ಶುಕ್ರವಾರ, ಮಾರ್ಚ್ 5, 2021
30 °C

ಎಚ್‌ಐವಿ: ನಾಲ್ಕನೇ ಸ್ಥಾನದಲ್ಲಿ ಮಂಡ್ಯ ಜಿಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್‌ಐವಿ: ನಾಲ್ಕನೇ ಸ್ಥಾನದಲ್ಲಿ ಮಂಡ್ಯ ಜಿಲ್ಲೆ

ಮಂಡ್ಯ: ‘ರಾಜ್ಯದಲ್ಲಿ ಎಚ್‌ಐವಿ ಸೋಂಕಿತರನ್ನು ಹೊಂದಿರುವ ಜಿಲ್ಲೆಗಳ ಪೈಕಿ ನಮ್ಮ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಸೋಂಕಿತರ ಸ್ಥಾನ ಕುಸಿಯು ವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್‌ ಹೇಳಿದರು.

ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ವಿಶ್ವ ಏಡ್ಸ್‌ ದಿನಚರಣೆಯನ್ನು ಎಚ್‌ಐವಿ ಸೋಂಕಿತರ ಕೈ ಕುಲುಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಎಚ್‌.ಐ.ವಿ ಸೋಂಕಿತರು ಸಮಾಜದ ಇತರ ಸದಸ್ಯರಂತೆ ಜೀವನ ನಡೆಸುವ ವಾತಾವರಣ ನಿರ್ಮಾಣ ವಾಗಬೇಕು. ಅವರನ್ನು ತಾರತಮ್ಯದಿಂದ ನೋಡಬಾರದು. ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿದರೆ ಅವರೂ ಹೆಚ್ಚು ಕಾಲ ಬದುಕುತ್ತಾರೆ. ಎಚ್‌ಐವಿ ಪೀಡಿತರಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು ಸೋಂಕಿತರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಸೋಂಕನ್ನು ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಹೇಳಿದರು.

ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಭವಾನಿ ಶಂಕರ್‌ ಮಾತನಾಡಿ ‘ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯದೊಂದಿಗೆ ಏಡ್ಸ್‌ ದಿನ ಆಚರಣೆ ಮಾಡಲಾಗುತ್ತದೆ. ಅದರಂತೆ ಈ ವರ್ಷ ನನ್ನ ಆರೋಗ್ಯ ನನ್ನ ಹಕ್ಕು ಧ್ಯೇಯದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದೆ. ಎಚ್‌ಐವಿ ಮುಕ್ತ ಆರೋಗ್ಯವಂತ ಸಮಾಜ ನಿರ್ಮಾಣ ಗುರಿ ನಮ್ಮದಾಗಬೇಕು. ದೈಹಿಕ, ಸಾಮಾಜಿಕ ಹಾಗೂ ಮಾನಸಿಕವಾಗಿ ನೆಮ್ಮದಿ ಕಂಡುಕೊಂಡ ವ್ಯಕ್ತಿಯನ್ನು ಆರೋಗ್ಯವಂತ ವ್ಯಕ್ತಿ ಎಂದು ಹೇಳಲಾಗುತ್ತಿದೆ. ವ್ಯಕ್ತಿ ಆರೋಗ್ಯದಿಂದ ಇದ್ದರೆ ಸಮಾಜ ಆರೋಗ್ಯವಂತವಾಗುತ್ತದೆ’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮಾಧಿಕಾರಿ ಡಾ.ರೋಚನಾ, ತಾಲ್ಲೂಕು ವೈದ್ಯಾಧಿಕಾರಿ ಡಾ.ಶಶಿಧರ್‌ ಬಸವರಾಜು, ಡಾ.ಬೆಟ್ಟಸ್ವಾಮಿ, ಡಾ.ಶಿವಾನಂದ್‌ ಹಾಜರಿದ್ದರು.

ಜಿಲ್ಲೆಯಲ್ಲಿ 9,201 ಎಚ್‌ಐವಿ ಪೀಡಿತರು: 2005ರಿಂದ 2017 ಅಕ್ಟೋಬರ್‌ವರೆಗೆ ಜಿಲ್ಲೆಯಲ್ಲಿ 9,201 ಎಚ್‌ಐವಿ ಪೀಡಿತರು ಪತ್ತೆಯಾಗಿದ್ದಾರೆ. ಮಂಡ್ಯ ತಾಲ್ಲೂಕೊಂದರಲ್ಲೇ 3,717 ರೋಗಿಗಳು ಪತ್ತೆಯಾಗಿದ್ದಾರೆ. ಪಾಂಡವ ಪುರ ತಾಲ್ಲೂಕಿನಲ್ಲಿ ಅತೀ ಕಡಿಮೆ 653 ಪೀಡಿತರು ಇದ್ದಾರೆ. 2016–17ನೇ ಸಾಲಿನಲ್ಲಿ 49,924 ಜನರಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗಿದೆ. ಅವರಲ್ಲಿ 488 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. 25,337 ಗರ್ಭಿಣಿಯರಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು 13 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 2017 ಅಕ್ಟೋಬರ್‌ವರೆಗೆ 34,326 ಜನರಿಗೆ ಎಚ್‌ಐವಿ ಪರೀಕ್ಷೆ ಮಾಡಿಸಲಾಗಿದ್ದು ಅವರಲ್ಲಿ 307 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 15,850 ಗರ್ಭಿಣಿಯರ ಪರೀಕ್ಷೆಯಲ್ಲಿ 8 ಮಂದಿಗೆ ಸೋಂಕು ಪತ್ತೆಯಾಗಿದೆ.

‘ಎಚ್‌ಐವಿ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರ ತೆರೆಯಲಾಗಿದೆ. ಉಪ ಕೇಂದ್ರಗಳು ಜಿಲ್ಲೆಯ ಒಟ್ಟು 8 ಎಆರ್‌ಟಿ ಕೇಂದ್ರ ಗಳಲ್ಲಿ 7,082 ರೋಗಿಗಳು ನೋಂದಾಯಿಸಿ ಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 3,644 ಪುರುಷರು, 3,196 ಮಹಿಳೆಯರು, 236 ಮಕ್ಕಳು, 6 ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 14 ಆಪ್ತ ಸಮಾಲೋಚನೆ ಮತ್ತು ರಕ್ತ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಯುವಜನ ಮತ್ತು ಅಭಿವೃದ್ಧಿ ಸಂಸ್ಥೆ ಜಿಲ್ಲೆಯ ಆಯ್ದ 100 ಹಳ್ಳಿಗಳಲ್ಲಿ ಎಚ್‌ಐವಿ ಕುರಿತ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ’ ಎಂದು ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ರೋಚನಾ ತಿಳಿಸಿದರು.

60 ರೆಡ್‌ ರಿಬ್ಬನ್‌ ಕ್ಲಬ್‌ ಸ್ಥಾಪನೆ

‘ಯುವಜನರಿಗೆ ಎಚ್‌ಐವಿ ಬಗ್ಗೆ ಅರಿವು ಮೂಡಿಸಲು 60 ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ರೆಡ್‌ ರಿಬ್ಬನ್‌ ಕ್ಲಬ್‌ ಸ್ಥಾಪನೆ ಮಾಡಲಾಗಿದೆ. ಆ ಮೂಲಕ ಯುವಪೀಳಿಗೆಗೆ ಸುರಕ್ಷಿತ ಜೀವನದ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಜಿಲ್ಲೆಯ 60 ಕಾಲೇಜುಗಳ ಎನ್‌ಎಸ್‌ಎಸ್‌ ಅಧಿಕಾರಿಗಳಿಗೆ ಕ್ಲಬ್‌ ರಚನೆಯ ಉದ್ದೇಶಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಎಚ್‌ಐವಿ ಬಗ್ಗೆ ಹಳ್ಳಿಗಳಲ್ಲಿ ತೊಗಲುಬೊಂಬೆಯಾಟದ ಮೂಲಕ ಎಚ್‌ಐವಿ ಸೋಂಕಿನ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತಿದೆ. ಡಿಸೆಂಬರ್‌ನಲ್ಲಿ ಜಿಲ್ಲೆಯ 20 ಹಳ್ಳಿಗಳಲ್ಲಿ ಈ ಅರಿವು ಕಾರ್ಯಕ್ರಮ ನಡೆಯಲಿದೆ’ ಎಂದು ಡಾ.ರೋಚನಾ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.