ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದರೆ ತಾಲ್ಲೂಕು ಘೋಷಣೆ

Last Updated 2 ಡಿಸೆಂಬರ್ 2017, 6:55 IST
ಅಕ್ಷರ ಗಾತ್ರ

ಮಡಿಕೇರಿ: ‘ಕಾವೇರಿ ಹಾಗೂ ಪೊನ್ನಂಪೇಟೆ ತಾಲ್ಲೂಕು ಘೋಷಣೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಎರಡೂ ತಾಲ್ಲೂಕು ಕೇಂದ್ರಗಳು ಘೋಷಣೆ ಆಗಲಿವೆ’ ಎಂದು ಶಾಸಕ ಕೆ.ಜಿ. ಬೋಪಯ್ಯ ಇಲ್ಲಿ ಭರವಸೆ ನೀಡಿದರು.

ನಗರದ ಬಾಲಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ‘ಎರಡು ಕಡೆಯೂ ಕಾಂಗ್ರೆಸ್‌ ಮುಖಂಡರೇ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಪ್ರತಿಭಟನೆ ಕೈಬಿಟ್ಟು ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿದ್ದರೆ ಉದ್ದೇಶ ಈಡೇರುತ್ತಿತ್ತು’ ಎಂದು ಹೇಳಿದರು.

‘ಬೆಳಗಾವಿ ಅಧಿವೇಶನದ ವೇಳೆಯೂ ತಾಲ್ಲೂಕು ಕೇಂದ್ರ ರಚನೆಯ ವಿಚಾರದಲ್ಲಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗಿದೆ. ಮುಖ್ಯಮಂತ್ರಿಗೂ ಮನವಿ ಮಾಡಲಾಗಿತ್ತು. ತಾಲ್ಲೂಕು ಕೇಂದ್ರದ ಎಲ್ಲ ಅರ್ಹತೆಗಳಿದ್ದರೂ ಕಡೆಗಣಿಸಲಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಎರಡು ತಾಲ್ಲೂಕು ಘೋಷಣೆ ಖಚಿತ’ ಎಂದು ತಿಳಿಸಿದರು.

‘ರಾಜ್ಯಕ್ಕೆ ವಿಯೆಟ್ನಾಂನಿಂದ 22 ಸಾವಿರ ಟನ್‌ ಕಳಪೆ ಗುಣಮಟ್ಟದ ಕಾಳುಮೆಣಸು ಬಂದಿದೆ. ಅದು ಸಕಲೇಶಪುರ, ಪಿರಿಯಾಪಟ್ಟಣ, ಮೈಸೂರಿನ ಆರ್‌ಎಂಸಿಗೂ ಪೂರೈಕೆಯಾಗಿದ್ದರೂ, ಗೋಣಿಕೊಪ್ಪಲು ಆರ್‌ಎಂಸಿ ಮೇಲೆ ಮಾತ್ರ ಆರೋಪ ಮಾಡಲಾಗುತ್ತಿದೆ. ಬಿಜೆಪಿ ಅಧಿಕಾರದಲ್ಲಿರುವ ಕಡೆ ಮಾನಸಿಕವಾಗಿ ಕುಗ್ಗಿಸಲಾಗುತ್ತಿದೆ. ಸುಳ್ಳು ಪ್ರಕರಣ ದಾಖಲಿಸುವ ಸಂಚು ನಡೆಯುತ್ತಿದೆ. ಇದಕ್ಕೆಲ್ಲಾ ಪಕ್ಷದ ಕಾರ್ಯಕರ್ತರು ಹೆದರಬೇಕಿಲ್ಲ. ಇದು ಕೆಲವೇ ದಿನಗಳಲ್ಲಿ ಕೊನೆಯಾಗಲಿದೆ’ ಎಂದು ಎಚ್ಚರಿಸಿದರು.

‘ಭಾಗ್ಯಕ್ಕೆ ದುಡ್ಡಿಲ್ಲ’ : ರಾಜ್ಯ ಸರ್ಕಾರವೇ ಘೋಷಣೆ ಮಾಡಿರುವ ವಿವಿಧ ಭಾಗ್ಯ ಯೋಜನೆಗಳಿಗೆ ಈಗ ಹಣದ ಕೊರತೆ ಎದುರಾಗಿದೆ. ಹೀಗಾಗಿ, ಒಂದೊಂದೇ ಭಾಗ್ಯಗಳು ಬಂದ್‌ ಆಗುತ್ತಿವೆ. ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಜಿಲ್ಲೆಗೆ ₹ 250 ಕೋಟಿ ಅನುದಾನ ಬರಬೇಕಿತ್ತು. ಆದರೆ, ಅಷ್ಟು ಪ್ರಮಾಣದಲ್ಲಿ ಅನುದಾನ ಜಿಲ್ಲೆಗೆ ಬಂದಿಲ್ಲ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯೂ ಸ್ಥಗಿತವಾಗಿದೆ. ಉದ್ಯೋಗ ಖಾತ್ರಿ ಯೋಜನೆ ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡುತ್ತಿಲ್ಲವೆಂದು ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ’ ಎಂದು ದೂರಿದರು.

‘ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಏಳು ತಿಂಗಳಿಂದ ಸಿಇಒ ಹುದ್ದೆ ಖಾಲಿ ಉಳಿದಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ‘ಸಿ’ ಅಂಡ್‌ ‘ಡಿ’ ಭೂಮಿ ಹಾಗೂ ‘ಜಮ್ಮ’ ಎಂದರೇ ಗೊತ್ತಿಲ್ಲ. ಅಂತಹ ವ್ಯಕ್ತಿಗೆ ಉಸ್ತುವಾರಿ ನೀಡಲಾಗಿದೆ. ಕಂದಾಯ ಇಲಾಖೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ’ ಎಂದು ಆಪಾದಿಸಿದರು.
ಕಾಂಗ್ರೆಸ್‌ ಸರ್ಕಾರವು ಎಲ್ಲ ವಿಭಾಗಗಳಲ್ಲೂ ವಿಫಲವಾಗಿದೆ. ಮರಳು ಹಾಗೂ ಕಮಿಷನ್‌ ದಂಧೆಯಲ್ಲಿ ಮಂತ್ರಿಗಳು ಭಾಗಿಯಾಗಿದ್ದಾರೆ. ಕೊಲೆ ಆರೋಪದಲ್ಲಿ ಇಬ್ಬರು ಸಚಿವರ ಹೆಸರು ಕೇಳಿಬಂದಿದೆ. ಅವರ ಬೆಂಬಲಕ್ಕೆ ಮುಖ್ಯಮಂತ್ರಿ ನಿಂತಿದ್ದಾರೆ. ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ಕೆಟ್ಟಭಾಷೆ ಬಳಸುತ್ತಿದ್ದಾರೆ. ಅವರಿಗೆ ಶೋಭೆ ತರುವ ವಿಚಾರವಲ್ಲ’ ಎಂದು ಎಚ್ಚರಿಸಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌, ಮನು ಮುತ್ತಪ್ಪ, ಮಹೇಶ್‌ ಜೈನಿ, ತಳೂರು ಎ. ಗಿರೀಶ್‌ಕುಮಾರ್‌, ರವಿ ಬಸಪ್ಪ, ರವಿ ಕಾಳಪ್ಪ, ಬೋಪಣ್ಣ, ಮೋಹನ್‌ ಮೊಣ್ಣಪ್ಪ ಹಾಜರಿದ್ದರು.

* * 

ಬಿಜೆಪಿ ಪರಿವರ್ತನಾ ಯಾತ್ರೆಯು ಜ.25ಕ್ಕೆ ಕೊಡಗು ಜಿಲ್ಲೆಗೆ ಬರಲಿದ್ದು, ಜಿಲ್ಲೆಯಾದ್ಯಂತ ನಡೆಯುವ ಸಭೆಗಳಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಿ
ಕೆ.ಜಿ. ಬೋಪಯ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT