6

ದೇಗುಲಕ್ಕಿಂತ ಗ್ರಂಥಾಲಯ ಹೆಚ್ಚಲಿ: ಕಾಗೋಡು

Published:
Updated:
ದೇಗುಲಕ್ಕಿಂತ ಗ್ರಂಥಾಲಯ ಹೆಚ್ಚಲಿ: ಕಾಗೋಡು

ಶಿವಮೊಗ್ಗ: ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಿಜಿಟಲ್ ಗ್ರಂಥಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಶುಕ್ರವಾರ ಶಂಕು ಸ್ಥಾಪನೆ ನೆರವೇರಿಸಿ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ‘ದಿ.ಕಡಿದಾಳು ಮಂಜಪ್ಪ ಗ್ರಂಥಾಲಯ’ ಎಂದು ನಾಮಕರಣ ಮಾಡಿದರು.

ಶಂಕುಸ್ಥಾಪನೆ ನೆರವೇರಿಸಿ ಮಾತ ನಾಡಿದ ಸಚಿವ ಕಾಗೋಡು ತಿಮ್ಮಪ್ಪ, ‘ಪ್ರಸ್ತುತ ದಿನಗಳಲ್ಲಿ ಮನುಷ್ಯನಿಗೆ ಜ್ಞಾನವೇ ಪ್ರಧಾನ. ಹಾಗಾಗಿ ಮನುಷ್ಯ ಎಷ್ಟೇ ಹಣ, ಆಸ್ತಿ ಸಂಪಾದಿಸಿದರೂ ಅವೆಲ್ಲವೂ ಜ್ಞಾನದ ಮುಂದೆ ಗೌಣ. ಶಿವಮೊಗ್ಗ ಜನರ ಪಾಲಿಗೆ ಡಿಜಿಟಲ್ ಗ್ರಂಥಾಲಯವು ಆಸ್ತಿಯಾಗಬೇಕು. ಹಾದಿಬೀದಿಗಳಲ್ಲಿ ದೇವಸ್ಥಾನಗಳನ್ನು ಕಟ್ಟುವುದಕ್ಕಿಂತ ಗ್ರಂಥಾಲಯಗಳನ್ನು ತೆರೆಯಬೇಕು’ ಎಂದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಎಸ್.ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ರಾಜ್ಯದಲ್ಲಿ ಕಳೆದ ವರ್ಷದಿಂದ ಇ- ಗ್ರಂಥಾಲಯಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ ಎರಡು ಸಾವಿರ ಇ- ಗ್ರಂಥಗಳನ್ನು ನೀಡಿದ್ದೇವೆ. 68 ಲಕ್ಷ ಇ- ಗ್ರಂಥಗಳು ಉಚಿತವಾಗಿ ಲಭ್ಯ ಇವೆ’ ಎಂದರು.

‘50 ಸಾವಿರ ಪುಸ್ತಕಗಳನ್ನು ಮೊಬೈಲ್ ಆ್ಯಪ್‌ಗಳಿಗೆ ಬಿಡಲಾಗಿದೆ. ಯುವಕರಲ್ಲಿ ಮೊಬೈಲ್ ಕ್ರೇಜ್ ಹೆಚ್ಚಿರುವುದರಿಂದ ಎಲ್ಲೇ ಕುಳಿತು ಓದಲು ಅನುಕೂಲವಾಗುವಂತೆ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ‘ಗ್ರಾಮ ಪಂಚಾಯ್ತಿ ಗ್ರಂಥಾಲಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅವುಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಗ್ರಂಥಾಲಯಗಳಲ್ಲಿ ಕರ್ತವ್ಯ ಸಲ್ಲಿಸುವವರಿಗೆ ಕನಿಷ್ಠ ಸೌಲಭ್ಯ ಕಲ್ಪಿಸಬೇಕು’ ಎಂದರು.

ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಪುಸ್ತಕಗಳ ಅಧ್ಯಯನದಿಂದ ಪ್ರಜ್ಞಾವಂತರು ರೂಪುಗೊಳ್ಳುವುದರ ಜತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ನಗರದೊಳಗಿನ ಗ್ರಂಥಾಲಯಗಳಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದರು.

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ಸೂಡಾ ಅಧ್ಯಕ್ಷ ಇಸ್ಮಾಯಿಲ್ ಖಾನ್, ಪಾಲಿಕೆ ಸದಸ್ಯರಾದ ಐಡಿಯಲ್ ಗೋಪಿ, ವಿಶ್ವನಾಥ ಕಾಶಿ, ವಿಜಯಲಕ್ಷ್ಮಿ ಪಾಟೀಲ್, ದೀಪಕ್ ಸಿಂಗ್, ಸಹ್ಯಾದ್ರಿ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಪ್ರೊ.ಶಶಿರೇಖಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry