7

‘ಸಮೃದ್ಧ, ಸಶಕ್ತ ದೇಶ ಕಟ್ಟಲು ಯುವ ಜನಾಂಗ ಸಧೃಡವಾಗಲಿ’

Published:
Updated:

ಚಿಕ್ಕೋಡಿ: ‘ಮನುಷ್ಯ ತನ್ನ ಮನಸ್ಸಿನ ಹರಿವಿಗೆ ಅಡ್ಡಮಾರ್ಗ ಹಿಡಿಯದೇ ಆಧ್ಯಾತ್ಮಿಕತೆಯ ಕಟ್ಟೆ ಕಟ್ಟುವ ಮೂಲಕ ಸನ್ಮಾರ್ಗದಲ್ಲಿ ಮುನ್ನಡೆದು ವೈಯುಕ್ತಿಕ ಕಲ್ಯಾಣದೊಂದಿಗೆ ಸಾಮಾಜಿಕ, ದೇಶದ ಪ್ರಗತಿಗೂ ತನ್ನದೇ ಆದ ಕೊಡುಗೆ ನೀಡಬೇಕು’ ಎಂದು ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ತೋರಣಹಳ್ಳಿ ಹನುಮಾನ ಮಂದಿರದ ಆವರಣದಲ್ಲಿ ಗುರುವಾರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಹನುಮಮಾಲಾ ಮತ್ತು ಪವಮಾನ ಹೋಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೇತೃತ್ವ ವಹಿಸಿದ್ದ ಹುಲ್ಲೊಳ್ಳಿಹಟ್ಟಿಯ ಕೈವಲ್ಯಾನಂದ ಸ್ವಾಮೀಜಿ, ‘ಭಕ್ತಿ, ಜ್ಞಾನ ಮತ್ತು ಅರಿವಿನ ಪ್ರತೀಕವಾಗಿರುವ ಆಂಜನೇಯನ ಆರಾಧನೆಯನ್ನು ಅನುಸರಿಸುವ ಭಕ್ತ ಪ್ರತಿ ಮನೆಯಲ್ಲೂ ಇರಬೇಕು. ಜಾತಿ, ಮತ ಬೇಧವನ್ನು ಬತ್ತಿಗೊತ್ತಿ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು’ ಎಂದರು.

ವಿಶ್ವ ಹಿಂದು ಪರಿಷತ್‌ನ ಕ್ಷೇತ್ರಿಯ ಸಂಘಟನಾ ಪ್ರಮುಖ ಗೋಪಾಲಜೀ ಮಾತನಾಡಿ, ‘ಗೋ ಹತ್ಯೆ, ಮಠ ಮಂದಿರಗಳ ಮೇಲೆ ದಾಳಿ, ಲವ್ ಜಿಹಾದ್‌, ಮತಾಂತರ ಸೇರಿದಂತೆ ವಿವಿಧ ಹಂತಗಳಲ್ಲಿ ಹಿಂದೂ ಸಮಾಜದ ಮೇಲೆ ಆಕ್ರಮಣ ನಡೆಯುತ್ತಲೇ ಬರುತ್ತಿದೆ. ಆಕ್ರಮಣಕ್ಕೆ ವಿರುದ್ಧ ಪರಾಕ್ರಮ ತೋರಬೇಕಾದ ಅವಶ್ಯಕತೆ ಇದೆ ಎಂದರು. ಚಂದ್ರಶೇಖರ ಶಿವಾ ಚಾರ್ಯರು, ಸಂಪಾದನ ಸ್ವಾಮೀಜಿ, ಬ್ರಹ್ಮಾನಂದ ಅವಧೂತರು, ನರಸಿಂಗ ಮಹಾರಾಜರು, ಪ್ರಾಣಲಿಂಗ ಸ್ವಾಮೀಜಿ ಮಾತನಾಡಿದರು.

ರೇವಣಸಿದ್ದ ಶಿವಾಚಾರ್ಯರು, ಗುರುದೇವ ಸ್ವಾಮೀಜಿ, ಶಿವಪ್ರಭು ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಡಾ.ರಾಚಯ್ಯ ಬಾಗಿ, ವಿಜಯ ಭಾಸ್ಕರಗೌಡ ಇಟಗೋನಿ, ಶಾಸಕ ದುರ್ಯೋಧನ ಐಹೊಳೆ, ಯಕ್ಸಂಬಾದ ಬಸವಜ್ಯೋತಿ ಯೂಥ್‌ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಉದ್ಯಮಿ ಮಹೇಶ ಬೆಲ್ಲದ, ಮಲ್ಲಿಕಾರ್ಜುನ ದಂಡಿನ್ನವರ ಇದ್ದರು. ಮಾರುತಿ ಕೋಳೆಕರ ನಿರೂಪಿಸಿದರು.

ಇದಕ್ಕೂ ಮುನ್ನ ಸುಕ್ಷೇತ್ರ ತೋರಣ ಹಳ್ಳಿಯ ಹನುಮಾನ ಮಂದಿರದ ಆವರಣದಲ್ಲಿ ನಡೆದ ಪವಮಾನ ಹೋಮದಲ್ಲಿ ಸಾವಿರಾರು ಜನ ಹನುಮ ಮಾಲಾಧಾರಿಗಳು ಪಾಲ್ಗೊಂಡಿದ್ದರು. ಗುರುವಾರ ಸಂಜೆ ತೋರಣ ಹಳ್ಳಿಯಿಂದ ಹೊರಟು ಹಂಪಿಯ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಡಿ.2 ರಂದು ಪವಮಾನ ಯಜ್ಞ ನೇರವೇರಿಸಲಿದ್ದಾರೆ.

‘ದೇಹಕ್ಕಿಂತ ದೇಶ ಪ್ರೇಮ ದೊಡ್ಡದು’ 

‘ವಿಶ್ವದ ಒಟ್ಟು 21 ಸಂಸ್ಕೃತಿಗಳ ಪೈಕಿ ಹಿಂದೂ ಸಂಸ್ಕೃತಿ ಮಾತ್ರ ಗಟ್ಟಿಯಾಗಿ ಉಳಿದುಕೊಂಡಿದೆ. ದೇಶದ ಯುವಕರು ದೇಹ ಪ್ರೇಮಕ್ಕಿಂತ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಮಣಕವಾಡದ ಸಿದ್ದರಾಮ ದೇವರು ಹೇಳಿದರು.

ದೇಶದ ಅಭಿವೃದ್ಧಿ ಚಟುವಟಿಕೆ ಯಲ್ಲಿ ತೊಡಗಿಸಿಕೊಳ್ಳುವವರೇ ನಿಜವಾದ ದೇಶಭಕ್ತರು. ಜನ್ಮ ನೀಡಿದ ತಂದೆ, ತಾಯಿ ಮತ್ತು ನೆಲೆ ನೀಡಿದ ಮಾತೃಭೂಮಿಯನ್ನೇ ಜೀವನದ ನಾಯಕರೆಂದು ಭಾವಿಸಿ ನಡೆಯಬೇಕು’ ಎಂದರು.

* * 

ಹಿಂದೂಗಳು ಯಾರನ್ನೂ ದ್ವೇಷಿಸಬೇಕಾಗಿಲ್ಲ. ಆದರೆ, ಸಂಸ್ಕೃತಿಗೆ ಧಕ್ಕೆ, ದೇಶ ವಿರೋಧಿ ಚಟುವಟಿಕೆ ಪ್ರತಿಭಟಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ

ಗೋಪಾಲಜಿ

ಕ್ಷೇತ್ರೀಯ ಸಂಘಟನಾ ಪ್ರಮುಖ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry