ಗುರುವಾರ , ಫೆಬ್ರವರಿ 25, 2021
30 °C

ಸಂಘಟಿತ ಹೋರಾಟವೇ ನಮ್ಮ ಯೋಜನೆ: ಅನುಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಘಟಿತ ಹೋರಾಟವೇ ನಮ್ಮ ಯೋಜನೆ: ಅನುಜಾ

ಹುಬ್ಬಳ್ಳಿ: ‘ಇತ್ತೀಚೆಗೆ ನಡೆದ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಪ್ರತಿ ಪಂದ್ಯದಲ್ಲಿಯೂ ನಮ್ಮ ತಂಡದ ಹಿರಿಯ ಆಟಗಾರ್ತಿಯರು ಸಂಘಟಿತ ಹೋರಾಟ ಮಾಡಿದರು. ಇದರಿಂದಾಗಿ ಫೈನಲ್‌ ಪ್ರವೇಶಿಸಲು ಸಾಧ್ಯವಾಯಿತು. ನಾವು ಕೂಡ ಇದೇ ತಂತ್ರ ಅನುಸರಿಸುತ್ತೇವೆ’ ಎಂದು ಭಾರತ ‘ಎ’ ತಂಡದ ನಾಯಕಿ ಅನುಜಾ ಪಾಟೀಲ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘಟಿತ ಹೋರಾಟ ನಮ್ಮ ತಂಡದ ಪ್ರಮುಖ ಅಸ್ತ್ರವಾಗಬೇಕೆಂದು ಎಲ್ಲಾ ಆಟಗಾರ್ತಿಯರಿಗೆ ಹೇಳಿದ್ದೇನೆ. ಜೂನಿಯರ್‌ ಹಂತದಿಂದಲೇ ಮಹಿಳಾ ಕ್ರಿಕೆಟ್‌ ಅಭಿವೃದ್ಧಿ ಮಾಡಬೇಕು ಎನ್ನುವ ಕಾರಣಕ್ಕೆ ಬಿಸಿಸಿಐ ಟೂರ್ನಿ ಆಯೋಜಿಸಿದೆ. ನಾವು ಈ ಅವಕಾಶ ಬಳಸಿಕೊಳ್ಳುತ್ತೇವೆ’ ಎಂದರು.

ಬಾಂಗ್ಲಾ ಎದುರಿನ ಸರಣಿಗೆ ತಂಡ ಹೇಗೆ ಸಜ್ಜುಗೊಂಡಿದೆ ಎನ್ನುವ ಪ್ರಶ್ನೆಗೆ ‘ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿ ಶಿಬಿರ ಇತ್ತು. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿರುವ ಅನುಭವಿಗಳು ತಂಡದಲ್ಲಿರುವ ಕಾರಣ ನಮ್ಮ ಶಕ್ತಿ ಹೆಚ್ಚಿದೆ. ತಂಡ ಸಮತೋಲನದಿಂದ ಕೂಡಿದೆ. ವಿಶ್ವಕಪ್‌ನಲ್ಲಿ ಭಾರತದ ಆಟವು ಪ್ರೇರಣೆಯಾಗಿದೆ’ ಎಂದು ಹೇಳಿದರು.

ಕೊಲ್ಹಾಪುರದ ಅನುಜಾ 2012ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಒಟ್ಟು 24 ಟಿ–20 ಪಂದ್ಯಗಳನ್ನಾಡಿದ್ದಾರೆ.

‘ಇಲ್ಲಿನ ಪಿಚ್‌ ಸ್ಪರ್ಧಾತ್ಮಕವಾಗಿದೆ ಎಂದು ಎನಿಸುತ್ತದೆ. ಮೊದಲು ಬ್ಯಾಟ್‌ ಮಾಡಿದರೆ 220ಕ್ಕಿಂತಲೂ ಹೆಚ್ಚು ರನ್ ಗಳಿಸುವ ಯೋಜನೆ ಹಾಕಿಕೊಂಡಿದ್ದೇವೆ. ಮಹಿಳಾ ಕ್ರಿಕೆಟ್‌ ಮೊದಲಿಗಿಂತಲೂ ಈಗ ಬೆಳವಣಿಗೆಯಾಗಿದೆ. ಹೆಚ್ಚು ಟೂರ್ನಿಗಳು ನಡೆದರೆ ಜೂನಿಯರ್‌ ಆಟಗಾರ್ತಿಯರಿಗೆ ಖುಷಿಯಾಗುತ್ತದೆ’ ಎಂದು ಅನುಜಾ ಹೇಳಿದರು.

ಬಾಂಗ್ಲಾದೇಶ ಸೀನಿಯರ್ ತಂಡದ ನಾಯಕಿ ಜಹಾನರ ಆಲಮ್‌ ಅವರೇ ‘ಎ’ ತಂಡವನ್ನೂ ಮುನ್ನಡೆಸಲಿದ್ದಾರೆ. ಬಲಗೈ ಬ್ಯಾಟ್ಸ್‌ವುಮನ್‌ ಮತ್ತು ಬಲಗೈ ಮಧ್ಯಮವೇಗದ ಬೌಲರ್‌ ಆಗಿರುವ ಆಲಮ್‌ 2011ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 39 ಏಕದಿನ ಮತ್ತು 33 ಟಿ–20 ಪಂದ್ಯಗಳಲ್ಲಿ ಆಡಿದ್ದಾರೆ.

ಏಕದಿನ ಮತ್ತು ಟಿ–20 ಸರಣಿ ಆಡಲು ಬಂದಿರುವ ಬಾಂಗ್ಲಾ ತಂಡದಲ್ಲಿ ಮುರ್ಷಿದಾ ಕಾತುನ್‌ ಅವರನ್ನು ಹೊರತುಪಡಿಸಿದರೆ ಉಳಿದ 14 ಆಟಗಾರ್ತಿಯರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಅನುಭವಿಗಳಿದ್ದಾರೆ. ಆದ್ದರಿಂದ ಆತಿಥೇಯರಿಗೆ ಪ್ರವಾಸಿ ತಂಡ ಕಠಿಣ ಸವಾಲು ಒಡ್ಡುವ ಸಾಧ್ಯತೆಯಿದೆ.

‘ಸರಣಿ ಆಡಲು ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೇವೆ. ಈ ಅವಕಾಶ ಕೊಟ್ಟ ಬಿಸಿಸಿಐಗೆ ಧನ್ಯವಾದಗಳು. ಯುವ ಆಟಗಾರ್ತಿಯರಿಗೆ ಇದು ಉತ್ತಮ ಅವಕಾಶ’ ಎಂದು ಜಹಾನರ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.