ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಸಂಕೀರ್ತನಾ ಯಾತ್ರೆ

Last Updated 2 ಡಿಸೆಂಬರ್ 2017, 5:14 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆ ಶುಕ್ರವಾರ ಏರ್ಪಡಿಸಿದ್ದ ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಸಂಭ್ರಮದಿಂದ ನಡೆಯಿತು. ಸಂಕೀರ್ತನಾ ಯಾತ್ರೆಯ ಅಂಗವಾಗಿ ಪಟ್ಟಣದ ಬೀದಿ ಬೀದಿಗಳಲ್ಲಿ ಭಗವಾಧ್ವಜಗಳು ಹಾರಾಡಿದವು. ‘ಜೈ ಶ್ರೀರಾಂ’, ‘ಜೈ ಭಜರಂಗಿ’ ಇತರ ಘೋಷಣೆಗಳು ಮೊಳಗಿದವು.

ಮಾಲಧಾರಿಗಳು ‘ನಾವೆಲ್ಲ ಹಿಂದೂ ನಾವೆಲ್ಲ ಒಂದು’ ಎಂಬ ಘೋಷಣೆ ಕೂಗಿದರು. ಸಂಕೀರ್ತನಾ ಯಾತ್ರೆ ಸಾಗಿದ ಮಾರ್ಗದ ಉದ್ದಕ್ಕೂ ಪಟಾಕಿಗಳು ಸಿಡಿದವು. ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರ ಮೇಲೆ ದಾರಿಯುದ್ದಕ್ಕೂ ಪುಷ್ಪ ವೃಷ್ಠಿಯಾಯಿತು. ಪೂರ್ವ ಕೋಟೆಯ ಮೇಲಿಂದ ಹೂಮಳೆ ಸುರಿಸಿದರು.

ಒಂದರ್ಥದಲ್ಲಿ ಇಡೀ ಪಟ್ಟಣ ಕೇಸರಿಮಯವಾಗಿತ್ತು. ಇಲ್ಲಿಗೆ ಸಮೀಪದ ಗಂಜಾಂನ ಆಂಜನೇಯ ಸ್ವಾಮಿ ದೇಗುಲದ ಬಳಿಯಿಂದ ಶ್ರೀರಂಗನಾಥಸ್ವಾಮಿ ದೇವಾಲಯದ ವರೆಗೆ 5 ಕಿ.ಮೀ. ದೂರದ ವರೆಗೆ ಮಾಲಾಧಾರಿಗಳು ಕಾಲ್ನಡಿಗೆಯಲ್ಲಿ ಆಗಮಿಸಿದರು.

ಎರಡು ತಾಸಿಗೂ ಹೆಚ್ಚು ಕಾಲ ನಡೆದ ಯಾತ್ರೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಸಹಸ್ರಾರು ಮಂದಿ ಹನುಮಾನ್‌ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ 3 ಗಂಟೆ ವೇಳೆಗೆ ಮಾಲಾಧಾರಿ ಗಳು ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಸಮಾವೇಶಗೊಂಡರು. ಅಲ್ಲಿಂದ ಮತ್ತೆ ಮುಖ್ಯ ಬೀದಿಯಲ್ಲಿ ಆಗಮಿಸಿ ಐತಿಹಾಸಿಕ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯ ಬಳಿ ಹನುಮಾನ್‌ ಮಾಲೆಯನ್ನು ವಿಸರ್ಜಿಸಿದರು. ಪಟ್ಟಣದ ಮುಖ್ಯ ಬೀದಿಗಳಲ್ಲಿ ನಾಲ್ಕಾರು ಕಡೆ ಪ್ರಸಾದ ವಿತರಿಸುತ್ತಿದ್ದ ದೃಶ್ಯ ಕಂಡುಬಂತು.

ಇದಕ್ಕೂ ಮುನ್ನ ಗಂಜಾಂನ ಕಾವೇರಿ ನದಿ ದಂಡೆಯಲ್ಲಿರುವ ಹನುಮಾನ್‌ ದೇವಾಲಯದ ಬಳಿ ಮಂಗಳೂರಿನ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಿದರು.

ಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್‌ ಶರ್ಮಾ, ಗೌತಮ ಕ್ಷೇತ್ರದ ಗಜಾನನ ಸ್ವಾಮೀಜಿ, ಗಂಜಾಂ ಆದಿ ಶಂಕರ ಮಠದ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ, ಇತರರು ಪಾಲ್ಗೊಂಡಿದ್ದರು. ಗಂಜಾಂ ಮತ್ತು ಪಟ್ಟಣದಲ್ಲಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.

‘ದೇಗುಲದ ಇತ್ತು ಎಂಬುದಕ್ಕೆ ದಾಖಲೆ ಇವೆ’
ಶ್ರೀರಂಗಪಟ್ಟಣ: ‘ಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್‌ ಕಾಲದ ಜಾಮಿಯಾ ಮಸೀದಿ ಇರುವ ಜಾಗದಲ್ಲಿ 200 ವರ್ಷಗಳ ಹಿಂದೆ ಆಂಜನೇಸ್ವಾಮಿ ದೇವಾಲಯ ಇತ್ತು ಎಂಬುದಕ್ಕೆ ದಾಖಲೆಗಳಿವೆ’ ಎಂದು ಮೈಸೂರಿನ ವಕೀಲ ಸಿ.ವಿ.ಕೇಶವಮೂರ್ತಿ ಹೇಳಿದರು.

ಹನುಮಾನ್‌ ಮಾಲಾಧಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿ, ‘ಖಚಿತ ದಾಖಲೆಗಳ ಆಧಾರದ ಮೇಲೆ ಈ ಹಿಂದೆ ಇದ್ದ ಸ್ಥಳದಲ್ಲೇ ಆಂಜನೇಯಸ್ವಾಮಿ ದೇಗುಲ ನಿರ್ಮಾಣಕ್ಕೆ ಅವಕಾಶ ನೀಡಬೇಕೆಂದು 2004ರಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಅದಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ಹಾಗಂತ ನನ್ನ ಪ್ರಯತ್ನ ಕೈಬಿಡುವುದಿಲ್ಲ’ ಎಂದರು.

ಮಂಗಳೂರು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸಲು ಆಸಕ್ತಿ ತೋರಿಸುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT