6

ಮಾತನಾಡಿದರೆ ಧರ್ಮ ಹುಡುಕುವ ಪರಿಸ್ಥಿತಿ

Published:
Updated:

ಭದ್ರಾವತಿ: ಯಾರು ವ್ಯವಸ್ಥೆಯಲ್ಲಿನ ದೋಷವನ್ನು ಮಾತನಾಡುತ್ತಾರೋ ಅವರ ಧರ್ಮವನ್ನು ಹುಡುಕುವ ಮೂಲಕ ಬೆದರಿಕೆ ಹಾಕುವ ಪ್ರವೃತ್ತಿ ಹೆಚ್ಚುತ್ತಿರುವುದು ದುರದೃಷ್ಟಕರ ಎಂದು ಕೋಮು ಸೌಹಾರ್ದ ವೇದಿಕೆ ಮುಖಂಡ ಕೆ.ಎಲ್. ಅಶೋಕ್ ಬೇಸರ ವ್ಯಕ್ತಪಡಿಸಿದರು.

ಕೋಮು ಸೌಹಾರ್ದ ವೇದಿಕೆ ಶುಕ್ರವಾರ ಏರ್ಪಡಿಸಿದ್ದ 15ನೇ ವರ್ಷದ ಆಚರಣೆ ಹಾಗೂ ‘ಗಿರಿಯೆಡೆಗೆ ನಡಿಗೆ’ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ನಟ ಪ್ರಕಾಶ್ ರೈ ತಮ್ಮ ನಿಲುವು ವ್ಯಕ್ತಪಡಿಸಿದರೆ, ‘ಅವರು ರೈ ಅಲ್ಲ ರಾಜ್’ ಎಂದು ಧರ್ಮ ಹುಡುಕಾಟ ನಡೆಸಿದ ಕೋಮು ಮನಸ್ಸಿನ ವ್ಯಕ್ತಿಗಳು ನಟ ವಿಜಯ್, ದೀಪಿಕಾ ಕುರಿತು ಸಹ ಇದೇಮನಸ್ಥಿತಿ ವ್ಯಕ್ತಪಡಿಸಿರುವುದು ಆಂತಕಕಾರಿ ಬೆಳವಣಿಗೆ ಎಂದರು. ಜನಪರ ಚಿಂತನೆ ಮಾಡುವ ವ್ಯಕ್ತಿಗಳ ವೈಯಕ್ತಿಕ ಬದುಕನ್ನು ಕೆದಕಿ, ತೆಜೋವಧೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಸತ್ಯ ಹೇಳುವ ಜನರಿಗೆ ಇಲ್ಲಿನ ಸರ್ಕಾರ ನೀಡುತ್ತಿರುವ ಬಹುಮಾನ ಎಂದು ಕಿಡಿಕಾರಿದರು.

ಹಂತಕರನ್ನು ಬಂಧಿಸುವ ಕೆಲಸ ನಡೆದಿಲ್ಲ. ಬದಲಾಗಿ ಹತ್ಯಾಕಾರರ ಬಂಧನಕ್ಕೆ ಆಗ್ರಹಿಸುವ ವ್ಯಕ್ತಿ, ಸಂಘಟನೆಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಇದನ್ನು ಖಂಡಿಸಿದರೆ ಅದಕ್ಕೆ ಕೋಮುವಾದದ ಲೇಪ ಹಚ್ಚಲಾಗುತ್ತಿದೆ ಎಂದು ವಿಷಾದಿಸಿದರು.

ಸಂವಿಧಾನಿಕ ಹಕ್ಕುಗಳು ಇಂದು ಕಾಣದಂತಾಗಿದ್ದು, ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸುವ ಶಕ್ತಿಗಳ ದಮನಕಾರಿ ಪ್ರವೃತ್ತಿ ಹೆಚ್ಚಿದೆ. ಇದಕ್ಕೆ ಅಂತ್ಯ ಹಾಡಬೇಕು ಎನ್ನುವುದು ವೇದಿಕೆ ನಿಲುವು ಎಂದರು.

ಬಾಬಾಬುಡನ್ ದರ್ಗಾವನ್ನು ಮತ್ತೊಂದು ಅಯೋಧ್ಯೆ ಮಾಡುತ್ತೇವೆ ಎಂದು ಹೊರಟವರಿಗೆ ತಕ್ಕ ಉತ್ತರ ನೀಡುವ ಕೆಲಸ ವೇದಿಕೆಯಿಂದ ನಡೆದಿದೆ. ಈ ಬಾರಿ ಸಹ ಸೌಹಾರ್ದ ನಡಿಗೆ ಡಿ. 28, 29ರಂದು ನಡೆಯಲಿದೆ ಎಂದು ಹೇಳಿದರು.

ಸಭೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ.ಮಾಯಣ್ಣ, ಪ್ರಗತಿಪರ ವೇದಿಕೆ ಸುರೇಶ್, ಉಜ್ಜೀನಿಪುರ ರಾಜು, ರಾಜೇಂದ್ರ, ದಸಂಸ ಶಿವಬಸಪ್ಪ, ವಿನೋದ್, ನಾಗವೇಣಿ, ಗೀತಾ, ಮಸ್ತಾನ್ ಅವರೂ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry