ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯ ಜಲದಾಹ ನೀಗಿಸಲು ಶರಾವತಿ ನೀರು

ಮಹಾನಗರಕ್ಕೆ ದಿನವೊಂದಕ್ಕೆ ಬೇಕಾಗಲಿದೆ 429 ಕೋಟಿ ಲೀಟರ್‌ ನೀರು
Last Updated 1 ಡಿಸೆಂಬರ್ 2017, 20:28 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಬೆಳೆಯುತ್ತಿದೆ. ಆದರೆ, ಇಲ್ಲಿಗೆ ನೀರು ಪೂರೈಸುವ ಜಲಮೂಲಗಳು ಬರಿದಾಗುತ್ತಿವೆ. ಹಾಗಾಗಿ, ಲಭ್ಯ ಇರುವ ನೀರನ್ನು ಜಾಗರೂಕತೆಯಿಂದ ಬಳಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪರಿಷ್ಕೃತ ನಗರ ಮಹಾಯೋಜನೆ– 2031ರ ಕರಡಿನಲ್ಲಿ ಸ್ಪಷ್ಟಪಡಿಸಲಾಗಿದೆ.

ಜನಸಂಖ್ಯೆ ಹೆಚ್ಚಳದಿಂದ ಹಾಗೂ ನಗರಕ್ಕೆ ಹೊಸ ಪ್ರದೇಶಗಳ ಸೇರ್ಪಡೆಯಿಂದ ನೀರಿನ ಬೇಡಿಕೆ ಮತ್ತಷ್ಟು ಹೆಚ್ಚಲಿದೆ. ಈ ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ಶರಾವತಿ ನೀರನ್ನು ಬಳಸುವ ಪ್ರಸ್ತಾಪವೂ ಇದೆ.

ಲಿಂಗನಮಕ್ಕಿ ಜಲಾಶಯದಲ್ಲಿ ಸರಾಸರಿ 151 ಟಿಎಂಸಿ ಅಡಿ ನೀರಿನ ಸಂಗ್ರಹವಿರುತ್ತದೆ. ನಗರದ ನೀರಿನ ಬೇಡಿಕೆ ಪೂರೈಸಲು ಈ ಜಲಾಶಯದ ನೀರು ಬಳಸಬಹುದು ಎಂದು ಜಲಮಂಡಳಿ ರಚಿಸಿದ್ದ ಬಿ.ಎನ್‌.ತ್ಯಾಗರಾಜ ಸಮಿತಿ ಶಿಫಾರಸು ಮಾಡಿತ್ತು. ಈ ಸಮಿತಿಯ ವರದಿ ಜಾರಿಗೊಳಿಸಬೇಕು ಎಂದು ಸಲಹೆ ನೀಡಲಾಗಿದೆ.

ಕುಡಿಯುವ ನೀರು ಪೂರೈಕೆಗೆ ಹಾಗೂ ಸಂಸ್ಕರಿಸಿದ ತ್ಯಾಜ್ಯ ನೀರು ಪೂರೈಕೆಗೆ ಪ್ರತ್ಯೇಕ ಕೊಳವೆ ಬಳಸುವ ವ್ಯವಸ್ಥೆ (ಡ್ಯುಯಲ್‌ ಪೈಪ್‌ಲೈನ್‌) ಅಳವಡಿಸಿಕೊಳ್ಳಬೇಕು. ಶೌಚಕ್ಕೆ ಸಂಸ್ಕರಿಸಿದ ತ್ಯಾಜ್ಯ ನೀರು ಮರುಬಳಕೆ ಮಾಡಬೇಕು. ತ್ಯಾಜ್ಯ ನೀರನ್ನು ನಾಲ್ಕು ಹಂತಗಳಲ್ಲಿ ಸಂಸ್ಕರಣೆಗೆ ಒಳಪಡಿಸಿ ಕುಡಿಯುವ ಉದ್ದೇಶಕ್ಕೂ ಬಳಸಬಹುದು. ಆದರೆ, ಇದನ್ನು ಜಾರಿಗೊಳಿಸುವ ಮುನ್ನ ಜನರನ್ನು ಮಾನಸಿಕವಾಗಿ ಸಜ್ಜುಗೊಳಿಸಬೇಕು ಎಂದು ತಿಳಿಸಲಾಗಿದೆ.

429 ಕೋಟಿ ಲೀ. ನೀರು: ಪ್ರಸ್ತುತ ನಗರಕ್ಕೆ ಕಾವೇರಿಯಿಂದ ನಿತ್ಯ 147 ಕೋಟಿ ಲೀಟರ್‌ ನೀರು ಪೂರೈಕೆ ಆಗುತ್ತಿದೆ. ದಿನಕ್ಕೆ ಸುಮಾರು 67.7 ಕೋಟಿ ಲೀ. ನೀರಿನ ಬೇಡಿಕೆ ಈಡೇರಿಸಲು ಅಂತರ್ಜಲ ಆಶ್ರಯಿಸಲಾಗಿದೆ. 2031ರಲ್ಲಿ ನೀರಿನ ಬೇಡಿಕೆ 363.9 ಕೋಟಿ ಲೀ.ಗಳಿಗೆ ಹೆಚ್ಚಲಿದೆ. ಪೂರೈಕೆ ಹಾಗೂ ವಿತರಣೆ ವೇಳೆ ಸಾಮಾನ್ಯವಾಗಿ ಶೇ 15ರಷ್ಟು ನೀರು ಸೋರಿಕೆಯಾಗುತ್ತದೆ. ಇದನ್ನು ಸೇರಿಸಿ ಅಂದಾಜು ಮಾಡಿದರೆ 15 ವರ್ಷಗಳ ನಂತರ ನಗರಕ್ಕೆ ನಿತ್ಯ 428.2 ಕೋಟಿ ಲೀ. ನೀರು ಬೇಕಾಗಲಿದೆ.

ವ್ಯಕ್ತಿ ದಿನದಲ್ಲಿ ಸರಾಸರಿ 135 ಲೀ. ನೀರು ಬಳಸುತ್ತಾನೆ ಎಂಬುದನ್ನು ಮಾನದಂಡವನ್ನಾಗಿ ಇಟ್ಟುಕೊಂಡು ನೀರಿನ ಬೇಡಿಕೆ ಲೆಕ್ಕಹಾಕಲಾಗಿದೆ. ಇದರಲ್ಲಿ 45 ಲೀ. ಶೌಚಕ್ಕೆ ಬಳಕೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಡ್ಯುಯೆಲ್‌ ಪೈಪ್‌ಲೈನ್‌ ವ್ಯವಸ್ಥೆ ಅಳವಡಿಸಿಕೊಂಡು ಶೌಚಕ್ಕೆ ಸಂಸ್ಕರಿಸಿದ ತ್ಯಾಜ್ಯ ನೀರು ಬಳಸಿದರೆ, ಅನ್ಯ ಕಾರ್ಯಗಳಿಗೆ ಬೇಕಾಗುವ ನೀರಿನ ಬೇಡಿಕೆ ಗಣನೀಯವಾಗಿ ಕಡಿಮೆ ಆಗಲಿದೆ. ಆಗ ನಗರಕ್ಕೆ ಕುಡಿಯುವ ಉದ್ದೇಶಕ್ಕೆ ನಿತ್ಯ 86.5 ಕೋಟಿ ಲೀ.ನೀರು ಸಾಕಾಗುತ್ತದೆ ಎಂಬುದು ತಜ್ಞರ ಲೆಕ್ಕಾಚಾರ.

ಜಲಮಂಡಳಿಯು ಸದ್ಯಕ್ಕೆ 708.5 ಚದರ ಕಿ.ಮೀ ಪ್ರದೇಶಕ್ಕೆ ( ಬಿಬಿಎಂಪಿ ವ್ಯಾಪ್ತಿ) ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ಹೊಣೆ ಹೊತ್ತಿದೆ. ಈಗಾಗಲೇ ನಗರೀಕರಣಗೊಂಡಿರುವ ಬಿಬಿಎಂಪಿ ವ್ಯಾಪ್ತಿಗೆ ಸೇರಿದ 110 ಹಳ್ಳಿಗಳಿಗೆ ಇನ್ನೂ ಈ ಸೌಕರ್ಯಗಳು ತಲುಪಿಲ್ಲ. 2021ರ ವೇಳೆಗೆ ಈ ಪ್ರದೇಶಗಳು ಪೂರ್ಣ ಪ್ರಮಾಣದಲ್ಲಿ ಈ ಸೌಕರ್ಯಗಳನ್ನು ಹೊಂದುವ ನಿರೀಕ್ಷೆ ಇದೆ. ಭವಿಷ್ಯದಲ್ಲಿ  ನಗರದ ವ್ಯಾಪ್ತಿಗೆ ಸೇರಲಿರುವ 51 ಗ್ರಾಮ ಪಂಚಾಯಿತಿಗಳ (251 ಗ್ರಾಮಗಳು) 583 ಚದರ ಕಿ.ಮೀ ಪ್ರದೇಶಗಳಿಗೂ ಜಲಮಂಡಳಿಯೇ ನೀರು ಪೂರೈಸಬೇಕಾಗುತ್ತದೆ.

ಈ ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವಾಗ, ಗೃಹೇತರ ಬಳಕೆಗೆ ಮತ್ತು ಶೌಚಕ್ಕೆ ಸಂಸ್ಕರಿಸಿದ ತ್ಯಾಜ್ಯನೀರನ್ನು ಪೂರೈಸಲು ಪ್ರತ್ಯೇಕ ಕೊಳವೆ ಅಳವಡಿಸಬೇಕು ಎಂದೂ ಸಲಹೆ ನೀಡಲಾಗಿದೆ. 2031ರ ಸುಮಾರಿಗೆ ಅಂತರ್ಜಲದಿಂದ ನಿತ್ಯ 86.2 ಕೋಟಿ ಲೀ.ನೀರು ಮೇಲಕ್ಕೆತ್ತಬೇಕಾಗಬಹುದು. ಮಹಾನಗರ ವ್ಯಾಪ್ತಿಯಲ್ಲಿ ನಿತ್ಯ 10 ಕೋಟಿ ಲೀ.ನಿಂದ 15 ಕೋಟಿ ಲೀ.ನಷ್ಟು ನೀರು ಕೃಷಿ ಉದ್ದೇಶಕ್ಕೆ ಬಳಕೆ ಆಗುತ್ತಿದೆ. ನಗರೀಕರಣ ಹೆಚ್ಚಿ, ಕೃಷಿ ಭೂಮಿ ಅನ್ಯ ಉದ್ದೇಶಕ್ಕೆ ಬಳಕೆಯಾಗಬಹುದು. ಈ ನೀರು ಹೆಚ್ಚುವರಿ ಲಭಿಸುವುದರಿಂದ ಅಂತರ್ಜಲದ ಮೇಲಿನ ಅವಲಂಬನೆ ಸ್ವಲ್ಪ ಕಡಿಮೆ ಆಗುವ ಸಾಧ್ಯತೆ ಇದೆ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
*
ಪುನಶ್ಚೇತನ
ನಗರದ ಬಹುತೇಕ ಕೆರೆಗಳಲ್ಲಿ ತುಂಬಿರುವುದು ಸಂಸ್ಕರಿಸದ ತ್ಯಾಜ್ಯನೀರು. ಒಳಚರಂಡಿ ಜಾಲ ಇನ್ನಷ್ಟು ವಿಸ್ತರಿಸಿ ಹಾಗೂ ಸಂಸ್ಕರಣೆಗೆ ಒಳಪಡಿಸಿದ ತ್ಯಾಜ್ಯ ನೀರು ಮಾತ್ರ ಕೆರೆಯ ಒಡಲು ಸೇರುವಂತೆ ಮಾಡುವ ಮೂಲಕ ಈ ಜಲಮೂಲಗಳನ್ನು ಪುನಶ್ಚೇತನಗೊಳಿಸಬೇಕು. ಕೆರೆಗಳ ಹೂಳೆತ್ತುವ ಮೂಲಕ ಅವುಗಳ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕು. ನೀರು, ಒಳಚರಂಡಿ ಮೂಲಸೌಕರ್ಯಕ್ಕೆ ಭೂಬಳಕೆ ನಕಾಶೆಗಳಲ್ಲೇ ಜಾಗ ಕಾಯ್ದಿರಿಸಬೇಕು ಎಂದು ಸಲಹೆ ನೀಡಲಾಗಿದೆ.

*
16.6 ಕೋಟಿ ಲೀ ನೀರು ಉಳಿತಾಯ ಸಾಧ್ಯ
ತ್ಯಾಜ್ಯ ನೀರು ಉತ್ಪಾದನೆ ಆಗುವ ಸ್ಥಳಗಳಲ್ಲೇ ಅವುಗಳ ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಸ್ಥಾಪಿಸುವುಕ್ಕೆ ಉತ್ತೇಜನ ನೀಡಬೇಕು. ಕೈತೋಟಗಳಿಗೆ, ಉದ್ಯಾನಗಳಿಗೆ, ವಾಹನ ತೊಳೆಯುವುದಕ್ಕೆ ಸಂಸ್ಕರಿಸಿದ ತ್ಯಾಜ್ಯ ನೀರನ್ನೇ ಬಳಸಬೇಕು. ಇದರಿಂದ ನಗರದಲ್ಲಿ ದಿನಕ್ಕೆ 16.6 ಕೋಟಿ ಲೀಟರ್‌ಗಳಷ್ಟು ನೀರು ಉಳಿತಾಯವಾಗಲಿದೆ ಎಂದು ಕರಡಿನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT