ಬುಧವಾರ, ಮಾರ್ಚ್ 3, 2021
26 °C

ನುಡಿಸಿರಿಗೆ ಮುನ್ನುಡಿಯಾದ ಸಾಂಸ್ಕೃತಿಕ ಮೆರವಣಿಗೆ

ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು Updated:

ಅಕ್ಷರ ಗಾತ್ರ : | |

ನುಡಿಸಿರಿಗೆ ಮುನ್ನುಡಿಯಾದ ಸಾಂಸ್ಕೃತಿಕ ಮೆರವಣಿಗೆ

ವಿದ್ಯಾಗಿರಿ (ಮೂಡುಬಿದಿರೆ): ಮಂಜು ಮುಸುಕಿದ ವಾತಾವರಣದಲ್ಲಿ ಅತ್ತ ಸೂರ್ಯನ ಕಿರಣಗಳು ವಿದ್ಯಾಗಿರಿಯಲ್ಲಿ ಭೂಮಿಯನ್ನು ಸ್ಪರ್ಶಿಸುತ್ತಿರುವ ಹೊತ್ತಿನಲ್ಲಿ ಕನ್ನಡ ಹಬ್ಬದ ತೇರು ಎಳೆಯುವ ಆಳ್ವಾಸ್ ನುಡಿಸಿರಿ 2017ಕ್ಕೆ ಕಲಾ ತಂಡಗಳ ವರ್ಣರಂಜಿತ ಮೆರವಣಿಗೆಯೊಂದಿಗೆ ಚಾಲನೆ ದೊರೆಯಿತು.

ಬೆಳಿಗ್ಗೆ 8-30ಕ್ಕೆ ಸರಿಯಾಗಿ ಮೂಲ್ಕಿ ಚರ್ಚ್‌ನ ಧರ್ಮಗುರು ಎಫ್.ಎಕ್ಸ್.ಗೋಮ್ಸ್ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಸಾಂಸ್ಕೃತಿಕ ಮೆರವಣಿಗೆಯನ್ನು ಉದ್ಘಾಟಿಸುತ್ತಿದ್ದಂತೆ ಸಿಡಿಮದ್ದಿನ (ಗರ್ನಾಲ್‌) ಸದ್ದು ಮಾರ್ದನಿಸಿತು.

ಪೂತನಿಯ ವೇಷಧಾರಿ ಕಾರ್ಕಳದ ರಂಜಿತ್ ಅವರು ಬಾಯಿಯಿಂದ ಬೆಂಕಿಯನ್ನು ಉಗುಳುತ್ತಾ ಮೆರವಣಿಗೆಯ ಮುಂದೆ ಹೊರಟರು. ಶಂಖದ ನಾದ, ಕೊಂಬಿನ ಮೈನವಿರೇಳಿಸುವ ಧ್ವನಿ, ಹರೀಶ್ ಮೂಡುಬಿದಿರೆ ತಂಡದ ಡೋಲಿನ ಪಾರಮ್ಯ, ಚೆಂಡೆ ವಾದನದ ಸೊಗಸು, ಬಂಟ್ವಾಳದ ಚಿಲಿಪಿಲಿ ಬೊಂಬೆಗಳು, ಚಾಮರಾಜನಗರದ ಗೊರವರ ಕುಣಿತ, ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗ, ಹೀಗೆ ಒಂದನ್ನೊಂದು ಮೀರಿಸುವ ಕಲಾ ತಂಡಗಳು ಮೆರವಣಿಗೆಯ ಉದ್ದಕ್ಕೂ ಪ್ರದರ್ಶನಗಳನ್ನು ನೀಡುತ್ತಾ ಸಾಗಿ ಬಂದಾಗ ಇಕ್ಕಡೆಗಳಲ್ಲಿ ನಿಂತ ಸಹಸ್ರಾರು ಸಾಹಿತ್ಯಾಭಿಮಾನಿಗಳ ಕಣ್ಮನ ತಣಿಸಿದವು.

ಇನ್ನೊಂದೆಡೆ ಕರಾವಳಿಯ ಗಂಡುಕಲೆ ಯಕ್ಷಗಾನ, ಡೊಳ್ಳುಕುಣಿತ, ದೇವರಾಜ್ ಮಂಡ್ಯ ಅವರ ಪೂಜಾ ಕುಣಿತ, ವೀರಭದ್ರನ ಕುಣಿತ, ಆಟಿಕಳಂಜ, ಮಂಗಳೂರು ಡೋಲು, ಕೋಳಿಗಳು, ಕೃಷಿ ಪರಂಪರೆಯನ್ನು ಬಿಂಬಿಸಿದ ತರಕಾರಿ ಹೊತ್ತ ಮಹಿಳೆಯರು, ಹುಲಿವೇಷಧಾರಿಗಳ ನರ್ತನ, ತುಳುನಾಡಿನ ವಾದ್ಯ ಕರಾವಳಿ ಜಿಲ್ಲೆಗಳ ಸಹಿತ ಇತರ ಜಿಲ್ಲೆಗಳ ಜನಪದ ಪರಂಪರೆಯೊಂದಿಗೆ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸಿದವು. ರೋಚಕತೆಯ ಸಂಚಲನ ಮೂಡಿಸಿದ ಪಂಜಾಬಿ ಬ್ಯಾಂಡ್ ತಂಡ, ಕೇರಳದ ಚೆಂಡೆ, ರಾಜಸ್ಥಾನದ ಜಾನಪದ ಕಲಾವಿದರ ಸೊಬಗಿನೊಂದಿಗೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ರೀತಿಯಲ್ಲಿ ಸಾಂಸ್ಕೃತಿಕ ತಂಡದ ವೈವಿಧ್ಯತೆ ಗಮನಸೆಳೆದವು. ಇವರೊಂದಿಗೆ ಬಿದಿರೆ ಆರ್ಟ್ಸ್‌ನ ಬೊಂಬೆ ಕುಣಿತ, ಎನ್ಸಿಸಿ ವಿದ್ಯಾರ್ಥಿಗಳ ಶಿಸ್ತಿನ ನಡಿಗೆ, ಕೇರಳದ ಪುಲಿಕಲ್... ಹೀಗೆ ರಾಜ್ಯದ ಗಡಿ ದಾಟಿ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ನುಡಿಸಿರಿ ಮೆರವಣಿಗೆಯಲ್ಲಿ ಪರಿಚಯಿಸಲಾಯಿತು.

80ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು.ಆಳ್ವಾಸ್ ವಿದ್ಯಾರ್ಥಿಗಳ ಡೋಲು ಕುಣಿತ, ಕೇರಳ ಮಾದರಿಯ ಚೆಂಡೆ ಮೆರವಣಿಗೆಯಲ್ಲಿ ಗಮನಸೆಳೆದವು. ಮೆರವಣಿಗೆಯ ಕೊನೆಯಲ್ಲಿ ಕನ್ನಡದ ತೇರು ಸಾಗಿಬಂದರೆ ಅದರ ಹಿಂದೆ ಸಮ್ಮೇಳನದ ಅಧ್ಯಕ್ಷ  ನಾಗತಿಹಳ್ಳಿ ಚಂದ್ರಶೇಖರ್, ಉದ್ಘಾಟಕರಾದ ಡಾ.ಸಿ.ಎನ್ ರಾಮಚಂದ್ರನ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್, ಡಾ.ಎಂ. ಮೋಹನ ಆಳ್ವ ಹಾಗೂ ಅತಿಥಿಗಳು ಹೆಜ್ಜೆ ಹಾಕಿದರು.

ಬೆಳಿಗ್ಗೆ 8-30ಕ್ಕೆ ಆರಂಭಗೊಂಡ ಮೆರವಣಿಗೆ ಸುಮಾರು 1 ಗಂಟೆ ವಿದ್ಯಾಗಿರಿ ಆವರಣದಲ್ಲಿ ಸಾಂಸ್ಕೃತಿಕ ಲೋಕದ ದರ್ಶನ ಮಾಡಿಸಿತು. ಸಮ್ಮೇಳನದ ರೂವಾರಿ ಡಾ.ಎಂ. ಮೋಹನ ಆಳ್ವ ಅವರ ಶಿಸ್ತು, ಸಮಯಪ್ರಜ್ಞೆಯಿಂದಾಗಿ ಮೆರವಣಿ ಸಾಂಗವಾಗಿ ನಡೆದು ಕ್ಲಪ್ತ ಸಮಯದಲ್ಲಿ ಸಂಪನ್ನಗೊಂಡಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.