ಭಾನುವಾರ, ಫೆಬ್ರವರಿ 28, 2021
29 °C

ದತ್ತ ಜಯಂತಿ: ದತ್ತಮಾಲಾಧಾರಿಗಳಿಂದ ಭಿಕ್ಷಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದತ್ತ ಜಯಂತಿ: ದತ್ತಮಾಲಾಧಾರಿಗಳಿಂದ ಭಿಕ್ಷಾಟನೆ

ಚಿಕ್ಕಮಗಳೂರು: ದತ್ತಮಾಲೆ ಧರಿಸಿರುವ ಶಾಸಕ ಸಿ.ಟಿ.ರವಿ, ಬಿಜೆಪಿ ಮುಖಂಡರು ನಗರದ ಬಸವನಹಳ್ಳಿ ಮುಖ್ಯರಸ್ತೆಯ ಮನೆಗಳಲ್ಲಿ ಭಿಕ್ಷಾಟನೆ ಮಾಡಿ ಪಡಿ(ಅಕ್ಕಿ, ಬೆಲ್ಲ) ಸಂಗ್ರಹಿಸಿದರು.

ಐದು ಮನೆಗಳಲ್ಲಿ ಪಡಿ ಸಂಗ್ರಹಿಸಿದರು. ದತ್ತ ಜಯಂತಿ ಅಂಗವಾಗಿ ಪಾದುಕೆ ದರ್ಶನಕ್ಕೆ ದತ್ತ ಪೀಠಕ್ಕೆ ತೆರಳುವ ಹಿಂದಿನ ದಿನ ಭಿಕ್ಷಾಟನೆ ಮಾಡುವುದು ಸಂಪ್ರದಾಯ. 

ಶಾಸಕ ರವಿ ಸುದ್ದಿಗಾರರೊಂದಿಗೆ ಮಾತನಾಡಿ, ‘ದತ್ತ ಜಯಂತಿ ಪೂರ್ವದಿನ ಭಿಕ್ಷಾಟನೆ ಮಾಡಿ, ಇರುಮುಡಿ ಕಟ್ಟಿ ದತ್ತಪೀಠಕ್ಕೆ ತೆರಳಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಅದರಂತೆ, ದತ್ತಮಾಲೆ ಧಾರಣೆ ಆರಂಭಿಸಿದ ವರ್ಷದಿಂದಲೂ ಈ ಪದ್ಧತಿ ಅನುಸರಿಸುತ್ತಿದ್ದೇವೆ. ಐದು ಮನೆಗಳಲ್ಲಿ ಭಿಕ್ಷಾಟನೆ ಮಾಡಿದ್ದೇವೆ. ಭಾನುವಾರ ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿ, ಪಾದಯಾತ್ರೆ ಮೂಲಕ ದತ್ತಪೀಠಕ್ಕೆ ತೆರಳುತ್ತೇವೆ’ ಎಂದು ಹೇಳಿದರು.

‘ಡಿ.1ರಂದು ಅನಸೂಯಾ ಜಯಂತಿಗೆ ಹೆಚ್ಚು ಭಕ್ತಾದಿಗಳು ಬಂದಿದ್ದರಿಂದ, ವಾಹನಗಳು ಹೆಚ್ಚಾಗಿದ್ದರಿಂದ ದತ್ತಪೀಠದ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌ ಆಗಿ ಸಂಚಾರಕ್ಕೆ ಸಮಸ್ಯೆಯಾಯಿತು. ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿದ್ದರಿಂದ ಈ ಸಮಸ್ಯೆಯಾಯಿತು. ಡಿ.3ರಂದು ದತ್ತ ಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌ ಆಗದಂತೆ ಕ್ರಮ ವಹಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಭೆ ನಡೆಸಿ ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಐ.ಡಿ ಪೀಠ ಗ್ರಾಮದ ಸರ್ವೆ ನಂ 195ರಲ್ಲಿ ದತ್ತಾತ್ರೇಯ ಪೀಠ ಇದೆ, ನಾಗೇನಹಳ್ಳಿಯ ಸರ್ವೆಯ 57ರಲ್ಲಿ ಬಾಬಾಬುಡನ್‌ ದರ್ಗಾ ಇದೆ ಎಂದು ಸರ್ಕಾರಿ ದಾಖಲೆಯ ಪಹಣಿಯಲ್ಲಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದತ್ತ ಪೀಠ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಸತ್ಯ ಹೇಳುವುದಕ್ಕೆ ಹಿಂಜರಿಯಬಾರದು. ನ್ಯಾಯ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.