ಸೋಮವಾರ, ಮಾರ್ಚ್ 8, 2021
32 °C

ಮಿಮಿಕ್ರಿಯಲ್ಲಿ ಮಿಂಚಿದ ವೀರೇಶ್

ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಮಿಮಿಕ್ರಿಯಲ್ಲಿ ಮಿಂಚಿದ ವೀರೇಶ್

ದಾವಣಗೆರೆ: ಸ್ಟಿಕ್‌ ಹಿಡಿದಿರುವ ಈ ಕೈಗಳು ಹಾರ್ಮೊನಿಯಂ ಸ್ವರವನ್ನು ಸುಲಲಿತವಾಗಿ ಹೊರಡಿಸುತ್ತವೆ. ಕೀಬೋರ್ಡ್‌, ಡ್ರಮ್ಸ್‌ಗಳನ್ನು ನಾದವಾಗಿ ಬಾರಿಸುತ್ತವೆ. ಇವನ ಇಂಪಾದ ಸ್ವರ ಸಂಗೀತ ಪ್ರೇಮಿಗಳಲ್ಲಿ ಅಲೆ ಎಬ್ಬಿಸುತ್ತದೆ. ಮಿಮಿಕ್ರಿಯಲ್ಲಿ ಸಿದ್ಧಹಸ್ತ. ಈತನ ಪ್ರೇರಣೆ, ಸ್ಫೂರ್ತಿಯ ಮಾತುಗಳು ಎದುರಿಗಿದ್ದವರ ಹೃದಯ ತಟ್ಟುತ್ತವೆ.

ಸದಾ ಬರಗಾಲದ ಹಣೆ‍ಪಟ್ಟಿ ಕಟ್ಟಿಕೊಂಡ ಜಗಳೂರಿನ ವಿಶೇಷ ಪ್ರತಿಭೆ ಎಂ.ವೀರೇಶ. ಸಂಪೂರ್ಣ ಅಂಧ. ಬಾಲ್ಯದಲ್ಲೇ ಚುರುಕು ಚೂಟಿಯಾಗಿದ್ದ ಈ ಹುಡುಗನಿಗೆ ದೊಡ್ಡ ನಟರು, ರಾಜಕಾರಣಿಗಳ ಧ್ವನಿ ಅನುಕರಿಸುವುದು ಸಹಜ ಕಲೆಯಾಗಿ ಬಂದಿತ್ತು. ಶಾಲೆಯ ಶಿಕ್ಷಕರು ಈ ಕಲೆಯನ್ನು ಪ್ರತಿ ಹಂತದಲ್ಲೂ ಪ್ರೋತ್ಸಾಹಿಸಿದರು. ಈಗ ವೀರೇಶ್‌ ದೊಡ್ಡ ಮಿಮಿಕ್ರಿ ಕಲಾವಿದ. ಈ ಕಲೆಯ ಜೊತೆಜೊತೆಗೆ ಹಾಡುಗಾರಿಕೆ ಕಲಿತುಕೊಂಡರು. ಇದುವರೆಗೂ ಇವರು ರಾಜ್ಯ, ಹೊರರಾಜ್ಯಗಳಲ್ಲಿ ನೀಡಿದ್ದ ರಸಮಂಜರಿ, ಮಿಮಿಕ್ರಿ ಕಾರ್ಯಕ್ರಮಗಳ ಸಂಖ್ಯೆ ಸುಮಾರು 450.

ವೀರೇಶ್ ತಂದೆ ಕೆ.ಮೈಲಪ್ಪ, ತಾಯಿ ಎಸ್‌.ಗಂಗಮ್ಮ. ಇಬ್ಬರದೂ ಕೂಲಿ ಕೆಲಸ. ಈ ದಂಪತಿಗೆ ಮೂವರು ಮಕ್ಕಳು. ಇಬ್ಬರು ಗಂಡು ಮಕ್ಕಳು ಹುಟ್ಟಾ ಅಂಧರು. ವೀರೇಶ್‌ಗೆ ಒಬ್ಬರು ಅಕ್ಕ ಇದ್ದಾರೆ. ಅವರ ಹೆಸರು ಎಂ.ಲಕ್ಷ್ಮೀ ಅವರಿಗೆ ಯಾವುದೇ ಸಮಸ್ಯೆ ಇಲ್ಲ. ತಮ್ಮ ಕುಮಾರ್ ಈಗ ಬೆಂಗಳೂರಿನಲ್ಲಿ ಪ್ರಥಮ ಪಿಯು ಓದುತ್ತಿದ್ದಾನೆ. ಶಿವಮೊಗ್ಗದ ಶಾರದದೇವಿ ಅಂಧರ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯನ್ನು ಶೇ 95 ಅಂಕಗಳೊಂದಿಗೆ ಮುಗಿಸಿದ್ದಾನೆ. ತಬಲ, ಕೀಬೋರ್ಡ್‌ನಲ್ಲಿ ಈತನೂ ಎತ್ತಿದ ಕೈ.

ವೀರೇಶ್ 1ರಿಂದ 6 ತರಗತಿವರೆಗೆ ಓದಿದ್ದು ಹುಬ್ಬಳ್ಳಿಯ ಸರ್ಕಾರಿ ಅಂಧರ ಬಾಲಕರ ಶಾಲೆಯಲ್ಲಿ; ನಂತರದ ವಿದ್ಯಾಭ್ಯಾಸವೆಲ್ಲ ಬೆಂಗಳೂರು. ದೇವನಹಳ್ಳಿಯ ಕರ್ನಾಟಕ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಏಳನೇ ತರಗತಿ. 8 ಮತ್ತು 9ನೇ ತರಗತಿ ವೀರೇಶ್ ಓದಲಿಲ್ಲ. ನೇರವಾಗಿ ಶೇಷಾದ್ರಿಪುರಂ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಸೇರಿಕೊಂಡ. ರೇಸ್‌ಕೋರ್ಸ್ ರಸ್ತೆಯ ಎಸ್‌ಜೆಆರ್‌ಸಿಯಲ್ಲಿ ಪಿಯು ಮುಗಿಸಿದ. ಈಗ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿಯಲ್ಲಿ ವ್ಯಾಸಂಗ.

‘ಸಂವಾದ, ಬರವಣಿಗೆ, ಉಪನ್ಯಾಸ ನೀಡುವುದು ನನಗೆ ಇಷ್ಟದ ಕೆಲಸ. ಬಹಳಷ್ಟು ಜನ ನನಗೆ ಲಾ ಓದು ಎಂದು ಸಲಹೆ ನೀಡಿದರು. ಆದರೆ, ನನಗೆ ಪತ್ರಿಕೋದ್ಯಮ ಇಷ್ಟ. ಹಾಗಾಗಿ ಇದೇ ಕೋರ್ಸ್ ಆಯ್ಕೆ ಮಾಡಿಕೊಂಡೆ. ಇದರಲ್ಲೇ ಏನಾದರೂ ಸಾಧನೆ ಮಾಡಬೇಕೆಂಬ ಆಸೆ’ ಎಂದು ಕನಸು ಬಿಚ್ಚಿಡುತ್ತಾನೆ ವೀರೇಶ್.

ವೀರೇಶ್‌ಗೆ ಹಳೆಯ ಚಿತ್ರಗೀತೆಗಳಿಂದ ಹಿಡಿದು ಇಂದಿನ ಚಿತ್ರಗೀತೆಗಳವರೆಗೂ ಎಲ್ಲವೂ ಬಾಯಿಪಾಠ. ರಾಜಕೀಯ ನಾಯಕರಾದ ಎಚ್‌.ಡಿ.ದೇವೇಗೌಡ, ಸಿದ್ದರಾಮಯ್ಯ, ಬಿ.ಎಸ್‌.ಯಡಿಯೂರಪ್ಪ, ವಾಟಾಳ್‌ ನಾಗರಾಜ್, ಎಂ.ಪಿ.ರೇಣುಕಾಚಾರ್ಯ, ಸಿನಿಮಾ ನಟರಾದ ಶಿವರಾಜ್‌ಕುಮಾರ್, ರವಿಶಂಕರ್, ಯಶ್, ದರ್ಶನ್, ಧೀರೇಂದ್ರ ಗೋಪಾಲ್, ಈ ಎಲ್ಲರ ಧ್ವನಿಗಳು ವೀರೇಶನ ಮಿಮಿಕ್ರಿಯಲ್ಲಿ ಮರುಹುಟ್ಟುಪಡೆಯುತ್ತವೆ.

ತನ್ನಂತಹ ಅಂಧ ಕಲಾವಿದರಿಗೆ ನೆರವಾಗಬೇಕೆಂಬ ದೃಷ್ಟಿಯಿಂದ ಒಂದು ವರ್ಷದ ಹಿಂದೆ ದಾವಣಗೆರೆಯಲ್ಲಿ ಸ್ನೇಹಸ್ಫೂರ್ತಿ ಯುವಕರ ಕಲಾ ತಂಡ ಕಟ್ಟಿದ್ದಾನೆ. ಈ ತಂಡದಲ್ಲಿ ಐದು ಜನ ಅಂಧರಿದ್ದಾರೆ. ಇವರೆಲ್ಲರನ್ನೂ ಸೇರಿಸಿಕೊಂಡು ಕಾರ್ಯಕ್ರಮಗಳನ್ನು ನೀಡುವುದು ಸವಾಲಿನ ಕೆಲಸವಾದರೂ ಅದು ಈತನಿಗೆ ಇಷ್ಟದ ಸಂಗತಿ.

‘ಓದು ಮತ್ತು ಹವ್ಯಾಸ ಎರಡನ್ನೂ ಸಮಾನವಾಗಿ ನೋಡುವ ಕಲೆ ನನಗೆ ಈಗ ಗೊತ್ತಾಗಿದೆ. ಪ್ರಯಾಣದ ವೇಳೆಯಲ್ಲೇ ಪಠ್ಯಕ್ರಮಗಳನ್ನು ಓದಿಕೊಳ್ಳುತ್ತೇನೆ. ಅಂಧರಿಗಾಗಿಯೇ ಸಿದ್ಧಪಡಿಸಿದ ಲ್ಯಾಪ್‌ಟಾಪ್‌ ಇದೆ. ಅದು ಓದಲು ನೆರವಿಗೆ ಬರುತ್ತದೆ’ ಎನ್ನುತ್ತಾನೆ ವೀರೇಶ್.

‘ನಾನು ಅಂಧ ಅಂತ ಹೇಳಿ ಯಾರಿಂದಲೂ ಅನುಕಂಪ ನಿರೀಕ್ಷೆ ಮಾಡಲ್ಲ; ಎಲ್ಲಾ ಮನುಷ್ಯರಂತೆ ನಾನು ಹಗಲು–ರಾತ್ರಿ ಓಡಾಡುತ್ತೇನೆ; ಕೆಲಸ ಮಾಡುತ್ತೇನೆ. ಯಾವುದೇ ಅಂಧರು ಭಿಕ್ಷೆ ಬೇಡಬಾರದು ಎಂಬುದು ನನ್ನ ಕಾಳಜಿ. ಅದಕ್ಕಾಗಿಯೇ  ಶಾಲಾ–ಕಾಲೇಜಿಗಳಿಗೆ ಹೋಗಿ ವ್ಯಕ್ತಿತ್ವ ವಿಕಸನ ಕುರಿತಂತೆ ಉಪನ್ಯಾಸ ನೀಡಲು ಹೋಗುತ್ತೇನೆ. ಅಂಧರಿಗಾಗಿ ಸರ್ಕಾರಗಳಲ್ಲಿ ಸಾಕಷ್ಟು ಯೋಜನೆಗಳಿವೆ. ಅವು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ’ ಎಂಬ ಬೇಸರ ಅವನದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.