ಭಾನುವಾರ, ಮಾರ್ಚ್ 7, 2021
28 °C

ಬದುಕು ರೂಪಿಸಿಕೊಂಡ ಬಸವರಾಜ

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

ಬದುಕು ರೂಪಿಸಿಕೊಂಡ ಬಸವರಾಜ

ಶಹಾಪುರ: ‘ಸಕಾರಾತ್ಮಕ ಚಿಂತನೆ ಮಾಡುತ್ತಾ ಸದಾ ಕೆಲಸದಲ್ಲಿ ತೊಡಗಿಕೊಂಡರೆ ಅಂಗವೈಕಲ್ಯ ಎಂಬುವುದು ಅರಿವಿಗೆ ಬರುವುದಿಲ್ಲ. ಸ್ವಾಭಿಮಾನದ ಮೂಲಕ ಜೀವನ ರೂಪಿಸಿಕೊಳ್ಳುವುದನ್ನು ನಾವು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು’ ಎಂಬ ಧ್ಯೇಯದೊಂದಿಗೆ ಜೀವನ ನಡೆಸುತ್ತಿದ್ದಾರೆ ಖವಾಸಪುರದ ಬಸವರಾಜ ಚಂದ್ರಶೇಖರ ಮದ್ರಕಿ.

‘ಚಿಕ್ಕ ವಯಸ್ಸಿನಲ್ಲಿಯೇ ಪೋಲಿಯೊಗೆ ತುತ್ತಾಗಿ ಎರಡು ಕಾಲುಗಳಲ್ಲಿನ ಶಕ್ತಿ ಕಳೆದುಕೊಂಡೆ. ಎದ್ದು ನಿಲ್ಲಲು ಹಾಗೂ ನಡೆದಾಡಲು ಆಗುವುದಿಲ್ಲ. ನನ್ನ ಪಾಲಿಗೆ ಕೈಗಳೇ ಕಾಲು ಆಗಿವೆ. ತಂದೆ ತಾಯಿ ಆಸರೆಯಲ್ಲಿ ಜೀವನ ಸಾಗಿಸುತ್ತಿರುವೆ. ನಮ್ಮದು ಬಡ ಕುಟುಂಬ. ತಂದೆ ಹಾಗೂ ಅಣ್ಣ ಹೋಟೆಲ್ ನಡೆಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ನನ್ನ ಕೈಲಾದ ಮಟ್ಟಿಗೆ ದುಡಿಯಬೇಕು ಎಂಬ ಛಲದಿಂದ ಕುಳಿತು ತಿನ್ನದೆ ಕುಟುಂಬಕ್ಕೆ ಆಸರೆಯಾಗಲು ದುಡಿಯುತ್ತಿರುವೆ’ ಎನ್ನುತ್ತಾರೆ ಅವರು.

‘ಕಾಲುಗಳು ಇಲ್ಲದಿರುವ ಕೊರಗು ಬೇಡ. ಬಲಿಷ್ಠವಾದ ನನ್ನ ಎರಡು ಕೈಗಳಿಂದ ನಗರದ ಸೈಕಲ್ ಮಳಿಗೆಯಲ್ಲಿ ಕೆಲಸ ಮಾಡುತ್ತೇನೆ. ರಿಪೇರಿ, ಪಂಚರ್ ಹಾಕುತ್ತೇನೆ. ಪ್ರತಿ ತಿಂಗಳು ₹3,000 ನೀಡುತ್ತಾರೆ.ತ್ರೈಸಿಕಲ್‌ ಇದೆ. ಓಡಾಡಲು ತೊಂದರೆ ಇಲ್ಲ. ಕೆಲಸದಲ್ಲಿ ಸದಾ ಮಗ್ನರಾಗಬೇಕು. ಜತೆಯಲ್ಲಿ ಪ್ರತಿ ತಿಂಗಳು ಅಂಗವಿಕಲ ಮಾಸಾಶನ ಬರುತ್ತದೆ. ಜೀವನ ನಿರ್ವಹಣೆಗೆ ಯಾವುದೇ ಕಷ್ಟವಾಗಿಲ್ಲ’ ಎನ್ನುತ್ತಾರೆ ಬಸವರಾಜ ಮದ್ರಿಕಿ.

‘ಅಂಗವಿಕಲನಾಗಿರುವೆ ಎಂಬ ಮಾನಸಿಕ ಚಿಂತೆಯಿಂದ ಹೊರ ಬರಬೇಕು. ಓಡಾಡಲು ಆಗುವುದಿಲ್ಲ ಎಂಬ ನೆಪದಲ್ಲಿ ದುಶ್ಚಟಗಳಿಗೆ ಬಲಿಯಾಗಬಾರದು. ಭಾರವಾದ ಕೆಲಸ ನಮ್ಮಿಂದ ಮಾಡಲು ಆಗದಿರಬಹುದು.ಆದರೆ, ಹಗುರವಾದ ಕೆಲಸಗಳನ್ನು ಅನಾಯಸವಾಗಿ ನಿರ್ವಹಿಸಲು ಶಕ್ತಿ ಇದೆ’ ಎನ್ನುತ್ತಾರೆ ಅವರು.

‘ನನಗೆ ತ್ರಿಚಕ್ರ ವಾಹನ ಮಂಜೂರು ಆಗಿದೆ. ಅಗತ್ಯ ದಾಖಲೆಗಳನ್ನು ಹಾಜರುಪಡಿಸದ ಕಾರಣ ಇನ್ನು ಕೊಟ್ಟಿಲ್ಲ. ಜಿಲ್ಲಾ ಅಂಗವಿಕಲ ಕಚೇರಿಗೆ ಅಲೆದಾಡಿ ಸುಸ್ತಾಗಿ ಹೋಗಿರುವೆ. ಅಲ್ಲಿನ ಅಧಿಕಾರಿಗಳು ಇಲ್ಲದ ನೆಪ ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಲಂಚ ಕೇಳಿದರೆ ನಾನು ಎಲ್ಲಿಂದ ಕೊಡಲಿ’ ಎಂದು ಪ್ರಶ್ನಿಸುತ್ತಾರೆ.

* * 

ಅಂಗವಿಕಲ ಕಲ್ಯಾಣಕ್ಕಾಗಿ ರೂಪಿಸಿದ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಿಸಲು ಸಂಘ– ಸಂಸ್ಥೆಗಳು ನೆರವಿನ ಅಭಯ ನೀಡಬೇಕು.

ಬಸವರಾಜ ಮದ್ರಿಕಿ

ಅಂಗವಿಕಲ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.