ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂದೂರು ಕೆರೆಗೆ ನೀರು ತುಂಬಿಸಲು ಆಗ್ರಹ

Last Updated 2 ಡಿಸೆಂಬರ್ 2017, 7:32 IST
ಅಕ್ಷರ ಗಾತ್ರ

ಬಾದಾಮಿ: ಬೇರೆ ತಾಲ್ಲೂಕುಗಳಲ್ಲಿ ಕೆರೆಗಳಿಗೆ ನೀರು ತುಂಬಿಸಿದ ರೀತಿಯಲ್ಲಿಯೇ ಇಲ್ಲಿನ ಕೆಂದೂರ ಕೆರೆ ಭರ್ತಿ ಮಾಡುವಂತೆ ಒತ್ತಾಯಿಸಿ ಎಂದು ಗ್ರಾಮಸ್ಥರು ನೀರಾವರಿ ಇಲಾಖೆಯ ಎಂಜಿನಿಯರ್‌ಗೆ ಮನವಿ ಸಲ್ಲಿಸಿದ್ದಾರೆ.

‘ಕೆರೆಯ ಸಮೀಪ ಮಲಪ್ರಭಾ ಎಡದಂಡೆಯ ಬ್ಲಾಕ್‌ ನಂ. 53ರ ಉಪಕಾಲುವೆ ಇದೆ. ಅದರಲ್ಲಿ ಸಂಪೂರ್ಣವಾಗಿ ಮುಳ್ಳು ಕಂಟಿ ಬೆಳೆದು ಮುಚ್ಚಿದೆ. ಕೆಲವೆಡೆ ಸಿ.ಡಿ. ಒಡೆದುಹೋಗಿವೆ. ಕಾಲುವೆಯನ್ನು ದುರಸ್ತಿ ಮಾಡಿ ಕೆರೆಗೆ ನೀರು ತುಂಬಿಸಬೇಕು’ ಎಂದು ಗ್ರಾಮದ 50ಕ್ಕೂ ಅಧಿಕ ರೈತರು ಮನವಿ ಪತ್ರದಲ್ಲಿ ಸಹಿ ಮಾಡಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಮಳೆಯಾಗದೇ ಕೆರೆ ಬತ್ತಿ ಬರಿದಾಗಿದೆ. ಸುತ್ತಲಿನ ಗ್ರಾಮಗಳ ಜನತೆಗೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿದೆ. ಕೊಳವೆ ಬಾವಿಗಳು ಬರಿದಾಗಿವೆ. ಕೆರೆಯನ್ನು ತುಂಬಿದರೆ ಬಾವಿಯಲ್ಲಿನ ಅಂತರ್ಜಲ ಮಟ್ಟವು ಹೆಚ್ಚಲಿದೆ.

2013–14 ರಲ್ಲಿ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. 182 ಹೆಕ್ಟೇರ್‌ ಪ್ರದೇಶದ
ಕೆರೆಯಲ್ಲಿ ಬೆಳೆದ ಮುಳ್ಳಿನ ಕಂಟಿಯನ್ನು ಸಂಪೂರ್ಣವಾಗಿ ತೆಗೆಯಲಾಗಿದೆ. ಆದರೆ 182 ಹೆಕ್ಟೇರ್‌ ಪ್ರದೇಶದ ಪೈಕಿ ಕೇವಲ 20 ಎಕರೆ ಪ್ರದೇಶದಷ್ಟು ಮಾತ್ರ ಹೂಳನ್ನು ತೆಗೆಯಲಾಗಿದೆ.

‘ಇನ್ನೂ 160ಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಹೂಳನ್ನು ತೆಗೆಯಬೇಕಿದೆ. ಉಳಿದ ಪ್ರದೇಶದ ಹೂಳನ್ನು ತೆಗೆಸಲು ಕ್ಷೇತ್ರದ ಶಾಸಕರು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ‘182 ಹೆಕ್ಟೇರ್‌ ಪ್ರದೇಶದ ಕೆರೆಗೆ ನೀರನ್ನು ಭರ್ತಿಮಾಡಿದರೆ ಸುತ್ತಲಿನ ಏಳೆಂಟು ಗ್ರಾಮಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗಲಿದೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ಮಳಿ ಆಗಲಾರದಕ್ಕ ಈ ವರ್ಸ ಕೊಳವಿ ಬಾವಿ ಎಲ್ಲಾ ಬತ್ಯಾವ. ಕುಡಿಯಾಕ ನೀರಿಲ್ಲ. ಕೆರಿಯಾಗ ಪಕ್ಷಿ ಪ್ರಾಣಿಗೆ ಕುಡಿಯಾಕ ಸೆರಿಮುಕ್ಕ ನೀರಿಲ್ಲ ಎಲ್ಲಾ ಬತ್ತೈತಿ. ಕೆರಿಗೆ ನೀರು ತುಂಬಿಸಿದರ ಅನುಕೂಲ ಆಗತ್ತರಿ’ ಎಂದು ಗ್ರಾಮದ ದ್ಯಾವಪ್ಪ ನಿಲುಗಲ್‌ ಹೇಳಿದರು. ‘ಬೇರೆ ತಾಲ್ಲೂಕಿನಲ್ಲಿ ಕೆರೆಗೆ ನೀರು ತುಂಬಿಸಿದಂತೆ ನಮ್ಮ ತಾಲ್ಲೂಕಿನ ಕೆರೆಗಳಿಗೂ ನೀರನ್ನು ತುಂಬಿಸಬೇಕು’ ಎಂದು ಆಗ್ರಹಿಸುತ್ತಾರೆ.

* * 

ನೀರಾವರಿ ಕಾಲುವೆಯು ಸಂಪೂರ್ಣವಾಗಿ ಒಡೆದಿವೆ. ಶೀಘ್ರವಾಗಿ ಕಾಲುವೆ <br/>ದುರಸ್ತಿ ಕೈಗೊಂಡು ಕೆರೆಗೆ ನೀರು ಬಿಡಬೇಕು
ಹೇಮಂತ ದೊಡಮನಿ
ಕೆಂದೂರ ತಾಂಡಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT