ಬುಧವಾರ, ಮಾರ್ಚ್ 3, 2021
19 °C

ಹಿಂಗಾರು ಬೆಳೆಗೆ ವರವಾದ ಕೆಳದಂಡೆ ನೀರು

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

ಹಿಂಗಾರು ಬೆಳೆಗೆ ವರವಾದ ಕೆಳದಂಡೆ ನೀರು

ಚಿಂಚೋಳಿ: ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ್ ಜಲಾಶಯದಿಂದ ಮುಖ್ಯಕಾಲುವೆಗೆ ಬಿಟ್ಟಿರುವ ನೀರು ಅಚ್ಚುಕಟ್ಟು ಪ್ರದೇಶದ ಸುಮಾರು 25ಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ರೈತರಿಗೆ ವರವಾಗಿ ಪರಿಣಮಿಸಿದೆ.

ಸುಮಾರು 80 ಕಿ.ಮೀ ಉದ್ದದ ಮುಖ್ಯ ಕಾಲುವೆ ಹಾಗೂ 64 ವಿತರಣಾ ನಾಲೆಗಳ ಮೂಲಕ ಸುಮಾರು 8,100 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯ ಯೋಜನೆ ಹೊಂದಿದೆ.

‘ನ. 14ರಿಂದ ಮುಖ್ಯ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, ಯೋಜನೆಯ ಕಟ್ಟಕಡೆಯ (ಟೇಲ್‌ ಎಂಡ್‌)ಕಿ.ಮೀ 80ರವರೆಗೆ ನೀರು ನ. 30ರಂದು ನೀರು ತಲುಪಿದೆ’ ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಾ ಅಗ್ನಿಹೋತ್ರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನೀರು ಬಿಡುಗಡೆಯಿಂದ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ವರವಾಗಿ ಪರಿಣಮಿಸಿದ್ದು, ಮುಂಗಾರಿನ ತೊಗರಿ ಮತ್ತು ಹತ್ತಿ ಹಿಂಗಾರಿನ ಜೋಳ, ಕಡಲೆ ಮೊದಲಾದ ಬೆಳೆಗಳಿಗೆ ರೈತರು ನೀರುಣಿಸುವ ಕೆಲಸದಲ್ಲಿ ತೊಡಗಿರುವುದು ಅಚ್ಚುಕಟ್ಟು ಪ್ರದೇಶದಲ್ಲಿ ಕಂಡುಬರುವ ಸಾಮಾನ್ಯ ನೋಟವಾಗಿದೆ.

ಯೋಜನೆ ಏಕೈಕ ಮುಖ್ಯನಾಲೆ ಹೊಂದಿದ್ದು, 80 ಕಿ.ಮೀ ಉದ್ದದಲ್ಲಿ 64 ವಿತರಣಾ ನಾಲೆಗಳಿವೆ. ಪ್ರತಿದಿನ 113 ಕ್ಯುಸೆಕ್‌ ನೀರು ನಾಲೆಗೆ ಹರಿಸಲಾಗುತ್ತಿದ್ದು, ರೈತರು ಅಲ್ಲಲ್ಲಿ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಜಲಾಶಯದ ನೀರು ಟೇಲ್‌ಎಂಡ್‌ವರೆಗೆ ನೀರು ಹರಿದಿದ್ದು, ಯೋಜನೆ ರೂಪುಗೊಂಡ ಮೇಲೆ ಇದು ಮೂರನೇ ಬಾರಿ. ಇದರಲ್ಲಿ ಅಧಿಕಾರಿಗಳ ಶ್ರಮವೂ ಹೆಚ್ಚಾಗಿದೆ. ಸಕಾಲದಲ್ಲಿ ನಾಲೆ ಹೂಳು ತೆಗೆದು, ಗಿಡಗಂಟೆ ತೆರವುಗೊಳಿಸಿ ಸರಿಯಾಗಿ ನಿರ್ವಹಣೆ ಮಾಡಿದ್ದರಿಂದ ನೀರು ಕೊನೆಯ ಹಂತ ತಲುಪಲು ಸಾಧ್ಯವಾಗಿದೆ’ ಎಂದರು.

ಯೋಜನೆಯ ಮುಖ್ಯ ನಾಲೆ ಮತ್ತು ವಿತರಣಾ ನಾಲೆಗಳು ಹಾಳಾಗಿದ್ದು, ಅಲ್ಲಲ್ಲಿ ನೀರು ವ್ಯರ್ಥ ಪೋಲಾಗುತ್ತಿದೆ. ಹೊಲಗಾಲುವೆಗಳು ಮುಚ್ಚಿ ಹೋಗಿದ್ದರಿಂದ ನೀರು ಬೆಳೆಗಳಿಗೆ ಉಣಿಸಲು ಸಾಧ್ಯವಾಗದ ಕಾರಣ ರೈತರು ಡೀಸೆಲ್‌ ಎಂಜಿನ್‌ ನೆರವಿನಿಂದ ನೀರು ಹರಿಸುತ್ತಿದ್ದಾರೆ.

ಮುಖ್ಯ ಎಂಜಿನಿಯರ್‌ ಪರಿಶೀಲನೆ: ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಟ್ಟಿರುವುದು ಹಾಗೂ ರೈತರು ಬೆಳೆಗಳಿಗೆ ನೀರುಣಿಸು ತ್ತಿರುವುದನ್ನು ಕಲಬುರ್ಗಿ ನೀರಾವರಿ ವೃತ್ತದ ಮುಖ್ಯ ಎಂಜಿನಿಯರ್‌ ಜಗನ್ನಾಥ ವಿ.ಹಾಲಿಂಗೆ ಗುರುವಾರ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದರು.

ನಾಗರಾಳ್‌, ಚಿಮ್ಮನಚೋಡ್‌, ತಾಜಲಾಪುರ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ನೀಮಾ ಹೊಸಳ್ಳಿ, ಚಿಂಚೋಳಿ, ಚಿಮ್ಮಾಈದಲಾಯಿ, ಅಣವಾರ್‌, ಐಪಿ ಹೊಸಳ್ಳಿ, ಬೆಡಕಪಳ್ಳಿ, ರಾಮತೀರ್ಥ, ಯಾಕಾಪುರ, ಕೆರೋಳ್ಳಿ, ಕೊರಡಂಪಳ್ಳಿ, ಕರ್ಚಖೇಡ್‌ ಮಾರ್ಗವಾಗಿ ಹಾದುಹೋದ ಮುಖ್ಯ ನಾಲೆಯನ್ನು ಅವರು ಪರಿಶೀಲಿಸಿದರು.

ವಿಭಾಗ ಕಚೇರಿ ವಾಪಸ್‌ಗೆ ಒತ್ತಾಯ 

ಯೋಜನೆಯ ಮುಖ್ಯ ನಾಲೆ ಮತ್ತು ವಿತರಣಾ ನಾಲೆಗಳ ಆಧುನಿಕರಣಕ್ಕೆ ₹125 ಕೋಟಿ ಮಂಜೂರಾಗಿದ್ದು, ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಇನ್ನೂ ಟೆಂಡರ್‌ಗೆ ಅರ್ಜಿ ಸಲ್ಲಿಸುವ ಅವಧಿ ಮುಗಿದಿಲ್ಲ. ಆದರೆ, ಯೋಜನೆ ಆರಂಭದಲ್ಲಿ ಇಲ್ಲಿ 4 ಉಪ ವಿಭಾಗ ಮತ್ತು ಒಂದು ವಿಭಾಗ ಕಚೇರಿ ಇತ್ತು. ಈಗ 3 ಉಪ ವಿಭಾಗ ಮತ್ತು ಒಂದು ವಿಭಾಗ ಕಚೇರಿ ಸ್ಥಳಾಂತರವಾಗಿದೆ. ಇದನ್ನು ಮತ್ತೆ ವಾಪಸ್‌ ತರಬೇಕೆಂದು ರೈತರು ಒತ್ತಾಯಿಸಿದ್ದಾರೆ.

₹125 ಕೋಟಿ ಮೊತ್ತದ 80 ಕಿ.ಮೀ ಮತ್ತು 64 ವಿತರಣಾ ನಾಲೆ ಕಾಮಗಾರಿ ಅನುಷ್ಠಾನಕ್ಕೆ ಅಗತ್ಯ ಸಿಬ್ಬಂದಿ ಕೊರತೆಯಾಗುತ್ತಿಲ್ಲವೇ ಎಂದಾಗ, ‘ಹಾಗೇನು ಆಗುವುದಿಲ್ಲ’ ಎಂದು ಮುಖ್ಯ ಎಂಜಿನಿಯರ್‌ ಜಗನ್ನಾಥ ಹಾಲಿಂಗೆ ತಿಳಿಸಿದರು.

* * 

ನೀರು ಬಿಡುಗಡೆ ಮಾಡ ಲಾಗಿದ್ದು, ಮುಂಗಾರಿನ ತೊಗರಿ, ಹತ್ತಿ ಹಾಗೂ ಹಿಂಗಾರಿನ ಜೋಳದ ಬೆಳೆಗಳಿಗೆ ರೈತರು ನೀರು ಪಡೆಯುತ್ತಿದ್ದಾರೆ.

ಜಗನ್ನಾಥ ವಿ.ಹಾಲಿಂಗೆ, ಮುಖ್ಯ ಎಂಜಿನಿಯರ್‌, ನೀರಾವರಿ, ಕಲಬುರ್ಗಿ ವೃತ್ತ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.