ಶುಕ್ರವಾರ, ಮಾರ್ಚ್ 5, 2021
28 °C

ಯೋಗೀಶ ಗೌಡ ಗೌಡರ ಕೊಲೆ ಪ್ರಕರಣ ಕಮಿಷನರ್‌–ಎಸ್‌ಪಿ ನಡುವೆ ಹಗ್ಗಜಗ್ಗಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೋಗೀಶ ಗೌಡ ಗೌಡರ ಕೊಲೆ ಪ್ರಕರಣ ಕಮಿಷನರ್‌–ಎಸ್‌ಪಿ ನಡುವೆ ಹಗ್ಗಜಗ್ಗಾಟ

ಧಾರವಾಡ: ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ ಕೊಲೆ ಆರೋಪಿಗಳ ಜತೆ ರಾಜಿ ಮಾಡಿಕೊಳ್ಳುವಂತೆ ಇಬ್ಬರು ಡಿವೈಎಸ್ಪಿಗಳು ಒತ್ತಡ ಹೇರಿದ್ದರು ಎನ್ನಲಾದ ಪ್ರಕರಣದ ತನಿಖೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಮಿಷನರೇಟ್‌ ಪೊಲೀಸರು ಹಾಗೂ ಜಿಲ್ಲಾ ಪೊಲೀಸರು ಕೈಚೆಲ್ಲಿದ್ದಾರೆ.

ಕೊಲೆ ಆರೋಪಿಗಳ ಜತೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಿರುವ ಘಟನೆ ನಡೆದಿರುವುದು ತಮ್ಮ ವ್ಯಾಪ್ತಿಯಲ್ಲಿ ಅಲ್ಲ ಎಂದು ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರು ಪ್ರತ್ಯೇಕವಾಗಿ ತಿಳಿಸಿದ್ದಾರೆ.

ಹೀಗಾಗಿ ಯೋಗೀಶಗೌಡರ ಸಹೋದರ ಗುರುನಾಥಗೌಡ ಗೌಡರ ಕೊಟ್ಟಿರುವ ದೂರಿನ ತನಿಖೆ ಯಾರು ನಡೆಸಬೇಕು ಎನ್ನುವ ಗೊಂದಲ ಮೂಡಿದ್ದು, ಡಿಜಿಪಿ ಮುಂದೆ ಈ ವಿಷಯ ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ಐಜಿಪಿ ಕಚೇರಿಯ ಡಿವೈಎಸ್ಪಿ ತುಳಜಪ್ಪ ಸುಲ್ಫಿ ಹಾಗೂ ಧಾರವಾಡ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ಅವರು ಯೋಗೀಶ ಗೌಡರ ಕೊಲೆ ಆರೋಪಿಗಳೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದರು ಎಂದು ಆರೋಪಿಸಿ ನ.29ರಂದು ಗುರುನಾಥ ಗೌಡ, ಎಸ್ಪಿ ಸಂಗೀತಾ ಅವರಿಗೆ ದೂರು ನೀಡಿದ್ದರು.

ಇದರ ತನಿಖೆ ನಡೆಸಿದ್ದ ಸಂಗೀತಾ ನ.30ರಂದು ಗುರುನಾಥಗೌಡರಿಗೆ ಹಿಂಬರಹದ ಪತ್ರ ಕೊಟ್ಟಿದ್ದಾರೆ. ‘ಘಟನೆ ನಡೆದಿರುವುದು ಶ್ರೀನಗರ ಬಳಿ ಇರುವ ಹೋಟೆಲ್ ಉದ್ಯಮಿ ಮಹೇಶ ಶೆಟ್ಟಿ ಮನೆಯಲ್ಲಿ. ಹೀಗಾಗಿ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ. ಜತೆಗೆ ಈ ಅರ್ಜಿಯನ್ನು ಮುಂದಿನ ಕ್ರಮಕ್ಕಾಗಿ ಪೊಲೀಸ್‌ ಕಮಿಷನರ್‌ ಅವರಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.

ಆದರೆ, ಇದನ್ನು ಪೊಲೀಸ್‌ ಕಮಿಷನರ್‌ ನಾಗರಾಜ ನಿರಾಕರಿಸಿದ್ದಾರೆ. ‘ರಾಜಿ ಮಾತುಕತೆ ಆರಂಭವಾಗಿರುವುದು ತಾಲ್ಲೂಕಿನ ಗೋವನಕೊಪ್ಪದಲ್ಲಿ. ಅದು ಗ್ರಾಮೀಣ ಠಾಣೆ ವ್ಯಾಪ್ತಿಗೆ ಬರುತ್ತದೆ. ಅದರ ನಂತರ ಶ್ರೀನಗರದಲ್ಲಿ ಮಾತುಕತೆ ನಡೆದಿದೆ. ಹೀಗಾಗಿ ಜಿಲ್ಲಾ ಪೊಲೀಸರೇ ಇದರ ತನಿಖೆ ನಡೆಸಬೇಕು. ಈ ವಿಷಯದಲ್ಲಿ ಎಸ್ಪಿಗೆ ಗೊಂದಲ ಇರಬೇಕು’ ಎಂದು ಕಮಿಷನರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.