ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆಯ ಅಪಾಯದ ಸುಳಿ

Last Updated 1 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಅಯ್ಯೋ! ದಿನಾ ಸಾಯೋರಿಗೆ ಅಳೋರು ಯಾರು?’

ತೀವ್ರ ಅಪೌಷ್ಟಿಕತೆಯ ಕಾರಣಕ್ಕೆ ಸಾವಿನ ನಿರೀಕ್ಷೆಯಲ್ಲಿರುವ ಮಕ್ಕಳ ಪಾಲಕರ ಪೈಕಿ ಕೆಲವರಾದರೂ ಇಂತಹ ನಿರ್ದಯೀ ಮನಸ್ಥಿತಿಗೆ ಬಂದು ಬಿಟ್ಟಂತಿದೆ. ಹೆತ್ತ ಕಂದಮ್ಮಗಳನ್ನು ಉಳಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿ ಅವರನ್ನು ಕಠೋರ ಹೃದಯಿಗಳನ್ನಾಗಿ ಬದಲಾಯಿಸಿಬಿಟ್ಟಿದೆ.

ಯಾದಗಿರಿ ತಾಲ್ಲೂಕಿನ ಆ ಮಗುವಿಗೆ ಈಗ ಇಪ್ಪತ್ತು ತಿಂಗಳು. ವಯಸ್ಸಿಗೆ ತಕ್ಕ ತೂಕವಿಲ್ಲ. ನಿಲ್ಲಲು ಶಕ್ತಿಯಿಲ್ಲ. ಚಟುವಟಿಕೆಯಂತೂ ಇಲ್ಲವೇ ಇಲ್ಲ. ಆ ಮಗುವಿಗೆ ಕೂಡಲೇ ತುರ್ತು ಚಿಕಿತ್ಸೆ ಕೊಡಬೇಕು ಎಂದು ವೈದ್ಯರು ಶಿಫಾರಸು ಮಾಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಉಚಿತವಾಗಿದ್ದರೂ ಆ ಮಗುವನ್ನು ಕರೆದುಕೊಂಡು ಹೋಗಲು ಪಾಲಕರು ಸಿದ್ಧರಿಲ್ಲ.

‘ಡಾಕ್ಟ್ರು ಹೇಳ್ಯಾರ. ಆದ್ರ ನಾವ್ ಅಲ್ಲಿಗೆ ಹೋಗಿ ಬರ್ಲಿಕ್ಕ ಬಾಳ ತ್ರಾಸ ಆಗ್ತದ. ನಾವ್‌ ಅಲ್ಲಿಗೆ ಹೋದ್ರ ಹಳ್ಯಾಗೆ ನೋಡಿಕೊಳ್ಳೊರು ಯಾರು? ಅಷ್ಟು ದುಡ್ಡು ಎಲ್ಲಿಂದ ತರೋದ್ರಿ? ದೇವರ ಇಟ್ಟಂಗ ಆಗ್ತದ’ ಎಂದು ಆ ಮಗುವಿನ ತಾಯಿ ನಿಟ್ಟುಸಿರುಬಿಡುತ್ತಾರೆ.

ಇದು ಒಂದು ಮಗು, ತಾಯಿಯ ಕಥೆಯಲ್ಲ. ರಾಜ್ಯದ ಸಾವಿರಾರು ಮಕ್ಕಳ ಪಾಲಕರು ಎದುರಿಸುತ್ತಿರುವ ವಸ್ತುಸ್ಥಿತಿ. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ (ಸ್ಯಾಮ್‌) ತುರ್ತು ಚಿಕಿತ್ಸೆ ಕೊಡಲು ಜಿಲ್ಲಾಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ಪುನರ್‌ವಸತಿ ಕೇಂದ್ರಗಳನ್ನು (ಎನ್‌ಆರ್‌ಸಿ) ತೆರೆಯಲಾಗಿದೆ. ಪ್ರತಿ ಕೇಂದ್ರದಲ್ಲಿ 20 ಹಾಸಿಗೆಗಳಿದ್ದರೂ ಅಲ್ಲಿಗೆ ದಾಖಲಾಗುವವರು ಏಳರಿಂದ ಎಂಟು ಮಕ್ಕಳು ಮಾತ್ರ. ಹಾಗೆಂದಾಕ್ಷಣ ‘ಸ್ಯಾಮ್‌’ ಮಕ್ಕಳ ಸಂಖ್ಯೆ ಅಷ್ಟೇ ಎಂದುಕೊಳ್ಳಬೇಡಿ. ಪ್ರತಿ ಜಿಲ್ಲೆಯಲ್ಲೂ ಅವರ ಸಂಖ್ಯೆ ನೂರಾರು ಇದೆ.

ಮಗುವನ್ನು ಚಿಕಿತ್ಸೆಗೆ ಕರೆದುಕೊಂಡು ಹೋದರೆ ದಿನದ ಕೂಲಿ ಕಳೆದುಕೊಳ್ಳುವ ಚಿಂತೆ, ಇತರ ಮಕ್ಕಳನ್ನು ನೋಡಿಕೊಳ್ಳುವ ಹೊಣೆಗಾರಿಕೆ, ಹಳ್ಳಿಯಿಂದ ದೂರದ ಜಿಲ್ಲಾ ಕೇಂದ್ರಕ್ಕೆ ಹೋಗಿಬರಲು ಮಾಡಬೇಕಾದ ವೆಚ್ಚ– ಈ ಎಲ್ಲವನ್ನೂ ನೆನೆದೇ ಗಾಬರಿಗೊಳ್ಳುವ ಅನೇಕ ಪಾಲಕರು ದೇವರ ಮೇಲೆ ಭಾರ ಹಾಕಿಬಿಡುತ್ತಾರೆ. ಅಗತ್ಯ ಚಿಕಿತ್ಸೆ ದೊರಕದ ಮಗು ಕ್ರಮೇಣ ಸಾವನ್ನಪ್ಪುತ್ತದೆ.

ರಾಯಚೂರಿನಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣಾ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಹಫೀಜ್‌ ಉಲ್ಲಾ, ‘ಹೇಗೋ ಏನೋ ಕಷ್ಟಪಟ್ಟು ಎನ್‌ಆರ್‌ಸಿಗಳಿಗೆ ಮಕ್ಕಳೊಂದಿಗೆ ಬರುವ ತಾಯಂದಿರಲ್ಲಿ ವಿಶ್ವಾಸ ತುಂಬುವ ಕೆಲಸ ಆಗುತ್ತಿಲ್ಲ. ತಾಯಂದಿರನ್ನು ವೈದ್ಯರು ಮಾತನಾಡಿಸುವುದೂ ಇಲ್ಲ. ಹೀಗಾಗಿ ಮಹಿಳೆಯರು ಬರಲು ಹಿಂಜರಿಯುತ್ತಾರೆ’ ಎಂದು ಸಮಸ್ಯೆಯ ಇನ್ನೊಂದು ಮಗ್ಗುಲನ್ನು ಪರಿಚಯಿಸುತ್ತಾರೆ.

‘ತುರ್ತು ಚಿಕಿತ್ಸೆಯ ಅಗತ್ಯವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಯಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ಮಟ್ಟದಲ್ಲೇ ಪಾಲಕರಿಗೆ ಸಮಸ್ಯೆಯ ತೀವ್ರತೆಯನ್ನು ತಿಳಿಸಿಕೊಡಬೇಕು. ಅದಕ್ಕಾಗಿ ಆಪ್ತ ಸಮಾಲೋಚನಾ ವ್ಯವಸ್ಥೆಯನ್ನು ಪ್ರಾರಂಭಿಸಬೇಕು. ಪಿಎಚ್‌ಸಿಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ವೈದ್ಯರು ಇರುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ.

ಆರೋಗ್ಯ ಇಲಾಖೆ ಪ್ರಕಾರ ರಾಜ್ಯದಲ್ಲಿ  2017ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 6,500 ನವಜಾತ ಶಿಶುಗಳು ಮರಣವನ್ನಪ್ಪಿವೆ. ಹಿಂದಿನ ವರ್ಷಗಳಲ್ಲಿ ವಾರ್ಷಿಕ ಸರಾಸರಿ 12 ಸಾವಿರ ಶಿಶುಗಳು ಮೃತಪಟ್ಟಿವೆ. ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಂಖ್ಯೆಯ ಶಿಶುಗಳು ಕಡಿಮೆ ತೂಕ, ಅವಧಿಪೂರ್ವ ಜನನ, ಭೇದಿ– ಇವೇ ಮೊದಲಾದ ಕಾರಣಗಳಿಂದ ಅಸುನೀಗಿವೆ. ಈ ಕಾರಣಗಳಿಗೂ ಅಪೌಷ್ಟಿಕತೆಗೂ ಅವಿನಾಭಾವ ಸಂಬಂಧ ಇದೆ.

‘ಅಪೌಷ್ಟಿಕತೆಯಿಂದ ಇಷ್ಟೊಂದು ಸಂಖ್ಯೆಯ ಸಾವು ಸಂಭವಿಸುತ್ತಿದೆ ಎಂದು ಹುಯಿಲೆಬ್ಬಿಸಬೇಡಿ. ಶಿಶುಗಳ ಮರಣಕ್ಕೆ ಬೇರೆ ಬೇರೆ ಕಾರಣಗಳೇ ಇವೆ. ಆಫ್ರಿಕಾದ ಇಥಿಯೋಪಿಯಾ, ಸೊಮಾಲಿಯಾಗಳಂತೆ ಕರ್ನಾಟಕದಲ್ಲಿ ಹಸಿವಿನಿಂದ ಸಾವುಗಳಾಗುತ್ತಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಾದಿಸುತ್ತಾರೆ. ಈ ವಾದವನ್ನು ತಿರಸ್ಕರಿಸುವ ಮಕ್ಕಳ ಹಕ್ಕು ಹೋರಾಟಗಾರರು ‘ಮೇಲ್ನೋಟಕ್ಕೆ ರಾಜ್ಯದ ಸ್ಥಿತಿ ಆಫ್ರಿಕಾ ದೇಶಗಳಂತೆ ಇಲ್ಲದಿರಬಹುದು. ಆದರೆ ಇಲಾಖೆಯ ಅಂಕಿ ಅಂಶಗಳೇ ಕರ್ನಾಟಕ ಎಂತಹ ಅಪಾಯದ ಸುಳಿಯಲ್ಲಿ ಸಿಲುಕಿದೆ ಎಂಬುದನ್ನು ನಿರೂಪಿಸುತ್ತವೆ’ ಎಂದು ಹೇಳುತ್ತಾರೆ.

ತಿನ್ನುವ ಆಹಾರದಲ್ಲಿ ಪೋಷಕಾಂಶಗಳು, ವಿಟಮಿನ್‌ಗಳು, ಖನಿಜಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಇರದಿದ್ದರೆ ಅದನ್ನು ಸಾಮಾನ್ಯವಾಗಿ ಅಪೌಷ್ಟಿಕತೆ ಎಂದು ಕರೆಯಲಾಗುತ್ತದೆ. ಇದು ಬಹಳ ಸರಳವಾದ ವಿವರಣೆಯಾಯಿತು. ವಿಶ್ವಸಂಸ್ಥೆಯ ವ್ಯಾಖ್ಯಾನದ ಪ್ರಕಾರ ಅಪೌಷ್ಟಿಕತೆ ಎಂಬುದು ಆಹಾರಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ; ಅದೊಂದು ಸಂಕೀರ್ಣ ಸಮಸ್ಯೆ.

ಬಡತನದಂತಹ ಆರ್ಥಿಕ ಆಯಾಮದ ಜತೆಗೆ ಜಾತಿ ಪದ್ಧತಿ, ಕಂದಾಚಾರ, ಲಿಂಗ ತಾರತಮ್ಯದಂತಹ ಸಾಮಾಜಿಕ ಮುಖವೂ ಅದಕ್ಕಿದೆ. ಬುಡಕಟ್ಟು ಸಮುದಾಯಗಳು, ಪರಿಶಿಷ್ಟ ಜಾತಿ, ಮುಸ್ಲಿಂ ಸಮುದಾಯಗಳಲ್ಲಿ ಅಪೌಷ್ಟಿಕ ಮಕ್ಕಳ ಸಮಸ್ಯೆ ತೀವ್ರ ಸ್ವರೂಪದಲ್ಲಿರುವುದು ಸಾಮಾಜಿಕ ವ್ಯವಸ್ಥೆಯಲ್ಲಿನ ಅಸಮಾನತೆಗೆ ಕನ್ನಡಿ ಹಿಡಿಯುತ್ತದೆ. 2000ದ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯು ತೀವ್ರ ಹಸಿವು ಮತ್ತು ಬಡತನ ನಿವಾರಣೆ, ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ, ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು, ಗರ್ಭಿಣಿಯರ ಆರೋಗ್ಯ ಸುಧಾರಣೆ ಒಳಗೊಂಡಂತೆ ಎಂಟು ‘ಮಿಲೇನಿಯಂ ಅಭಿವೃದ್ಧಿ ಗುರಿ’ಗಳನ್ನು ಘೋಷಿಸಿತು. ಈ ಎಲ್ಲ ಗುರಿಗಳು ಒಂದಕ್ಕೊಂದು ಪೂರಕ ಎಂಬುದನ್ನು ಒತ್ತಿ ಹೇಳಿತು.

ವಿಶ್ವ ಸಂಸ್ಥೆಯ ಮಕ್ಕಳ ನಿಧಿಯಲ್ಲಿ (ಯೂನಿಸೆಫ್‌) ಕಾರ್ಯಕ್ರಮ ಯೋಜನಾ ಅಧಿಕಾರಿಯಾಗಿ ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿರುವ ಡಾ.ಆರ್‌.ಪದ್ಮಿನಿ, ‘ಮಕ್ಕಳು ಹಸಿವಿನಿಂದ ಸತ್ತಿಲ್ಲ ಎನ್ನುತ್ತಾರೆ. ಅಪೌಷ್ಟಿಕ ಸಮಸ್ಯೆಯಿಂದ ಬಳಲುವ ಮಗು ರೋಗನಿರೋಧಕ ಶಕ್ತಿ ಕಳೆದುಕೊಂಡಿರುತ್ತದೆ. ಅದು ಸಾಧಾರಣ ಜ್ವರ ಬಂದರೂ ತಡೆದುಕೊಳ್ಳಲಾಗದೆ ಮರಣಮುಖಿಯಾಗಿಬಿಡುತ್ತದೆ’ ಎಂದು ತಿಳಿಸುತ್ತಾರೆ.

‘ಲಿಂಗ ತಾರತಮ್ಯದ ಕಾರಣದಿಂದಲೂ ಹೆಣ್ಣು ಮಕ್ಕಳಿಗೆ ಸರಿಯಾಗಿ ಆಹಾರ ಸಿಗುವುದಿಲ್ಲ. ಬಾಲ್ಯ ವಿವಾಹದ ಕಾರಣ ಬೇಗ ಗರ್ಭ ಧರಿಸುವುದರಿಂದಲೂ ಹೆಣ್ಣು ಮಕ್ಕಳು ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ರಕ್ತಸಂಬಂಧದಲ್ಲಿ ಮದುವೆ ಆಗುವುದರಿಂದಲೂ ಸಮಸ್ಯಾತ್ಮಕ ಮಕ್ಕಳು ಹುಟ್ಟುವ ಸಾಧ್ಯತೆ ಇದೆ. ಬಯಲು ಶೌಚದಿಂದಲೂ ಮಕ್ಕಳು, ತಾಯಂದಿರು ಅಪೌಷ್ಟಿಕತೆಯ ಸಮಸ್ಯೆಗೆ ಗುರಿಯಾಗುತ್ತಾರೆ’ ಎಂದು ಅವರು ವಿವರಿಸುತ್ತಾರೆ.

ಮೌಢ್ಯ, ಅಜ್ಞಾನದ ಕಾರಣದಿಂದಲೂ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು ಬಲಿಯಾಗುತ್ತಿದ್ದಾರೆ. ಮಗುವಿನ ಬೆಳವಣಿಗೆ ಸರಿಯಾಗಿ ಆಗದೇ ಇದ್ದಾಗ ಗ್ರಾಮೀಣ ಭಾಗದ ಬಹುತೇಕ ಪಾಲಕರು ಮಾಟ, ಮಂತ್ರದ ಮೊರೆ ಹೋಗುವ ಸ್ಥಿತಿ ಇದೆ. ದೇವರಿಗೆ ಹರಕೆ ಕಟ್ಟಿಕೊಳ್ಳುವುದು, ಗಿಡಗಳಿಗೆ ತಾಯತ ಕಟ್ಟುವುದು– ಇದೆಲ್ಲವನ್ನೂ ಮಾಡಿ ಪರಿಸ್ಥಿತಿ ವಿಪರೀತಕ್ಕೆ ಹೋದಾಗ ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಾರೆ.

ರಾಯಚೂರು ಜಿಲ್ಲೆಯ ದೇವದುರ್ಗದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಹಿಂದೆ ಅಪೌಷ್ಟಿಕ ಮಕ್ಕಳ ಶಿಬಿರ ನಡೆಯಿತು. ಅಲ್ಲಿಗೆ ಕರೆತಂದಿದ್ದ ಮಗುವಿಗೆ ಈಗಷ್ಟೇ ವರ್ಷ ತುಂಬಿದೆ. ಹಾಲುಗಲ್ಲದ ಬದಲು ಸುಕ್ಕುಗಳು ಆ ಕಂದಮ್ಮನ ಮುಖವನ್ನು ಆವರಿಸಿಕೊಂಡಿವೆ. ಅದರ ವಯಸ್ಸಿಗೆ ಕನಿಷ್ಠ 9 ಕಿಲೋ ಗ್ರಾಂ (ಕೆ.ಜಿ) ತೂಕ ಹೊಂದಿರಬೇಕಾಗಿತ್ತು. ಆದರೆ ಆ ಮಗುವಿನ ತೂಕ ಕೇವಲ 3 ಕೆ.ಜಿ. ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿರುವ ಆ ಮಗುವಿಗೆ ತುರ್ತು ಚಿಕಿತ್ಸೆ ಕೊಡಿಸಬೇಕೆಂದು ವೈದ್ಯರು ಹೇಳಿದ್ದಾರೆ. ಮಗುವಿನ ಪಾಲಕರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಲೇ ಇಲ್ಲ.

‘ವರ್ಷದಿಂದ ತೋರಿಸ್ತ ಅದೀವಿ. ಉಪಯೋಗ ಆಗ್ತಿಲ್ಲರಿ. ಡಾಕ್ಟ್ರು ಏನೇನೊ ಹೇಳ್ತಾರ. ನಾನು ಪ್ರೆಗ್ನೆಂಟ್‌ ಇದ್ದಾಗ ಆಕಳಿಗೆ ಮೇವು ಹಾಕ್ಲಿಕ್ಕ ಹೋಗಿದ್ದೇರಿ. ಆಗ ನಂಜುಳ (ವಿಷದ ಹುಳ) ಕಡಿದ್ ಬಿಡ್ತಿರಿ. ಅದಕ ಹೀಗಾಗದರೀ’ ಎಂದು ಮಗುವಿನ ತಾಯಿ ಮುಗ್ಧವಾಗಿ ನುಡಿಯುತ್ತಾರೆ.

‘ಈ ಜನರೇ ಹೀಗೆ. ಮಾಲ್‌ನ್ಯೂಟ್ರಿಷನ್‌ ಬಗ್ಗೆ ನಾವೆಷ್ಟು ಹೇಳಿದರೂ ಅವರಿಗೆ ಅರ್ಥವಾಗಲ್ಲ. ಹೀಗೆ ಏನೇನೋ ಕಾರಣ ಹೇಳ್ತಿರ್ತಾರೆ’ ಎಂದು ಶ್ರುತಿ ಸಂಸ್ಕೃತಿ ಸಂಸ್ಥೆಯ ತಾಲ್ಲೂಕು ಸಂಯೋಜಕರಾದ ಮಲ್ಲೇಶ್‌, ರಾಮಣ್ಣ ನಗುತ್ತಲೇ ಹೇಳಿದರು. ಈ ಸಂಸ್ಥೆಯು ರಾಯಚೂರು ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಅಪೌಷ್ಟಿಕತೆ ನಿವಾರಣೆ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ.

ಸಮಸ್ಯೆ ಮೊದಲಿನಿಂದಲೂ ಇದೆ. 2011ರಲ್ಲಿ ರಾಯಚೂರು ಭಾಗದಲ್ಲಿ ಸಂಭವಿಸಿದ ಮಕ್ಕಳ ಸರಣಿ ಸಾವು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಆಗ ಬೆಳಗಾವಿ ಜಿಲ್ಲೆಯ ಅಥಣಿಯ ವಿಮೋಚನಾ ಸಂಘದ ಅಧ್ಯಕ್ಷರು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದರು. ಆ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಎಂದು ಪರಿಗಣಿಸಿದ ಹೈಕೋರ್ಟ್‌, ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸತ್ಯ ಶೋಧನಾ ವರದಿಯನ್ನು ತರಿಸಿಕೊಂಡಿತು.

ಆ ವರದಿ ಆಧಾರದ ಮೇಲೆ ನ್ಯಾಯಮೂರ್ತಿ ಎನ್‌.ಕೆ. ಪಾಟೀಲ್‌ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ಆ ಸಮಿತಿಯು ರಾಜ್ಯದಲ್ಲಿ ಮಕ್ಕಳ ಅಪೌಷ್ಟಿಕತೆಯನ್ನು ತಡೆಯುವ ಸಂಬಂಧ ಸಮಗ್ರ ಕ್ರಿಯಾ ಯೋಜನೆಯ ವರದಿಯನ್ನು ತಯಾರಿಸಿ ಕೋರ್ಟ್‌ಗೆ ಸಲ್ಲಿಸಿತು. ಆ ವರದಿಯ ಶಿಫಾರಸಿನ ಮೇರೆಗೆ ಶಿಶುಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸುಧಾರಣೆಗಳು ಕಂಡು ಬಂದವು ಎಂದು ‘ಆಲ್ಟರ್‌ ನೇಟಿವ್‌ ಲಾ ಫೋರಂ’ನ ಸದಸ್ಯ ಟಿ.ವಿ. ನರಸಿಂಹಪ್ಪ ನೆನಪಿಸಿಕೊಳ್ಳುತ್ತಾರೆ.

ಮಕ್ಕಳ ಹಕ್ಕುಗಳ ರಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೇಮಿಸಿರುವ ಆಯುಕ್ತರಿಗೆ ರಾಜ್ಯದಲ್ಲಿ ಸಹಾಯಕ ಸಲಹೆಗಾರರೂ ಆಗಿರುವ ನರಸಿಂಹಪ್ಪ, ‘ಪಾಟೀಲ್‌ ಅವರ ಸಮಿತಿಯ ಬಹುತೇಕ ಶಿಫಾರಸುಗಳು ಇನ್ನೂ ಕಾಗದದ ಮೇಲೆ ಉಳಿದಿವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ತಪಾಸಣೆಗೆ ಒಳಪಡಿಸಿರುವ ಒಟ್ಟು 39.77 ಲಕ್ಷ ಮಕ್ಕಳ ಪೈಕಿ ಸಾಧಾರಣ ಅಪೌಷ್ಟಿಕ ಸಮಸ್ಯೆಯಿಂದ (ಮ್ಯಾಮ್‌) ಬಳಲುತ್ತಿರುವ ಮಕ್ಕಳ ಸಂಖ್ಯೆ 7.89 ಲಕ್ಷ. ‘ಸ್ಯಾಮ್‌’ ಮಕ್ಕಳ ಸಂಖ್ಯೆ 18,683.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಸಕಾಲದಲ್ಲಿ ಅಗತ್ಯ ಪೌಷ್ಟಿಕ ಆಹಾರ ನೀಡದಿದ್ದರೆ ‘ಮ್ಯಾಮ್‌’ ಮಕ್ಕಳೂ ಅಪಾಯಕ್ಕೆ ಸಿಲುಕುತ್ತಾರೆ. ಹೀಗೆ ಗುರುತಿಸಲಾಗಿರುವ ಮಕ್ಕಳಿಗೆ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌) ಅಡಿಯಲ್ಲಿ ಸರ್ಕಾರ ಮೊಟ್ಟೆ, ಹಾಲು ಮೊದಲಾದ ಪೌಷ್ಟಿಕ ಆಹಾರ ನೀಡುತ್ತಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಜಾರಿಗೊಳಿಸುತ್ತಿರುವ ಈ ಕಾರ್ಯಕ್ರಮದ ಪ್ರಯೋಜನ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ತಲುಪುತ್ತಿಲ್ಲ ಎಂಬ ಬಗ್ಗೆ ದೂರುಗಳಿವೆ.

‘ಅಂಗನವಾಡಿ ಕಾರ್ಯಕರ್ತೆಯರು ಈಸಿ ಟಾರ್ಗೆಟ್‌. ಅವರ ಮೇಲೆ ದೂರುವುದು ಸುಲಭ’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಅಧ್ಯಕ್ಷೆ ವರಲಕ್ಷ್ಮೀ ಹೇಳುತ್ತಾರೆ.

‘ಆರು ವರ್ಷದೊಳಗಿನ ಮಕ್ಕಳನ್ನು ಪಾಲನೆ ಮತ್ತು ಪೋಷಣೆ ಮಾಡುವುದು ಶಿಶು ಅಭಿವೃದ್ಧಿ ಕಾರ್ಯಕ್ರಮದ ಉದ್ದೇಶ. ಅದಕ್ಕಾಗಿ ನೇಮಿಸಿಕೊಳ್ಳಲಾಗುವ ಅಂಗನವಾಡಿ ನೌಕರರನ್ನು ಚುನಾವಣೆ ಕೆಲಸ, ಸ್ತ್ರೀಶಕ್ತಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಕೆಲಸಗಳಿಗೂ ಬಳಸಿಕೊಳ್ಳಲಾಗುತ್ತಿದೆ. ಹತ್ತು ಹಲವು ಜಯಂತಿ ಕಾರ್ಯಕ್ರಮಗಳಿಗೆ ಕಾಯಂ ಸಭಿಕರನ್ನಾಗಿಯೂ ನೌಕರರನ್ನು ಕರೆದೊಯ್ಯಲಾಗುತ್ತಿದೆ. ನಮ್ಮ ಕೆಲಸ ಮಾಡಲು ಬಿಟ್ಟರಲ್ಲವೇ ಅದರಲ್ಲಿ ಪ್ರಗತಿತೋರಿಸುವುದು. ನಂತರ ನಮ್ಮನ್ನೇ ದೂರುವುದು’ ಎಂದು ಅವರು ಮಾರ್ಮಿಕವಾಗಿ ನುಡಿಯುತ್ತಾರೆ.

‘ರಾಜ್ಯದಲ್ಲಿ 61 ಸಾವಿರ ಅಂಗನವಾಡಿ ಕೇಂದ್ರಗಳಿವೆ. 3,351 ಮಿನಿ ಕೇಂದ್ರಗಳಿವೆ. ಎಲ್ಲ ಜಿಲ್ಲೆಗಳಲ್ಲೂ ನೌಕರರ ಕೊರತೆ ಇದೆ. ಅದು ಸಾಲದೆಂಬಂತೆ ನೌಕರರು ಮತ್ತು ಕಾರ್ಯಕ್ರಮದ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳಬೇಕಾದವರ ಸಂಖ್ಯೆ ತುಂಬಾನೆ ಕಡಿಮೆ ಇದೆ. ಮೇಲ್ವಿಚಾರಕರ 650  ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಒಟ್ಟು ಸಂಖ್ಯೆ 2,503. ಶಿಶು ಅಭಿವೃದ್ಧಿ ಕಾರ್ಯಕ್ರಮದ ಅಧಿಕಾರಿಗಳ (ಸಿಡಿಪಿಒ) ಮತ್ತು ಸಹಾಯಕ ಸಿಡಿಪಿಒ ಹುದ್ದೆಗಳು ಅರ್ಧಕ್ಕಿಂತ ಹೆಚ್ಚು ಖಾಲಿ ಇವೆ’ ಎಂದು ಅವರು ವಿವರಿಸುತ್ತಾರೆ.

‘ಬೇಟಿ ಬಚಾವೋ ಬೇಟಿ ಪಢಾವೋ ಎಂದು ಹೆಣ್ಣುಮಕ್ಕಳ ಪರವಾಗಿ ಘೋಷಣೆ ಮೊಳಗಿಸುವ ಕೇಂದ್ರ ಸರ್ಕಾರ, ಶಿಶು ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಅನುದಾನದಲ್ಲಿ ಶೇ 40ರಷ್ಟನ್ನು ಕಡಿತಗೊಳಿಸಿದೆ. ಈ ಕಾರ್ಯಕ್ರಮವನ್ನು ಖಾಸಗೀಕರಣಗೊಳಿಸುವ ಪ್ರಯತ್ನಗಳೂ ನಡೆದಿವೆ’ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಸಾಮಾಜಿಕ ಹೋರಾಟಗಾರ ಅನಂತ್‌ ನಾಯಕ್, ‘ಅಂಗನವಾಡಿಗಳಿಗೆ ಆಹಾರ ಪದಾರ್ಥ ಪೂರೈಕೆಯಲ್ಲಿಯೇ ಅವ್ಯವಹಾರ ನಡೆಯುತ್ತಿದೆ. ಬಹುತೇಕ ಕಡೆ ಸ್ಥಳೀಯ ಶಾಸಕರು ಮತ್ತು ಮುಖಂಡರ ಬೆಂಬಲಿಗರು ಆಹಾರ ಪೂರೈಕೆ ಟೆಂಡರ್‌ ಪಡೆದಿರುತ್ತಾರೆ. ಅವರು ಹೆಚ್ಚು ಲಾಭ ಮಾಡಿಕೊಳ್ಳುವ ಸಲುವಾಗಿ ಕಳಪೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಾರೆ. ಗುಣಮಟ್ಟದ ಆಹಾರ ಪದಾರ್ಥ ಪೂರೈಕೆ ಖಾತರಿ ಮಾಡಲು ತಾಲ್ಲೂಕು ಅಥವಾ ಹೋಬಳಿ ಮಟ್ಟದಲ್ಲಿ ಉಸ್ತುವಾರಿ ಸಮಿತಿಗಳನ್ನು ರಚಿಸಬೇಕು’ ಎಂದು ಒತ್ತಾಯಿಸುತ್ತಾರೆ.

ಗರ್ಭಿಣಿ ಮತ್ತು ಬಾಣಂತಿಯರ ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರ ಇತ್ತೀಚೆಗೆ ಮಾತೃಪೂರ್ಣ ಯೋಜನೆಯನ್ನು ಜಾರಿಗೆ ತಂದಿದೆ. ಅಂಗನವಾಡಿ ಕೇಂದ್ರಗಳಲ್ಲಿಯೇ ಮಧ್ಯಾಹ್ನದ ವೇಳೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಕಬ್ಬಿಣಾಂಶದ ಮಾತ್ರೆ ಜತೆಗೆ ಪೌಷ್ಟಿಕ ಊಟ ನೀಡುವ ಈ ಯೋಜನೆಯು ಇನ್ನೂ ಆರಂಭಿಕ ಅಡೆತಡೆಗಳಿಂದ ಹೊರಬಂದಂತಿಲ್ಲ. ಮೂಲ ಸೌಕರ್ಯ ಕೊರತೆ ನೀಗಿಸದೇ ಮತ್ತು ಹೆಚ್ಚುವರಿ ಅನುದಾನ ಕೊಡದೇ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅಂಗನವಾಡಿ ನೌಕರರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಯೋಜನೆ ಒಳ್ಳೆದದ. ಆದರ ಸೌಕರ್ಯ ಇಲ್ಲ. ಯೋಜನೆ ಜಾರಿ ಆಗಿ ಎರಡು ತಿಂಗಳಾದರೂ ಪಾತ್ರೆ, ಸಿಲಿಂಡರ್‌ ಖರೀದಿಗೆ ಗುಲ್ಬರ್ಗ ಜಿಲ್ಲೇಲಿ ಟೆಂಡರ್ ಕರೆದಿಲ್ಲ. ಇನ್ನೊಂದ್‌ ಕಡೆ ಒಂದ್‌ ಊರಲ್ಲಿ ಹತ್‌ ಮಂದಿ ಗರ್ಭಿಣಿಯರಿದ್ದರೆ ನಾಲ್ಕ್ ಮಂದಿ ಕೂಡ ಊಟಕ್ಕೆ ಬರಲ್ಲರಿ’ ಎಂದು ಅಂಗನವಾಡಿ ನೌಕರರ ಸಂಘದ ಕಾರ್ಯಾಧ್ಯಕ್ಷೆ ಶಾಂತಾ ಎನ್.ಗಂಟೆ ಹೇಳುತ್ತಾರೆ.

ಈ ಎಡರು ತೊಡರುಗಳನ್ನು ಗಮನಿಸಿದಾಗ ರಾಜ್ಯದಲ್ಲಿ ಅಪೌಷ್ಟಿಕತೆ ಸಮಸ್ಯೆ ನಿವಾರಣೆ ಪ್ರಯತ್ನಗಳು ಫಲವನ್ನೇ ನೀಡಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅಧ್ಯಯನದ ಪ್ರಕಾರ ಅಪೌಷ್ಟಿಕತೆಯ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಮೇಲ್ನೋಟಕ್ಕೆ ಸಮಸ್ಯೆಯ ತೀವ್ರತೆಯನ್ನು ಸರ್ಕಾರ ಮನಗಂಡಿರುವಂತೆ ಕಾಣುತ್ತದೆ. ಅದು ಜಾರಿಗೊಳಿಸಿರುವ ವಿವಿಧ ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿ. ರಾಯಚೂರಿನ ಹಫೀಜ್‌ ಉಲ್ಲಾ, ‘ಯೋಜನೆಗಳು ಚೆನ್ನಾಗಿಯೇ ಇವೆ. ಅವುಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ನಿರಂತರ ನಿಗಾ ವಹಿಸುವ ಕೆಲಸ ಆಗಬೇಕಿದೆ. ಅದಕ್ಕಾಗಿ ಸಮುದಾಯದ ಸಕ್ರಿಯ ಸಹಕಾರ ಮತ್ತು ಸಹಭಾಗಿತ್ವ ಅತ್ಯವಶ್ಯ’ ಎನ್ನುತ್ತಾರೆ.
*
ಸಮಸ್ಯೆ ಕಳವಳಕಾರಿ
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು, ‘ಪಬ್ಲಿಕ್‌ ಹೆಲ್ತ್‌ ಫೌಂಡೇಷನ್‌ ಆಫ್‌ ಇಂಡಿಯಾ’ ಮತ್ತು ‘ಇನ್‌ಸ್ಟಿಟ್ಯೂಟ್‌ ಫಾರ್‌ ಹೆಲ್ತ್‌ ಮಾಟ್ರಿಕ್ಸ್‌ ಮತ್ತು ಇವಾಲ್ಯುವೇಷನ್‌’ ಸಂಸ್ಥೆಗಳು ರಾಜ್ಯಗಳ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಇತ್ತೀಚೆಗೆ ಜಂಟಿಯಾಗಿ ರಾಷ್ಟ್ರ ಮಟ್ಟದ ಅಧ್ಯಯನ ನಡೆಸಿ ‘ಇಂಡಿಯಾ ಹೆಲ್ತ್‌ ಆಫ್‌ ದಿ ನೇಷನ್ಸ್‌ ಸ್ಟೇಟ್ಸ್‌’ ಎಂಬ ವರದಿಯನ್ನು ಸಲ್ಲಿಸಿದೆ. 1990–2016ರ ನಡುವಣ 26 ವರ್ಷಗಳ ಅವಧಿ

ಯನ್ನು ಆಧಾರವಾಗಿಟ್ಟು ಈ ಅಧ್ಯಯನ ನಡೆಸಲಾಗಿದೆ. ರಾಜ್ಯದಲ್ಲಿ 1990ರಲ್ಲಿ ಶೇ 34.3ರಷ್ಟಿದ್ದ ಅಪೌಷ್ಟಿಕ ಮಕ್ಕಳ ಪ್ರಮಾಣ 2016ರ ವೇಳೆಗೆ ಶೇ 10.7ಕ್ಕೆ ಇಳಿದಿದೆ. ಆದರೆ ಇದಕ್ಕೆ ಸಮಾಧಾನಪಟ್ಟುಕೊಳ್ಳುವಂತಿಲ್ಲ. ದಕ್ಷಿಣ ಭಾರತದ ಇತರ ರಾಜ್ಯಗಳೊಂದಿಗೆ ಹೋಲಿಕೆ ಮಾಡಿದಾಗ ಕರ್ನಾಟಕದಲ್ಲಿನ ಅಪೌಷ್ಟಿಕತೆಯ ಸಮಸ್ಯೆ ಕಳವಳಕಾರಿ ಮಟ್ಟದಲ್ಲೇ ಇದೆ. ಕೇರಳದಲ್ಲಿ ಶೇ 4.4, ತಮಿಳುನಾಡಿನಲ್ಲಿ ಶೇ 8, ಗೋವಾದಲ್ಲಿ ಶೇ 7.3ರಷ್ಟು ಮಕ್ಕಳು ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲೂ ಕರ್ನಾಟಕಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಅಪೌಷ್ಟಿಕ ಮಕ್ಕಳಿದ್ದಾರೆ.

ದೇಶದಲ್ಲಿ ಆರು ರಾಜ್ಯಗಳನ್ನು (ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಪಂಜಾಬ್‌ ಮತ್ತು ಪಶ್ಚಿಮ ಬಂಗಾಳ) ಬಿಟ್ಟರೆ ಉಳಿದ ಎಲ್ಲ ರಾಜ್ಯಗಳಲ್ಲೂ ಪ್ರಾಣಕ್ಕೆ ಕುತ್ತು ತರುವ ಮತ್ತು ಅಂಗವೈಕಲ್ಯಕ್ಕೆ ಕಾರಣವಾಗುವ ಅಪಾಯಗಳಲ್ಲಿ ಪೌಷ್ಟಿಕಾಂಶದ ಕೊರತೆಗೇ ಮೊದಲ ಸ್ಥಾನ ಎಂಬುದನ್ನು ವರದಿ ಒತ್ತಿ ಹೇಳಿದೆ.

ಅಧ್ಯಯನದ ತಂಡದ ನಿರ್ದೇಶಕ ಲಲಿತ್‌ ದಂಡೊನಾ, ‘ಕರ್ನಾಟಕ ಬಡ ರಾಜ್ಯವಲ್ಲ. ಹಾಗಿದ್ದರೂ ಈ ರಾಜ್ಯದಲ್ಲೂ ಅಪೌಷ್ಟಿಕತೆ ಸಮಸ್ಯೆಯು ಜೀವಕ್ಕೆ ಎರವಾಗುವ ಅಪಾಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದರೆ ಅಚ್ಚರಿಯಾಗುತ್ತದೆ’ ಎಂದು ಹೇಳಿರುವುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT