ಭಾನುವಾರ, ಫೆಬ್ರವರಿ 28, 2021
23 °C

ಸರ್ಕಾರಿ ಕನ್ನಡ ಶಾಲೆ ಮುಚ್ಚುವಂತಿಲ್ಲ: ಆಯುಕ್ತ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಕನ್ನಡ ಶಾಲೆ ಮುಚ್ಚುವಂತಿಲ್ಲ: ಆಯುಕ್ತ ಸೂಚನೆ

ಧಾರವಾಡ: 'ಎಂಥ ಸಂದರ್ಭದಲ್ಲಿಯೂ ಕನ್ನಡ ಶಾಲೆಗಳನ್ನು ಮುಚ್ಚುವಂತಿಲ್ಲ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ವೀರಣ್ಣ ತುರಮರಿ ಹೇಳಿದರು.

ಇಲ್ಲಿನ ಡಯಟ್‌ ಆವರಣದಲ್ಲಿ ನಡೆದ ವಾಯವ್ಯ ಕರ್ನಾಟಕ ವಲಯದ ಒಂಬತ್ತು ಶೈಕ್ಷಣಿಕ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ   ಅವರು ಮಾತನಾಡಿದರು. ‘ಯಾವುದೇ ಕಾರಣ ಮುಂದೆ ಮಾಡಿ ಎಲ್ಲಿಯೂ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚುವಂತಿಲ್ಲ. ಕೇವಲ ಒಂದೇ ಮಗುವಿದ್ದರೂ ಆ ಶಾಲೆಯನ್ನು ಮುಚ್ಚದೇ ಮುನ್ನಡೆಸಬೇಕು’ ಸೂಚಿಸಿದರು.

‘ಕೋರ್ಟ್‌ನಲ್ಲಿರುವ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಇದೇ ರೀತಿ ಬಾಕಿ ಇರುವ ಎಲ್ಲ ಇಲಾಖಾ ವಿಚಾರಣೆ ಪ್ರಕರಣಗಳನ್ನೂ ಸಂಬಂಧಿಸಿದ ಅಧಿಕಾರಿಗಳು ಕಾಲಮಿತಿಯೊಳಗೆ ಮುಗಿಸಬೇಕು. ತಾಲ್ಲೂಕು ಹಂತದಲ್ಲಿ ಬಿಇಒ ಕಚೇರಿ ಹಾಗೂ ಜಿಲ್ಲಾ ಹಂತದಲ್ಲಿ ಡಿಡಿಪಿಐ ಕಚೇರಿಗಳಲ್ಲಿ ಇಲಾಖೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳ ಸಮಗ್ರ ಮಾಹಿತಿ ಲಭ್ಯವಿರುವಂತೆ ನೋಡಿಕೊಳ್ಳಬೇಕು’ ಎಂದರು.

‘ವಾಯವ್ಯ ಕರ್ನಾಟಕ ಭಾಗದ ಒಂಬತ್ತು ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಬಿಇಒ ಹಾಗೂ ಡಿಡಿಪಿಐ ನಿರ್ದಿಷ್ಟ ಸಭೆಗಳನ್ನು ಜರುಗಿಸಿ, ಎಲ್ಲ ರೀತಿಯ ಮಾರ್ಗದರ್ಶನ ಮಾಡಬೇಕು’ ಎಂದು ಹೇಳಿದರು.

‘ಆಯಾ ಜಿಲ್ಲೆಯೊಳಗಿರುವ ಸರ್ಕಾರಿ,  ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ ಮುಖ್ಯ ಅಧ್ಯಾಪಕರ ಸಭೆಗಳನ್ನು ನಡೆಸಲು ತಾವು ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡುವುದಾಗಿ’ ಅವರು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಮಧ್ವರಾಜ ಬಳ್ಳಾರಿ ಮಾತನಾಡಿ, ‘ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕಲಿಕೆಯಲ್ಲಿ ಶ್ರೇಷ್ಠತೆ ಸಾಧಿಸುವ ಜೊತೆಗೆ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳನ್ನು ಅರಿಯುವಂತೆ ನಮ್ಮ ಶಿಕ್ಷಕ-ಶಿಕ್ಷಕಿಯರು ಕಾಳಜಿ ವಹಿಸಬೇಕಾಗಿದೆ. ಈ ಕುರಿತು ಅಧಿಕಾರಿಗಳು ನಿರಂತರ ಶಾಲಾ ಸಂದರ್ಶನ ಮತ್ತು ವಾರ್ಷಿಕ ತಪಾಸಣೆಗಳನ್ನು ಕೈಕೊಂಡು ಶೈಕ್ಷಣಿಕ ಮಾರ್ಗದರ್ಶನ ಮಾಡಬೇಕು’ ಎಂದರು. 

ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ್, ಮೃತ್ಯುಂಜಯ ಕುಂದಗೋಳ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಉತ್ತರಕನ್ನಡ, ಹಾವೇರಿ, ಗದಗ, ಧಾರವಾಡ, ಶಿರಸಿ, ಚಿಕ್ಕೋಡಿ ಜಿಲ್ಲೆಗಳ ಆಡಳಿತ ಹಾಗೂ ಅಭಿವೃದ್ಧಿ ಉಪನಿರ್ದೇಶಕರು ಮತ್ತು 59 ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.