7

ಕಾಡದಿರಲಿ ನಿದ್ದೆ

Published:
Updated:
ಕಾಡದಿರಲಿ ನಿದ್ದೆ

ಭಾರತದಲ್ಲಿ ಶೇ.93ರಷ್ಟು ಜನರು ತಮ್ಮ ನಿದ್ದೆಯ ಗುಣಮಟ್ಟದ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ನಿದ್ರಾಹೀನತೆಯಿಂದ ದೇಶದ ಆರ್ಥಿಕತೆಯ ಮೇಲೆ ಹೊರೆ ಬೀಳುತ್ತಿದೆ. ಆದರೆ, ಇದರ ಸೂಕ್ಷತೆ ಹಾಗೂ ಗಂಭೀರತೆ ಯಾರಿಗೂ ಅರ್ಥವಾದಂತಿಲ್ಲ.

ನಮಗೆ ನಿದ್ದೆ ಏಕೆ ಬೇಕು?

ಮನುಷ್ಯನ ನೆನಪಿನ ಶಕ್ತಿ ಹಾಗೂ ಇನ್ನಿತರ ಬೌದ್ಧಿಕ ಚಟುವಟಿಕೆಗಳಿಗೆ ಆರೋಗ್ಯಕರ ನಿದ್ದೆ ಅತಿ ಅವಶ್ಯಕ. ಸಹಜ ಏಕಾಗ್ರತೆ, ಆಲೋಚನೆ ಮಾಡುವ ವೇಗ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಕೌಶಲ ಮುಂತಾದ ಬೌದ್ಧಿಕ ಚಟುವಟಿಕೆಗಳಿಗೆ ಆರೋಗ್ಯಕರ ನಿದ್ದೆ ಅನಿವಾರ್ಯವಾಗಿದೆ. ದೀರ್ಘಾವಧಿಯ ನಿದ್ರಾಹೀನತೆಯಿಂದ ಏಕಾಗ್ರತೆ ಕೊರತೆ ಅಥವಾ ಸಮಯೋಚಿತ ನಿರ್ಧಾರ ಕೈಗೊಳ್ಳಲಾಗದ ಕಾರಣ ಅಪಘಾತಗಳಾದ ಉದಾಹರಣೆಗಳನ್ನು ನಾವು ನೋಡಿರುತ್ತೇವೆ.

ನಿದ್ರಾಹೀನತೆಯು ಅನೇಕ ಮನೋರೋಗಗಳ ಮುಖ್ಯ ಗುಣಲಕ್ಷಣಗಳಲ್ಲಿ ಒಂದು. ಖಿನ್ನತೆ, ಭಯ, ಆತಂಕ, ಸ್ಕಿಝೋಫ್ರೇನಿಯ ಮುಂತಾದ ಕಾಯಿಲೆಗಳಲ್ಲಿ ನಿದ್ರಾಹೀನತೆಯು ಕಾಣಿಸಿಕೊಳ್ಳುತ್ತದೆ. ಇಂತಹ ಅನೇಕ ಮನೋರೋಗಗಳು, ನಿದ್ದೆಯ ಕೊರತೆಯಿಂದ ಮರುಕಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ, ಮನುಷ್ಯನ ಮಾನಸಿಕ ಆರೋಗ್ಯವನ್ನು ಕಾಪಾಡುವುದರಲ್ಲಿ ಹಾಗೂ ಒತ್ತಡದ ಪರಿಣಾಮವನ್ನು ಕಡಿಮೆ ಮಾಡುವುದರಲ್ಲಿ ನಿದ್ದೆಯ ಪಾತ್ರ ಮುಖ್ಯವಾಗಿದೆ.

* ನಿದ್ದೆಯ ಅಭ್ಯಾಸವನ್ನು ನಿಯಮಿತವಾಗಿಸಿಕೊಳ್ಳಿ. ಪ್ರತಿ ದಿನ ನಿದ್ದೆಗೆ ಹೋಗುವ ಹಾಗೂ ಬೆಳಿಗ್ಗೆ ಏಳುವ ಸಮಯ ನಿಯಮಿತವಾಗಿರಲಿ.

* ನಿದ್ದೆ ಬಂದಾಗ ಮಾತ್ರ ಮಲಗಲು ಹೋಗಿ. ಹಾಸಿಗೆಯಲ್ಲಿ ಮಲಗಿದ ಮೇಲೆ ನಿದ್ದೆ ಬರಲಿಲ್ಲವೆಂದಾದಲ್ಲಿ, ಅಲ್ಲಿಯೆ ಹೊರಳಾಡದೆ ಎದ್ದೇಳಿ. ಸ್ವಲ್ಪ ಸಮಯದ ನಂತರ ಮತ್ತೆ ನಿದ್ದೆಗೆ ಪ್ರಯತ್ನಿಸಿ.

* ಒಂದು ವೇಳೆ ರಾತ್ರಿ ನಿದ್ದೆ ಸರಿಯಾಗಿ ಆಗಿರದಿದ್ದರೆ, ಬೆಳಿಗ್ಗೆ ತಡವಾಗಿ ಏಳಬೇಡಿ. ದಿನಾಲೂ ಏಳುವ ಸಮಯಕ್ಕೆ ಎದ್ದರೆ, ದಿನಚರಿ ನಿಯಮಿತವಾಗಿ ಜಾರಿಯಲ್ಲಿದ್ದು, ರಾತ್ರಿ ನಿದ್ದೆಗೆ ಭಂಗ ಬರುವುದಿಲ್ಲ.

* ರಾತ್ರಿ ಊಟ ಮಿತವಾಗಿತರಲಿ. ಆದಷ್ಟೂ ಮಸಾಲೆ ಪದಾರ್ಥಗಳನ್ನು ತ್ಯಜಿಸಿ. ಊಟವಾದ ತಕ್ಷಣವೇ ಮಲಗುವುದು ಬೇಡ.

* ನಿದ್ದೆಯ ಸಮಯದಲ್ಲಿ ಟೀ, ಕಾಫಿ, ಮದ್ಯ ಮುಂತಾದ ಉತ್ತೇಜನಕಾರಿ ವಸ್ತುಗಳ ಸೇವನೆ ಬೇಡ.

* ನಿಯಮಿತ ದೈಹಿಕ ವ್ಯಾಯಾಮ, ಧ್ಯಾನ ಅವಶ್ಯಕ. ಆದರೆ ನಿದ್ದೆಗೆ ಮುಂಚೆ ವ್ಯಾಯಾಮ ಬೇಡ.

* ವ್ಯಾಯಾಮದಿಂದ, ಮೆದುಳು ಉತ್ತೇಜಿತಗೊಂಡು ನಿದ್ದೆ ಹತ್ತುವುದು ನಿಧಾನವಾಗಬಹುದು.

ದಿನದ ಸಮಯದಲ್ಲಿ ಮಲಗುವುದರಿಂದ, ರಾತ್ರಿ ವೇಳೆಯ ಸ್ವಾಭಾವಿಕ ನಿದ್ದೆಗೆ ಧಕ್ಕೆಯಾಗುತ್ತದೆ. ಹೀಗಾಗಿ ಮಧ್ಯಾಹ್ನದ ನಿದ್ದೆಯನ್ನು ತ್ಯಜಿಸಿ. ಅತಿ ಅವಶ್ಯಕ ಎನ್ನಿಸಿದಾಗ ಮಾತ್ರ ಕೆಲವೇ ಕೆಲವು ನಿಮಿಷಗಳ ನಿದ್ದೆ ಮಾಡಿ (ಪವರ್ ನ್ಯಾಪ್) ನಿದ್ದೆಯ ದಿನಚರಿಯನ್ನು ಬರೆಯಿರಿ. ಏನು ಮಾಡುವುದರಿಂದ ನಿದ್ದೆ ಬರಲಿಲ್ಲ, ವಾರದ ನಿದ್ದೆಯ ಸಮಯ ಮುಂತಾದ ವಿಷಯಗಳನ್ನು ನಮೂದು ಮಾಡಿ. ಇದರಿಂದ ತೊಂದರೆ ಕೊಡುವ ಅಂಶಗಳನ್ನು ದೂರವಿರಿಸಬಹುದು. ಮಲಗುವ ವೇಳೆಯಲ್ಲಿ ಮೊಬೈಲ್ ಅಥವಾ ಇತರ ವಿದ್ಯುನ್ಮಾನ ಸಾಧನಗಳನ್ನು ದೂರವಿರಿಸಿ. ಅವುಗಳ ಬಳಕೆಯಿಂದ ಮೆದುಳು ಉತ್ತೇಜಿತಗೊಂಡು, ನಿದ್ದೆ ದೂರವಾಗುತ್ತದೆ. ಈ ಎಲ್ಲ ಸೂತ್ರಗಳನ್ನು ಪಾಲಿಸಿದ ಮೇಲೂ ಸಹ ನಿದ್ರಾಹೀನತೆ ಕಡಿಮೆಯಾಗದಿದ್ದರೆ ವೈದ್ಯರನ್ನು ಕಾಣಿ.

ಜರ್ಮನಿಯ ಬಾಡ್ ಎಂಬ ನಗರವು ನಿದ್ದೆಗೆ ಪ್ರಸಿದ್ಧವಾದ ನಗರ. ಅಲ್ಲಿ ಅನೇಕ ಸ್ಪಾ ಹಾಗೂ ವಿಶ್ರಾಂತಿಗೃಹಗಳು ಜನರನ್ನು ನಿದ್ದೆ ಹೋಗಲು ಸಹಾಯ ಮಾಡುತ್ತವೆ. ಈ ನಗರದಲ್ಲಿ ವಿಶ್ವದ ಎಲ್ಲೆಡೆಯಿಂದ ಜನ, ನಿದ್ದೆ ಹೋಗುವುದಕ್ಕಾಗಿಯೇ ಬರುತ್ತಾರೆ. ಅಲ್ಲಿನ ಸರ್ಕಾರವು ಬಾಡ್ ನಗರವನ್ನು, ನಿದ್ರಾ ಪ್ರವಾಸೋದ್ಯಮದ ಕೇಂದ್ರವೆಂದು ಸಾರಿಬಿಟ್ಟಿದೆ. ಎಂತಹ ವಿಡಂಬನೆಯಲ್ಲವೇ? ನೈಸರ್ಗಿಕವಾಗಿ ಮಾಡಬೇಕಾದಂತಹ ಕೆಲಸಕ್ಕೆ, ನಾವುಗಳು ದುಡ್ಡು ಕೊಟ್ಟು, ಪಡೆದುಕೊಳ್ಳಬೇಕಾದ ಸನ್ನಿವೇಶ ಎದುರಾಗಿದೆ. ಇದು ನಾವು ತಂದುಕೊಂಡಂತಹ ವಿಕೃತ ಪರಿಸ್ಥಿತಿ. ಇಂದು, ಆಹಾರ, ನೀರು ಹಾಗೂ ಶುದ್ಧ ಗಾಳಿಗೆ ಹೇಗೆ ನಾವು ಹಾತೊರೆಯುತ್ತಿದ್ದೇವೋ, ಅದರಂತೆ ನಿದ್ದೆಗೆ ಹಾತೊರೆಯುವ ಸಮಯವೇನು ದೂರವಿಲ್ಲ. ಹೀಗಾಗುವ ಮೊದಲು ನಾವು ಎಚ್ಚೆತ್ತುಕೊಂಡು, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕಿದೆ.

**

ನಿದ್ರಾಹೀನತೆಗೆ ಕಾರಣಗಳು

* ಅತಿಯಾದ ಒತ್ತಡ ಹಾಗೂ ಒತ್ತಡವನ್ನು ಆರೋಗ್ಯಕರವಾಗಿ ನಿರ್ವಹಣೆ ಮಾಡದಿರುವುದು.

* ದುಶ್ಚಟಗಳು. ಮದ್ಯಪಾನ, ದೂಮಪಾನ ಇತ್ಯಾದಿ

* ಬೊಜ್ಜು 

* ಮನೋರೋಗಗಳು

* ರಾತ್ರಿ ಪಾಳಿ

* ಖಂಡಾಂತರ ಪ್ರಯಾಣ (jet lag)

* ಅತಿಯಾದ ವಿದ್ಯುನ್ಮಾನ ಯಂತ್ರಗಳ ಬಳಕೆ (ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ ಟಾಪ್ ಇತ್ಯಾದಿ)

* ಅತಿಯಾದ ಬೆಳಕು ಹಾಗೂ ಶಬ್ದಮಾಲಿನ್ಯ

ದುಶ್ಪರಿಣಾಮಗಳು:

* ನೆನಪಿನ ಶಕ್ತಿ ಹಾಗೂ ಗ್ರಹಿಕೆಯಲ್ಲಾಗುವ ಏರುಪೇರಿನಿಂದ, ಕಲಿಕೆಯಲ್ಲಿ ಸಮಸ್ಯೆ ಉಂಟಾಗುವುದು.

* ಸಮಯಪ್ರಜ್ಞೆ ಹಾಗೂ ವಿವೇಚನಾಶಕ್ತಿ ಹಾಗೂ ಕೆಲಸದ ಸಾಮರ್ಥ್ಯ ಕುಂದುವುದು. ಇದರಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದುಳಿಯಬಹುದು. ಕೆಲವೊಮ್ಮೆ ಅಪಘಾತಗಳೂ ಸಂಭವಿಸಬಹುದು.

* ಬೊಜ್ಜು, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು.

* ಮನೋರೋಗಗಳು - ಖಿನ್ನತೆ, ಒತ್ತಡ.

* ಡೆಮೆನ್ಶಿಯ ಅಥವಾ ತೀವ್ರವಾದ ಮರೆಗುಳಿತನ ಉಂಟಾಗಬಹುದು.

**

ಆರೋಗ್ಯಕರ ನಿದ್ದೆಗೆ...

ಪ್ರತಿಯೊಬ್ಬ ಮನುಷ್ಯನ ನಿದ್ದೆಯ ಅವಶ್ಯಕತೆ ಬೇರೆ ಬೇರೆ ರೀತಿಯಾಗಿರುತ್ತದೆ. ಚಿಕ್ಕ ಮಕ್ಕಳಲ್ಲಿ ನಿದ್ದೆಯ ಅವಶ್ಯಕತೆಹೆಚ್ಚಾಗಿದ್ದು, ವಯಸ್ಸಿಗನುಗುಣವಾಗಿ ಕ್ರಮೇಣ ಅದು ಕಡಿಮೆಯಾಗುತ್ತ ಹೋಗುತ್ತದೆ. ವಯಸ್ಕರಿಗೆ, ದಿನಕ್ಕೆ 6–8ಗಂ. ರಾತ್ರಿ ನಿದ್ದೆಯ ಅವಶ್ಯಕತೆಯಿರುತ್ತದೆ. ಆದರೆ ಕೆಲವೊಬ್ಬರು ಇದಕ್ಕಿಂತ ಕಡಿಮೆ ಅಥವಾ ಜಾಸ್ತಿ ನಿದ್ದೆ ಮಾಡಿಯೂ ಸಹ ಚೈತನ್ಯಯುತವಾಗಿ ಜೀವನ ನಡೆಸುತ್ತಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry