ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗು ಸುರಕ್ಷತೆಗೆ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿ

Last Updated 2 ಡಿಸೆಂಬರ್ 2017, 8:39 IST
ಅಕ್ಷರ ಗಾತ್ರ

ಬೀದರ್: ‘ಎಚ್ಐವಿ ಸೋಂಕಿತ ಮಹಿಳೆಯರು ಜನ್ಮ ನೀಡಿದ ಶೇಕಡ 30 ರಷ್ಟು ಮಕ್ಕಳಿಗೆ ಸೋಂಕು ತಗುಲಿದೆ. ಗರ್ಭ ಧರಿಸಿದ ಸಂದರ್ಭದಲ್ಲಿ ಮಹಿಳೆಯರು ಮಾತ್ರೆಗಳನ್ನು ಸೇವಿಸಲು ಆರಂಭಿಸಿದರೆ ಆರೋಗ್ಯವಂತ ಶಿಶುವಿಗೆ ಜನ್ಮ ನೀಡಬಹುದಾಗಿದೆ’ ಎಂದು ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಡಾ.ಮಾರ್ಥಂಡರಾವ್‌ ಕಾಶೆಂಪುರ ಹೇಳಿದರು.

ಇಲ್ಲಿನ ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ ವಿಶ್ವ ಏಡ್ಸ್‌ ಜಾಗೃತಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಗರ್ಭಿಣಿಯರು ಶಿಶುವಿನ ಸುರಕ್ಷತೆಯ ದೃಷ್ಟಿಯಿಂದ ಎಚ್‌ಐವಿ ತಪಾಸಣೆ ಮಾಡಿಸಿಕೊಳ್ಳಬೇಕು. 2016ರ ಏಪ್ರಿಲ್‌1 ರಿಂದ 2017 ರ ಮಾರ್ಚ್‌ 31 ರ ವರೆಗೆ 42,620 ಜನರ ರಕ್ತ  ತಪಾಸಣೆ ನಡೆಸಲಾಗಿದೆ. 2017ರ ಏಪ್ರಿಲ್‌ನಿಂದ ಈವರೆಗೆ 30,960 ಜನರ ಎಚ್‌ಐವಿ ಪರೀಕ್ಷೆ ನಡೆಸಲಾಗಿದೆ. ಒಂದೂವರೆ ವರ್ಷದಲ್ಲಿ 23 ಜನರಲ್ಲಿ ಎಚ್‌ಐವಿ ಸೋಂಕು ಕಾಣಿಸಿಕೊಂಡಿದೆ’ ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಂ.ಎಸ್‌.ಪಾಟೀಲ ಮಾತನಾಡಿ, ‘ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಮುನ್ನೆಚ್ಚರಿಕೆಯೇ ಮಾರಕ ರೋಗ ಹರಡುವಿಕೆ ತಡೆಯುವ ಮದ್ದು’ ಎಂದು ಹೇಳಿದರು.

‘ಅನೇಕ ಕಾರಣಗಳಿಂದಾಗಿ ಹೊಸ ಹೊಸ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಉತ್ತಮ ಆಹಾರ, ವಿಚಾರ ಹಾಗೂ ನಡತೆ ಇದ್ದರೆ ಯಾವ ಕಾಯಿಲೆಗಳೂ ಹತ್ತಿರ ಸುಳಿಯುವುದಿಲ್ಲ’ ಎಂದು ತಿಳಿಸಿದರು. ‘ಎಚ್‌ಐವಿ ಸೋಂಕು ಬಾಧಿತರು ಮಾರಕ ರೋಗವೆಂದು ಚಿಂತಿಸಬಾರದು. ಆತ್ಮಸ್ಥೈರ್ಯದಿಂದ ಕಾಯಿಲೆಯನ್ನು ಎದುರಿಸಬೇಕು’ ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಸಿ.ಎಸ್‌.ರಗಟೆ ಮಾತನಾಡಿ, ‘ಅರಿವು ಇಲ್ಲದ ಕಾರಣ ಯುವಕರು ಎಚ್‌ಐವಿ ಸೋಂಕಿಗೆ ಒಳಗಾಗುತ್ತಿದ್ದಾರೆ’ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಆರ್‌. ಸೆಲ್ವಮಣಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್. ರಾಘವೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ. ಜಬ್ಬಾರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ದೀಪಾ ಖಂಡ್ರೆ, ಚರ್ಮರೋಗ ತಜ್ಞ ಡಾ.ಅಶೋಕ ನಾಗೂರೆ ಇದ್ದರು.

ಡಾ.ರಾಜಶೇಖರ ಪಾಟೀಲ, ಡಾ. ಶಿವಶಂಕರ.ಬಿ, ಡಾ.ಅನಿಲ ಚಿಂತಾಮಣಿ, ಡಾ. ರವೀಂದ್ರ ಸಿರ್ಸೆ, ಡಾ.ಇಂದುಮತಿ ಪಾಟೀಲ ಹಾಗೂ ಡಿಎಚ್‍ಒ ಕಚೇರಿ ಸಹಾಯಕ ಆಡಳಿತ ಅಧಿಕಾರಿ ಅಬ್ದುಲ್ ಸಲೀಂ ಪಾಲ್ಗೊಂಡಿದ್ದರು. ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಸುಭಾಷ ಮುಧಾಳೆ ವಂದಿಸಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಡಿಎಚ್ಒ ಕಚೇರಿ ಆವರಣದಿಂದ ಆರಂಭವಾದ ಜಾಗೃತಿ ಜಾಥಾ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ರಂಗ ಮಂದಿರದ ಆವರಣಕ್ಕೆ ಬಂದಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಫಲಕ ಹಾಗೂ ಬ್ಯಾನರ್‌ಗಳನ್ನು ಹಿಡಿದು ಜಾಥಾದಲ್ಲಿ ಪಾಲ್ಗೊಂಡಿದ್ದರು.

* * 

ನಾಗಾಲ್ಯಾಂಡ್‌, ಮಿಜೊರಂನಲ್ಲಿ ಅತಿ ಹೆಚ್ಚು ಏಡ್ಸ್‌ ಹಾಗೂ ಎಚ್‌ಐವಿ ಸೋಂಕಿತ ರೋಗಿಗಳು ಇದ್ದಾರೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಇವೆ.
ಎಂ.ಎಸ್‌.ಪಾಟೀಲ
ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT