ಶುಕ್ರವಾರ, ಮಾರ್ಚ್ 5, 2021
21 °C

ಪಾದುಕೆ ದರ್ಶನಕ್ಕೆ ನೂಕುನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾದುಕೆ ದರ್ಶನಕ್ಕೆ ನೂಕುನುಗ್ಗಲು

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ನೇತೃತ್ವದಲ್ಲಿ ಅನಸೂಯಾ ಜಯಂತಿ ಅಂಗವಾಗಿ ಶುಕ್ರವಾರ ನಗರದಲ್ಲಿ ವಿಜೃಂಭಣೆಯಿಂದ ಸಂಕೀರ್ತನಾ ಯಾತ್ರೆ ನಡೆಯಿತು.

ನಗರದಲ್ಲಿ ಬೋಳರಾಮೇಶ್ವರ ದೇಗುಲದಲ್ಲಿ ಪೂಜೆ ಕೈಂಕರ್ಯ ನೆರವೇರಿಸಿದ ನಂತರ, ಬೆಳಿಗ್ಗೆ 10.45ಕ್ಕೆ ಯಾತ್ರೆ ಆರಂಭವಾಯಿತು. ಅನಸೂಯಾ ದೇವಿ, ಅತ್ರಿಮುನಿ, ಗುರುದತ್ತಾತ್ರೇಯಯ ಮೂರ್ತಿಗಳ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಭಕ್ತರು ಗುರುದತ್ತಾತ್ರೇಯರ ಜಪ ಮಾಡಿದರು. ಸಹಸ್ರಾರು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಇಂದಿರಾಗಾಂಧಿ ರಸ್ತೆ ಮಾರ್ಗವಾಗಿ ಮೆರವಣಿಗೆ ಸಾಗಿತು. ಮೆರವಣಿಗೆ ನಿಮಿತ್ತ ಈರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಸಂಪರ್ಕ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪೊಲೀಸ್‌ ಸರ್ಪಗಾವಲಿನಲ್ಲಿ ಮೆರವಣಿಗೆ ಸಾಗಿತು. ರತಗ್ನಿರಿ ರಸ್ತೆಯ ಶ್ರೀರಾಮಮಂದಿರದ ಬಳಿ ಮೆರವಣಿಗೆ ಸಮಾಪನಗೊಂಡಿತು. ನಂತರ ಭಕ್ತರು, ಮಹಿಳೆಯರು ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದರು.

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ‘ಓಖಿ’ ಚಂಡಮಾರುತದ ಪರಿಣಾಮ ಇಲ್ಲಿಗೂ ತಟ್ಟಿದ್ದು, ಗಿರಿಶ್ರೇಣಿಯಲ್ಲಿ ದಟ್ಟಮಂಜು ಆವರಿಸಿತ್ತು. ತುಂತುರು ಮಳೆ, ಮೈ ನಡುಗಿಸುವ ಚಳಿ ಇತ್ತು. ವಾಹನಗಳು ಲೈಟ್‌ ಹೊತ್ತಿಸಿಕೊಂಡು ಚಲಿಸಿದವು. ಸಂಚಾರ ದಟ್ಟಣೆ ನಿರ್ವಹಣೆಗೆ ಪೊಲೀಸರು ಹರಸಾಹಸಪಟ್ಟರು.

ಕೊರೆವ ಚಳಿ, ತುಂತುರು ಮಳೆ, ದಟ್ಟ ಮಂಜಿನಲ್ಲೇ ಮಹಿಳೆಯರು ಸಾಲಾಗಿ ದತ್ತ ಪಾದುಕೆ ದರ್ಶನಕ್ಕೆ ತೆರಳಿದರು. ಸರತಿಯಲ್ಲಿ ನೂಕುನುಗ್ಗಲು ಉಂಟಾಯಿತು. ಪೊಲೀಸರು ಸಾಲನ್ನು ನಿಯಂತ್ರಿಸಿದರು. ಗುಹೆಯೊಳಗೆ ಒಬ್ಬೊಬ್ಬರಾಗಿ ತೆರಳಿ ಪಾದುಕೆ ದರ್ಶನ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಪಾದುಕೆ ದರ್ಶನ ಮಾಡಿದ ಬಂದವರಿಗೆ ಲಡ್ಡು ಪ್ರಸಾದ ವಿತರಿಸಲಾಯಿತು. ದತ್ತಪೀಠದ ಸನಿಹದ ಸಭಾಂಗಣದಲ್ಲಿ ಹೋಮ, ಹವನಗಳು ಜರುಗಿದವು. ಧಾರ್ಮಿಕ ಸಭೆ ನಡೆಯಿತು. ಕಳೆದ ಬಾರಿಗಿಂತ ಭಕ್ತರ ದಂಡು ಹೆಚ್ಚು ಇತ್ತು.

ಟ್ರಾಫಿಕ್‌ ಜಾಮ್‌: ಕೆಲ ದೊಡ್ಡ ಬಸ್ಸುಗಳು, ಮಿನಿ ಬಸ್ಸುಗಳು, ಕಾರು, ಜೀಪು, ಬೈಕುಗಳ ದತ್ತ ಪೀಠಕ್ಕೆ ಬಂದಿದ್ದವು. ದತ್ತ ಪೀಠದ ಮಾರ್ಗದಲ್ಲಿ ಕೆಲವು ಕಡೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಪೊಲೀಸರು ಶತಾಯಗತಾಯ ಪ್ರಯತ್ನಿಸಿ ದಟ್ಟಣೆ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿದರು.

ನಗರಸಭೆ ಅಧ್ಯಕ್ಷೆ ಕೆ.ಎಂ.ಶಿಲ್ಪಾ ರಾಜಶೇಖರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ, ಸದಸ್ಯ ಕವಿತಾ ಲಿಂಗರಾಜು, ವಿಎಚ್‌ಪಿ ರಾಜ್ಯ ಧರ್ಮ ಪ್ರಸಾರ ಪ್ರಮುಖ್‌ ಕುಸುಮಾ ನಾರಾಯಣಾಚಾರ್‌, ಜಿಲ್ಲಾ ಮಹಿಳಾ ಪ್ರಮುಖ್‌ ಸಂಧ್ಯಾಪೈ, ಗೀತಾ, ದೀಪಾ, ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷ ಬಿ.ಎ.ಶಿವಶಂಕರ್‌, ಬಜರಂಗದಳ ಸಂಯೋಜಕ ತುಡುಕೂರು ಮಂಜು, ನಗರಸಭೆ ಸದಸ್ಯ ಎಚ್‌.ಡಿ.ತಮ್ಮಯ್ಯ ಇದ್ದರು.

ದತ್ತಪೀಠ: ದಾಖಲೆ ಆಧರಿಸಿ ಇತ್ಯರ್ಥಪಡಿಸಿ

ದತ್ತಾತ್ರೇಯ ಪೀಠವೇ ಬೇರೆ ಮತ್ತು ಬಾಬಾಬುಡನ್‌ ದರ್ಗಾವೇ ಬೇರೆ ಎಂಬುದು ಸರ್ಕಾರಿ ದಾಖಲೆಗಳಲ್ಲಿ ಇದೆ. ದಾಖಲೆಗಳನ್ನು ಆಧರಿಸಿ ದತ್ತಪೀಠ ವಿವಾದವನ್ನು ಸರ್ಕಾರ ಪರಿಹರಿಸಬೇಕು ಎಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದರು. ವಿಶ್ವ ಹಿಂದೂ ಪರಿಷತ್‌, ಬಜರಂಗದಳ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಜರುಗಿದ ಸಂಕೀರ್ತನಾ ಯಾತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ದತ್ತ ಪೀಠ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ ಎರಡು ವರ್ಷವಾಗಿದೆ. ಸರ್ಕಾರ ಸಮಸ್ಯೆ ಇತ್ಯರ್ಥಪಡಿಸದೆ ಕಾಲವಿಳಂಬ ಮಾಡುತ್ತಿದೆ. ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ನೇತೃತ್ವದಲ್ಲಿ ಸಮಿತಿ ನೇಮಿಸಿ ನಾಲ್ಕು ತಿಂಗಳು ಕಳೆದರೂ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದರು.

ದತ್ತ ಭಕ್ತರ ಸಹನೆಯ ಕಟ್ಟೆಯೊಡೆಯುವುದಕ್ಕೆ ಮುಂಚೆ ನ್ಯಾಯದ ಪರವಾಗಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಮುಖ್ಯಮಂತ್ರಿಯವರು ಶೀಘ್ರದಲ್ಲಿ ನ್ಯಾಯ ಕೊಡಿಸಬೇಕು. ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದರು. ಅನಸೂಯಾ ಜಯಂತಿಯಲ್ಲಿ ಸಹಸ್ರಾರು ಮಹಿಳೆಯರು ಭಾಗವಹಿಸಿ ದತ್ತಪೀಠ ಮುಕ್ತಿ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ. ಇವರೆಲ್ಲರೂ ಹೋರಾಟದ ಪರವಾಗಿದ್ದಾರೆ ಎಂದರು.

ಈ ಸರ್ಕಾರದ ಅವಧಿಯಲ್ಲೇ ವಿವಾದ ಪರಿಹರಿಸಿ

ಸಂಸದೆ ಶೋಭಾ ಕರಂದ್ಲಾಜೆ ಸುದ್ದಿಗಾರರೊಂದಿಗೆ ಮಾತನಾಡಿ, ‘ದತ್ತ ಪೀಠವನ್ನು ಹಿಂದೂಗಳಿಗೆ ವಹಿಸಬೇಕು ಎಂಬುದು ನಮ್ಮ ಬೇಡಿಕೆ. ದತ್ತಪೀಠ ಸಮಸ್ಯೆ ಪರಿಹರಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರ ಪ್ರಯತ್ನ ಮಾಡಿಲ್ಲ. ಕಾಲ ಮುಂದೂಡುತ್ತ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಈ ಸರ್ಕಾರದ ಅವಧಿಯಲ್ಲೇ ಸಮಸ್ಯೆ ಇತ್ಯರ್ಥಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವರು ವೋಟ್‌ ಬಾಂಕ್‌ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಒಂದು ಧರ್ಮೀಯರನ್ನು ಓಲೈಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರಿಗೆ ಟಿಪ್ಪು ಜಯಂತಿ ಮೇಲೆ ಆಸಕ್ತಿ ಹೆಚ್ಚು ಇದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಎಡಪಂಥೀಯರಿಂದ ಬಿಜೆಪಿ, ಮೋದಿ ಬೈಯಿಸುತ್ತಾರೆ. ಆದರೆ, ದತ್ತಪೀಠ ಸಮಸ್ಯೆ ಪರಿಹರಿಸುವುದಕ್ಕೆ ಮೀನಮೇಷ ಎಣಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು.

‘ರಾಜ್ಯ ಎಲ್ಲ ಇಲಾಖೆಗಳಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ. ವಿವಾದ ಸೃಷ್ಟಿ, ವಿಷಯಾಂತರ ಕೆಲಸಗಳಲ್ಲಿ ಸಿದ್ದರಾಮಯ್ಯ ತೊಡಗಿದ್ದಾರೆ. ಅಭಿವೃದ್ಧಿ ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.