7

ಏಡ್ಸ್ ರೋಗಿಗಳ ಸಂಖ್ಯೆ ಇಳಿಮುಖ: ಡಾ. ಶಿವರಾಜ ಸಜ್ಜನಶೆಟ್ಟಿ

Published:
Updated:

ಕಲಬುರ್ಗಿ: ‘ಏಡ್ಸ್ ಕುರಿತು ಸರ್ಕಾರ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವುದರಿಂದ ರಾಜ್ಯದಲ್ಲಿ ಏಡ್ಸ್ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಹೇಳಿದರು.

ಇಲ್ಲಿನ ಸೇಂಟ್ ಮೇರಿ ಶಾಲೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಾರ್ವಜನಿಕರಲ್ಲಿ ಈ ಬಗ್ಗೆ ಇನ್ನೂ ಜಾಗೃತಿ ಮೂಡಿಸಬೇಕು. ಅಂದಾಗ ಏಡ್ಸ್ ರೋಗವನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ಮಾಣಿಕ್ಯ ಮಾತನಾಡಿ, ‘ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯವು ಬಹುಮುಖ್ಯ ಪಾತ್ರವಹಿಸುತ್ತದೆ. ಕಾರ್ಯಕ್ಷಮತೆ ಹಾಗೂ ಆರೋಗ್ಯದ ಮೇಲೆ ಸಾಧನೆ ಅವಲಂಬಿತವಾಗಿರುತ್ತದೆ. ಮನುಷ್ಯ ಒತ್ತಡಕ್ಕೆ ಒಳಗಾದಾಗ ಸಮಸ್ಯೆಗಳು ಹೆಚ್ಚಾಗುತ್ತವೆ. ಸಮಸ್ಯೆಗಳು ಹೆಚ್ಚಾದಂತೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸಮಸ್ಯೆ ಮುಕ್ತ ಜೀವನ ನಡೆಸಬೇಕು’ ಎಂದು ತಿಳಿಸಿದರು.

ಎಆರ್‌ಟಿ ಕೇಂದ್ರದ ನೋಡಲ್ ಅಧಿಕಾರಿ ಡಾ. ದೇವೀಂದ್ರಪ್ಪ ಮೈನಾಳ ಮಾತನಾಡಿ, ‘ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಏಡ್ಸ್ ರೋಗ ಹರಡುತ್ತದೆ. ಏಡ್ಸ್ ಪೀಡಿತ ರೋಗಿಯನ್ನು ಸ್ಪರ್ಶಿಸುವುದರಿಂದ, ಅವರ ಜತೆ ಊಟ ಮಾಡುವುದರಿಂದ ಏಡ್ಸ್ ರೋಗ ಹರಡುವುದಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆಗಳಿದ್ದು, ಅವುಗಳನ್ನು ಹೋಗಲಾಡಿಸಬೇಕು’ ಎಂದು ಹೇಳಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ರಾಜೇಂದ್ರ ಭಾಲ್ಕೆ, ಫಾದರ್ ಬಾಪೂಜಿ, ಶರಣಬಸಪ್ಪ, ದೀಪಕ ಕೋಸಗಿ ಇದ್ದರು. ಇದಕ್ಕೂ ಮುನ್ನ ‘ಆರೋಗ್ಯ ಎಲ್ಲರ ಹಕ್ಕು, ನನ್ನ ಆರೋಗ್ಯ ನನ್ನ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಸೇಂಟ್ ಮೇರಿ ಶಾಲೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ಮತ್ತು ವಾಕ್‌ಥಾನ್‌ ಜರುಗಿತು.

* * 

ಸಮಸ್ಯೆಗಳು ಹೆಚ್ಚಾದಂತೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸಮಸ್ಯೆ ಮುಕ್ತ ಜೀವನ ನಡೆಸಬೇಕು

ಎಸ್.ಆರ್. ಮಾಣಿಕ್ಯ, ಹಿರಿಯ  ಸಿವಿಲ್ ನ್ಯಾಯಾಧೀಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry