ಗುರುವಾರ , ಮಾರ್ಚ್ 4, 2021
18 °C

ನಿರಾಶ್ರಿತರ ಬೇಡಿಕೆ ಈಡೇರಿಕೆಗಾಗಿ ಸಿ.ಎಂ.ಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರಾಶ್ರಿತರ ಬೇಡಿಕೆ ಈಡೇರಿಕೆಗಾಗಿ ಸಿ.ಎಂ.ಗೆ ಮನವಿ

ಕಾರವಾರ: ‘ಸೀಬರ್ಡ್ ನಿರಾಶ್ರಿತರಿಗೆ ಹೆಚ್ಚುವರಿ ಪರಿಹಾರವನ್ನು ಶೀಘ್ರ ವಿತರಣೆ ಮಾಡಬೇಕು ಹಾಗೂ ನಿರಾಶ್ರಿತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲಾಗುವುದು’ ಎಂದು ಸೀಬರ್ಡ್ ನಿರಾಶ್ರಿತರ ಹೋರಾಟ ವೇದಿಕೆಯ ಕಾನೂನು ಸಲಹೆಗಾರ ಕೆ. ಆರ್. ದೇಸಾಯಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೀಬರ್ಡ್ ಯೋಜನೆಗೆ ಅಂಕೋಲಾ, ಕಾರವಾರ ತಾಲ್ಲೂಕಿನ ಜನರು ತಮ್ಮ ಮನೆ, ಜಮೀನನ್ನು ತ್ಯಾಗ ಮಾಡಿದ್ದಾರೆ. ಅಂದು ಸರ್ಕಾರ ಜನರಿಗೆ ನೀಡಿದ ಭರವಸೆಗಳೆಲ್ಲ ಹುಸಿಯಾಗಿದ್ದು, ಈ ಭಾಗದ ನಿರಾಶ್ರಿತರು ಸಂಕಷ್ಟ ಅನುಭವಿಸುವಂತಾಗಿದೆ’ ಎಂದು ದೂರಿದರು.

ಟಿಡಿಎಸ್ ಕಡಿತ: ‘ಸರ್ಕಾರದ ಯಾವುದೇ ಯೋಜನೆಗೆ ಭೂಮಿ ಕಳೆದುಕೊಂಡ ನಿರಾಶ್ರಿತರು ಪರಿಹಾರ ಪಡೆಯುವುದು ಅವರ ಹಕ್ಕಾಗಿದೆ. ಇಂಥ ಹಣಕ್ಕೆ ಟಿಡಿಎಸ್ ಕಡಿತಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಇಷ್ಟಾದರು ಸೀಬರ್ಡ್ ನಿರಾಶ್ರಿತರಿಗೆ ನೀಡುವ ಪರಿಹಾರದಲ್ಲಿ ಟಿಡಿಎಸ್ ಕಡಿತಗೊಳಿಸಲಾಗುತ್ತಿದೆ. ಅಲ್ಲದೇ ಆದಾಯ ತೆರಿಗೆಯನ್ನು ಕೂಡ ಅವೈಜ್ಞಾನಿಕವಾಗಿ ಆಕರಿಸಲಾಗುತ್ತಿದೆ’ ಎಂದು ದೂರಿದರು.

ವೇದಿಕೆಯ ಕಾರ್ಯದರ್ಶಿ ರವೀಂದ್ರ ಅಮದಳ್ಳಿ ಮಾತನಾಡಿ, ಹೆಚ್ಚುವರಿ ಪರಿಹಾರಕ್ಕಾಗಿ ಭೂಸ್ವಾಧೀನ ಕಾಯ್ದೆ 18 (1) ಪ್ರಕರಣದಲ್ಲಿ ಒಂದು ಸಾವಿರಕ್ಕೂ ಅಧಿಕ ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದು, ಇದರಲ್ಲಿ ಸುಮಾರು 600 ಅರ್ಜಿಗಳು ಇತ್ಯರ್ಥವಾಗಿದ್ದು, ಉಳಿದ ಪ್ರಕರಣಗಳು ಡಿಸೆಂಬರ್ ಅಂತ್ಯದೊಳಗೆ ಬಗೆಹರಿಯುವ ಭರವಸೆ ಇದೆ. 28 (ಅ)ದಡಿ ಸಲ್ಲಿಕೆಯಾದ 1,494 ಅರ್ಜಿಗಳ ಪೈಕಿ 970 ಪ್ರಕರಣಗಳು ಇತ್ಯರ್ಥಗೊಂಡಿವೆ. ಆದರೆ 400 ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿದೆ. ದಾಖಲೆಗಳಲ್ಲಿ ಲೋಪ ಇದ್ದರೆ ಸರಿಪಡಿಸಲಾಗುವುದು’ ಎಂದರು.

ಡಿ.28ಕ್ಕೆ ಪ್ರತಿಭಟನೆ: ‘ನೌಕಾನೆಲೆ ಉದ್ಯೋಗದಲ್ಲಿ ನಿರಾಶ್ರಿತರಿಗೆ ಹಾಗೂ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು. ನಿರಾಶ್ರಿತ ಕುಟುಂಬಗಳ ಯುವಕ ಯುವತಿಯರಿಗೆ ₹ 25 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಡಿ. 28ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯ ಕೆ. ಆರ್. ನಾಯ್ಕ ಇದ್ದರು.

ಅಲಗೇರಿಯಲ್ಲಿ ವಿಮಾನ ನಿಲ್ದಾಣ?

‘ಸೀಬರ್ಡ್‌ ನೌಕಾನೆಲೆಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಸಮೀಪದ ಅಲಗೇರಿಯಲ್ಲಿ ಸುಮಾರು 75 ಹೆಕ್ಟೇರ್ ಭೂಮಿಯನ್ನು ವಶಪಡಿಸಿಕೊಳ್ಳಲು ರಕ್ಷಣಾ ಇಲಾಖೆ ಮುಂದಾಗಿದೆ. ಅಲ್ಲಿನ ಜನರಿಗೆ ಪರಿಹಾರ ಕೊಟ್ಟ ಬಳಿಕವೇ ಜಾಗವನ್ನು ಬಿಟ್ಟುಕೊಡುವಂತೆ ಜಾಗೃತಿಗೊಳಿಸಿದ್ದೇವೆ’ ಎಂದು ವೇದಿಕೆಯ ಅಧ್ಯಕ್ಷ ಬಿ.ಹೊನ್ನಪ್ಪ ಹೇಳಿದರು

* * 

ಸೀಬರ್ಡ್ ಯೋಜನೆಗೆ ಭೂಮಿ ಕಳೆದುಕೊಂಡವರು ಇಂದಿಗೂ ಸರಿಯಾದ ಸೌಲಭ್ಯವಿಲ್ಲದೆ ಅತಂತ್ರರಾಗಿದ್ದಾರೆ.

ರವೀಂದ್ರ ಅಮದಳ್ಳಿ

ವೇದಿಕೆ ಕಾರ್ಯದರ್ಶಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.