ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ, ಇಬ್ಬರು ಕಾನ್‌ಸ್ಟೆಬಲ್‌ಗಳಿಗೆ ಗಾಯ

Last Updated 2 ಡಿಸೆಂಬರ್ 2017, 8:37 IST
ಅಕ್ಷರ ಗಾತ್ರ

ಕಲಬುರ್ಗಿ: ನಗರ ಹೊರವಲಯದ ಕೆಸರಟಗಿ ಬಳಿ ಶುಕ್ರವಾರ ಮೂವರು ದರೋಡೆಕೋರರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದು, ಆತ್ಮ ರಕ್ಷಣೆಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಇಲ್ಲಿನ ಎಂಎಸ್‌ಕೆ ಮಿಲ್ ನಿವಾಸಿ ಮಹಮ್ಮದ್ ಇರ್ಫಾನ್ (25) ಹಾಗೂ ಈತನ ಇಬ್ಬರು ಸಹಚರರು ಹಲ್ಲೆ ಮಾಡಿದರು. ಇರ್ಫಾನ್ ಕಾಲಿಗೆ ಗುಂಡು ತಗುಲಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರೆಹಮಾನ್, ಭಮ್ಮಾ ಅಲಿಯಾಸ್ ಗೌಸ್ ಪರಾರಿಯಾಗಿದ್ದಾರೆ.

‘ಪೊಲೀಸ್ ನಿಯಂತ್ರಣ ಕೊಠಡಿಯಿಂದ ಬಂದ ದೂರವಾಣಿ ಕರೆ ಆಧರಿಸಿ ಬೆಳಿಗ್ಗೆ 7 ಗಂಟೆಗೆ ದರೋಡೆಕೋರರನ್ನು ಬಂಧಿಸಲು ತೆರಳಿದ್ದ ಫರಹತಾಬಾದ್ ಮತ್ತು ಕಲಬುರ್ಗಿ ಗ್ರಾಮೀಣ ಠಾಣೆ ಪೊಲೀಸರ ಮೇಲೆ ಇರ್ಫಾನ್ ಹಾಗೂ ಅವರ ಸಹಚರರು ತಲವಾರ ಮತ್ತು ಚಾಕುವಿನಿಂದ ಹಲ್ಲೆ ಮಾಡಿದರು. ಪೊಲೀಸ್ ವಾಹನದ ಮೇಲೆ ಇಟ್ಟಿಗೆ ಎಸೆದರು. ಈ ವೇಳೆ ಸಬ್‌ ಇನ್‌ಸ್ಪೆಕ್ಟರ್ ವಾಹಿದ್ ಕೋತ್ವಾಲ್ ಆತ್ಮ ರಕ್ಷಣೆಗಾಗಿ ಇರ್ಫಾನ್ ಕಾಲಿಗೆ ಗುಂಡು ಹಾರಿಸಿದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಾಯಗೊಂಡಿರುವ ಪಿಎಸ್‌ಐ ವಾಹಿದ್ ಕೋತ್ವಾಲ್, ಗ್ರಾಮೀಣ ಪೊಲೀಸ್ ಠಾಣೆ ಕಾನ್‌ಸ್ಟೆಬಲ್‌ಗಳಾದ ಕೇಶವ್ ಮತ್ತು ಹುಸೇನ್ ಬಾಷಾ ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಬಂಧಿತ ಮಹಮ್ಮದ್ ಇರ್ಫಾನ್ ಮೇಲೆ ಅಶೋಕ ನಗರ ಪೊಲೀಸ್ ಠಾಣೆ, ವಿಶ್ವವಿದ್ಯಾಲಯ ಪೊಲೀಸ್ ಠಾಣೆ, ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಮತ್ತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎರಡು ಸೇರಿ ಒಟ್ಟು ಐದು ಪ್ರಕರಣ ದಾಖಲಾಗಿವೆ’ ಎಂಬುದು ಮೂಲಗಳ ವಿವರಣೆ.

ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಬಿ.ಜೆ. ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT