ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿಲ್ಲ ಅಂಗವಿಕಲ ಸ್ನೇಹಿ ವಾತಾವರಣ

Last Updated 2 ಡಿಸೆಂಬರ್ 2017, 9:46 IST
ಅಕ್ಷರ ಗಾತ್ರ

ತುಮಕೂರು:ಅಂಗವಿಕಲರಿಗೆ ನೀಡಬೇಕಾದ ಯಾವೊಂದು ನಾಗರಿಕ ಸೌಲಭ್ಯವನ್ನು ನೀಡದೇ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಜಿಲ್ಲೆಯಲ್ಲಿ ಕಂಡುಬರುತ್ತದೆ. ಜಿಲ್ಲೆಯಲ್ಲಿ 46 ಸಾವಿರ ಅಂಗವಿಕಲರಿದ್ದಾರೆ. ಇದರಲ್ಲಿ 21 ಸಾವಿರ ಮಹಿಳೆಯರು. 25 ಸಾವಿರ ಪುರುಷರು. ಜಿಲ್ಲೆಯ ಅಂಗವಿಕಲರಲ್ಲಿ ಸುಮಾರು 21 ರೀತಿಯ ಅಂಗ ವೈಕಲ್ಯಗಳನ್ನು ಗುರುತಿಸಲಾಗಿದೆ. ಈ ಎಲ್ಲ ಬೇರೆ ಬೇರೆ ಅಂಗವಿಕಲತೆಗೂ ಬೇರೆ ಬೇರೆ ರೀತಿಯ ಸೌಕರ್ಯಗಳನ್ನು ನೀಡಬೇಕು. ಆದರೆ ಅಂಥ ಯಾವುದೇ ಪ್ರಯತ್ನ ಜಿಲ್ಲೆಯಲ್ಲಿ ನಡೆದಂತೆ ಕಾಣಬರುವುದಿಲ್ಲ.

1995ರ ಅಂಗವಿಕಲರ ಅಧಿನಿಯಮದಡಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಸ್ಥಳೀಯ ಸಂಸ್ಥೆಗಳು ತಮ್ಮ ಅನುದಾನದ ಶೇ 3ರಷ್ಟನ್ನು ಅಂಗವಿಕಲರ ಅಭಿವೃದ್ಧಿಗಾಗಿ ಮೀಸಲಿಡಬೇಕು. ಆದರೆ ಇದರ ಪಾಲನೆಯೂ ಸಹ ಸರಿಯಾಗಿ ಅನುಷ್ಠಾನವಾದಂತೆ ಕಾಣುತ್ತಿಲ್ಲ.

‘ಸರ್ಕಾರದ ಆದೇಶದಂತೆ ಶೇ 3ರಷ್ಟು ಅನುದಾನವನ್ನು ಅಂಗವಿಕಲರಿಗೆ ನೀಡಿದ್ದರೆ ನಾವುಗಳು ಯಾರೂ ಸಹ ಊಹಿಸಲಾರದಷ್ಟು ಸೌಕರ್ಯಗಳು  ಸಿಗುತ್ತಿದ್ದವು’ ಎನ್ನುತ್ತಾರೆ ಜಿಲ್ಲಾ ಅಂಗವಿಕಲರ ಒಕ್ಕೂಟದ ಉಪಾಧ್ಯಕ್ಷ ಚಂದ್ರಶೇಖರ್‌.

ಅಡೆತಡೆ ರಹಿತ ವಾತಾವರಣಕ್ಕೆ ಹಿನ್ನಡೆ: ಅಂಗವಿಕಲರಿಗೆ ಅಡೆತಡೆ ರಹಿತ ವಾತಾವರಣವನ್ನು ನಿರ್ಮಿಸಬೇಕು ಎನ್ನುವುದು ಈ ಅಧಿನಿಯಮದ ಇನ್ನೊಂದು ಆದೇಶ. ಜಿಲ್ಲೆಯ ಯಾವೊಂದು  ಸರ್ಕಾರಿ ಕಚೇರಿಗಳಲ್ಲೂ ಅಂಗವಿಕಲರಿಗಾಗಿ ಪ್ರತ್ಯೇಕ  ರ‍್ಯಾಂಪ್‌ ನಿರ್ಮಿಸಿಲ್ಲ. ಇನ್ನೂ ಲಿಪ್ಟ್‌ಗಳ ಮಾತು ದೂರವೇ ಉಳಿಯಿತು.

ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತಿ ಕಚೇರಿಗಳಲ್ಲೂ  ರ‍್ಯಾಂಪ್‌ ಮತ್ತು ಲಿಫ್ಟ್‌ ವ್ಯವಸ್ಥೆ ಇಲ್ಲವಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಚೇರಿಗಳು ಮೇಲಂತ್ತಸಿನಲ್ಲಿವೆ. ಅಂಗವಿಕಲರು ಇಲ್ಲಿಗೆ ಹತ್ತುವುದು ಹೇಗೆ ಎಂಬುದಕ್ಕೆ ಅಧಿಕಾರಿಗಳೇ ಉತ್ತರಿಸಬೇಕು. ನೆಲಮಹಡಿಯಲ್ಲಿಯೇ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಬೇಕು. ಆದರೆ ಇಂಥ ಕೌಂಟರ್‌ಗಳು ಸರ್ಕಾರದ ಯಾವುದೇ ಕಚೇರಿಯಲ್ಲೂ ಕಂಡುಬರಲಿಲ್ಲ.

‘ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸಹ ತಮ್ಮ  ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಶೇ 3 ರಷ್ಟು ಅನುದಾನವನ್ನು  ಅಂಗವಿಕಲರಿಗಾಗಿ ಖರ್ಚು ಮಾಡಬೇಕು. ಆದರೆ ಜನಪ್ರತಿನಿಧಿಗಳು ಹಣ ಬಳಕೆಯಲ್ಲಿ ವಿಫಲರಾಗಿದ್ದಾರೆ. ಅಂಗವಿಕಲರ ಬಗ್ಗೆ ಅವರಿಗೆ ಆಸಕ್ತಿಯೂ ಇದ್ದಂತೆ ಕಾಣುವುದಿಲ್ಲ’ ಎಂದು ಅಂಗವಿಕಲರೊಬ್ಬರು ಹೇಳಿದರು.

ಅಂಕಿ ಅಂಶ

46,000 ಜಿಲ್ಲೆಯಲ್ಲಿರುವ ಅಂಗವಿಕಲರ ಸಂಖ್ಯೆ

21,000 ಅಂಗವಿಕಲ ಮಹಿಳೆಯರ ಸಂಖ್ಯೆ

25,000 ಅಂಗವಿಕಲ ಪುರುಷರ ಸಂಖ್ಯೆ

8 ವರ್ಷದಿಂದ ಸ್ಥಗಿತಗೊಂಡಿದೆ ಪುನರ್ವಸತಿ ಕೇಂದ್ರ
ಅಂಗವಿಕಲರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪುನರ್ವಸತಿ ಕೇಂದ್ರವನ್ನು ಬಹಳ ಹಿಂದೆಯೇ ತೆರೆಯಲಾಗಿತ್ತು. ಆದರೆ ಎಂಟು ವರ್ಷಗಳಿಂದ ಸ್ಥಗಿತಗೊಂಡಿದೆ.  ಇದನ್ನು ಪುನರ್‌ ಆರಂಭಗೊಳಿಸುವ ಕಾರ್ಯಕ್ಕೆ ಮಾತ್ರ ಇದುವರೆಗೂ ಕಾಲ ಕೂಡಿ ಬಂದಿಲ್ಲ ಎನ್ನುತ್ತಾರೆ ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆಯ ಅಧ್ಯಕ್ಷ ಸಿ.ಗಂಗರಾಜು.

‘ ಪುನರ್ವಸತಿ ಕೇಂದ್ರವನ್ನು ಆರಂಭಿಸುವಂತೆ ಹಲವು ಬಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ. ಆದರೆ ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ’ ಎಂದು ಆರೋಪಿಸಿದರು. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಮೇಶ್, ‘ಪುನರ್ವಸತಿ ಕೇಂದ್ರವನ್ನು ಆರಂಭಿಸುವ ಆಕಾಂಕ್ಷೆ ಎಲ್ಲಾ ಹಿರಿಯ ಅಧಿಕಾರಿಗಳಿಗೂ ಇದೆ. ಆದರೆ ಕೆಲವೊಂದು ತಾಂತ್ರಿಕ ದೋಷಗಳಿಂದ ಆರಂಭಿಸಲಾಗುತ್ತಿಲ್ಲ. ಕೇಂದ್ರವನ್ನು ಯಾವುದಾದರೂ ಆಸ್ಪತ್ರೆಯೇ ನೋಡಿಕೊಳ್ಳಬೇಕು ಎನ್ನುವ ನಿಯಮವಿದೆ. ಆದರೆ ಯಾವುದೇ ಆಸ್ಪತ್ರೆ ಮುಂದೆ  ಬರುತ್ತಿಲ್ಲ. ಹೀಗಾಗಿ ಸಮಸ್ಯೆ ಕಗ್ಗಂಟಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT