ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಡಿಕೆಶಿ ವಿರುದ್ಧ ಹೇಳಿಕೆಗೆ ಟೀಕೆ

Last Updated 2 ಡಿಸೆಂಬರ್ 2017, 5:27 IST
ಅಕ್ಷರ ಗಾತ್ರ

ಕನಕಪುರ: ಸಚಿವ ಡಿ.ಕೆ.ಶಿವಕುಮಾರ್‌ ಬಗ್ಗೆ ಹಗುರವಾಗಿ ಮಾತನಾಡುವ, ಸುಳ್ಳು ಆರೋಪ ಮಾಡುವ ನೈತಿಕತೆ ಜೆಡಿಎಸ್‌ ಮುಖಂಡರಿಗೆ ಇಲ್ಲ ಎಂದು ಕಾಂಗ್ರೆಸ್‌ ಮುಖಂಡ ಎಂ.ಪುರುಷೋತ್ತಮ್‌ ಟೀಕಿಸಿದರು.

ನಗರದ ಡಿ.ಕೆ.ಶಿವಕುಮಾರ್‌ ಮನೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಹೋದರರು ಕ್ಷೇತ್ರದಲ್ಲಿ ಏನು ಮಾಡುತ್ತಿದ್ದಾರೆ. ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ಅದನ್ನು ಜೆಡಿಎಸ್‌ ಡಿ.ಎಂ.ವಿಶ್ವನಾಥ್‌ಗೆ ಹೇಳಬೇಕಿಲ್ಲ. ಜೆಡಿಎಸ್‌ ನಿಂದ ಟಿಕೆಟ್ ಸಿಗುತ್ತದೆ ಎಂಬ ಖಾತ್ರಿಯಿಂದ‌ ಕನಕಪುರಕ್ಕೆ ಬಂದಿದ್ದಾರೆ. ಇಲ್ಲವಾದಲ್ಲಿ ಕ್ಷೇತ್ರದ ಕಡೆಗೆ ತಲೆಯೂ ಹಾಕುತ್ತಿರಲಿಲ್ಲ ಎಂದು ಕುಟುಕಿದರು.

ಚುನಾವಣೆ ಸಂದರ್ಭದಲ್ಲಿ ಬಂದು ಸುಳ್ಳು ಪ್ರಚಾರ ಮಾಡಿ, ಸಲ್ಲದ ಆರೋಪದ ಮೂಲಕ ಮತದಾರರನ್ನು ಸೆಳೆಯಲು ಆಗುವುದಿಲ್ಲ, ಕೆಲಸ ಮಾಡುವವರು ಯಾರು, ಬರಿ ಮಾತನಾಡುವವರು ಯಾರೆಂದು ಕ್ಷೇತ್ರದ ಮತದಾರರಿಗೆ ಚೆನ್ನಾಗಿ ಗೊತ್ತಿದೆ. ಯಾರಿಗೆ ಮತ ನೀಡಬೇಕು ಎಂಬುದನ್ನು ಚುನಾವಣೆಯಲ್ಲಿ ಮತದಾರರು ನಿರ್ಧರಿಸಲಿದ್ದಾರೆ ಎಂದರು.

ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಅವರು ಯಾವ ಅಧಿಕಾರಿಗಳಿಗೆ ಒತ್ತಡ ಕೊಟ್ಟಿದ್ದಾರೆ. ಯಾರಿಂದ ವಂತಿಗೆ ಪಡೆಯುತ್ತಿದ್ದಾರೆ. ಏನು ಅಕ್ರಮ ಅವ್ಯವಹಾರ ಮಾಡಿದ್ದಾರೆ ಎಂಬುದನ್ನು ವಿಶ್ವನಾಥ್‌ ಅವರು ದಾಖಲೆ ಸಮೇತ ಜನತೆಗೆ ತಿಳಿಸಬೇಕು, ಅವರ ಮಾಡುವ ಆರೋಪಗಳ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಸಲಿ. ಇಲ್ಲವಾದಲ್ಲಿ ಜನತೆಯ ಮುಂದೆ ತಾವು ಮಾಡಿರುವ ಆರೋಪಕ್ಕೆ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಂ.ರವಿ ಮಾತನಾಡಿ, ಸಚಿವರು ಮತ್ತು ಸಂಸದರು ₹4 ಸಾವಿರ ಕೋಟಿ ಹಣವನ್ನು ತಂದು ತಾಲ್ಲೂಕನ್ನು ಸರ್ವಾಂಗೀಣ ಅಭಿವೃದ್ಧಿ
ಪಡಿಸುವ ಮೂಲಕ ಜನತೆಯ ಋಣ ತೀರಿಸುತ್ತಿದ್ದಾರೆ. ಜನತೆ ಕೊಟ್ಟ ವಿಶ್ವಾಸಕ್ಕೆ ದ್ರೋಹವೆಸಗಿದ ಜನತೆಯ ಮಧ್ಯದಲ್ಲಿದ್ದು ಕೆಲಸ ಮಾಡುತ್ತಿದ್ದಾರೆ. ವಿಶ್ವನಾಥ್‌ ಅವರಿಗೂ
60 ಸಾವಿರ ಮತಗಳನ್ನು ನೀಡಿದ್ದರೂ, ಜನತೆಗಾಗಿ ಇವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ನಗರಸಭೆ ಸದಸ್ಯ ರಾಮಚಂದ್ರ ಮಾತನಾಡಿ ಚುನಾವಣೆಯಲ್ಲಿ ಸೋತ ನಂತರ ಕ್ಷೇತ್ರವನ್ನೇ ಮರೆತಿರುವ ಅವರು ಚುನಾವಣಾ ಪ್ರಚಾರಕ್ಕಾಗಿ ಇಲ್ಲ ಸಲ್ಲದ ಮಾತುಗಳನ್ನಾಡುವುದು ಶೋಭೆಯಲ್ಲ, ಜನತೆಗಾಗಿ ದುಡಿಯುವವರಾರು ಎಂಬದನ್ನು ಮತದಾರರು ತೀರ್ಮಾನಿಸುತ್ತಾರೆ ಎಂದರು. ಚುನಾವಣೆ ಪ್ರಚಾರಕ್ಕಾಗಿ, ಪಕ್ಷ ಸಂಘಟನೆಗಾಗಿ ಆವರು ಹೋರಾಟ ಮಾಡಲಿ, ಆದರೆ ಆಧಾರ ರಹಿತ ಹೇಳಿಕೆ ನೀಡುವುದು ಖಂಡನೀಯ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್‌ ಮತ್ತು ಸಿ.ಬಿ.ಧನಲಕ್ಷ್ಮೀ ಮಾತನಾಡಿ, ‘ಶಿವಕುಮಾರ್‌ ಮತ್ತು ಸುರೇಶ್‌ ಅವರು ಕ್ಷೇತ್ರದಲ್ಲಿ ಅಭಿವೃದ್ಧಿಯನ್ನೇ ಮಾಡಿಲ್ಲವೆಂದು ಆರೋಪಿಸಿರುವ ವಿಶ್ವನಾಥ್‌ ಬೆಂಗಳೂರಿನಲ್ಲಿದ್ದರೆ ಹೇಗೆ ಗೊತ್ತಾಗುತ್ತದೆ, ಕನಕಪುರಕ್ಕೆ ಬಂದು ಕ್ಷೇತ್ರ ಪ್ರವಾಸ ಮಾಡಲಿ, ಇಲ್ಲವೇ ನಾವೇ ಆವರಿಗೆ ಅಭಿವೃದ್ಧಿ ಆಗಿರುವ ಕೆಲಸವನ್ನು ತೋರಿಸುತ್ತೇವೆ’ ಎಂದರು.

ಮುಖಂಡ ಶಾಂತಕುಮಾರ್‌ ಮಾತನಾಡಿ, ಸಹೋದರರಿಬ್ಬರು ವಿರೋಧಿಗಳ ಮೇಲೆ ಕೇಸು ಹಾಕಿಸುತ್ತಾರೆ, ತೊಂದರೆ ನೀಡುತ್ತಾರೆ ಎಂದು ಆರೋಪಿಸಿದ್ದಾರೆ. ಯಾರ ಮೇಲೆ ಪ್ರಕರಣ ದಾಖಲಿಸಿದ್ದನ್ನು, ಅವರನ್ನು ಇವರು ಬಿಡಿಸಿದ್ದರೆ ವಿವರ ನೀಡಲಿ, ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ ಎಂಬ ಆಧಾರರಹಿತ ಆರೋಪವನ್ನು ಸಾಬೀತು ಪಡಿಸಬೇಕು, ಇಲ್ಲವಾದಲ್ಲಿ ಇವರು ನಡೆಸುವ ಸಭೆಗಳ ಮುಂದೆ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಕಸಬಾ ಹೋಬಳಿ ಅಧ್ಯಕ್ಷ ಓರಳ್‌ಗಲ್‌ ರಮೇಶ್‌, ಮುಖಂಡರಾದ ಚೀರಣಕುಪ್ಪೆ ಮಹೇಶ್‌, ತಿಮ್ಮೇಗೌಡ, ಎಲ್‌.ಐ.ಸಿ. ದೇವರಾಜು, ಬರಡನಹಳ್ಳಿ ಚಂದ್ರಶೇಖರ್‌, ಚೀರಣಕುಪ್ಪೆರವಿ, ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ತಾಲ್ಲೂಕು ಅಧ್ಯಕ್ಷ ಮಹಮ್ಮದ್‌ ಅಸ್ಲಾಂ, ಉಪಾಧ್ಯಕ್ಷ ಮಹಮ್ಮದ್‌ ಅಯೂಬ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT