ಮಂಗಳವಾರ, ಮಾರ್ಚ್ 2, 2021
31 °C

ಕ್ರಿಕೆಟ್‌: ಬಾಂಗ್ಲಾದೇಶ ‘ಎ’ ಎದುರು ಮೊದಲ ಮಹಿಳಾ ಏಕದಿನ ಪಂದ್ಯ ಇಂದು

ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

ಕ್ರಿಕೆಟ್‌: ಬಾಂಗ್ಲಾದೇಶ ‘ಎ’ ಎದುರು ಮೊದಲ ಮಹಿಳಾ ಏಕದಿನ ಪಂದ್ಯ ಇಂದು

ಹುಬ್ಬಳ್ಳಿ: ಮಹಿಳಾ ಕ್ರಿಕೆಟ್‌ನ ಶಕ್ತಿ ಹೆಚ್ಚಿಸುವ ಸಲುವಾಗಿ ಆಯೋಜನೆಯಾಗಿರುವ ಭಾರತ ಮತ್ತು ಬಾಂಗ್ಲಾದೇಶ ‘ಎ’ ತಂಡಗಳ ನಡುವಿನ ಏಕದಿನ ಸರಣಿ ಶನಿವಾರ ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯರು ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎರಡು ತಿಂಗಳ ಹಿಂದೆ ಕೆಪಿಎಲ್‌ ಟೂರ್ನಿ ನಡೆದಿತ್ತು. ಈಗ ಮತ್ತೆ ಕ್ರಿಕೆಟ್‌ ಕಲರವ ಶುರುವಾಗಿದೆ. ಎರಡು ದಿನಗಳ ಹಿಂದೆಯೇ ನಗರಕ್ಕೆ ಬಂದಿರುವ ಉಭಯ ತಂಡಗಳ ಆಟಗಾರ್ತಿಯರು ಕಠಿಣ ತಾಲೀಮು ನಡೆಸಿದರು. ಮಹಿಳಾ ತಂಡಗಳ ಟೂರ್ನಿ ಇಲ್ಲಿ ಆಯೋಜನೆಯಾಗಿದ್ದು ಮೊದಲ ಬಾರಿ.

ಒಟ್ಟು ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು, ಎಲ್ಲಾ ಪಂದ್ಯಗಳು ಇಲ್ಲಿನ ರಾಜನಗರದಲ್ಲಿರುವ ಕೆ.ಎಸ್‌ಸಿ.ಎ. ಕ್ರೀಡಾಂಗಣದಲ್ಲಿ ನಡೆಯಲಿವೆ. ಬಳಿಕ ಬೆಳಗಾವಿಯಲ್ಲಿ ಟಿ–20 ಸರಣಿ ಆಯೋಜನೆಯಾಗಿದೆ.

ಉತ್ತಮ ಅವಕಾಶ: 2018ರ ಜನವರಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಅಂತರರಾಷ್ಟ್ರೀಯ ಕ್ರಿಕೆಟ್‌ ಸರಣಿ ನಡೆಯಲಿದೆ. ಆ ಸರಣಿಗೆ ಆತಿಥೇಯ ತಂಡದ ‘ಬೆಂಚ್‌ ಸ್ಟ್ರೆಂಥ್‌’ ಹೆಚ್ಚಿಸುವುದು ಟೂರ್ನಿಯ ಉದ್ದೇಶ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಕಾಯುತ್ತಿರುವ ಭಾರತದ ಕವಿತಾ ಪಾಟೀಲ, ಶಿವಾಂಗಿ ರಾಜ್‌ ಮತ್ತು ಪ್ರಿಯಾಂಕಾ ಪ್ರಿಯದರ್ಶಿನಿ ಅವರಿಗೆ ಈ ಸರಣಿ ಉತ್ತಮ ಅವಕಾಶ. ನಾಯಕಿ ಅನುಜಾ ಪಾಟೀಲ, ಎಸ್‌. ಮೇಘನಾ, ನೇಹಾ ತನ್ವರ್‌, ನುಜಾತ್‌ ಪರ್ವೀನ್‌, ಪ್ರೀತಿ ಭೋಸ್‌, ದೇವಿಕಾ ವೈದ್ಯ, ವಿ.ಆರ್‌. ವನಿತಾ, ನೀನೂ ಚೌಧರಿ, ಮಾನ್ಸಿ ಜೋಶಿ, ಪಿ. ಸುಕನ್ಯಾ, ತಿರುಷ್‌ ಕಾಮಿನಿ ಅವರಿಗೆ ರಾಷ್ಟ್ರೀಯ ತಂಡಕ್ಕೆ ಮರಳಲು ಸರಣಿ ವೇದಿಕೆ ಎನಿಸಿದೆ.

ತಂಡದಲ್ಲಿರುವ ಹಿರಿಯ ಆಟಗಾರ್ತಿ ತಿರುಷ್‌ ಕಾಮಿನಿ ಮೇಲೆ ಹೆಚ್ಚು ಜವಾಬ್ದಾರಿಯಿದೆ. ಇದೇ ವರ್ಷ ಐಸಿಸಿ ವಿಶ್ವಕಪ್‌ ಅರ್ಹತಾ ಟೂರ್ನಿಯ ಐರ್ಲೆಂಡ್‌ ಎದುರಿನ ಪಂದ್ಯದಲ್ಲಿ ಅವರು ಶತಕ ಬಾರಿಸಿದ್ದರು. ಆತಿಥೇಯ ತಂಡದ ಪ್ರಮುಖ ಬ್ಯಾಟಿಂಗ್‌ ಶಕ್ತಿ ಎನಿಸಿರುವುದು ಜೆ. ರೋಡ್ರಿಗಸ್‌.

ಮುಂಬೈನ 19 ವರ್ಷದ ಒಳಗಿನವರ ತಂಡದ ನಾಯಕಿ ರೋಡ್ರಿಗಸ್‌ ಇತ್ತೀಚೆಗೆ ಔರಾಂಗಬಾದ್‌ನಲ್ಲಿ ನಡೆದಿದ್ದ ರಾಷ್ಟ್ರೀಯ  ಟೂರ್ನಿಯ ಸೌರಾಷ್ಟ್ರ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದರು.

ಈ ವಯೋಮಾನದ ಟೂರ್ನಿಯಲ್ಲಿ ದ್ವಿಶತಕ ಬಾರಿಸಿದ ಎರಡನೇ ಆಟಗಾರ್ತಿ ಎನಿಸಿದ್ದರು. ಮೊದಲು ಸ್ಮೃತಿ ಮಂದಾನ ಈ ಸಾಧನೆ ಮಾಡಿದ್ದರು.

ಬಾಂಗ್ಲಾದೇಶ ಸೀನಿಯರ್‌ ತಂಡ 2013ರಲ್ಲಿ ಭಾರತದಲ್ಲಿ ಮೂರು ಟಿಂಟ್ವೆ–20 ಮತ್ತು ಏಕದಿನ ಸರಣಿ ಆಡಿ ಎಲ್ಲಾ ಪಂದ್ಯಗಳಲ್ಲಿ ಸೋತಿತ್ತು.

ಆದರೆ ಈ ಬಾರಿ ‘ಎ’ ಪ್ರವಾಸಿ ತಂಡದ ಆಟಗಾರ್ತಿಯರು ಅಭ್ಯಾಸ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಮಣಿಸಿ ಉತ್ತಮ ಪ್ರದರ್ಶನ ನೀಡಲು ನಾವೂ ಸಾಮರ್ಥರು ಎನ್ನುವ ಸಂದೇಶ ರವಾನಿಸಿದ್ದಾರೆ. ಆದ್ದರಿಂದ ಸರಣಿ ಕುತೂಹಲ ಮೂಡಿಸಿದೆ.

ಪಂದ್ಯ ಆರಂಭ: ಬೆಳಿಗ್ಗೆ 9ಕ್ಕೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.