ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಯಲ್ಲಿದೆ ಹತ್ತಾರು ಆಯ್ಕೆ

Last Updated 1 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಲೈಂಗಿಕ ದೌರ್ಬಲ್ಯಕ್ಕೆ ನಿರ್ದಿಷ್ಟ ಪರೀಕ್ಷೆ ಹಾಗೂ ಚಿಕಿತ್ಸೆ ಸವಾಲೇ ಹೌದು. ಆದರೆ ಇತ್ತೀಚೆಗೆ ಹಲವು ಆಯ್ಕೆಗಳೂ ಲಭ್ಯವಿರುವುದು ಸಮಾಧಾನದ ಸಂಗತಿ. ಓರಲ್ ಸಿಲ್ಡೆನಾಫಿಲ್ ಸೈಟ್ರೇಟ್(ವಯಾಗ್ರ)ನಿಂದ ಹಿಡಿದು ಇಂಪ್ಲಾಂಟ್‌ಗಳವರೆಗೂ ಸಾಧನಗಳು ಇರುವುದು ಭರವಸೆಯನ್ನು ಮತ್ತಷ್ಟು ಗಟ್ಟಿಗೊಳಿಸಿವೆ.

ಲೈಂಗಿಕ ದೌರ್ಬಲ್ಯದ ಸಮಸ್ಯೆಯಲ್ಲಿ ಹೆಚ್ಚು ಪಾಲು ನಿಮಿರುವಿಕೆಯದ್ದು. ಈ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆಯಾಗಿ ಕಾಣಿಸಿದ್ದು ಓರಲ್ ಸಿಲ್ಡೆನಾಫಿಲ್ ಸೈಟ್ರೇಟ್‌. ಆದರೆ ಇನ್ನೂ ಕೆಲವು ವಿಧದ ನರಸಂಬಂಧಿ ಸಮಸ್ಯೆಗಳಿಗೆ ಇದರಿಂದ ಸೂಕ್ತ ಸ್ಪಂದನೆ ದಕ್ಕದಿರುವುದು ಸ್ವಲ್ಪ ಹಿನ್ನಡೆಯನ್ನು ಉಂಟು ಮಾಡಿತ್ತು.

ಪ್ಯಾಥೊಫಿಸಿಯಾಲಜಿ: ದೀರ್ಘಕಾಲದ ರೋಗ, ಆಘಾತ, ಶಸ್ತ್ರಚಿಕಿತ್ಸೆ, ವೈದ್ಯಕೀಯ ಚಿಕಿತ್ಸೆ ಸಮಯದಲ್ಲಿ ಕಾಣಿಸಿಕೊಳ್ಳುವ ತೊಡಕುಗಳ ಫಲಿತಾಂಶ ಈ ದೌರ್ಬಲ್ಯದ್ದಾಗಿರುತ್ತದೆ. ನಿರ್ದಿಷ್ಟ ಸಮಸ್ಯೆಗೆ ಪರೀಕ್ಷೆಗೆ ಒಳಪಡಿಸುವ ವೇಳೆ ಚಿಕಿತ್ಸೆಯ ಆಯ್ಕೆಯನ್ನೂ ನಿರ್ಧರಿಸಬಹುದು.

ನಿಮಿರುವಿಕೆಯಲ್ಲಿ ಎರಡು ರೀತಿ. ಒಂದು: ಸೈಕೊಜೆನಿಕ್‌; ಮತ್ತೊಂದು: ರಿಫ್ಲೆಕ್ಸೊಜೆನಿಕ್. ಸೈಕೊಜೆನಿಕ್‌, ಮೆದುಳಿನ ಕಾರ್ಟಿಕಲ್‌ ಸಮೀಪಕ್ಕೆ ಸಂಪರ್ಕ ಏರ್ಪಡಿಸುವ ಮೂಲಕ ನಡೆಯುತ್ತದೆ. ರಿಫ್ಲೆಕ್ಸೊಜೆನಿಕ್‌ ಜನನೇಂದ್ರಿಯದ ಸಂವೇದನಾಶೀಲತೆಯನ್ನು ಬೆನ್ನುಹುರಿಯ ಮೂಲಕ ಉತ್ತೇಜಿಸುವುದು ಆಗಿರುತ್ತದೆ. ಎರಡು ಭಿನ್ನ ಮಾರ್ಗಗಳಾದರೂ ಫಲಿತಾಂಶ ಒಂದೇ ಆಗಿರುತ್ತದೆ.

ರೋಗಪರೀಕ್ಷೆ: ಸಮಸ್ಯೆಯ ಪತ್ತೆ ಹಚ್ಚುವಿಕೆಗೆ ಕೆಲವು ದೈಹಿಕ ಪರೀಕ್ಷೆಗಳು ಅತಿ ಮುಖ್ಯವಾಗಿರುತ್ತದೆ. ಬೆನ್ನುಹುರಿ ಹಾನಿಗೊಳಗಾಗಿರುವ ರೋಗಿಗಳಿಗೆ, ವೈದ್ಯರು, ಹಾನಿಯಾದ ಸ್ಥಳ ಹಾಗೂ ಅವಧಿಯನ್ನು ಪರೀಕ್ಷಿಸಿ ಚಿಕಿತ್ಸೆಯ ಸಾಧ್ಯತೆಗಳನ್ನು ತಿಳಿಸುತ್ತಾರೆ.

ಇದಕ್ಕೆ ಸೈಕೊಥೆರಪಿ ಉತ್ತಮ ಚಿಕಿತ್ಸೆ. ಬೆನ್ನುಹುರಿ ಚಿಕಿತ್ಸೆ ಪಡೆದವರು ಮತ್ತೆ ಗುಣಮುಖವಾಗಿ ಉತ್ತಮ ಲೈಂಗಿಕ ಜೀವನವನ್ನು ನಡೆಸಿರುವ ಹಲವು ಉದಾಹರಣೆಗಳನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ.

ಈ ಪರೀಕ್ಷೆಗಳು ದೌರ್ಬಲ್ಯದ ಕಾರಣವನ್ನು ನಿಖರವಾಗಿ ಪತ್ತೆ ಹಚ್ಚಬಲ್ಲವು. ಪ್ರೊಲಾಕ್ಟಿನ್, ಲ್ಯೂಟೀನೈಜಿಂಗ್ ಹಾರ್ಮೋನು ಹಾಗೂ ಟೆಸ್ಟೊಸ್ಟೆರೋನ್ ಹಾರ್ಮೋನುಗಳ ಮಟ್ಟವನ್ನೂ ಈ ಮೂಲಕ ಪತ್ತೆ ಹಚ್ಚಬಹುದು. ಡಾಪ್ಲರ್ ಅಲ್ಟ್ರಾಸೋನೊಗ್ರಫಿಯಿಂದ ರಕ್ತಪರಿಚಲನೆಯ ಸಾಂದ್ರತೆ ತಿಳಿಸುವ ಹೆಮೊಡೈನಮಿಕ್ಸ್ ತಿಳಿಸುವ ಪರೀಕ್ಷೆಯೂ ನಡೆಯುತ್ತದೆ.

ಈ ಸಮಸ್ಯೆಗೆ ಸಂಬಂಧಿಸಿದಂತೆ ಡರ್ಮಲ್ ಪಂಚ್ ಬಯಾಪ್ಸಿ ಹಾಗೂ ನರದ ಸಾಂದ್ರತೆಯನ್ನು ‘ಡಯಾಬಿಟಿಕ್ ಪೆರಿಫೆರಲ್ ನ್ಯೂರೋಪತಿ’ಗೆ ಬಳಸಲಾಗುತ್ತದೆ.

ದೌರ್ಬಲ್ಯದ ಸುಮಾರು ಪ್ರಕರಣಗಳಲ್ಲಿ ಕೆಲವು ಚಿಕಿತ್ಸೆಗಳು ಸೋತರೂ ಕೊನೆಯ ಆಯ್ಕೆಯಾಗಿ ಪೆನೈಲ್ ಇಂಪ್ಲಾಂಟ್ ಸರ್ಜರಿ ನಡೆಸಲಾಗುತ್ತದೆ. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಸಿಲ್ಡೆನಾಫಿಲ್ ಸೈಟ್ರೇಟ್‌ನಿಂದ ಹಿಡಿದು ಹೊಸ ಓರಲ್ ಫಾ‌ಸ್ಫೊಡೀಸ್ಟೆರೇಸ್ ಇನ್‌ಹಿಬಿಟರ್‌ಗಳು, ಟ್ಯಾಡಲಾಫಿಲ್, ವ್ಯಾಕ್ಯೂಮ್ ಕನ್‌ಸ್ಟ್ರಿಕ್ಸನ್ ಡಿವೈಸ್, ಇಂಟ್ರಾರೆಥ್ರಾಲ್ ಹಾಗೂ ಇನ್‌ಟ್ರಾಚಾವೆರ್ನೊಸಾಲ್ ಥೆರಪಿ, ಸ್ಟೆಮ್ ಸೆಲ್ ಥೆರಪಿ ಹಾಗೂ ಪೆನೈಲ್ ಇಂಪ್ಲಾಂಟ್‌ ಹೀಗೆ ಸಾಕಷ್ಟು ಆಯ್ಕೆಗಳು ಲಭ್ಯವಿವೆ.

ಕ್ಯಾವೆರ್ಜೆಟ್ ಹಾಗೂ ಮ್ಯೂಸ್‌ ಹಲವು ವಿಧದ ನರಸಂಬಂಧಿ ದೌರ್ಬಲ್ಯಕ್ಕೆ ಉಪಯೋಗಕಾರಿ ಸಾಧನಗಳಾಗಿವೆ. ಮಧುಮೇಹ, ಬೆನ್ನುಹುರಿ ಸಮಸ್ಯೆಯಿಂದಾಗಿ ದೌರ್ಬಲ್ಯ ಅನುಭವಿಸುತ್ತಿರುವವರಿಗೆ ಇದನ್ನು ಶಿಫಾರಸ್ಸು ಮಾಡಲಾಗುತ್ತದೆ. ಶೇ. 73ರಷ್ಟು ಇದರ ಯಶಸ್ಸಿನ ಪ್ರಮಾಣವನ್ನು ಅಂದಾಜಿಸಲಾಗಿದೆ.

ನರಗಳಿಗೆ ಸಂಬಂಧಿಸಿದಂತೆ ಹಲವು ದೌರ್ಬಲ್ಯಗಳು ತಳುಕು ಹಾಕಿಕೊಂಡಿದ್ದರೂ, ‘ಡಯಾಬಿಟಿಕ್ ನ್ಯೂರೋಪಥಿ‘ ಕೂಡ ಅತಿ ಸಾಮಾನ್ಯ ಕಾರಣ ಎನ್ನಿಸಿಕೊಂಡಿದೆ. ಮಧುಮೇಹ ರಕ್ತನಾಳಗಳ ಸಮಸ್ಯೆಯನ್ನೂ ಒಳಗೊಂಡಿರುವುದರಿಂದ ಇದು ನಿಮಿರುವಿಕೆಗೆ ಎಡೆ ಮಾಡಿಕೊಡುತ್ತದೆ.

ಇದಕ್ಕೆ ಚಿಕಿತ್ಸೆಯ ರೂಪದಲ್ಲಿ ಪೆನೈಲ್ ಪ್ರೊಸ್ಟಾಗ್ಲಾಂಡಿನ್ ಇಂಜೆಕ್ಷನ್‌ ಆಯ್ಕೆ ಇದೆ. ಮ್ಯೂಸ್‌ ಕೂಡ ಈ ಸಮಸ್ಯೆಗೆ ಸ್ಪಂದಿಸಬಲ್ಲದು. ಇದರೊಂದಿಗೆ ಸದ್ಯಕ್ಕೆ ಎರಡು ರೀತಿಯ ಪೆನೈಲ್ ಇಂಪ್ಲಾಂಟ್ ಲಭ್ಯವಿದೆ.

ಮಲ್ಟಿಪಲ್ ಸೆಲೆರೊಸಿಸ್ ಕೂಡ ಲೈಂಗಿಕ ಜೀವನಕ್ಕೆ ಅಡ್ಡಿ ತರಬಹುದು. ಇದು 40 ವಯಸ್ಸಿನ ಒಳಗಿನ ಪುರುಷರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮೂತ್ರಕೋಶ ಹಾಗೂ ಬೆನ್ನುಹುರಿಯಲ್ಲಿನ ಸಮಸ್ಯೆ ಲೈಂಗಿಕ ಚಟುವಟಿಕೆಗೆ ಅಡ್ಡಿ. ನಿಮಿರುವಿಕೆ ಸಾಧ್ಯವಾದರೂ ಲೈಂಗಿಕ ಚಟುವಟಿಕೆ ನಡೆಸಲು ಅಸಾಧ್ಯವಾಗುವುದು ಇದರ ಮತ್ತೊಂದು ಲಕ್ಷಣ.

ವೃಷಣ ಕ್ಯಾನ್ಸರ್‌ ಚಿಕಿತ್ಸೆ–ರಾಡಿಕಲ್ ಪ್ರೋಸ್ಟೆಟ್ಟೆಮಿ ನಂತರ ದೌರ್ಬಲ್ಯ ಹಾಗೂ ನಿಗ್ರಹ ಸಾಮರ್ಥ್ಯದಲ್ಲಿನ ದೋಷವೂ ಕಾಣಿಸಿಕೊಳ್ಳುತ್ತದೆ. ಇದಕ್ಕೆಂದು ನರ್ವ್ ಸ್ಪೇರಿಂಗ್ ಟೆಕ್ನಿಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಸಮಸ್ಯೆಗಳು ಹೆಚ್ಚುತ್ತಿದ್ದಂತೆ ಅದಕ್ಕೆ ಪರಿಹಾರದ ಹಾದಿಗಳೂ ಹೆಚ್ಚುತ್ತಿವೆ. ನರಸಂಬಂಧಿಯಾದ ಯಾವುದೇ ಸಮಸ್ಯೆಗಳಿಗೂ ಉತ್ತರ ನೀಡಬಲ್ಲ, ನರಗಳ ಪುನರುತ್ಪಾದನೆ ಹಾಗೂ ನ್ಯೂರೊಟ್ರೋಪಿನ್‌ಗಳ ಕುರಿತು ಮತ್ತಷ್ಟು ಅಧ್ಯಯನಗಳು ನಡೆಯುತ್ತಿವೆ. ಆದರೆ ಇದಿನ್ನೂ ಅಂಬೆಗಾಲಿನ ಸ್ಥಿತಿಯಲ್ಲಿದೆ. ಹಾನಿಯಾದ ನರಗಳನ್ನು ಮತ್ತೆ ಚೈತನ್ಯಗೊಳಿಸುವ ಮೂಲಕ ಸಾಕಷ್ಟು ಸಮಸ್ಯೆಗಳನ್ನು ದೂರವಿಡುವ ಪ್ರಯತ್ನಗಳೂ ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT