ಉ.ಪ್ರ. ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶಕ್ಕೂ ಗುಜರಾತ್ ಚುನಾವಣೆಗೂ ಹೊಲಿಕೆ ಬೇಡ: ಅಮಿತ್ ಷಾ

ನವದೆಹಲಿ: ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಈ ಪಲಿತಾಂಶವನ್ನು ಡಿ.9 ಮತ್ತು 14ರಂದು ನಡೆಯುವ ಗುಜರಾತ್ ವಿಧಾನಸಭಾ ಚುನಾವಣೆಗೆ ಹೊಲಿಕೆ ಮಾಡುವುದು ಸೂಕ್ತವಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.
ಶುಕ್ರವಾರ ಉತ್ತರ ಪ್ರದೇಶದ 16 ಪಾಲಿಕೆಗಳ ಫಲಿತಾಂಶ ಪ್ರಕಟವಾಗಿದ್ದು, ಆ ಪೈಕಿ 14ರಲ್ಲಿ ಬಿಜೆಪಿ ಜಯಗಳಿಸಿದೆ. ಜತೆಗೆ, ಕಾಂಗ್ರೆಸ್, ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳ ಕಳಪೆ ಪ್ರದರ್ಶನ ಮುಂದುವರೆದಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಕುರಿತು ಶುಕ್ರವಾರ ಮಾತನಾಡಿದ ಅಮಿತ್ ಷಾ, ‘ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ನಾಯಕರು ಹೇಳುತ್ತಿದ್ದರು. ಆದರೆ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಸ್ಥಿತ್ವ ಕಳೆದುಕೊಳ್ಳುತ್ತಿದೆ ಎಂದು ಜನರು ಹೇಳುತ್ತಿದ್ದಾರೆ’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ) ಕುರಿತು ಮಾತನಾಡುವ ಕಾಂಗ್ರೆಸ್ ನಾಯಕರು ಗುರುವಾರ ಪ್ರಕಟಗೊಂಡ ಅಂಕಿ ಅಂಶ ಕುರಿತು ಮೌನವಹಿಸಿದ್ದಾರೆ ಎಂದು ಷಾ ಟೀಕಿಸಿದರು.
ಸರಕು ಮತ್ತು ಸೇವಾತೆರಿಗೆ(ಜಿಎಸ್‌ಟಿ) ಜಾರಿಯಿಂದ ಉಂಟಾದ ಕೆಲ ಪರಿಣಾಮಗಳಿಂದ ಮೂರು ತಿಂಗಳ ಹಿಂದೆ ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ) ದರ ಕುಸಿದಿತ್ತು. ಆಗ ಕಾಂಗ್ರೆಸ್ ನಾಯಕರು ಟಿವಿಯಲ್ಲಿ ಕಾಣಿಸಿಕೊಂಡು ಇದರ ಬಗ್ಗೆ ಮಾತನಾಡುತ್ತಿದ್ದರು. ಇದೀಗ ಹೊಸ ಜಿಡಿಪಿ ದರ ಪ್ರಕಟಗೊಂಡಿದ್ದು, 6.7 ದರದಲ್ಲಿ ಚೇತರಿಕೆ ಕಂಡಿದೆ ಎಂದರು.
ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪಲಿತಾಂಶ ಮತ್ತು ಜಿಡಿಪಿ ದರದ ಹೊಸ ಅಂಕಿಅಂಶಗಳು ಕಾಂಗ್ರೆಸ್ ಮೌನಕ್ಕೆ ಕಾರಣವಾಗಿವೆ ಎಂದು ಷಾ ಹೇಳಿದರು.
ಅಯೋಧ್ಯೆ, ವಾರಣಸಿ, ಮಥುರಾ–ವೃಂದಾವನ, ಲಖನೌ, ಗೋರಖಪುರ, ಮೊರಾದಾಬಾದ್, ಝಾನ್ಸಿ, ಫಿರೋಜಾಬಾದ್, ಬರೇಲಿಯ ಮೇಯರ್ ಸ್ಥಾನಗಳು ಬಿಜೆಪಿ ಪಾಲಾಗಿವೆ. 16 ನಗರ ನಿಗಮ, 198 ನಗರ ಪಾಲಿಕೆ ಪರಿಷತ್, 438 ನಗರ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ಉತ್ತರ ಪ್ರದೇಶದ ಈ ಜಯ ಗುಜರಾತ್‌ನಲ್ಲಿ ಬಿಜೆಪಿಯ ನೈತಿಕ ಬಲ ಹೆಚ್ಚಿಸಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಜಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಅರ್ಪಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.