |

ಸತತಂ ನಲವಿಂದರ್ಕೆ–

ನ್ನುತೆ ನುತಿಪೆಂ ಸರ್ವಶುಕ್ಲೆಯಂ ಸರಸತಿಯಂ ||

– ಅನುವಾದ: ಡಾ. ಕೆ. ಕೃಷ್ಣಮೂರ್ತಿ)

ಈ ಪ್ರಾರ್ಥನೆ ಮಹಾಕವಿ ದಂಡಿ ಮಾಡಿರುವಂಥದ್ದು. ‘ಮಾ ನಿಷಾದ...’ದಲ್ಲಿಯೇ ಮುಳುಗಿರುವ ಮಹರ್ಷಿ ವಾಲ್ಮೀಕಿಯ ಅಂತರಂಗದ ಮಾತುಗಳನ್ನು ಕೇಳಿಸಿಕೊಂಡೇ ಇದನ್ನು ಬರೆದಂತಿದೆ. ನಾಲ್ಕುಮುಖದ ಬ್ರಹ್ಮನಿಗೂ (ಚತುರ್ಮುಖ) ಸರಸ್ವತಿಗೂ ಕಮಲಕ್ಕೂ (ಅಂಭೋಜ) ಮನಸ್ಸಿಗೂ (ಮಾನಸೇ) ಬಿಳಿಯ ಬಣ್ಣಕ್ಕೂ (ಸರ್ವಶುಕ್ಲಾ) ಆನಂದಕ್ಕೂ (ರಮತಾಂ ನಿತ್ಯಂ) ನಂಟನ್ನು ಕಲ್ಪಿಸಿರುವುದು ವಿಶ್ಲೇಷಿಸಬೇಕಾದ ವಿವರಗಳೇ ಹೌದು.

ವೇದದಲ್ಲಿ ಸರಸ್ವತಿಯನ್ನು ಕುರಿತು ಮಂತ್ರಗಳಿವೆ. ನದಿಯಾಗಿಯೂ ವಾಕ್‌ತತ್ತ್ವವಾಗಿಯೂ ಅವಳನ್ನು ಎರಡು ರೂಪದಲ್ಲಿ ಸ್ತುತಿಸಲಾಗಿದೆ. ಹೀಗಾಗಿ ಮಾತು, ನೀರು, ಸರಸ್ವತಿ, ಬ್ರಹ್ಮ – ಇವೆಲ್ಲಕ್ಕೂ ಪರಸ್ಪರ ನಂಟಿರುವುದು ಸ್ಪಷ್ಟ. ಬ್ರಹ್ಮನ ‘ಶಕ್ತಿ’ಯೇ ಸರಸ್ವತೀತತ್ತ್ವ. ಬ್ರಹ್ಮ ಎಂದರೆ ಸೃಷ್ಟಿ ಎಂದು ನಮಗೆ ಗೊತ್ತಿದೆ. ಅಂತೆಯೇ ಕವಿ ಎಂದರೂ ಸೃಷ್ಟಿಯೇ ಹೌದು. ಇಷ್ಟೆಲ್ಲ ನಂಟನ್ನು ಹೊಂದಿರುವುದರಿಂದಲೇ ಕವಿಯನ್ನೂ ಬ್ರಹ್ಮ ಎಂದು ಕರೆಯುವುದು.

ಸರಸ್ವತಿಯನ್ನು ಹುಡುಕಿಕೊಂಡು ಬ್ರಹ್ಮ ಬಂದ ಎಂಬುದು ಕೇವಲ ಚಮತ್ಕಾರದ ಮಾತಲ್ಲ. ಈಗ ಒಂದೊಂದಾಗಿ ವಿವರಗಳನ್ನು ನೋಡೋಣ.

ವಾಲ್ಮೀಕಿಮಹರ್ಷಿಯ ಮುಖದಿಂದ ಶ್ಲೋಕ ಹೊರಹೊಮ್ಮಿದಾಗಲಷ್ಟೆ ಕಾವ್ಯಸರಸ್ವತೀ ಪ್ರಕಟವಾದದ್ದಲ್ಲ; ತಮಸಾನದಿಯ ತಿಳಿತನವನ್ನು ಸಜ್ಜನರ ಮನಸ್ಸಿನೊಂದಿಗೆ ಹೋಲಿಸಿದಾಗಲೇ ಅವಳ ಸಾಕ್ಷಾತ್ಕಾರವಾಗಿತ್ತು. ನೀರಿನ ವರ್ಣನೆಯ ಮೂಲಕವೇ ವಾಲ್ಮೀಕಿಯ ಕಾವ್ಯಸೃಷ್ಟಿ ಆರಂಭವಾಗಿತ್ತು. ನೀರಿನ ವರ್ಣನೆಯ ಮೂಲಕವೇ ಕಾವ್ಯಾರಂಭ ಎನ್ನುವುದು ಗಮನಾರ್ಹ. ನೀರಿಗೂ ‘ಸರಸ್ವತೀ’ ಎಂಬ ಒಕ್ಕಣೆಯಿರುವುದಷ್ಟೆ ಇಲ್ಲಿಯ ಸ್ವಾರಸ್ಯವಲ್ಲ; ಕಾವ್ಯದ ಆರಂಭಕ್ಕೆ ನೀರು ವಸ್ತುವಾಗಿದೆ ಎನ್ನುವುದು ವಿಶೇಷ. ಏಕೆಂದರೆ ಬ್ರಹ್ಮನ ಸೃಷ್ಟಿಯಲ್ಲಿ ನಡೆದ ಮೊದಲ ಸೃಷ್ಟಿಕಾರ್ಯ ಎಂದರೆ ನೀರು; ಇದು ವೇದದಲ್ಲಿ ಬರುವ ಎಣಿಕೆ. (‘ಆಪೋ ವಾ ಇದಂ ಅಗ್ರೇ ಸಲಿಲಂ ಅಸ್ತಿ...’ ಮುಂತಾದ ಮಂತ್ರಗಳನ್ನು ನೋಡಬಹುದು.) ನೀರು ಸೃಷ್ಟಿಯ ಪ್ರಥಮ ತತ್ತ್ವ – ಎಂಬ ನಂಬಿಕೆ ಜಗತ್ತಿನ ಇತರ ಸಂಸ್ಕೃತಿಗಳಲ್ಲೂ ಇವೆಯೆನ್ನಿ! ವಿಶ್ವದ ಆದಿತತ್ತ್ವವೇ ಆದಿಕಾವ್ಯದ ಸ್ಫೂರ್ತಿತತ್ತ್ವವೂ ಆದದ್ದು ಸೋಜಿಗವೇನಿಲ್ಲ. ತಿಳಿನೀರನ್ನು ಸಜ್ಜನರ ಮನಸ್ಸಿಗೆ ಹೋಲಿಸಲಾಯಿತಲ್ಲವೆ? ಈ ಹೋಲಿಕೆ ಕೂಡ ಆಕಸ್ಮಿಕ ಸಂಗತಿಯಲ್ಲ. ನೀರಿಗೂ ಆದಿತತ್ತ್ವಕ್ಕೂ ಮಹಾತ್ಮರಿಗೂ ನಂಟಿರುವುದನ್ನು ಪ್ರಾಚೀನ ವಾಙ್ಮಯಗಳಲ್ಲಿ ಕಾಣಬಹುದು. ಚೀನಾದ ದಾರ್ಶನಿಕ ಲಾ–ವೋತ್ಸೆ ಮಹಾಪುರುಷನನ್ನು ನೀರಿನೊಂದಿಗೇ ಹೋಲಿಸಿರುವುದು ಕಾಕತಾಳೀಯವಲ್ಲ ಎನಿಸುತ್ತದೆ:

The best man is like water.

Water is good; it benefits all things and does not compete with them.

It dwells in lowly place that all disdain.

This is why it is so nearer to Tao.

(ಅನುವಾದ: Wing-tsit Chan)

ಸಜ್ಜನನನ್ನು ಇಲ್ಲಿ ನೀರಿಗೆ ಹೋಲಿಸಿರುವುದು ಮಾತ್ರವಲ್ಲ; ಅವನು ಧರ್ಮಕ್ಕೆ (ಎಂದರೆ, ತಾವೋಗೆ) ಹತ್ತಿರದವನೂ ಎಂದು ಸಮೀಕರಿಸಲಾಗಿದೆ. ಎಲ್ಲರೂ ಉಪೇಕ್ಷಿಸುವ ತಗ್ಗಿನ ತಾಣಗಳಲ್ಲಿ ಅದು ನೆಲೆಸುತ್ತದೆ. ಸತ್ಪುರುಷನೂ ಕೂಡ ಹೀಗೆ ಕಾರುಣ್ಯಶೀಲನಾಗಿರುತ್ತಾನೆ. ಹೀಗಾಗಿಯೇ ಅವನು ಧರ್ಮಜ್ಞ. ಇದು ಲಾ–ವೋತ್ಸೆಯ ನಿಲುವು.

ತಿಳಿನೀರು ಮತ್ತು ಸಜ್ಜನರ ಮನಸ್ಸು ಮಾತ್ರವೇ ಸಮಾನಧರ್ಮಿಗಳಾಗಿಲ್ಲ; ಸರಸ್ವತೀತತ್ತ್ವವೂ ಅಂಥದೇ ಶುಭ್ರತೆಯ ನೆಲೆಯಾಗಿದೆ. ಸರಸ್ವತಿಯನ್ನು ‘ಸರ್ವಶುಕ್ಲಾ’ – ಬಿಳಿಯ ಬಣ್ಣದವಳು – ಎಂದು ಒಕ್ಕಣಿಸಿರುವುದಾದರೂ ಈ ಕಾರಣದಿಂದಲೇ. ಸರಸ್ವತಿಗೂ ಕಮಲಕ್ಕೂ ನೇರ ನಂಟಿದೆ. ಸೃಷ್ಟಿಕರ್ತನಾದ ಬ್ರಹ್ಮನ ಹೆಸರೇ ಪದ್ಮಸಂಭವ. ನಾರಾಯಣನ, ಎಂದರೆ ವಿಷ್ಣುವಿನ ಹೆಸರುಗಳಲ್ಲಿ ‘ಪದ್ಮನಾಭ’ ಎಂಬುದೂ ಒಂದು. ಕಮಲವನ್ನೇ ನಾಭಿಯನ್ನಾಗಿ ಉಳ್ಳವನು ಅವನು. ನಾರಾಯಣನಿಗೂ ಜಲತತ್ತ್ವಕ್ಕೂ ಸಂಬಂಧವಿದೆ. ಹೀಗೆ ನೀರು, ವಿಷ್ಣು, ಕಮಲ ಮತ್ತು ಬ್ರಹ್ಮನಿಗೆ ನಂಟು. ಇವೆಲ್ಲಕ್ಕೂ ಸರಸ್ವತಿಗೂ ಸಹಜವಾದ ನಂಟೇ ಒದಗಿದೆ. ಬ್ರಹ್ಮನ ಮಾನಸಸರೋವರದಲ್ಲಿ ವಿಹರಿಸುವವಳು (ಮಾನಸೇ ರಮತಾಂ) ಅವಳು. ಮಾನಸ – ಎಂಬುದು ಮಾನಸಸರೋವರವೂ ಆಗಬಹುದು; ಮನಸ್ಸು ಕೂಡ ಆಗಬಹುದು. ನಮ್ಮ ಮನಸ್ಸಿನಲ್ಲಿ ವಿಹರಿಸುವವಳೇ – ಎಂದರೆ ನಮ್ಮ ಪ್ರತಿಭೆಯ ಕಲ್ಪನಾಲಹರಿಯಲ್ಲಿ ತೋರಿಕೊಳ್ಳುವವಳೇ – ಸರಸ್ವತೀ. ನಮ್ಮ ಮನಸ್ಸು ಎಷ್ಟೆಷ್ಟು ತಿಳಿಯಾಗಿರುತ್ತದೆಯೋ ಅಷ್ಟಷ್ಟು ಅವಳು ನಮ್ಮ ಭಾವ–ಬುದ್ಧಿಗಳಲ್ಲಿ ಪ್ರತಿಫಲಿಸುತ್ತಾಳೆ.

ಚಿದಾನಂದಕಲಾಂ ವಾಣೀಂ ವಂದೇ ಚಂದ್ರಕಲಾಧರಾಂ |

ನೈರ್ಮಲ್ಯ ತಾರತಮ್ಯೇನ ಬಿಂಬಿತಾಂ ಚಿತ್ತಭಿತ್ತಿಷು ||

ಇದು ಸಾಯಣಾಚಾರ್ಯರ ಶ್ಲೋಕ. ‘ಆನಂದಸ್ವರೂಪಿಯೂ ಕಲಾಸ್ವರೂಪಿಯೂ ಆದ ಸರಸ್ವತಿಯು ನಮ್ಮ ಅಂತರಂಗದ ಶುಭ್ರತೆಗೆ ಅನುಸಾರವಾಗಿ ನಮ್ಮ ಮನಸ್ಸು ಎಂಬ ಭಿತ್ತಿಯ ಮೇಲೆ – ಕ್ಯಾನ್‌ವಾಸ್‌ನ ಮೇಲೆ – ತೋರಿಕೊಳ್ಳುತ್ತಾಳೆ’ ಎನ್ನುವುದು ಇದರ ಭಾವಾರ್ಥ.

ಇಂಥ ಸರಸ್ವತಿಯನ್ನು ಒಲಿಸಿಕೊಂಡ ವಾಲ್ಮೀಕಿಯಲ್ಲಿಗೆ ಬ್ರಹ್ಮ ಬಂದದ್ದು ಅಚ್ಚರಿಯಿಲ್ಲವಷ್ಟೆ! ಕವಿ–ಬ್ರಹ್ಮನ ಬಗ್ಗೆ ಮುಂದೆ ನೋಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT